ವಿಶ್ವಕರ್ಮ ಸಮಾಜ ಕೆಂಡಾಮಂಡಲವಾಗಿದ್ದೇಕೆ…?

0
4234

ಬಿಜೆಪಿಯಿಂದ ಉಚ್ಚಾಟನೆ-ವಿಶ್ವಕರ್ಮರ ಖಂಡನೆ
ಮೂಡುಬಿದಿರೆ : ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದ ಗೀತಾ ಆಚಾರ್ಯ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದನ್ನು ವಿಶ್ವಕರ್ಮ ಸಂಘಟನೆಗಳು ಖಂಡಿಸಿದೆ. ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಮಹೇಶ್ ಆಚಾರ್ಯ, ಕಾಷ್ಠಶಿಲ್ಪ ಕೆಲಸಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸಂಸದರು ಮಧ್ಯ ಪ್ರವೇಶಿಸಿ ಗೀತಾ ಆಚಾರ್ಯ ಅವರ ಉಚ್ಚಾಟನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಬಿಜೆಪಿಯಲ್ಲಿ ಬೆರಳೆಣಿಕೆಯ ಕಾರ್ಯಕರ್ತರಿದ್ದ ಕಾಲದಿಂದಲೂ ಪಕ್ಷ ಸಂಘಟನೆಗಾಗಿ ಗೀತಾ ಅವರು ಶ್ರಮಿಸಿದ್ದಾರೆ. ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಅವರು ನೆಲೆಸಿರುವ, ಬಿಜೆಪಿಯ ಭದ್ರಕೋಟೆಯಾಗಿರುವ ಜೈನ್‍ಪೇಟೆ 9ನೇ ವಾರ್ಡಿಗೆ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದರೂ ಅದುವರೆಗೆ ಬಿಜೆಪಿಯ ಸದಸ್ಯತ್ವವನ್ನೇ ಪಡೆಯದ ಶ್ವೇತಾಕುಮಾರಿ ಎಂಬವರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ 8ನೇ ಅರಮನೆ ಬಾಗಿಲು ವಾರ್ಡ್‍ನಿಂದ ಗೀತಾ ಆಚಾರ್ಯ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿ ಪಕ್ಷದಲ್ಲಿ ಮೂಲೆಗುಂಪು ಮಾಡುವ ಸ್ಥಳೀಯ ಬಿಜೆಪಿ ನಾಯಕರ ಹುನ್ನಾರವನ್ನು ಪ್ರತಿಭಟಿಸಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಪುರಸಭಾ ಚುನಾವಣೆಯಲ್ಲಿ ವಿಶ್ವಕರ್ಮರು ನೋಟಾ ಮತ ಚಲಾವಣೆಗೆ ಚಿಂತನೆ ನಡೆಸಿದ್ದರೂ ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರ ನಾಯಕರ ಮನವಿಗೆ ಸ್ಪಂದಿಸಿ ಅದನ್ನು ಕೈಬಿಡಲಾಗಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಉಮಾನಾಥ ಕೋಟ್ಯಾನ್ ಅವರ ಸ್ಪರ್ಧೆಯನ್ನು ವಿರೋಧಿಸಿ ಬಿಜೆಪಿ ಕಚೇರಿಗೆ ಬೀಗ ಜಡಿದಿದ್ದು ಅವರನ್ನು ಸತ್ತ ಕತ್ತೆಗೆ ಹೋಲಿಸಿ ಮಾಧ್ಯಮ ಹೇಳಿಕೆ ನೀಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿಯವರ ವಿರುದ್ಧ ಪಕ್ಷ ಶಿಸ್ತುಕ್ರಮ ಜರಗಿಸಿದೆಯೇ? ಅವರನ್ನು ಉಚ್ಚಾಟಿಸಿಲ್ಲವೇಕೆ? ಕಾರ್ಯಕರ್ತರಿಗೊಂದು ಮುಖಂಡರಿಗೊಂದು ನ್ಯಾಯವೇ? ಗೀತಾ ಅವರನ್ನು ಉಚ್ಚಾಟಿಸಿರುವುದು ತನಗೆ ಗೊತ್ತೇ ಇಲ್ಲ ಎಂದು ಪುರಸಭೆಯ ಚುನಾವಣೆಯ ಉಸ್ತುವಾರಿ ಸುದರ್ಶನ್ ಸ್ಪಷ್ಟಪಡಿಸಿದ್ದಾರೆ.ಹಾಗಾದರೆ ಇದಕ್ಕೆ ಹೊಣೆಗಾರರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು.

ಪಕ್ಷದ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಬಣ ರಾಜಕೀಯವನ್ನು ಸೃಷ್ಟಿಸಿಕೊಂಡಿದ್ದು ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಮೂಲೆಗುಂಪು ಮಾಡಲಾಗುತ್ತಿದೆ. ಗೀತಾ ಅವರಿಗೆ ನ್ಯಾಯ ದೊರಕಿಸದಿದ್ದಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು.

ಹೆಚ್ಚಿನ ವಿಶ್ವಕರ್ಮರು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದು ಹತ್ತಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದು ನಾಯಕತ್ವ ಗುಣ ಹೊಂದಿದ್ದರೂ ಪಕ್ಷದಲ್ಲಿ ಗೌರವಯುತವಾದ ಸ್ಥಾನಮಾನವನ್ನು ನೀಡಿಲ್ಲ, ಚುನಾವಣೆಯ ಸ್ಪರ್ಧೆಯಲ್ಲೂ ಗ್ರಾಮ ಮಟ್ಟಕ್ಕೆ ಸೀಮಿತಗೊಳಿಸಲಾಗಿದೆ ಈ ಎಲ್ಲ ಅಂಶಗಳ ಕುರಿತು ಜಿಲ್ಲಾ, ರಾಜ್ಯಮಟ್ಟದ ನಾಯಕರನ್ನು ಭೇಟಿಯಾಗಿ ಚರ್ಚಿಸಲಾಗುವುದು. ಗೀತಾ ಆಚಾರ್ಯ ಅವರು ಪಕ್ಷದಿಂದ ತನಗಾದ ಅನ್ಯಾಯವನ್ನು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಅರವಿಂದ ಆಚಾರ್ಯ, ಬೆಳುವಾಯಿ ವಿಶ್ವಕರ್ಮ ಗ್ರಾಮಸಮಾಜ ಸೇವಾ ಸಂಘದ ಕಾರ್ಯದರ್ಶಿ ಸಂತೋಷ ಆಚಾರ್ಯ ಉಪಸ್ಥಿತರಿದ್ದರು.

Advertisement

LEAVE A REPLY

Please enter your comment!
Please enter your name here