ವ್ಯಕ್ತಿತ್ವ ವಿಕಾಸ

0
737

 
ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಮುಂದುವರಿದ ಭಾಗ…
‘ವ್ಯಕ್ತಿತ್ವದ ವಿಕಾಸ’ವು ಎಲ್ಲ ಮನುಷ್ಯರ ಅಪೇಕ್ಷೆಯೂ ಹೌದು. ಯಾವ ರೀತಿ ವಿಕಾಸವಾಗಬೇಕು ಎಂಬ ವಿಚಾರದಲ್ಲಿ ವ್ಯತ್ಯಾಸ ಇರಬಹುದು ಅಷ್ಟೆ. ವ್ಯಕ್ತಿತ್ವ ವಿಕಾಸನವನ್ನು ಯಾವ ರೀತಿಯಲ್ಲಿ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವ ಮೊದಲು ವಿಕಾಸವು ಯಾವ ರೀತಿಯಲ್ಲಿ ನಡೆಯುತ್ತದೆ ಮತ್ತು ಅದರ ಸ್ವರೂಪವೇನು ಎಂಬುದನ್ನು ತಿಳಿದುಕೊಳ್ಳಬೇಕು.
ಮನುಷ್ಯರಲ್ಲಿ ವಿಕಾಸವು ನಡೆಯುವುದಕ್ಕೆ ಒಂದು ಕ್ರಮವಿದೆ. ಅದನ್ನು ವಿಕಾಸದ ತತ್ವಗಳ ಮೂಲಕ ತಿಳಿದುಕೊಳ್ಳಬಹುದು. ವಿಕಾಸದ ತತ್ವಗಳು ಈ ಕೆಳಗಿಂತಿದೆ:
1. ವಿಕಾಸವು ನಿರಂತರವಾಗಿರುವ ಪ್ರಕ್ರಿಯೆಯಾಗಿದೆ: ವಿಕಾಸವಿ ಭ್ರೂಣಾವಸ್ಥೆಯಿಂದ ಸಾವಿನ ತನಕ ನಿರಂತರವಾಗಿ ಸಾಗುತ್ತಿರುವ ಒಂದು ಪ್ರಕ್ರಿಯೆಯಾಗಿದೆ. ಅದು ಬಾಲ್ಯದಿಂದ ವೃದ್ಧಾಪ್ಯದ ತನಕ ಬದುಕಿನ ಎಲ್ಲ ಹಂತಗಳನ್ನೂ ಹಾದೂ ಹೋಗುತ್ತದೆ. ವಯಸ್ಸಿನೊಂದಿಗೆ ಸಂಬಂಧವನ್ನು ಕಲ್ಪಸಿಕೊಳ್ಳುವ ವಿಕಾಸವು ಆಯಾ ವಯೋಮಾನದಲ್ಲಿ ನಿರ್ದಿಷ್ಟ ಗುಣಲಕ್ಷಣಗಳನ್ನು ಪ್ರೇರೇಪಿಸುತ್ತಾ ಸಾಗುತ್ತದೆ.
2. ಪರಿಸರದ ಸಂಪರ್ಕ: ವಿಕಾಸವು ಪರಿಸರದೊಂದಿಗೆ ಸಂಪರ್ಕವನ್ನು ಇರಿಸಿಕೊಂಡಿರುತ್ತದೆ. ಪರಿಸರದ ವರ್ತನೆಗೆ ವ್ಯಕ್ತಿಯು ಪ್ರತಿಕ್ರಿಯಾ ವರ್ತನೆಗಳನ್ನು ತೋರಿಸುವಾಗ ಉಂಟಾಗುವ ವಿನ್ಯಾಸಗಳು ವಿಕಾಸದ ಸ್ವರೂಪವನ್ನು ನಿರ್ಧರಿಸುತ್ತವೆ.
3.ಭಿನ್ನತೆ ಮತ್ತು ಸಮಗ್ರತೆಗಳೆರಡೂ ಇರುತ್ತದೆ: ವಿಕಾಸದಲ್ಲಿ ಬೇರೆ ಬೇರೆ ಆಯಾಮಗಳಿಗೆ ತಕ್ಕಂತೆ ಸಾಕಷ್ಟು ಭೀನ್ನತೆಗಳಿರುತ್ತವೆ. ಅದನ್ನು ಬೌದ್ಧಿಕ ವಿಕಾಸ, ಭಾವನಾತ್ಮಕ ವಿಕಾಸ, ಸಾಮಾಜಿಕ ವಿಕಾಸ, ನೈತಿಕ ವಿಕಾಸ ಎಂದೆಲ್ಲ ಗುರುತಿಸಬಹುದು. ಈ ಭಿನ್ನತೆಗಳು ಆಯಾ ಆಯಾಮಗಳಲ್ಲಿ ವ್ಯಕ್ತಿಯಲ್ಲಿ ಉಂಟಾಗುವ ಪ್ರಗತಿಯನ್ನು ಸೂಚಿಸುತ್ತದೆ. ಆದರೆ ಈ ಎಲ್ಲ ಆಯಾಮಗಳೂ ಸೇರಿ ವ್ಯಕ್ತಿಯನ್ನು ನಿರ್ದಿಷ್ಟವಾದ ವಿಕಾಸದ ಹಾದಿಯಲ್ಲಿ ಕೊಂಡೊಯ್ಯುತ್ತವೆ. ಆ ಮುಖಾಂತರ ವಿಕಾಸಕ್ಕೆ ಸಮಗ್ರತೆಯ ಲಕ್ಷಣಗಳು ಪ್ರಾಪ್ತವಾಗುತ್ತದೆ.
4. ಹಂತಗಳ ನಡುವೆ ಸಂಬಂಧ: ವಿಕಾಸವು ವಿವಿಧ ಹಂತಗಳ ಮುಖಾಂತರ ಏರುಗತಿಯಲ್ಲಿ ಚಲಿಸುತ್ತದೆ. ಈ ಚಲನೆಯಲ್ಲಿ ಪ್ರತಿಯೊಂದು ಹಂತವೂ ಮುಂದಿನ ಹಂತದೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಉದಾಹರಣಗೆ ಮಕ್ಕಳು ಮೊದಲು ನಿಲ್ಲುತ್ತದೆ. ನಂತರ ನಡೆಯಲು ಪ್ರಾರಂಭಿಸುತ್ತವೆ. ತಾರುಣ್ಯದಲ್ಲಿ ಹುಡುಗರ ಧ್ವನಿ ಏಕಾಏಕಿ ಗಂಡುಧ್ವನಿಯಾಗುವುದಿಲ್ಲ. ಮೊದಲು ಹುಡುಗುಧ್ವನಿಯಾಗಿದ್ದದ್ದು, ನಂತರ ದೊರಗು ಧ್ವನಿಯಾಗಿ ಅಮೇಲೆ ಗಂಡು ಧ್ವನಿಯಾಗುತ್ತದೆ. ದೊರಗು ಧ್ವನಿಯಾಗುವ ಹಂತದಲ್ಲಿ ಗಂಡು ಧ್ವನಿಯಾಗಿ ಮಾರ್ಪಡುವ ಲಕ್ಷಣಗಳೀರುತ್ತವೆಯೂ ಹೊರತು ಮಕ್ಕಳ ಧ್ವನಿಯಾಗಿ ಮಾರ್ಪಡುವ ಲಕ್ಷಣಗಳಿರುವುದಿಲ್ಲ. ಯಾಕೆಂದರೆ ವಿಕಾಸವು ಯಾವಾಗಲೂ ಮುಮ್ಮುಖವಾಗಿರುತ್ತದೆ. ಮುಮ್ಮುಖವಾಗಿದ್ದು ವಿವಿಧ ಹಂತಗಳೊಂದಿಗೆ ಸಂಬಂಧವನ್ನು ಹೊಂದಿರುತ್ತದೆ.
5. ನಿರ್ದಿಷ್ಟತೆಯ ಕಡೆಗೆ ಚಲಿಸುತ್ತದೆ: ವಿಕಾಸವು ಯಾವಾಗಲೂ ಸಾಮಾನ್ಯ ಅಂಶಗಳಿಂದ ನಿರ್ದಿಷ್ಟ ಅಂಶದ ಕಡೆಗೆ ಚಲಿಸುತ್ತದೆ. ಉದಾಹರಣೆಗೆ ನಿರ್ದಿಷ್ಟ ರಾಗವನ್ನು ಹಾಡುವುದಕ್ಕಾಗಿಯೇ ಪ್ರಸಿದ್ಧವಾದ ಒಬ್ಬ ಸಂಗೀತಗಾರ ಮೊದಮೊದಲು ಸಂಗೀತದ ವಿವಿಧ ರಾಗಗಳ ಮೇಲೆಲ್ಲ ಕೈಯಾಡಿಸಿರುತ್ತಾನೆ. ಸಾಮಾನ್ಯ ಅಂಶಗಳನ್ನು ಪರಿಚಯಿಸಿಕೊಳ್ಳುತ್ತಾ ಅದರ ಮೂಲಕ ನಿರ್ದಿಷ್ಟವಾದುದರ ಕಡೆಗೆ ಚಲಿಸತೊಡಗುತ್ತಾನೆ.
6. ವಿಕಾಸದ ಅನಿವಾರ್ಯತೆ: ವಾಸ್ತವದಲ್ಲಿ ವಿಕಾಸವು ಒಂದು ಅನಿವಾಂರ್ಯವಾದ ಕ್ರಿಯೆಯಾಗಿರುತ್ತದೆ. ವ್ಯಕ್ತಿಗಳು ಅನೈಚ್ಛಿಕವಾಗಿಯಾದರೂ ವರ್ತನೆಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ದೈಹಿಕ ಬೆಳವಣಿಗೆಯ ಪರಿಣಾಮಗಳು ವರ್ತನೆಗಳನ್ನು ಬದಲಾಯಿಸುವ ಶಕ್ತಿಗಳಾಗಿರುತ್ತವೆ. ಅದ್ದರಿಂದ ವಿಕಾಸವು ಅನಿವಾರ್ಯವಾಗಿ ಎಲ್ಲರಲ್ಲೂ ನಡೆಯುತ್ತದೆ.
7. ಸೃಷ್ಟಿ ಮತ್ತು ನಾಶದ ಪ್ರಕ್ರಿಯೆ ಇರುತ್ತದೆ: ವಿಕಾಸದ ಪ್ರಕ್ರಿಯೆಯಲ್ಲಿ ಸೃಷ್ಟಿ ಮತ್ತು ನಾಶದ ಪ್ರಕ್ರಿಯೆಗಳೆರಡೂ ಇರುತ್ತದೆ. ಸಾಮಾನ್ಯವಾಗಿ ಎಳೆತನದಲ್ಲಿ ಸೃಷ್ಟಿಯ ಪ್ರಕ್ರಿಯೆ ಇರುತ್ತದೆ. ಮತ್ತು ವೃದ್ಧಾಪ್ಯದಲ್ಲಿ ನಾಶದ ಪ್ರಕ್ರಿಯೆ ಇರುತ್ತದೆ ಎಂಬ ಚಿಂತನೆ ಇದ್ದರೂ ಇದು ತುಲನಾತ್ಮಕವಾಗಿ ಸರಿಯಾಗಿರುವ ಚಿಂತನೆಯಾಗಿದೆಯೇ ಹೊರತು ಪೂರ್ಣ ಸತ್ಯವಲ್ಲ. ಯಾಕೆಂದರೆ ಭ್ರೂಣಾವಸ್ಥೆಯಲ್ಲಿಯೂ ಕೆಲವು ಕೋಶಗಳು ನಾಶವಾಗುತತಿರುತ್ತವೆ. ವೃದ್ಧಾಪ್ಯದಲ್ಲಿಯೂ ಕೆಲವು ಕೋಶಗಳು ಬೆಳೆಯುತ್ತಿರುತ್ತವೆ. ಆದರೆ ಪ್ರಾರಂಭಿಕ ಹಂತದಲ್ಲಿ ಸೃಷ್ಟಿಯ ಪ್ರಮಾಣವೂ ಕೊನೆಯ ಹಂತದಲ್ಲಿ ನಾಶದ ಪ್ರಮಾಣವೂ ಜಾಸ್ತಿ ಇರುತ್ತದೆಂಬುದು ನಿಜ.
ಹೀಗೆ ವ್ಯಕ್ತಿತ್ವ ವಿಕಾಸವು ನಡೆಯುವುದಕ್ಕೆ ಕೆಲವು ಕ್ರಮಗಳಿರುತ್ತವೆ. ಆ ಕ್ರಮಗಳ ಒಳಗೆಯೇ ನಮ್ಮ ವ್ಯಕ್ತಿತ್ವವನ್ನು ಹೇಗೆ ವಿಕಾಸಗೊಳಿಕೊಳ್ಳಬೇಕೇಂದು ಮುಂದೆ ನೋಡೋಣ.
ವ್ಯತ್ಕಿತ್ವ ವಿಕಾಸದ ವಿನ್ಯಾಸ:
ವ್ಯಕ್ತಿತ್ವ ವಿಕಾಸವು ಬಹುಮುಖಿಯಾದುದು. ಆದರೆ ಬಹುಮುಖಿಯಾದ ವಿಕಾಸವು ನಡೆಯುವುದೆಲ್ಲವೂ ನಮ್ಮ ಆಲೋಚನೆಗಳನ್ನು ಉತ್ತಮೀಕರಿಸಿಕೊಳ್ಳುವ ಮೂಲಕವೇ. ಚಿಂತನೆಗಳ ಉನ್ನತೀಕರಣ ಎನ್ನುವುದು ‘ಒಂದೇ’. ಆದರೆ ಅದು ವರ್ತನೆಯಲ್ಲಿ ವ್ಯಕ್ತವಾಗುವಾಗ ಬಹುರೂಪಿಯಾಗಿರುತ್ತದೆ. ಆದ್ದರಿಂದ ವರ್ತನೆಗಳಲ್ಲಿ ಯಾವ ರೀತಿ ವಿಕಾಸವನ್ನು ಸಾಧಿಸಿ ಕೊಳ್ಳಬೇಕೆಂದು ತಿಳಿಯುವ ಮೂಲಕ, ನಮ್ಮ ಸಾಮಥ್ರ್ಯ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಾಸವನ್ನು ಸಾಧಿಸಬಹುದು. ಅಂತಹ ಕೆಲವು ವರ್ತನಾ ವಿನ್ಯಾಸಗಳ ಬಗ್ಗ ತಿಳಿಯೋಣ.
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here