ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ

0
216

ಉಜಿರೆ ಪ್ರತಿನಿಧಿ ವರದಿ
ಪ್ರಶಸ್ತಿ, ಪುರಸ್ಕಾರಗಳಿಂದ ಹೊಣೆಗಾರಿಕೆ ಹೆಚ್ಚಾಗುತ್ತದೆ: ಡಾ. ಹೆಗ್ಗಡೆ
ಯಾವುದೇ ಆಸೆ – ಆಕಾಂಕ್ಷೆಯ ನಿರೀಕ್ಷೆ ಮಾಡದೆ, ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಶಂಸೆ, ಪ್ರಚಾರ ಬಯಸದೆ, ಸೇವೆ ಹಾಗೂ ಉನ್ನತ ಸಾಧನೆ ಮಾಡಿದಾಗ ಧನ್ಯತೆ, ಸಂತೋಷ ಮತ್ತು ಆತ್ಮ ತೃಪ್ತಿ ಸಿಗುತ್ತದೆ. ಪ್ರಶಸ್ತಿ, ಪುರಸ್ಕಾರಗಳಿಂದ ಹೊಣೆಗಾರಿಕೆ ಹೆಚ್ಚಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
 
ಬೆಂಗಳೂರಿನ ವಿಶ್ವ ಕನ್ನಡ ಸಾಹಿತ್ಯ ಸಾಂಸ್ಜೃತಿಕ ಪರಿಷತ್ ಆಶ್ರಯದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಮ್. ಕಾಲೇಜಿನಲ್ಲಿ ಭಾನುವಾರ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
 
ತಮ್ಮ ಸೇವೆ, ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದಾಗ ಸಾಧಕರು ಧನ್ಯತೆಯೊಂದಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ, ಪ್ರೋತ್ಸಾಹ ದೊರೆತಂತಾಗುತ್ತದೆ. ಸಮಾಜದಲ್ಲಿ ಯಾರೂ ಸಣ್ಣವರಲ್ಲ, ಯಾರೂ ದೊಡ್ಡವರಲ್ಲ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಅವಕಾಶವಿದೆ. ಅತಿಯಾದ ಅಹಂಕಾರವೂ ಇರಬಾರದು. ದೈನ್ಯತೆಯೂ ಸಲ್ಲದು ಎಂದು ಅವರು ಕಿವಿಮಾತು ಹೇಳಿದರು.
 
ಖ್ಯಾತ ಕವಿ ಡಾ. ಯಲ್ಲಪ್ಪ ಕೆ.ಕೆ. ಪುರ ವಿರಚಿತ ಪುಸ್ತಕವನ್ನು ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
 
ವಿಶ್ವ ಕನ್ನಡ ಸಾಹಿತ್ಯ ಸಾಂಸ್ಜೃತಿಕ ಪರಿಷತ್ನ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ, ವೀರ ಗೋಪಾಲ್, ಯೋಗ ತಜ್ಞ ಡಾ. ನಿರಂಜನ ಮೂರ್ತಿ ಮತ್ತು ವೀರಗಾಸೆ ಕಲಾವಿದ ಎಮ್.ಆರ್. ಬಸಪ್ಪ ಉಪಸ್ಥಿತರಿದ್ದರು.
 
ಡಾ. ಯಲ್ಲಪ್ಪ ಕೆ.ಕೆ. ಪುರ ಸ್ವಾಗತಿಸಿದರು. ಅಚ್ಚು ಮುಂಡಾಜೆ ಧನ್ಯವಾದವಿತ್ತರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
 
ನೆಲ್ಲಿಕಾರು : ಧಾಮ ಸಂಪ್ರೋಕ್ಷಣ ಕಾರ್ಯಕ್ರಮ
ನೆಲ್ಲಿಕಾರು ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಅಂಗವಾಗಿ ನಾಳೆ ಮಂಗಳವಾರ ಧರ್ಮಸ್ಥಳದ ವತಿಯಿಂದ ಭಗವಾನ್ ಶ್ರೀ ಅನಂತನಾಥ ಸ್ವಾಮಿಯ ಪ್ರತಿಷ್ಠೆ, 108 ಕಲಶ ಅಭಿಷೇಕ, ಬ್ರಹ್ಮಯಕ್ಷ ದೇವರ ಪ್ರತಿಷ್ಠೆ, ಅಟ್ಟಳಿಗೆ ಅಭಿಷೇಕ, ಕಟ್ಟೆ ಪೂಜೆ ಉತ್ಸವ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಸೇವಾ ಕತೃಗಳಾಗಿ ಪೂಜೆಯಲ್ಲಿ ಭಾಗವಹಿಸುವರು. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಸಚಿವ ಕೆ. ಅಭಯಚಂದ್ರ ಜೈನ್ ಶುಭಾಶಂಸನೆ ಮಾಡುವರು.

LEAVE A REPLY

Please enter your comment!
Please enter your name here