ರಾಜ್ಯವಾರ್ತೆ

ವೈಜ್ಞಾನಿಕ ಮನೋಭಾವ ಭಾರತದಲ್ಲಿ ಕಾಣೆಯಾಗಿದೆ 

ಬೆಂಗಳೂರು ಪ್ರತಿನಿಧಿ ವರದಿ
ದೇಶದಲ್ಲಿ ವೈಜ್ಞಾನಿಕ ಪ್ರಗತಿ ಇನ್ನೂ ಆಮೆಗತಿಯಲ್ಲಿ ಸಾಗುತ್ತಿದೆ. ಜನರಲ್ಲಿ ವೈಜ್ಞಾನಿಕ ಮನೋಭಾವ ಕಾಣೆಯಾಗಿದೆ ಎಂದು ರಾಷ್ಟ್ರೀಯ ಸಂಶೋಧನೆ, ಲಿನಸ್ ಪೌಲಿಂಗ್ ಪ್ರೊಫೆಸರ್ ಮತ್ತು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಮತ್ತು 2014ರಲ್ಲಿ ‘ಭಾರತ ರತ್ನ’ ಗೌರವಕ್ಕೆ ಪಾತ್ರರಾದ ಪ್ರೊಫೆಸರ್ ಸಿಎನ್ಆರ್ ರಾವ್ ಅಭಿಪ್ರಾಯ ಪಟ್ಟರು.
 
 
 
ಗೀತಂ ವಿಶ್ವವಿದ್ಯಾಲಯದ 36ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ಸಂಶೋಧನಾ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ವಲಯಕ್ಕೆ ಅದರಲ್ಲೂ ವಿಶ್ವವಿದ್ಯಾಲಯಗಳಿಗೆ ಇನ್ನಷ್ಟು ಹೆಚ್ಚಿನ ಹಣಕಾಸು ನೆರವು ಒದಗಿಸಬೇಕು ಎಂದವರು ಆಗ್ರಹಿಸಿದರು.
 
 
ವಿಜ್ಞಾನ ಅಭಿವೃದ್ಧಿಗೆ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ)ಯ ಶೇ. 1ರಷ್ಟು ಮೊತ್ತವನ್ನೂ ಒದಗಿಸಲಾಗುತ್ತಿಲ್ಲ. ಆದರೆ ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾದಂತಹ ದೇಶಗಳು ಸಂಶೋಧನಾ ಕ್ಷೇತ್ರದಲ್ಲಿ ನಮ್ಮಿಂದ ಎಷ್ಟೋ ಮುಂದಿವೆ ಪ್ರಸಕ್ತ ಸಂಶೋಧನಾ ಕ್ಷೇತ್ರದ ಪರಿಸ್ಥಿತಿ ಕಠಿಣವಾಗಿದ್ದರೂ ವಿಜ್ಞಾನಿ ಸಮುದಾಯ ಯಾವ ಕಾರಣಕ್ಕೂ ಸಂಶೋಧನೆಯ ನಿಟ್ಟಿನಲ್ಲಿ ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಶೋಧಕರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಗೀತಂ ವಿವಿ ಕೊಡ ಮಾಡಿದ ಗೌರವ ಪ್ರೊಫೆಸರ್ ಗೌರವವನ್ನು ಅವರು ಸ್ವೀಕರಿಸಿದರು.
 
 
ಗೀತಂ ವಿವಿ ಅಧ್ಯಕ್ಷ ಡಾ. ಎಂವಿವಿಎಸ್ ಮೂರ್ತಿ ಅವರು ಪ್ರೊ ಸಿಎನ್ಆರ್ ರಾವ್ ಅವರಿಗೆ ಗೀತಂ ಸಂಸ್ಥಾಪನಾ ದಿನದ ವಾರ್ಷಿಕ ಪ್ರಶಸ್ತಿಯನ್ನು 10 ಲಕ್ಷ ರೂ. ನಗದಿನೊಂದಿಗೆ ನೀಡಿ ಗೌರವಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ವಿವಿ ಉಪ ಕುಲಪತಿ ಕೆ. ರಾಮಕೃಷ್ಣ ರಾವ್, ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ವದೇಶಿ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ವಿವಿ ಮಾಡುತ್ತಿದೆ ಎಂದರು.
 
 
ವಿಶ್ವವಿದ್ಯಾಲಯವು 11 ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ್ದು 40 ಸಂಶೋಧನೆಗಳಿಗೆ ಹಕ್ಕು ಸ್ವಾಮ್ಯ ಪಡೆಯಲು ನೋಂದಾಯಿಸಿಕೊಂಡಿದೆ. ಬೆಂಗಳೂರು ಕ್ಯಾಂಪಸ್ನಲ್ಲಿ ಅಗ್ರಿಕಲ್ಚರ್ ಬಿಎಸ್ಸಿ ಮತ್ತು ವಿಶಾಖಪಟ್ಟಣ ಕ್ಯಾಂಪಸ್ನಲ್ಲಿ ಬಿಎಸ್ಸಿ ಇನ್ ನರ್ಸಿಂಗ್ ಕೋರ್ಸ್ ಆರಂಭಿಸಲು ಕೂಡ ಚಿಂತನೆ ನಡೆಸಿದೆ. ವಿಜ್ಞಾನ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಇಂಟರ್ ಡಿಸಿಪ್ಲಿನರಿ ಸಂಶೋಧನೆ ನಡೆಸಲು ಕೂಡ ಯೋಜನೆ ರೂಪಿಸಲಾಗಿದೆ ಎಂದು ವಿವಿ ಉಪ ಕುಲಪತಿ ಎಂ.ಎಸ್. ಪ್ರಸಾದ್ ರಾವ್ ಈ ಸಂದರ್ಭದಲ್ಲಿ ಹೇಳಿದರು. ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿವಿಯು 160 ಹೊಸ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ರಸಾಯನ ಶಾಸ್ತ್ರದಲ್ಲಿನ 53ನೇ ವಾರ್ಷಿಕ ಸಮ್ಮೇಳನವನ್ನು ವಿಶಾಖಪಟ್ಟಣ ಕ್ಯಾಂಪಸ್ನಲ್ಲಿ ವಿವಿ ಆಯೋಜಿಸಲಿದೆ ಎಂದು ತಿಳಿಸಿದರು.
 
ಇದೇ ಸಂದರ್ಭದಲ್ಲಿ ಅತ್ಯುತ್ತಮ ಉಪನ್ಯಾಸಕ ಪ್ರಶಶ್ತಿಯನ್ನು ಪ್ರೊ. ಡಿ. ಗೋವಿಂದ ರಾವ್, ಅತ್ಯುತ್ತಮ ಪೂರಕ ಸಿಬ್ಬಂದಿ ಪ್ರಶಸ್ತಿಯನ್ನು ಎಂ. ಬಾಲಸುಬ್ರಹ್ಮಣ್ಯಂ ಹಾಗೂ ವಿ ಶಂಕರ ರಾವ್ ಅವರಿಗೆ ಪ್ರೊ. ಸಿಎನ್ಆರ್ ರಾವ್ ಪ್ರದಾನ ಮಾಡಿದರು.
 
ಗೀತಂ ವಿವಿ ಉಪಾಧ್ಯಕ್ಷ ಪ್ರೊ. ಎಂ. ಗಂಗಾಧರ ರಾವ್, ಸಹಾಯಕ ಉಪ ಕುಲಪತಿ ಪ್ರೊ. ಕೆ. ಶಿವರಾಮ ಕೃಷ್ಣ, ಪ್ರೊ. ಪಿವಿ ಶಿವಪುಲ್ಲಯ್ಯ, ಪ್ರೊ. ಶಿವಪ್ರಸಾದ್, ರಿಜಿಸ್ಟ್ರಾರ್ ಪ್ರೊ. ಎಂ. ಪೋತರಾಜು ಮತ್ತು ಆಡಳಿತ ಮಂಡಳಿಯ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವಿಯ ಸಾಂಸ್ಕೃತಿಕ ತಂಡದಿಂದ ಸಾಂಪ್ರದಾಯಿಕ ಮತ್ತು ಕಲಾತ್ಮಕ ಕಾರ್ಯಕ್ರಮ ಕೂಡ ಈ ಸಂದರ್ಭದಲ್ಲಿ ನಡೆಯಿತು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here