ವೈದ್ಯರಿಂದ ಗುಣವಾಗದ ಖಾಯಿಲೆಯನ್ನು ನಿತ್ಯಾನಂದರು ಗುಣಪಡಿಸಿದರು!

0
2510

ನಿತ್ಯ ಅಂಕಣ-೮೧ : ತಾರಾನಾಥ್‌ ಮೇಸ್ತ, ಶಿರೂರು.
‘ಗ್ಯಾನ್ ಚಂದ ಪ್ರೇಮಚಂದ’ ಎನ್ನುವ ಜವಳಿ ವ್ಯಾಪರಿಯೊಬ್ಬ ನಿತ್ಯಾನಂದರ ಭಕ್ತನಾಗಿದ್ದ. ಇವರ ಬಟ್ಟೆ ವ್ಯಾಪರವು ಮುಂಬೈನಗರದಲ್ಲಿ ನಡೆಯತಿತ್ತು. ದೈಹಿಕ ಆರೋಗ್ಯವು ಸರಿ ಇರುವಾಗಲೇ, ಇವರಿಗೆ ಇದ್ದಕಿದ್ದಂತೆ ಗಂಟಲು ಬೇನೆ ಲಕ್ಷಣಗಳು ಪ್ರಾರಂಭಗೊಂಡಿತು. ಅದನಂತರ ಅವರು ಪ್ರಾರಂಭಿಕ ಹಂತದಲ್ಲಿಯೇ ವೈದ್ಯರಲ್ಲಿ ತೋರಿಸಿದರು. ವೈದ್ಯರ ಔಷಧೋಪಾಚರಗಳು ನಡೆಯುತ್ತ ಇದ್ದರೂ ಇವರ ಗಂಟಲು ಬೇನೆ ಮಾತ್ರ ಗುಣವಾಗಲಿಲ್ಲ. ವೈದ್ಯರನ್ನು ಬದಲಿಸಿದರು. ತಜ್ಞ ವೈದ್ಯರುಗಳಲ್ಲಿಯೂ ತೋರಿಸಿದರು. ಯಾವ ವೈದ್ಯರ ಚಿಕಿತ್ಸೆಗೂ ಗ್ಯಾನಚಂದ ಅವರ ಗಂಟಲು ಬೇನೆ ಗುಣವಾಗಲಿಲ್ಲ.
ಅವರ ಪರಿಸ್ಥಿತಿ ಹೇಗಿತೆಂದರೆ, ಹೆಚ್ಟಿಗೆ ಮಾತನಾಡಲು ಕಷ್ಟ ಪಡಬೇಕಿತ್ತು. ಘನ ಆಹಾರ ಸೇವನೆ ಮಾಡಲು ಅಸಾಧ್ಯವಾಗಿತ್ತು. ದ್ರವ ರೂಪದ ಆಹಾರವನ್ನು ಅವರು, ಉದರ ಹಸಿವು ತಣಿಸಲೆಂದು, ಉಂಟಾಗುವ ವೇದನೆಯನ್ನು ಸಹಿಸಿಕೊಂಡು ಸೇವಿಸುತ್ತಿದ್ದರು. ತನ್ನ ಆರೋಗ್ಯದ ಪರಿಸ್ಥಿತಿ ಗಂಭೀರ ಹಂತದಡೆಗೆ ಹೋಗುವುದನ್ನು ಗಮನಿಸಿದ ಗ್ಯಾನಚಂದರು, ವೈದ್ಯರ ಚಿಕಿತ್ಸೆಯ ಮೇಲೆ ಭರವಸೆ ಕಳೆದುಕೊಂಡರು. ಕೊನೆಗೆ ಅವರು ತಾನು ನಂಬಿರುವ, ಗಣೇಶಪುರಿಯ ಗುರು ನಿತ್ಯಾನಂದರಲ್ಲಿ ಹೋಗಿ, ಅವರಲ್ಲಿ ಅಳಲನ್ನು ಹೇಳಿಕೊಳ್ಳಲು ನಿರ್ಧರಿಸಿದರು. ಅದರಂತೆ ಗ್ಯಾನಚಂದರು ಗಣೇಶಪುರಿ ಭಗವಾನ್ ನಿತ್ಯಾನಂದರು ದರ್ಶನ ನೀಡುವ ಮಂದಿರದೆಡೆಗೆ ತೆರಳುತ್ತಾರೆ. ಕಾಣಿಕೆ, ಫಲವಸ್ತು, ಹೂಗಳನ್ನು ಇಟ್ಟಿರುವ ಹರಿವಾಣವನ್ನು ನಿತ್ಯಾನಂದರ ಪಾದದಲ್ಲಿಟ್ಟು ನಮಸ್ಕರಿಸುತ್ತಾರೆ.
ಬಂದಿರುವ ಭಕ್ತನ ಸಮಸ್ಯೆ ಏನೆಂದು ಗುರುದೇವರಿಗೆ ತಿಳಿದಿರುತ್ತದೆ. “ಇಲ್ಲಿ ಏನೂ ಇಲ್ಲ, ನೀನೇ ತೆಗೆದುಕೊ.. ಹಣ್ಣುಗಳನ್ನು ನೀನೇ ತಿನ್ನು” ಎಂದು ಗದರಿಸುತ್ತಾರೆ. ಗ್ಯಾನಚಂದರು, ಕ್ಷೀಣಸ್ವರದಲ್ಲಿ “ಗುರುದೇವರೆ, ಗಂಟಲಲ್ಲಿ ಒಂದು ಹನಿ ನೀರು ಇಳಿಯುದಿಲ್ಲ..! ಹಣ್ಣುಗಳನ್ನು ನಾನು ಹೇಗೆ ತಿನ್ನಲಿ..? ನಿಮ್ಮ ಪಾದ ಬಿಟ್ಟು ನನಗೆ ಇನ್ನೆಲ್ಲಿಯ ಸ್ಥಾನ…?” ಎಂದು ದುಃಖಿತನಾಗಿ ಮೊರೆ ಇಡುತ್ತಾನೆ. ಕರುಣಾಸಿಂಧುವಾದ ಗುರುದೇವರು ಭಕ್ತನ ಸಾಂತ್ವನ ಪಡಿಸುತ್ತ, “ನೀನು ಹದಿನೈದು ದಿನಗಳ ಕಾಲ ಗಣೇಶಪುರಿಯಲ್ಲಿ ಇರು. ಬಿಸಿನೀರಿನ ಕುಂಡದಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡು. ಅದೇ ಕುಂಡದ ನೀರನ್ನು ತೀರ್ಥವೆಂದು ಸೇವಿಸು. ಭೀಮೇಶ್ವರ ಮಂದಿರದಲ್ಲಿ ದೇವರ ದರ್ಶನ ಮಾಡು. ಅಲ್ಲಿಯ ಲಿಂಗಕ್ಕೆ ಕ್ಷೀರಾಭೀಷೇಕ ಮಾಡಿಸು, ತದನಂತರ ನನ್ನಲ್ಲಿ ಬಾ” ಎಂದು ಹೇಳಿದರು.
ಗುರುದೇವರು ಹೇಳಿದ ಕ್ರಮವನ್ನು ಗ್ಯಾನಚಂದರು ಚಾಚು ತಪ್ಪದೆ ಪಾಲಿಸಿದರು. ಹಾಗೆಯೇ ಇನ್ನೂ ಹದಿನೈದು ದಿನಗಳ ಕಾಲ ಇರುವಂತೆ ಗುರುದೇವರು ಆಜ್ಞೆ ನೀಡುತ್ತಾರೆ. ಅದರಂತೆಯೇ ಸೂಚಿಸಿರುವ ಅನುಷ್ಠಾನಗಳನ್ನು ಗ್ಯಾನಚಂದರು ಮಾಡುತ್ತಾರೆ. ಒಂದು ತಿಂಗಳು ಕಳೆದ ಬಳಿಕ ಅವರ ಆರೋಗ್ಯವು ಸಂಪೂರ್ಣವಾಗಿ ಸುಧಾರಿಸಿತು. ನಂತರ ಗುರುದೇವರು ‘ಮುಂಬೈಗೆ ತೆರಳು, ಅಲ್ಲಿ ವೈದ್ಯರಲ್ಲಿ ತೋರಿಸು’ ಎಂದು ಹೇಳಿದರು. ಮುಂಬೈಯಲ್ಲಿ ಗ್ಯಾನಚಂದರ ಗಂಟಲು ಪರೀಕ್ಷಿಸಿದ ವೈದ್ಯರು ಆಶ್ಚರ್ಯ ಪಟ್ಟು, “ಯಾರ ಮದ್ದು..?” ಎಂದು ಗ್ಯಾನಚಂದರಲ್ಲಿ ಕೇಳುತ್ತಾರೆ. ಆವಾಗ “ಗಣೇಶಪುರಿ ಲಂಗೋಟಿ ಬಾಬಾರ ಮದ್ದು” ಗ್ಯಾನಚಂದರು ಹೇಳುತ್ತಾನೆ. ಗುಣಮುಖನಾದ ಬಳಿಕವು ಗುರುದೇವರ ದರ್ಶನ ಪಡೆಯಲು ಗ್ಯಾನಚಂದರು ಗಣೇಶಪುರಿಗೆ ಬರುತ್ತಲೇ ಇರುತ್ತಾರೆ. ಗುರುದೇವರ ಅನುಗ್ರಹದಿಂದಲೇ ಅವರ ಬದುಕು ಸುವ್ಯವಸ್ಥಿತವಾಗಿ ಗಟ್ಟಿಗೊಳ್ಳುತ್ತದೆ.

LEAVE A REPLY

Please enter your comment!
Please enter your name here