ವೃತ್ತಿ ಮಾರ್ಗದರ್ಶನ

0
442

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಮುಂದುವರಿದ ಭಾಗ
ಗುರಿಯನ್ನು ರೂಪಿಸಿಕೊಳ್ಳುವುದು
ಹದಿಹರೆಯದಲ್ಲಿ ನಿರ್ದಿಷ್ಟತೆ ಇರುವುದಿಲ್ಲ. ಚಂಚಲತೆ ಜಾಸ್ತಿ ಇರುತ್ತದೆ. ಚಂಚಲತೆಯಿಂದಾಗಿ ಬದುಕಿಗಾಗಿ ಗುರಿಯನ್ನು ಕಂಡುಕೊಳ್ಳಲು ಆಗುವುದಿಲ್ಲ. ಈ ಕ್ಷಣಕ್ಕೆ ಯಾವುದೋ ಒಂದು ಸಂಗಾತಿಯು ತನ್ನ ಜೀವನದ ಗುರಿಯೆಂದು ಅನಿಸಿದರೆ ಮರು ಕ್ಷಣಕ್ಕೆ ಆ ಗುರಿಯು ಬದಲಾಗಬಹುದು. ಇಂತಹ ತೀರ್ಮಾನಗಳು ಆ ಕ್ಷಣದ ತೀರ್ಮಾನಗಳಾಗಿರುತ್ತವೆಯೆ ಹೊರತು ವಿಶಾಲ ವ್ಯಾಪ್ತಿಯಲ್ಲಿ ಚಿಂತನೆಯನ್ನು ನಡೆಸಿ, ರೂಪಿಸಿದ ಗುರಿಗಳಾಗಿರುವುದಿಲ್ಲ. ಆದ್ದರಿಂದ ವಿವೇಕಯುತವಾಗಿ ಯೋಚಿಸಿ ಗುರಿಯನ್ನು ನಿರ್ಧರಿಸಬೇಕು.
 
 
ಸ್ವಯಂ ಶಿಸ್ತನ್ನು ರೂಢಿಸಿಕೊಳ್ಳುವುದು:
ಪುಟ್ಟ ಮಕ್ಕಳನ್ನು ಬಾಹ್ಯ ಒತ್ತಡಗಳಿಂದ ಶಿಸ್ತಿನಲ್ಲಿ ಇರಿಸಲು ಸಾಧ್ಯ. ಆದರೆ ಹದಿಹರೆಯದವರನ್ನು ಆ ರೀತಿಯ ಶಿಸ್ತಿಗೆ ಒಳಪಡಿಸುವುದು ಕಷ್ಟ. ಅತಿಯಾಗಿ ಹದಿಹರೆಯದವರನ್ನು ಬಾಹ್ಯ ಶಿಸ್ತಿಗೆ ಒಳಪಡಿಸಿದರೆ ಅವರ ವ್ಯಕ್ತಿತ್ವದ ವಿಕಾಸವನ್ನು ಕುಗ್ಗಿ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹದಿಹರೆಯದವರು ತಮ್ಮನ್ನು ತಾವೇ ಶಿಸ್ತಿಗೆ ಒಳಪಡಿಸಿಕೊಳ್ಳುವುದನ್ನು ಅಭ್ಯಾಸ ಮಾಡಬೇಕು. ಈ ರೀತಿಯ ಸ್ವಯಂ ಶಿಸ್ತಿನಿಂದ ಅಸಾಧಾರಣ ರೀತಿಯಲ್ಲಿ ವ್ಯಕ್ತಿತ್ವದ ವಿಕಾಸವಾಗುತ್ತದೆ.
 
 
ಸಮಸ್ಯೆ ನಿವಾರಣಾ ಸಾಮರ್ಥ್ಯ
ಹದಿಹರೆಯವರು ಸಮಸ್ಯೆಗಳ ಮೂಟೆಯನ್ನೇ ಹೊತ್ತುಕೊಂಡು ತಿರುಗಾಡುತ್ತಿರುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ಸಮಸ್ಯೆಗಳ ಸರಳ ಸಮಸ್ಯೆಗಳೂ ಆಗಿರಬಹುದು. ಆದರೆ ಹದಿಹರೆಯದವರಿಗೆ ಅದೇ ಮಹಾನ್ ಸಮಸ್ಯೆ ಎಂದೆನಿಸಲು ಸಾಧ್ಯವಿದೆ. ಸಮಸ್ಯೆ ಏನು ಎನ್ನುವುದಕ್ಕಿಂತ ಮುಖ್ಯವಾದದ್ದು ಸಮಸ್ಯೆಯನ್ನು ಹೊಂದಿದವರು ಸಮಸ್ಯೆಯ ಬಗ್ಗೆ ಏನು ಭಾವಿಸುತ್ತಾರೆ ಎನ್ನುವುದು. ಇಂತಹ ಸಮಸ್ಯೆಗಳನ್ನು ಹದಿಹರೆಯದವರು ತಮಗೆ ತಾವೇ ನಿವಾರಿಸಿಕೊಳ್ಳಬಹುದು. ಆದರೆ ಸಮಸ್ಯೆಯ ಕಾರಣವನ್ನು ಹುಡುಕಬೇಕು. ಕಾರಣಗಳ ಸೂಕ್ಷ್ಮ ಸಂಗತಿಗಳನ್ನು ಗುರುತಿಸಬೇಕು. ಅವುಗಳನ್ನು ವಿಶ್ಲೇಷಿಸಬೇಕು. ಈ ಪ್ರಕ್ರಿಯೆ ಎಲ್ಲ ಮುಗಿದ ನಂತರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡು ಅನುಷ್ಠಾನಕ್ಕೆ ತರುವ ಸಾಮರ್ಥ್ಯವನ್ನು ಬೆಳೆಯಿಸಿಕೊಳ್ಳಬೇಕು. ಅದಕ್ಕಾಗಿ ಸೂಕ್ತ ಮಾರ್ಗದರ್ಶನವನ್ನು ಪಡೆಯಬೇಕು.
 
 
ಚಟುವಟಿಕೆಗಳು: ಹದಿಹರೆಯದಲ್ಲಿ ಅಪಾರವಾದ ಕ್ರಿಯಾಶಿಲ ಶಕ್ತಿ ಇರುತ್ತದೆ. ಆ ಶಕ್ತಿಯ ಧನಾತ್ಮಕವಾಗಿ ಚಲಿಸುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಹದಿಹರೆಯದವರು ಕ್ರೀಯಾಶೀಲತೆಯನ್ನು ಬೆಳೆಯಿಸಿಕೊಂಡು ಚಟುವಟಿಕೆಯಲ್ಲಿ ನಿರತರಾಗಬೇಕು. ಗ್ರಂಥಾಲಯ ಹವ್ಯಾಸ, ಕ್ಷೇತ್ರ ಅಧ್ಯಯವ, ಪ್ರವಾಸ, ಯೋಜನಾ ಕಾರ್ಯಗಳು, ಎನ್ ಎಸ್ ಎಸ್ , ಎನ್ ಸಿಸಿ, ವಿಚಾರ ಸಂಕಿರಣ, ಉಪನ್ಯಾಸ ಮುಂತಾದ ಚಟುವಟಿಕೆಗಳಲ್ಲಿ ನಿರತರಾಗಬೇಕು. ಹದಿಹರೆಯದವರು ಚಟುವಟಿಕೆಗಳಲ್ಲಿ ಸಂತೋಷವನ್ನು ಕಾಣುವಂತಾದರೆ ಆಗ ಆತಂಕಗಳು ಹೊರಟು ಹೋಗಿ ಲವಲವಿಕೆ ಕಂಡು ಬರುತ್ತದೆ.
ಹದಿಹರೆಯವು ಬದುಕಿಗೆ ಮಹತ್ತರವಾದ ತಿರುವನ್ನು ಕೊಡುವ ಕಾಲವಾಗಿದೆ. ಈ ತಿರುವು ಸರಿಯಾದ ದಾರಿಯಲ್ಲಿ ನಡೆಸುವಂತೆ ನೋಡಿಕೊಳ್ಳಬೇಕು. ಆಗ ನಿಜವಾದ ರೀತಿಯಲ್ಲಿ ಹದಿಹರೆಯವು ಬಾಲಿನ ವಸಂತ ಕಾಲವಾಗುತ್ತದೆ.

LEAVE A REPLY

Please enter your comment!
Please enter your name here