ವ್ಯಕ್ತಿತ್ವ ವಿಕಸನ

0
1219

 
ಶಿಕ್ಷಣ ಚಿಂತನೆ ಅಂಕಣ : ಅರವಿಂದ ಚೊಕ್ಕಾಡಿ
” ಅವಳು ಬಹಳ ಸುಂದರಿಯಾಗಿದ್ದಾಳೆ” ” ಅವನು ತೆಳ್ಳಗಿದ್ದಾನೆ””ಅವಳು ಬುದ್ಧಿವಂತೆ ಇದ್ದಾಳೆ” ” ಆತ ಭಾವಜೀವಿಯಾಗಿದ್ದಾನೆ” ಎಂಬಿತ್ಯಾದಿ ಮಾತುಗಳನ್ನು ನಾವೆಲ್ಲ ಕೇಳಿದ್ದೇವೆ, ಹೇಳಿದ್ದೇವೆ. ವ್ಯಕ್ತಿಯ ವಿಶೇಷ ಗುಣವನ್ನು ಸೂಚಿಸುವ ಮಾತುಗಳೆಲ್ಲವೂ ವ್ಯಕ್ತಿಯ ಲಕ್ಷಣಗಳಾಗಿವೆ. ಹಾಗಿದ್ದರೆ ‘ವ್ಯಕ್ತಿತ್ವ’ ಎಂದರೆ ಏನು?
ಭಾಷಾ ಅರ್ಥ:
ಭಾಷಾ ಅರ್ಥದಲ್ಲಿ ಹೇಳುವುದಾದರೆ ‘ವ್ಯಕ್ತಿತ್ವ’ ಎಂಬ ಪದವು ಇಂಗ್ಲೀಷ್ ಭಾಷೆಯ ‘ಪರ್ಸನಾಲಿಟಿ’ ಎಂಬ ಪದದಿಂದ ಬಂದಿದೆ. ‘ಪರ್ಸನಾಲಿಟಿ’ ಎಂಬ ಪದವು ಗ್ರೀಕ್ ಭಾಷೆಯ ‘ಪರ್ಸೋನಾ’ ಎಂಬ ಪದದಿಂದ ಬಂದಿದೆ. ‘ಪರ್ಸೋನಾ’ ಎಂದರೆ’ಮುಖವಾಡ’ ಎಂದು ಅರ್ಥ. ಪುರಾತನ ಗ್ರೀಕ್ ಗಣರಾಜ್ಯಗಳ ಕಾಲಾದಲ್ಲಿ ಕಲಾವಿದರುಗಳು ರಂಗಮಂಟಪದ ವೇದಿಕೆಯ ಮೇಲೆ ಮುಖವಾಡಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಿದ್ದರು. ಅಂತಹ ಮುಖವಾಡಗಳಿಗೆ’ ಪರ್ಸೋನಾ’ ಎಂದು ಕರೆಯುತ್ತಿದ್ದರು.ಅದರಿಂದಲೇ ‘ಪರ್ಸನಾಲಿಟಿ’ ಎಂಬ ಪರಿಕಲ್ಪನೆಯು ಬೆಳೆಯಿತು. ಆದರೆ ಈ ಅರ್ಥಕ್ಕೂ ಇಂದು ನಾವು ಬಳಸುವ ‘ವ್ಯಕ್ತಿತ್ವ ಎಂಬ ಪರಿಕಲ್ಪನೆಗೂ ಸಂಬಂಧವಿಲ್ಲ. ವ್ಯಕ್ತಿತ್ವವು ಮುಖವಾಡದಂತೆ ಕ್ಷಣಕ್ಷಣಕ್ಕೆ ಬದಲಾಯಿಸವಂಥಾದ್ದಲ್ಲ. ಸಂಸ್ಕಾರದಿಂದ ಗಳಿಸಕೊಂಡು ಜೀವನ ಪೂರ್ತಿ ಉಳಿಸಿಕೊಳ್ಳುವಂಥಾದ್ದು. ವ್ಯಕ್ತಿತ್ವವು ತೋರಿಕೆಗಾಗಿ ಇರುವಂಥಾದ್ದಾಗಿರುವುದಿಲ್ಲ.
 
ವಿದ್ವಾಂಸರ ವಿವರಣೆ:
ವ್ಯಕ್ತಿತ್ವವನ್ನು ಅನೇಕ ವಿದ್ಯಾಂಸರು ತಮ್ಮದೇ ಪರಿಭಾಷೆಯಲ್ಲಿ ವಿವರಿಸಿದ್ದಾರೆ. ಲಿಮಟನ್ ಎಂಬ ವಿದ್ವಾಂಸರ ಪ್ರಕಾರ, ‘ ವ್ಯಕ್ತಿಯ ವಿವೇಚನಾ ಸಾಮಥ್ರ್ಯ, ಅನುಭವ, ಭಾವನೆ, ಅಭ್ಯಾಸ, ಭಾವಾವೇಶ ಮುಂತಾದವಿಗಳ ಒಟ್ಟು ಮೊತ್ತವೇ ವ್ಯಕ್ತಿತ್ವ”.
ಅರ್ನೆಸ್ಟ್ ಹಿಲ್ಲಾಡ್ರ್ ಅವರ ಪ್ರಕಾರ, ” ವ್ಯಕ್ತಿಯ ವರ್ತನೆಗಳ ವಿಶೇಷತೆಗಳು ಮತ್ತು ಪರಿಸರದೊಂದಿಗೆ ಹೊಂದಿಕೊಳ್ಳುವಿಕೆ ಮತ್ತು ಪರಿಸರದೊಂದಿಗೆ ತನ್ನದೆ ಆದ ರೀತಿಯಲ್ಲಿ ಹೊಂದಿಕೊಳ್ಳುವ ವರ್ತನೆಯಲ್ಲಿನ ವಿಶೇಷತೆಗಳ ಸಂಘಟನೆಯ ಪರಿಣಾಮವಾಗಿ ವ್ಯಕ್ತಿತ್ವವು ಮೂಡಿರುತ್ತದೆ”.
ಗಿಲ್ ಫೋಡ್ರ್ ಎಂಬ ವಿದ್ವಾಂಸರ ಪ್ರಕಾರ,” ವ್ಯಕ್ತಿತ್ವವೆಂದರೆ ವಿಶೇಷ ಲಕ್ಷಣಗಳ ಸ್ವರೂಪವಾಗಿದೆ.
 
 
 
 
ವ್ಯಕ್ತಿತ್ವದ ಲಕ್ಷಣಗಳು:
ಒಬ್ಬ ವ್ಯಕ್ತಿಯ ಲಕ್ಷಣಗಳು ಬೇರೆಯಾಗಿರುತ್ತದೆ. ಸಮಗ್ರವಾಗಿ ವ್ಯಕ್ತಿತ್ವದ ಲಕ್ಷಣಗಳು ಬೇರೆಯಾಗಿರುತ್ತವೆ. ಸಮಗ್ರವಾಗಿ ವ್ಯಕ್ತಿತ್ವದ ಲಕ್ಷಣಗಳು ಹೀಗಿರುತ್ತವೆ:
ವ್ಯಕ್ತಿತ್ವವು ಹಲವಾರು ಸಂಘಟಿತ ರೂಪವಾಗಿರುತ್ತದೆ.
* ವ್ಯಕ್ತಿತ್ವವು ರೂಪುಗೊಳ್ಳುವಾಗ ಅನುವಂಶೀಯ ಅಂಶಗಳೂ ಪ್ರಭಾವ ಬೀರುತ್ತದೆ. ಪರಿಸರದ ಅಂಶವೂ ಪ್ರಭಾವ ಬೀರುತ್ತದೆ. ಅನುವಂಶೀಯ ಅಂಶಗಳು ಅನಪೇಕ್ಷಣೀಯವಾಗಿದ್ದರೆ ಪರಿಸರದ ಶಕ್ತಿಯಿಂದ ಅದನ್ನು ಬದಲಾಯಿಸಬಹುದು.
* ಅನುವಂಶೀಯ ಮತ್ತು ಪರಿಸರದ ಪ್ರಭಾವಗಳೆರಡೂ ವ್ಯಕ್ತಿತ್ವದ ಮೇಲೆ ಪ್ರಭಾವವನ್ನು ಬೀರಿದರೂ, ಈ ಎರಡೂ ಅಂಶಗಳ ವ್ಯಾಪ್ತಿಯದ್ದಲ್ಲದ ಸ್ವಂತಿಕೆಯ ಅಂಶಗಳೂ ವ್ಯಕ್ತಿತ್ವದಲ್ಲಿ ಇರುತ್ತದೆ.
* ವ್ಯಕ್ತಿತ್ವದ ಅನೇಕ ಅಂಶಗಳು ವಯಸ್ಸಾಗುತ್ತಾ ಹೋದ ಹಾಗೆ ಪಕ್ವತೆ ಕಾರಣದಿಂದ, ಅನುಭವದ ಕಾರಣದಿಂದ, ಪ್ರಯತ್ನಪೂರ್ವಕ ಪರಿಷ್ಕರಣೆಯ ಕಾರಣದಿಂದ ಬದಲಾಗುತ್ತಿರುತ್ತದೆ.
* ವ್ಯಕ್ತಿತ್ವದ ಬದಲಾವಣೆಗೆ ಒಳಪಡುತ್ತದೆಯಾದರೂ ಬದಲಾವಣೆಗೆ ಒಳಗಾಗದ ಸ್ಥಿರವಾದ ಲಕ್ಷಣಗಳೂ ವ್ಯಕ್ತಿತ್ವದಲ್ಲಿ ಇರುತ್ತದೆ.
* ವ್ಯಕ್ತಿತ್ವವು ಬಹುಮುಖಿಯಾಗಿರುತ್ತದೆ.
* ವ್ಯಕ್ತಿತ್ವದಲ್ಲಿ ಹೊಂದಾಣಿಕೆ ಮಾಡಿಕೊಳ್ಳದ ಗುಣಲಕ್ಷಣಗಳು ಇರುತ್ತದೆ.
* ಕಲಿಕೆ ಮತ್ತು ಅನುಭವಗಳು ಒಟ್ಟಾಗಿ ವ್ಯಕ್ತಿತ್ವವನ್ನು ರೂಪಿಸುತ್ತದೆ.
* ವ್ಯಕ್ತಿತ್ವ ನಿರ್ಮಾಣದಲ್ಲಿ ಭಾವನಾತ್ಮಕ ಅಂಶಗಳೂ ಪ್ರಭಾವವನ್ನು ಬೀರುತ್ತದೆ. ಬೌದ್ಧಿಕ ಅಂಶಗಳೂ ಪ್ರಭಾವವನ್ನು ಬೀರುತ್ತದೆ.
* ವ್ಯಕ್ತಿತ್ವದ ನಿರ್ಮಾಣದಲ್ಲಿ ಧ್ಯೇಯಗಳು, ಪ್ರೇರಣೆಗಳು, ಆದರ್ಶಗಳು, ಮೌಲ್ಯಗಳು ಸಾಕಷ್ಟು ಪ್ರಭಾವವನ್ನು ಬೀರುತ್ತವೆ.
 
 
 
 
ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶಗಳು:
ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಕೊಳ್ಳಬೇಕು ಎಂದು ತಿಳಿಯುವ ಮೊದಲು ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶಗಳು ಯಾವುವೆಂದು ತಿಳಿದುಕೊಳ್ಳಬೇಕು.
ಅವುಗಳೆಂದರೆ:
1. ಅನುವಂಶೀಯತೆ: ವಂಶವಾಹಿಗಳ ಮೂಲಕ ಹಿರಿಯರ ಗುಣಲಕ್ಷಣಗಳು ಕಿರಿಯ ತಲೆಮಾರಿನವರಿಗೆ ವರ್ಗಾವಣೆಯಾಗುತ್ತದೆ. ಹೀಗೆ ವರ್ಗಾವಣೆಯಾಗುವ ಗುಣಲಕ್ಷಣಗಳು ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ನಿರ್ಧಾರಕ ಅಂಶವಾಗಿ ಕಾರ್ಯನಿರ್ವಹಿಸುತ್ತವೆ.
2. ದೈಹಿಕ ರಚನೆ: ಜಗತ್ತಿನಲ್ಲಿ ಎಲ್ಲ ಮಾನವರ ದೇಹರಚನೆಯೂ ಒಂದು ಮಟ್ಟಕ್ಕೆ ಒಂದೇ ರೀತಿಯಾಗಿರುತ್ತದೆ. ಆದರೂ ಗಂಡು-ಹೆಣ್ಣೂಗಳ ದೇಹ ರಚನೆಯಲ್ಲಿ ವ್ಯತ್ಯಾಸವಿರುತ್ತದೆ. ಅಷ್ಟು ಮಾತ್ರವಲ್ಲ, ಭೌಗೋಳಿಕ ಕಾರಣಗಳು, ಅನುವಂಶೀಯ ಕಾರಣಗಳು ಪ್ರತಿಯೊಬ್ಬ ಗಂಡು-ಹೆಣ್ಣಿನ ದೇಹ ರಚನೆಯಲ್ಲಿಯೂ ವ್ಯತ್ಯಾಸವನ್ನು ಉಂಟುಮಾಡುತ್ತದೆ.
3. ಭೌಗೋಳಿಕ ಅಂಶಗಳು: ಭೌಗೋಳಿಕ ಸ್ಥಿತಿಗತಿಗಳು ವ್ಯಕ್ತಿಗಳ ಮೇಲೆ ತುಂಬಾ ಪ್ರಭಾವವನ್ನು ಬೀರುತ್ತದೆ. ಉದಾಹರಣೆಗೆ ಹೇಳುವುದಾದರೆ ಉಷ್ಣವಲಯದ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳಿಗಿಂತ ಬೇಗನೆ ಸಂತಾನೋತ್ಪತ್ತಿಯ ಶಕ್ತಿಯನ್ನು ಪಡೆಯುತ್ತಾರೆ. ಇದು ವ್ಯಕ್ತಿತ್ವದ ಮೇಲೆ ಪ್ರಭಾವವನ್ನು ಬೀರುತ್ತದೆ. ಅಲ್ಲದೆ ವ್ಯಕ್ತಿಗಳ ಬಣ್ಣ ಗಾತ್ರ, ತೂಕ ಇತ್ಯಾದಿಗಳ ನಿರ್ಧಾರದಲ್ಲಿಯೂ ಭೌಗೋಳಿಕ ಅಂಶಗಳ ಪ್ರಭಾವ ಇರುತ್ತದೆ.
4. ಆಹಾರ ವಿಧಾನ: ವ್ಯಕ್ತಿತ್ವದ ನಿರ್ಧಾರದಲ್ಲಿ ಆಹಾರದ ವಿಧಾನದ ಪಾಲುದಾರಿಕೆಯು ಬಹಳ ಮುಖ್ಯವಾಗಿದೆ. ವ್ಯಕ್ತಿಗಳು ಸೇವಿಸುವ ಆಹಾರ ಯಾವುದು, ಆ ಆಹಾರದಲ್ಲಿರುವ ಜೀವ ಸತ್ವಗಳು ಯಾವುವು, ಅವು ದೇಹ ಮತ್ತು ಮನಸ್ಸಿನ ಮೇಲೆ ಬೀರುವ ಪ್ರಭಾವ ಯಾವ ರೀತಿಯದು ಎಂಬುದರ ಆಧಾರವೂ ಕೂಡ ದೈಹಿಕ ರಚನೆ ಮತ್ತು ಮಾನಸಿಕ ಕಾರ್ಯನಿರ್ವಹಣೆಯ ಮೇಲೆ ಕೆಲಸ ಮಾಡುತ್ತದೆ. ಹೀಗೆ ಆಹಾರ ಪದ್ಧತಿಯ ವ್ಯಕ್ತಿತ್ವದ ಒಂದು ನಿಧಾರಕವಾಗಿದೆ.
5. ಕೌಟುಂಬಿಕ ಪರಿಸರ: ವ್ಯಕ್ತಿಯ ಮೊತ್ತ ಮೊದಲು ಮುಖಾಮುಖಿಯಾಗುವ ಸಾಮಾಜಿಕ ಪರಿಸರವೆಂದರೆ ಕುಟುಂಬ. ಕುಟುಂಬದ ಧೋರಣೆಗಳು, ಕುಟುಂಬದ ಆಚಾರ ವಿಚಾರಗಳು, ಸಂಪ್ರದಾಯಗಳು, ಕೌಟುಂಬಿಕ ಶಿಸ್ತು, ಕುಟುಂಬದ ಆಗುಹೋಗುಗಳು, ಕುಟುಂಬದ ಕಾರ್ಯಾನಿರ್ವಹಣಾ ಕ್ರಮಗಳು, ಕುಟುಂಬದ ಸದಸ್ಯರು ಮಕ್ಕಳನ್ನು ನಿರ್ವಹಿಸುವ ರೀತಿ, ಮಕ್ಕಳೊಂದಿಗೆ ಸ್ಪಂದಿಸುವ ಕ್ರಮಗಳು, ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು, ಕುಟುಂಬದ ಆಸಕ್ತಿ ಅಭಿರುಚಿಗಳು, ಕುಟುಂಬದ ಭಾವನೆಗಳು ಮುಂತಾದವುಗಳ ಒಟ್ಟಾರೆ ಪರಿಣಾಮಗಳು ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವುದರಲ್ಲಿ ಕಾರ್ಯಪ್ರವೃತ್ತವಾಗುತ್ತದೆ.
6. ಆರ್ಥಿಕ ಸ್ಥಿತಿಗತಿಗಳು: ಪ್ರತಿಯೊಂದು ಮಗುವೂ ವ್ಯಕ್ತಿಯಾಗಿ ಬೆಳೆಯುವ ಹಂತದಲ್ಲಿ ಕೌಟುಂಬಿಕ ವ್ಯಾಪ್ತಿಯಿಂದ ಮೊದಲ್ಗೊಂಡು ಆರ್ಥಿಕ ಸ್ಥಿತಿಗತಿಗಳಿಗೆ ಅವಶ್ಯಕತೆಗಳ ಮುಖಾಮುಖಿಯಾಗುತ್ತದೆ. ಆ ಸ್ಥಿತಿಗತಿಗಳು ಮುಖ್ಯವಾಗಿ ವ್ಯಕ್ತಿಯ ಅವಶ್ಯಕತೆಗಳ ಚಿಂತನೆಯ ಮೇಲೆ ಬಹಳ ಪ್ರಭಾವವನ್ನು ಬೀರುತ್ತದೆ. ಅಲ್ಲದೆ ಅದು ಉಡಾಫೆಯ ಪ್ರವೃತ್ತಿ, ಜವಾಬ್ದಾರಿಯ ಪ್ರವೃತ್ತಿ, ಆತ್ಮವಿಶ್ವಾಸದ ಕುಸಿತ, ಸಾಮಾಜೀಕರಣ ಪ್ರಕ್ರಿಯೆ ಮುಂತಾದ ಹಲವಾರು ಅಂಶಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಹೀಗೆ ಆರ್ಥಿಕ ಸ್ಥಿತಿಗತಿಗಳವ್ಯಕ್ತಿತ್ವದ ನಿಧರ್ಾರದಲ್ಲಿ ಕಾರ್ಯಪ್ರವೃತ್ತವಾಗುತ್ತದೆ.
7. ಸಾಂಸ್ಕೃತಿಕ ಸನ್ನಿವೇಶ: ಸಾಂಸ್ಕೃತಿಕ ಸನ್ನಿವೇಶವು ವ್ಯಕ್ತಿಗಳ ನಂಬಿಕೆಗಳು, ಭಾವನಾತ್ಮಕ ಧೋರಣೆಗಳು-ಇವುಗಳ ಮೇಲೆ ನಿಯಂತ್ರಣವನ್ನು ಸಾಧಿಸುತ್ತವೆ. ವ್ಯಕ್ತಿತ್ವದ ಧೋರಣೆಯನ್ನು ರೂಪಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಅಂಶಗಳು ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ವ್ಯಕ್ತಿಉ ವರ್ತನೆ ಮತ್ತು ಯೋಚನಾ ಕ್ರಮವನ್ನು ರೂಪಿಸುವ ನಿಟ್ಟಿನಲ್ಲಿ ವಿಶೇಷ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ಸಾಂಸ್ಕೃತಿಕ ಅಂಶಗಳನ್ನು, ವ್ಯಕ್ತಿತ್ವವನ್ನು ನಿರ್ಧರಿಸುವ ಪ್ರಧಾನ ಅಂಶಗಳೆಂದು ಧಾರಾಳವಾಗಿ ಹೇಳಬಹುದು.
8. ಸಾಮಾಜಿಕ ಸ್ಥಿತಿಗತಿಗಳು ಮತ್ತು ಸಾಮಾಜೀಕರಣ: ಸಾಂಸ್ಕೃತಿಕ-ಆರ್ಥಿಕ ಸ್ಥಿತಿಗತಿಗಳ ಹಾಗೆಯೇ ವ್ಯಕ್ತಿಯು ಬಾಳುತ್ತಿರುವ ಸಾಮಾಜಿಕ ಸ್ಥಿತಿಗತಿಗಳು, ಕುಟುಂಬ ಮತ್ತು ವ್ಯಕ್ತಿಗಿರುವ ಸಾಮಾಜಿಕ ಸ್ಥಾನಮಾನಗಳು, ವ್ಯಕ್ತಿಯೊಂದಿಗೆ ಸಮಾಜವು ಸ್ಪಂದಿಸುವ ಕ್ರಮಗಳೆಲ್ಲವೂ ವ್ಯಕ್ತಿತ್ವದ ನಿರ್ಧಾರಕ ಕಾರ್ಯದಲ್ಲಿ ಭಾಗಿಗಳಾಗುತ್ತದೆ. ಹಾಗೆಯೇ ವ್ಯಕ್ತಿಯು ಸಾಮಾಜೀಕರಣಗೊಳ್ಳಲು ಬಳಕೆಯಾಗುವ ವಿಧಾನಗಳು, ವ್ಯಕ್ತಿಯ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಸಾಮಾಜಿಕ ಸ್ಥಿತಿಗತಿಗಳು, ಸ್ಪಂದಿಸುವ ವಿಧಾನಗಳು-ಎಲ್ಲವೂ ವ್ಯಕ್ತಿತ್ವ ನಿರ್ಧಾರದ ಕಾರ್ಯದಲ್ಲಿ ಭಾಗವಹಿಸುತ್ತದೆ.
9. ಮಾಧ್ಯಮಗಳು: ಆಧುನಿಕ ದಿನಗಳಲ್ಲಿ ಜೀವನದ ಎಲ್ಲ ವಿಚಾರಗಳಲ್ಲಿಯೂ ಸಾಕಷ್ಟು ಪ್ರಭಾವವನ್ನು ಉಂಟುಮಾಡುವ ಶಕ್ತಿ ಮಾಧ್ಯಮಗಳಿಗೆ ಇದೆ. ಮಾಧ್ಯಮಗಳು ಆಸಕ್ತಿ, ಅಭಿರುಚಿಯನ್ನು ರೂಪಿಸುತ್ತದೆ.. ತಿಳುವಳಿಕೆಯನ್ನು ನೀಡುತ್ತದೆ. ಮೌಲ್ಯವನ್ನು ಹುಟ್ಟು ಹಾಕುತ್ತವೆ. ಮೌಲ್ಯಗಳಿಗೆ ಹೊಸ ವಿನ್ಯಾಸವನ್ನು ನೀಡುತ್ತದೆ. ಆದರ್ಶಗಳನ್ನು ಬೆಳೆಸುತ್ತದೆ. ಆದರ್ಶವನ್ನು ನಾಶವೂ ಮಾಡುತ್ತದೆ. ಇವೆಲ್ಲವುಗಳ ಸಮಗ್ರ ಪರಿಣಾಮಗಳು ವ್ಯಕ್ತಿತ್ವ ನಿರ್ಧಾರದ ಕಾರ್ಯದಲ್ಲಿ ಭಾಗವಹಿಸುತ್ತದೆ.
10. ಶೈಕ್ಷಣಿಕ ಸನ್ನಿವೇಶ: ವ್ಯಕ್ತಿತ್ವ ನಿರ್ಮಾಣದಲ್ಲಿ ಸನ್ನಿವೇಶದ ಕಾರ್ಯವು ಬಹಳ ದೊಡ್ಡದಾಗಿರುತ್ತದೆ. ಶೈಕ್ಷಣಿಕ ಸನ್ನಿವೇಶವೆಂದರೆ ಶಾಲೆಯ ಪರಿಸರ, ಅವಶ್ಯಕ ಶೈಕ್ಷಣಕ ಉಪಕರಣಗಳ ಒದಗಣೆ, ಶಾಲೆಯು ಇರುವ ಸ್ಥಳ, ಶೈಕ್ಷಣಿಕ ಆಡಳಿತ, ಪಠ್ಯಕ್ರಮ, ಪರೀಕ್ಷಾ ವ್ಯವಸ್ಥೆ ಮುಂತಾದವುಗಳೆಲ್ಲ ಸೇರಿಕೊಳ್ಳತ್ತವೆ. ಅವುಗಳೆಲ್ಲ ಗೋಜಲು ಗೋಜಲುಗಳಾಗಿದ್ದರೆ ಸಮರ್ಥ ವ್ಯಕ್ತಿತ್ವವಾಗಿ ಬೆಳೆಯುವುದು ಕಷ್ಟ. ಇವೆಲ್ಲವೂ ಹಿತಕಾರಿಯಾಗಿದೆ ಎಂದಾದರೆ ವ್ಯಕ್ತಿತ್ವವನ್ನು ಸಮರ್ಥ ವ್ಯಕ್ತಿಯಾಗಿ ಬೆಳೆಯಿಸಲು ಸಹಾಯವಾಗುತ್ತದೆ. ಶೈಕ್ಷಣಿಕ ಸನ್ನಿವೇಶವು ಈ ರೀತಿಯಲ್ಲಿ ವ್ಯಕ್ತಿತ್ವ ನಿರ್ಧಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
11. ಕಲಿಕೆ: ಇಲ್ಲಿ ಕಲಿಕೆ ಎನ್ನುವುದು ಶಾಲಾ ಸನ್ನಿವೇಶದಲ್ಲಿ ನಡೆಯುವ ಕಲಿಕೆಯ ಅಂಶಗಳೂ ಸೇರಿದಂರೆ ಪರಿಸರದಲ್ಲಿ ಮಕ್ಕಳು ಕಲಿತುಕೊಳ್ಳುವ ಎಲ್ಲ ಅಂಶಗಳೂ ಸೇರಿಕೊಳ್ಳುತ್ತವೆ, ಆ ಎಲ್ಲ ಕಲಿಕೆಗಳು ಇತರೇ ಅನುಭವಗಳೊಂದಿಗೆ ಮುಖಾಮುಖಿಯಾಗಿ ಸಂಕೀರ್ಣ ರೂಪವನ್ನು ಪಡೆದುಕೊಳ್ಳುತ್ತವೆ. ವ್ಯಕ್ತಿತ್ವದ ನಿರ್ಮಾಣವನ್ನು ಮಾಡುತ್ತದೆ. ಕಲಿಕೆಯ ವ್ಯಕ್ತಿತ್ವ ನಿರ್ಧಾರದ ಬಹುಮುಖ್ಯ ನಿರ್ಧಾರಕವಾಗಿದೆ.
12. ರಾಜಕೀಯ ಸನ್ನಿವೇಶಗಳು: ಒಟ್ಟಾರೆ ಪರಿಸರದಲ್ಲಿ ರಾಜಕೀಯ ಸನ್ನಿವೇಶಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ವ್ಯಕ್ತಿಯ ಬಹಿರಂಗದ ಚಟುವಟಿಕೆಗಳು ಏನಿರಬೇಕೆಂದು ರಾಜಕೀಯ ಕಾನೂನುಗಳು, ರಾಜಕೀಯ ನೀತಿ-ನಿಲುವುಗಳು ನಿರ್ಧರಿಸುತ್ತವೆ. ಅದಕ್ಕೆ ತಕ್ಕಂತೆ ವ್ಯಕ್ತಿಗಳು ತಮ್ಮ ವರ್ತನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ರಾಜಕೀಯ ಸನ್ನಿವೇಶವು ವ್ಯಕ್ತಿತ್ವದ ನಿರ್ಧಾರಕವೇ ಆಗಿದೆ.
13. ಭಾವನಾತ್ಮಕ ಸ್ಥಿತಿಗತಿಗಳು: ಈ ಮೊದಲಿನ ಅನೇಕ ನಿರ್ಧಾರಕಗಳ ಆಧಾರದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೆ ಆದ ಭಾವನಾತ್ಮಕ ಸ್ಥಿತಿಗತಿಯನ್ನು ರೂಪಿಸಿಕೊಳ್ಳುತ್ತಾನೆ. ಅದು ಆವೇಶವಾಗಿರಬಹುದು, ಕೋಪೋದ್ರೇಕವಾಗಬಹುದು ಅಥವಾ ಇನ್ನಾವುದೇ ರೂಪದ ಸ್ಥಿತಿಯಾಗಿರಬಹುದು: ಆ ಭಾವನಾತ್ಮಕ ಸ್ಥಿತಿಯು ವ್ಯಕ್ತಿತ್ವದ ನಿರ್ಧಾರಕವಾಗುತ್ತದೆ.
14. ಮನೋವೈಜ್ಞಾನಿಕ ಅಂಶಗಳು: ವ್ಯಕ್ತಿಯ ಪರಿಸರಕ್ಕೆ ಪ್ರತಿಕ್ರಿಯಿಸುತ್ತಾ ಹೋಗುವ ವಿಧಾನದಲ್ಲಿ ತನ್ನದೇ ಆದ ಮನೋವೈಜ್ಞಾನಿಕ ಅಂಶಗಳ ಸೂಕ್ಞ್ಮತೆಗಳನ್ನು ಪ್ರದರ್ಶಿಸುತ್ತಾನೆ. ಅಂತಹ ಸೂಕ್ಷ್ಮತೆಗಳಲ್ಲಿ ಹಿಂದೆ ಹೇಳಿದ ಎಲ್ಲ ಅಂಶಗಳೂ ಸೇರಿಕೊಳ್ಳುತ್ತವೆ. ಹೀಗೆ ಪರಿಸರಕ್ಕೆ ಪ್ರತಿಕ್ರಿಯಿಸುವ ಪ್ರಕ್ರಿಯೆಯಲ್ಲಿ ಮನೋವೈಜ್ಞಾನಿಕ ಅಂಶಗಳು, ಸೂಕ್ಷ್ಮತೆಗಳು ಪರಿವರ್ತನೆಯಾಗುತ್ತಲೂ, ಹಳೆಯದನ್ನು ಕಳೆದುಕೊಂಡು ಹೊಸದನ್ನು ರೂಢಿಸಿಕೊಳ್ಳುತ್ತಲೂ ಸಾಗುವ ಕ್ರಿಯೆಯು ಸಂಭವಿಸುತ್ತದೆ. ಇದೂ ಕೂಡ ವ್ಯಕ್ತಿತ್ವದ ನಿರ್ಧಾರಕವಾಗಿ ಕಾರ್ಯ ನಿರ್ವಹಿಸುತ್ತದೆ.
15. ಜೀವನ ದೃಷ್ಟಿ: ನಾನು ಯಾವ ರೀತಿ ಬದುಕಬೇಕು?’ ಎಂಬ ಬಗ್ಗೆ ವ್ಯಕ್ತಿಯು ಹೊಂದಿರುವ ದೃಷ್ಟಿಕೋನ ಜೀವನ ದೃಷ್ಟಿ. ಮಗುವಿನ ಹಂತದಲ್ಲಿ ವ್ಯಕ್ತಿತ್ವದ ಆಗಿಂದಾಗ್ಗೆ ಆಗುವ ಬದಲಾವಣೆಯನ್ನು ಯಾರು ಬೇಕಾದರೂ ಕಾಣಬಹುದು. ಹರಿಹರಿಯದಲ್ಲೂ ಯಾರು ಬೇಕಾದರೂ ಕಾಣಬಹುದು. ಹದಿಹರಿಯದಲ್ಲೂ ಈ ರೀತಿಯ ಬದಲಾವಣೆಗಳು ಆಗುತ್ತಿರುತ್ತವೆ. ಯಾಕೆಂದರೆ ಈ ಹಂತಗಳಲ್ಲಿ ಮೇಲೆ ಹೇಳಿದ ಎಲ್ಲ ಅಂಶಗಳ ಪ್ರಭಾವವು ಜೀವನದೃಷ್ಟಿಯನ್ನು ರೂಪಿಸುವ ಪ್ರಯತ್ನಗಳನ್ನು ಮಾಡುತ್ತಿರುತ್ತವೆಯೇ ಹೊರತು ಜೀವನ ದೃಷ್ಟಿಯ ರೂಪುಗೊಂಡಿರುವುದಿಲ್ಲ. ಆ ಎಲ್ಲ ಅಂಶಗಳಿಂದ ಒಂದು ಜೀವನ ದೃಷ್ಟಿಯ ರೂಪುಗೊಂಡಾಗ ವ್ಯಕ್ತಿಯಲ್ಲಿ ಸಣ್ಣ ಮಟ್ಟದ್ದೇ ಆದರೂ ಸ್ವತಂತ್ರವಾದ ಆಲೋಚನಾಕ್ರಮವು ರೂಪುಗೊಳ್ಳುತ್ತದೆ. ಆಗ ವ್ಯಕ್ತಿತ್ವದ ಸ್ಥಿರವಾದ ಕೆಲವು ಲಕ್ಷಣಗಳು ಕಾಣಿಸುತ್ತದೆ. ಆದ್ದರಿಂದ ಜೀವನ ದೃಷ್ಟಿಯ ವ್ಯಕ್ತಿತ್ವದ ಪ್ರಧಾನವಾದ ನಿರ್ಧಾರಕವಾಗಿದೆ.

ಮುಂದುವರಿಯುತ್ತದೆ…

ಅರವಿಂದ ಚೊಕ್ಕಾಡಿ

[email protected]

LEAVE A REPLY

Please enter your comment!
Please enter your name here