ಉಡುಪಿ ಪ್ರತಿನಿಧಿ ವರದಿ
ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಕಾರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಜಗೋಳಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಡಾರು ಇವರ ಸಹಯೋಗದೊಂದಿಗೆ ಇಂದು ವಿಶ್ವ ಆರೋಗ್ಯ ದಿನಾಚರಣೆ – 2016 ಮತ್ತು ಮಧುಮೇಹ ತಪಾಸಣಾ ಶಿಬಿರ ಕಾರ್ಯಕ್ರಮವು ಭಜನೆಕಟ್ಟೆ, ದಿಡಿಂಬಿರಿ, ಬಜಗೋಳಿ ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸದಸ್ಯ ಸುಧಾಕರ್ ಶೆಟ್ಟಿ, ಉದ್ಘಾಟಿಸಿ ಆರೋಗ್ಯ ಇಲಾಖಾ ಮಾಹಿತಿ ಕಾರ್ಯಾಗಾರಗಳ ಪ್ರಯೋಜನವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಂತೆ ಹಾಗೂ ಈ ನಿಟ್ಟಿನಲ್ಲಿ ಇಲಾಖಾ ಸಿಬ್ಬಂದಿಗಳಿಗೆ ಜನತೆ ಸಹಕರಿಸುವಂತೆ ಕೋರಿ ವೈದ್ಯರ ಸಲಹೆಯಂತೆ ಮಧುಮೇಹ ಬಾರದಂತೆ ಮುಂಜಾಗೃತಾ ಕ್ರಮವಹಿಸಲು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ ಇವರು ವಿಶ್ವ ಆರೋಗ್ಯ ದಿನಾಚರಣೆಯ ಉದ್ದೇಶ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಈ ಬಾರಿಯ ಘೋಷಣೆಯಾದ ಮಧುಮೇಹ ಮಣಿಸಿ (ಬೀಟ್ ಢಯಾಬೆಟಿಸ್) ಇದರ ಮಹತ್ವದ ಬಗ್ಗೆ ವಿವರಿಸುತ್ತಾ ಮಧುಮೇಹ ನಿಯಂತ್ರಣ ಮಾಡಬಹುದಾದ ಖಾಯಿಲೆಯಾಗಿದ್ದರೂ ಮಧುಮೇಹಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಶ್ರೀಮಂತ, ಮಧ್ಯಮ, ಕೆಳ ಹೀಗೆ ಎಲ್ಲಾ ವರ್ಗದವರೂ ಖಾಯಿಲೆಗೆ ತುತ್ತಾಗುತ್ತಿದ್ದು ಇದು ನಮ್ಮ ಜೀವನ ಶೈಲಿಯ ಮೇಲೆ ಅವಲಂಬಿಸಿರುವಂತದ್ದು. ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ತೂಕದ ಹೆಚ್ಚಳದಿಂದಾಗಿ ಮದುಮೇಹ ಕಂಡುಬರುತ್ತದೆ.
ಇದನ್ನು ಆಹಾರಕ್ರಮದ ಬದಲಾವಣೆ ಮತ್ತು ಔಷಧಗಳ ಸಹಾಯದಿಂದ ಹತೋಟಿಯಲ್ಲಿಡಲು ಸಾಧ್ಯವಿದೆ. ಯೋಗ ವ್ಯಾಯಾಮ ಮುಂತಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮಧುಮೇಹವನ್ನು ದೂರವಿರಿಸಲು ಸಹಕರಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಆರೋಗ್ಯ ರಕ್ಷಣೆಗಾಗಿ ನಾರಿನ ಅಂಶ ಹೆಚ್ಚಾಗಿರುವ ಆಹಾರ, ಹಣ್ಣು, ತರಕಾರಿ, ಕಾಳುಗಳು, ಮೀನು ಮುಂತಾದವುಗಳ ಸೇವನೆ ಮಾಡುವುದು ಉತ್ತಮ ಎಂಬ ಸಮಗ್ರ ಮಾಹಿತಿ ನೀಡಿದರು. ಬಹುತೇಕ ಜನರು ಮಧುಮೇಹ ಇದೆ ಎಂಬುದರ ಬಗ್ಗೆ ತಪಾಸಣೆಗಳನ್ನು ನಡೆಸುವುದಿಲ್ಲ. ಆರೋಗ್ಯ ಇಲಾಖಾ ವತಿಯಿಂದ ನಡೆಯುವ ಇಂತಹ ಉಚಿತ ಆರೋಗ್ಯ ತಪಾಸಣ ಶಿಬಿರಗಳಲ್ಲಿ ಸಾರ್ವಜನಿಕರು ತಪಾಸಣೆಗೊಳಪಟ್ಟು ಖಾಯಿಲೆ ಇಲ್ಲದಿರುವ ಹಾಗೂ ಇರುವಿಕೆಯ ಬಗ್ಗೆ ಖಚಿತ ಪಡಿಸುಕೊಳ್ಳುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಪಾಟ್ಕರ್ ಉತ್ತಮ ಮತ್ತು ನಿಯಮಿತ ಪ್ರಮಾಣದ ಆಹಾರ ಸೇವನೆ & ದೈಹಿಕ ಚಟುವಟಿಕೆಗಳು ಮದುಮೇಹ ರೋಗಿಗಳಿಗೆ ಆರೋಗ್ಯ ರಕ್ಷಣೆಗೆ ಸಹಕಾರಿ ಹಾಗೂ ವೈದ್ಯರ ಸಲಹೆಯನ್ನು ಪಾಲಿಸುವುದು ಅತ್ಯಂತ ಮುಖ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಯಶೋಧ ಮಾತನಾಡುತ್ತಾ ಅಸಾಂಕ್ರಾಮಿಕ ರೋಗಗಳು ಸಮಾಜದಲ್ಲಿ ಹೆಚ್ಚುತ್ತಿದ್ದು ಇವುಗಳ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಮುಂಜಾಗೃತಾ ಕ್ರಮ ವಹಿಸಲು ತಿಳಿಸಿದರು.
ಶಾಲಾ ಶಿಕ್ಷಕರಾದ ಬಸವರಾಜ್ ಪ್ರತಿಯೊಬ್ಬರು ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದು ಸದಾ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿರುವುದು & ಆಧುನಿಕ ಆಹಾರ ಪದ್ಧತಿಯನ್ನು ತ್ಯಜಿಸಿ ಪೌಷ್ಟಿಕ ಆಹಾರ ಸೇವನೆ ಮಾಡಲು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷೆ ಸುಜಾತ, ಸದಸ್ಯ ಹರೀಶ್ ಆರೋಗ್ಯ ಇಲಾಖಾ ಸಿಬ್ಬಂದಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಇವರು ಉಪಸ್ಥಿತರಿದ್ದರು.
ಆರೋಗ್ಯ ಸಹಾಯಕ ಶೇಖರ್ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಸಹಾಯಕ ಬಿ.ವಿ. ಶಿವರಾಮ ರಾವ್ ವಂದಿಸಿದರು.