ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ರಕ್ಷಣೆ ನೀಡಿ

0
372

ಮಡಿಕೇರಿ ಪ್ರತಿನಿಧಿ ವರದಿ
ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸರಕಾರಿ, ಖಾಸಗಿ, ಗುತ್ತಿಗೆ ಆಧಾರದ ವೈದ್ಯರುಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್ ವ್ಯವಸ್ಥೆಗಳಿಗೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿಯ ವೈದ್ಯಕೀಯ ಪ್ರಕೋಷ್ಠ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಮತ್ತು ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾದ ಡಾ. ಬಿ.ಸಿ.ನವೀನ್ ಕುಮಾರ್ ಅವರ ನೇತೃತ್ವದ ನಿಯೋಗ ಎಸ್ಪಿ ರಾಜೇಂದ್ರಪ್ರಸಾದ್ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿತು.
 
 
ಕೆಲವು ಸಂದರ್ಭಗಳಲ್ಲಿ ವೈದ್ಯರುಗಳ ಮೇಲೆ ಸಾರ್ವಜನಿಕರು, ರೋಗಿಗಳ ಸಂಬಂಧಿಕರು ಹಾಗೂ ಇತರರು ಹಲ್ಲೆಗೆ ಮುಂದಾಗುವುದು, ಅವಾಚ್ಯ ಶಬ್ದಗಳ ಬಳಕೆ ಹಾಗೂ ಬೆದರಿಕೆಯ ಕ್ರಮಗಳನ್ನು ಅನುಸರಿಸುವುದಲ್ಲದೇ, ನರ್ಸಿಂಗ್ ಹೋಂ, ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ, ವಾಹನಗಳಿಗೆ ಹಾನಿಯುಂಟುಮಾಡುವ ಘಟನೆಗಳು ನಡೆಯುತ್ತಿವೆ. ಈ ಕಾರಣದಿಂದಲೇ ಸರಕಾರಿ ಆಸ್ಪತ್ರೆಗಳಿಗೆ ವೈದ್ಯರುಗಳು ಬರುತ್ತಿಲ್ಲ, ಖಾಸಗಿ ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸಮಾಡುವ ವೈದ್ಯರುಗಳ ತುರ್ತು ಸಂದರ್ಭಗಳಲ್ಲಿ ಅಪಘಾತವಾಗಿರುವ ಸಂದರ್ಭಗಳಲ್ಲಿ ಗಾಯಾಳುಗಳನ್ನು ಕನಿಷ್ಠ ಪ್ರಥಮ ಚಿಕಿತ್ಸೆ ನೀಡಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ನಿಯೋಗ ಅಭಿಪ್ರಾಯಪಟ್ಟಿದೆ.
 
 
ಕರ್ನಾಟಕ ವೈದ್ಯೋಪಾಚಾರ ಸಿಬ್ಬಂದಿಯ ಮೇಲೆ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕಾಯ್ದೆ 2009 ರ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ಉಪಠಾಣೆಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಕರ್ತವ್ಯ ನಿರತ ವೈದ್ಯರುಗಳಿಗೆ ಸೂಕ್ತ ರಕ್ಷಣೆ ಮತ್ತು ಬೆಂಬಲ ತುಂಬುವ ಕೆಲಸ ಮಾಡಬೇಕೆಂದು ಮನುಮುತ್ತಪ್ಪ ಹಾಗೂ ಡಾ.ಬಿ.ಸಿ.ನವೀನ್ ಕುಮಾರ್ ಮನವಿ ಮಾಡಿದರು.
 
 
ಮನವಿಗೆ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ಉಪ ಠಾಣೆಗಳಿಗೆ ಅಧಿನಿಯಮದ ಕುರಿತು ಮಾಹಿತಿ ನೀಡಲಾಗುವುದಲ್ಲದೆ, ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಕ್ಲಿನಿಕ್ ಗಳಿಗೆ ಅಧಿನಿಯಮದ ಕುರಿತು ಸೂಚನಾ ಫಲಕವನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗುವುದೆಂದು ತಿಳಿಸಿದರು.
 
 
ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಕ್ಲಿನಿಕ್ ಗಳಲ್ಲಿ ವೈದ್ಯೋಪಚಾರ ಮಾಡುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಯಾವುದೇ ಕೆಡುಕು ಉಂಟು ಮಾಡುವ ಅಥವಾ ಅವರ ಕರ್ತವ್ಯಗಳಿಗೆ ಅಡ್ಡಿ ಪಡಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಪರಾಧವು ಜಾಮೀನು ರಹಿತವಾಗಿದ್ದು, 3 ವರ್ಷದ ಕಾರಾಗೃಹ ಶಿಕ್ಷೆ ಮತ್ತು ರೂ.50,000 ದವರೆಗಿನ ದಂಡ ವಿಧಿಸಬಹುವುದಾಗಿದೆ.
ಆಸ್ಪತ್ರೆ ಮತ್ತು ಕ್ಲಿನಿಕ್ ನ ಯಾವುದೇ ಆಸ್ತಿ ಮತ್ತು ಸಲಕರಣೆಗಳಿಗೆ ಉಂಟಾದ ನಷ್ಟಕ್ಕೆ 2 ಪಟ್ಟು ದಂಡ ತೆರಬೇಕಾಗುತ್ತದೆ ಎನ್ನುವ ಕಾಯ್ದೆ ಇರುವ ಬಗ್ಗೆ ನಿಯೋಗ ಗಮನ ಸೆಳೆಯಿತು.
ಡಾ.ಉದಯ್ ಕುಮಾರ್, ಡಾ.ಧ್ಯಾನ್ ಕುಶಾಲಪ್ಪ, ವೈದ್ಯಕೀಯ ಪ್ರಕೋಷ್ಠದ ಸದಸ್ಯ ಶಿವರಾಜ್ ಈ ಸಂದರ್ಭ ಹಾಜರಿದ್ದರು. ಫೋಟೋ :: ಬಿಜೆಪಿ ಪ್ರಕೋಸ್ಟ

LEAVE A REPLY

Please enter your comment!
Please enter your name here