`ವಿಸ್ಮಯ'ದ ಕಥೆ ಹೇಳುವ ಸಂಪಿಗೆ ಮರ!

0
1162
ದೇವಾಲಯದ ಮುಂಭಾಗದಲ್ಲಿರುವ ಮರದಲ್ಲಿ ಮಾರ್ಚ್ ತಿಂಗಳಲ್ಲಿ ಕಂಡುಬಂದ ಸಂಪಿಗೆ ಹೂ.ಚಿತ್ರಃ ಹರೀಶ್ ಕೆ.ಆದೂರು

ವಾರ್ತೆ ವಿಶೇಷ
ಹರೀಶ್ ಕೆ.ಆದೂರು
ಸಂಪಿಗೆ ಶ್ರೇಷ್ಠ ಪುಷ್ಪ. ಪೂಜೆ ಪುನಸ್ಕಾರಗಳಿಗೂ ಬಳಕೆಯಾಗುತ್ತದೆ. ದೇಗುಲದ ಆವರಣದಲ್ಲಿರುವ `ಸಂಪಿಗೆ ವೃಕ್ಷ’ಕ್ಕಂತೂ ಮಹತ್ವ ಜಾಸ್ತಿ. ಮಠಾಧೀಶ್ವರನ್ನು ಹೊರುವ ಅಡ್ಡಪಲ್ಲಕ್ಕಿ, ಫ್ಲೈವುಡ್, ಪೀಠೋಪಕರಣ ತಯಾರಿಕೆಗೂ ಸಂಪಿಗೆ ಮರ ಬಳಸಲಾಗುತ್ತದೆ. ಆಯುರ್ವೇದ ಶಾಸ್ತ್ರದಲ್ಲೂ ಸಂಪಿಗೆ ಬಳಕೆಯಿದೆ. ಇಷ್ಟೆಲ್ಲಾ ಬಹೂಪಯೋಗಿ ಅಂಶಗಳಿಂದ ಕೂಡಿದ ಸಂಪಿಗೆ ಸರ್ವ ವಯೋಮಾನದವರಿಗೂ ಪ್ರಿಯವಾಗುವ ಹೂವನ್ನು ನೀಡುತ್ತದೆ. ಆದರೆ ಇಲ್ಲಿರುವ ಸಂಪಿಗೆ ವೃಕ್ಷ ಎಲ್ಲಕ್ಕಿಂತ ಭಿನ್ನ. ಈ ಕಾರಣಕ್ಕಾಗಿಯೇ `ಈ ಸಂಪಿಗೆ ವೃಕ್ಷ’ ಹಲವು ಕೌತುಕಗಳಿಗೆ ಕಾರಣವಾಗಿದೆ. ಇದು `ದೈವ ಲೀಲೆ’ಯೇ ಹೌದು ಎಂಬುದು ಆಸ್ತಿಕ ಬಂಧುಗಳ ನಂಬಿಕೆ!
 
ಸಂಪಿಗೆ ಹೂವು ಸಾಮಾನ್ಯವಾಗಿ ದೇಗುಲದ ಆವರಣ, ಉದ್ಯಾನವನ, ಮನೆ ಅಂಗಳ ಹಿತ್ತಿಲಲ್ಲಿ ಕಾಣಸಿಗುತ್ತದೆ. ಸಂಸ್ಕೃತದಲ್ಲಿ ಚಂಪಕ ಸುವರ್ಣ ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್ ನಲ್ಲಿ ಗೋಲ್ಡನ್ ಚಂಪಕ್ ಹೆಸರಿನಲ್ಲಿ ಕರೆಯಿಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ .ವರ್ಷದ ಮೇ ಅಥವಾ ಅಕ್ಬೋಬರ್ ತಿಂಗಳಲ್ಲಿ ಮಾತ್ರ ಹೂ ಬಿಡುವುದು ವಾಡಿಕೆ. ಕೆಂಡ ಸಂಪಿಗೆ ಬಹು ಸುವಾಸನೆಯುಳ್ಳದ್ದು . ಬಿಳಿ, ಕಡುಹಳದಿ, ಹಳದಿ ಹೀಗೆ ಹಲವು ಬಣ್ಣಗಳಲ್ಲಿ ಕಂಡುಬರುತ್ತವೆ. ಆದರೆ ಇಲ್ಲೊಂದು ಅಚ್ಚರಿಯಿದೆ. ಈ ದೇಗುಲದ ಆವರಣದಲ್ಲಿರುವ ಅನಾದಿಕಾಲದ ಈ ಸಂಪಿಗೆ ವೃಕ್ಷ ವರ್ಷದ 365 ದಿನವೂ ಹೂಬಿಡುತ್ತಿದ್ದು ದೈವೀ ಲೀಲೆಯೇ ಇದಕ್ಕೆ ಕಾರಣ ಎಂಬ ನಂಬಿಕೆ ಆಸ್ತಿಕ ಭಕ್ತರದ್ದಾಗಿದೆ.
 
ಸುಮಾರು ಏಳುನೂರಕ್ಕೂ ಅಧಿಕ ವರುಷಗಳ ಇತಿಹಾಸವಿರುವ ಸಂಪಿಗೆ ವೃಕ್ಷಗಳು ಕಾಂತಾವರದ ಕಾಂತೇಶ್ವರನ ಸನ್ನಿಧಿಯಲ್ಲಿದೆ. ಈ ವೃಕ್ಷಗಳೇ ಈ ಕೌತುಕವನ್ನು ತೋರ್ಪಡಿಸುತ್ತಾ `ದೇಗುಲದ ಕಾರಣೀಕಕ್ಕೆ’ ಸಾಕ್ಷಿಯಾಗಿವೆ. ದೇಗುಲದ ಮುಂಭಾಗದಲ್ಲಿ ವಿಶಾಲವಾಗಿ ವಿಸ್ತರಿಸಿ ನಿಂತಿರುವ ಸಂಪಿಗೆ ವೃಕ್ಷಗಳಲ್ಲಿ ವರ್ಷದುದ್ದಕ್ಕೂ ಸುವಾಸನೆ ಸೂಸುವ ಸಂಪಿಗೆ ಹೂವುಗಳು ರಾರಾಜಿಸುತ್ತವೆ. ವರುಷದುದ್ದಕ್ಕೂ ಹಸಿರು ಹಸಿರಾಗಿ ನಳನಳಿಸುತ್ತಿರುವ ಈ ವೃಕ್ಷದಲ್ಲಿರುವ ಹೂವು ಅನುದಿನವೂ ಪ್ರತಿಯೊಬ್ಬ ಭಕ್ತನ ಕಣ್ಣಿಗೆ ಕಾಣುವ ಸತ್ಯ! ಇದು ದೈವೀ ಸಾಕ್ಷಾತ್ಕಾರ ಎಂಬ ನಂಬಿಕೆಯಿದೆ. ಕ್ಷೇತ್ರದ ದೇವರ ಕಾರಣೀಕ ಹಲವು ರೀತಿಯಲ್ಲಿ ಪ್ರದರ್ಶನಗೊಳ್ಳುತ್ತದೆ. ಇದಕ್ಕೆ ಸಾಕ್ಷಿಯೇ ದೇಗುಲದ ಮುಂಭಾಗದಲ್ಲಿರುವ ಸಂಪಿಗೆ ಮರದಲ್ಲಿರುವ ಸಂಪಿಗೆ ಹೂವುಗಳಂತೆ! ಕ್ಷೇತ್ರದ ದೇವರ ಶಕ್ತಿಯಿಂದ ಈ ಕೌತುಕ ಸೃಷ್ಠಿಯಾಗಿದೆ ಎಂಬುದು ಆಸ್ತಿಕ ಭಕ್ತ ಕೋಟಿಯ ಅಂಬೋಣ. ಕ್ಷೇತ್ರದ ಆವರಣದಲ್ಲಿರುವ ಸಂಪಿಗೆ ವೃಕ್ಷ ಬಹು ಪುರಾತನವಾದುದು. ಇದರ ಕಾಂಡ, ಮರ ಬೆಳೆದ ರೀತಿ ಎಲ್ಲವೂ ಅಚ್ಚರಿ ಹುಟ್ಟಿಸುವಂತಿದೆ. ಅಂಗಳದ ಬದಿಯಲ್ಲಿ ದೇಗುಲದ ಈಶಾನ್ಯ ಭಾಗದಲ್ಲಿರುವ ಸಂಪಿಗೆ ವೃಕ್ಷಗಳು ಈ ವಿಸ್ಮಯಕ್ಕೆ ಸಾಕ್ಷಿಯಾಗಿರುವಂತಹುದು.
 
ನಮ್ಮ ಪ್ರಾಚೀನ ದೇವಸ್ಥಾನಗಳಲ್ಲಿ ಅದರದೇ ಆದ ಆಯಸ್ಕಾಂತೀಯ ಶಕ್ತಿ ಪ್ರವಾಹವಿದೆ. ಇದನ್ನು ಮೂಡಬಿದಿರೆಯ ಕೃಷಿತಜ್ಞರಾದ ಡಾ. ಎಲ್ ಸಿ ಸೋನ್ಸ್ ಶೃತ ಪಡಿಸಿದ್ದಾರೆ. ಕಾಂತಾವರದ ಕಾಂತೇಶ್ವರನಿಗೆ ಸಂಬಂಧಿಸಿದಂತೆ ಅವರು ನಡೆಸಿರುವ ಸಂಶೋಧನೆ ಪ್ರಕಾರ ದೇವಾಲಯದ ಎದುರಿನ ಎತ್ತರದ ಗುಡ್ಡ ಪ್ರದೇಶದಿಂದ ಶಕ್ತಿ ಪ್ರವಹಿಸಿ ದೇವಾಲಯದ ಗರ್ಭಗೃಹದಲ್ಲಿ ಐಕ್ಯವಾಗಿರುವುದು ಕಂಡು ಬಂದಿದೆ. ಇದು ನಿಜಕ್ಕೂ ಆಶ್ಚರ್ಯ ಹುಟ್ಟಿಸುವ ಸಂಗತಿ. ದೇವಾಲಯದ ಎದುರಿನ ಬೆಟ್ಟದಲ್ಲಿ ಅಂಬರೀಷ ಮುನಿ ತಪಸ್ಸು ಮಾಡಿದ್ದ ಎಂಬ ನಂಬಿಕೆ. ಆ ಮುನಿಯೇ ತನ್ನ ಸ್ವಹಸ್ತದಿಂದ ಕಾಂತೇಶ್ವರನನನ್ನು ಪ್ರತಿಷ್ಠಾಪಿಸಿದ ಎಂಬುದು ಜನಜನಿತವಾದ ಕಥೆ. ಮುನಿಯ ತಪಃ ಶಕ್ತಿಯ ಪ್ರವಾಹ ಆ ಗುಡ್ಡದಿಂದ ಈ ಗುಡ್ಡಕ್ಕೆ ಹರಿಯುತ್ತಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ಸಾಧ್ಯವಿಲ್ಲ. ಆದರೆ ಕಾಂತಶಕ್ತಿ ಪ್ರವಾಹ ಇರುವುದಂತೂ ಸತ್ಯ.
ಕಾಂತಾವರ ದುರ್ಗಮಪ್ರದೇಶದಲ್ಲಿರುವ ಒಂದು ಪುಟ್ಟಗ್ರಾಮ. ಮೂಡಬಿದಿರೆ – ಕಾರ್ಕಳ ಮುಖ್ಯರಸ್ತೆಯಲ್ಲಿ ಬೆಳುವಾಯಿಯಿಂದ ತುಸು ಮುಂದೆ ಸಾಗಿ ಎಡಕ್ಕೆ ತಿರುಗಿ ಸುಮಾರು ಏಳು ಕಿಲೋಮೀಟರ್ ಸಾಗಿದರೆ ಕಾಂತಾವರ ಸಿಗುತ್ತದೆ. ಇಲ್ಲಿ ಶ್ರೀ ಕಾಂತೇಶ್ವರನ ಪುರಾತನ ದೇಗುಲವಿದೆ. ಅತ್ಯಂತ ಮನೋಹರ ಪ್ರಕೃತಿಯಿಂದ ಕೂಡಿದ ಪೀಠಭೂಮಿಯಲ್ಲಿ ಐತಿಹಾಸಿಕ ದೇಗುಲ ನಿರ್ಮಾಣವಾಗಿದೆ. ಸಾವಿರದ ಇನ್ನೂರು ವರ್ಷಗಳಿಗೂ ಮಿಗಿಲಾದ ಕಾಲದ ಇತಿಹಾಸ ಈ ಕ್ಷೇತ್ರಕ್ಕಿದೆ ಇದೆ. ಇದೊಂದು ಆಶ್ಚರ್ಯಪಡಬಹುದಾದ ಮಹಾನ್ ಸಂಗತಿ. ಕೆಲವು ಸ್ಥಳಗಳಿಗೆ ದೀರ್ಘ ಇತಿಹಾಸವಿದ್ದರೂ ಅವುಗಳ ಕೊಂಡಿ ಈ ಕಳಚಿ ಹೋಗಿರುವುದನ್ನು ಕಾಣುತ್ತೇವೆ. ಆದರೆ ಕಾಂತಾವರದ ಇತಿಹಾಸದ ಕೊಂಡಿಗಳು ಇನ್ನೂ ಭದ್ರವಾಗೇ ಇವೆ. ಕಾಂತೇಶ್ವರ ದೇವಸ್ಥಾನ ಮತ್ತು ಬಾರಾಡಿ ಬೀಡುಗಳು ಈ ಕೊಂಡಿಗಳನ್ನು ಸದಾ ಭದ್ರವಾಗಿಯೂ ಮತ್ತು ಕ್ಷೇಮವಾಗಿಯೂ ಇರುವಂತೆ ಕಾಪಾಡಿಕೊಂಡು ಬಂದಿವೆ. ಇದು ಇಲ್ಲಿಯ ಪರಂಪರೆ.

LEAVE A REPLY

Please enter your comment!
Please enter your name here