ವಿಧಿಯ ನಡೆಯನ್ನು ಬದಲಿಸಿ ಅನುಗ್ರಹಿಸುತ್ತಿದ್ದರು!!!

0
966

ನಿತ್ಯ ಅಂಕಣ:೨೨

ಸೀತಾರಾಮ ಶೆಣೈ ಅವರು ನಿತ್ಯಾನಂದ ಸ್ವಾಮೀಜಿ ಅವರ ಪರಮ ಭಕ್ತರು. ಅವರು ಮನೆಯಲ್ಲಿ ಇದ್ದಕಿದ್ದಂತೆ ತೀವ್ರ ಅಸ್ವಸ್ಥರಾದರು. ಅದೇ ಸಮಯ ಹೃದಯಘಾತಗೊಂಡು ದೈವಾಧೀನರಾದರು. ತನ್ನ ಯಜಮಾನರು ಮೃತಪಟ್ಟಿದ್ದಾರೆ, ಎಂದು ಮನೆ ಮಂದಿ ಹೇಳುವ ಮಾತನ್ನು ಅವರ ಹೆಂಡತಿ ಒಪ್ಪುತ್ತಿರಲಿಲ್ಲ. ಬದುಕಿದ್ದಾರೆ ಎಂಬುವುದು ಆಕೆಯ ಬಲವಾದ ನಂಬಿಕೆ. ನಿಜವಾಗಲು ಶೆಣೈ ಅವರು ಮೃತಪಟ್ಟಿದ್ದರು. ಹೆಂಡತಿಯು ಶೆಣೈ ಅವರ ಪಾರ್ಥಿವ ಶರೀರವನ್ನು ಗುರುದೇವರ ಬಳಿ ಒಯ್ಯಲು ನಿರ್ಧರಿಸಿದಳು. ಶವ ಸಾಗಿಸಲು ತಕ್ಷಣ ಕಾರುನ್ನು ವ್ಯವಸ್ಥೆಗೊಳಿಸುತ್ತಾಳೆ. ಕಾರಿನೊಳಗೆ ಗಂಡನ ಶವವನ್ನು ಚಾಲಕನ ಸಹಕಾರದಿಂದ ಒಳಗಿಡುಸುತ್ತಾಳೆ. ವಜ್ರೆರೇಶ್ವರಿಯಿಂದ ಕಾರು 1 ಕಿ.ಮೀ ವರೆಗೆ ಚಲಿಸಿರ ಬಹುದು. ಆವಾಗಲೇ ಯಂತ್ರ ದೋಷದಿಂದ ಕಾರು ಕೆಟ್ಟು ನಿಂತಿತು. ಚಾಲಕ ಬಹಳಷ್ಟು ಪ್ರಯತ್ನಿಸಿದರು ಕಾರು ಮಾತ್ರ ಚಲಿಸಲು ಒಲ್ಲೆ ಎಂದಿತು. ಕಾರಿನ ಚಾಲಕ ಶೆಣೈ ಅವರ ಹೆಂಡತಿಯಲ್ಲಿ ಈ ರಾತ್ರಿಯ ಹೊತ್ತಲ್ಲಿ ಕಾರು ರಿಪೇರಿ ಮಾಡುವವರು ಸಿಗುವುದಿಲ್ಲ. ಗಣೇಶಪುರಿ ಸಮೀಪ ಇದೆ ನಿಜ. ಅಲ್ಲಿಯವರೆಗೆ ಹೆಣ ಹೊತ್ತು ಸಾಗಿಸಲು ನನ್ನಲ್ಲಿ ಆಗದು ಎನ್ನುತ್ತಾನೆ.

ಧೈರ್ಯವಂತೆಯಾದ ಶೆಣೈ ಅವರ ಹೆಂಡತಿ ಶವವನ್ನು ಕಾರಿನಲ್ಲಿಯೇ ಬಿಟ್ಟು, ಚಾಲಕನಿಗೆ ಅಲ್ಲೇ ನಿಲ್ಲಲು ಹೇಳಿ. ರಾತ್ರಿ ಹೊತ್ತಲ್ಲಿಯೇ ಗಣೇಶಪುರಿಯತ್ತ ಓಡುತ್ತಾಳೆ. ಓಡಿ ಓಡಿ ಆಕೆ ಸುಮಾರು ದಾರಿಯನ್ನು ಕ್ರಮಿಸಿಯಾಗಿದೆ. ಗರುದೇವರ ಸಾನಿಧ್ಯ ತಲುಪಲು ಇನ್ನು ಇರುವುದು ಕೇವಲ 200 ಅಡಿಗಳಷ್ಟೇ ಅಂತರ. ಆವಾಗಲೇ.. ದೊಡ್ಡ ಧ್ವನಿ ಒಂದು ಕೇಳಿ ಬಂದಿತು. ಆಕೆಗೆ ಪರಿಚಿತ ಧ್ವನಿ ಅದು. ಭಗವಾನ್ ನಿತ್ಯಾನಂದ ಬಾಬಾ ಅವರ ಧ್ವನಿ ಅದಾಗಿತ್ತು. “ಹಿಂತಿರುಗಿ ಹೋಗು…! ಅಂತಿಮ ಕ್ರೀಯೆಗಳನ್ನು ಮಾಡು” ದೇವರು ಏರು ಧ್ವನಿಯಲ್ಲಿ ಹೇಳಿದರು. ಆದರೂ ಆಕೆ ಪರಿ ಪರಿಯಾಗಿ ಗಂಡನನ್ನು ಬದಕಿಸುವಂತೆ ಗುರುದೇವರಲ್ಲಿ ಕಣ್ಣೀರು ಹಾಕುತ್ತ ಪ್ರಾರ್ಥಿಸಿದಳು. ಗುರುದೇವರು ಭಕ್ತೆಯ ಪ್ರಾರ್ಥನೆ ಆಲಿಸುತ್ತಾರೆ. ಆದರೆ ಏನನ್ನೂ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಅಂತಿಮ ವಾಣಿಯಲ್ಲಿಯೇ ಉತ್ತರ ಅಡಗಿತ್ತು. ಕೊನೆಗೆ ಶೆಣೈ ಅವರು ಮೃತಪಟ್ಟಿರುವುದು ಹೆಂಡತಿಗೆ ಮನದಟ್ಟಾಗುತ್ತದೆ.

ಮರು ದಿನ ಸಂಜೆ ಸಮಯದಲ್ಲಿ ರಾತ್ರಿ ನಡೆದ ಘಟನೆಯನ್ನು ಕಣ್ಣಾರೆ ಕಂಡಿರುವ ಬಾಬಾರ ಭಕ್ತರೊರ್ವರು, ಗುರುದೇವರಲ್ಲಿ ಶೆಣೈ ಅವರಿಗೆ ಪುರ್ನಜೀವ ನೀಡ ಬಹುದಿತ್ತಲ್ಲ, ಎಂದು ಕೇಳುತ್ತಾರೆ. ಆಗ ಸ್ವಾಮೀಜಿ ಅವರು.. ‘ಮೃತರನ್ನು ಮರುಜೀವ ಮಾಡುತ್ತ ಹೋದಲ್ಲಿ.. ಮುಂದೆ ಚಂದನವಾಡಿಗೆ ಯಾರು ಹೋಗುವುದಿಲ್ಲ, ಎಲ್ಲರೂ ಗಣೇಶಪುರಿಗೆ ಬರುವಂತವರು ಆಗುತ್ತಾರೆ. ಎಂದು ಹೇಳುತ್ತಾರೆ. (ಚಂದನವಾಡಿ ಎಂದರೆ ಮುಂಬೈಯಲ್ಲಿರುವ ರುದ್ರಭೂಮಿ.) ಬಾಬಾರ ಮಾತಿಗೆ ಭಕ್ತನೂ ಮಾತು ಜೋಡಿಸುತ್ತಾನೆ. ತಾವು ಇದೇ ಶೆಣೈ ಅವರು ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದಾಗ ತಾವು ಪುರ್ನಜನ್ಮ ನೀಡಿ, ಅನುಗ್ರಹಿಸಿದಿರಿ” ಆಗ ಗುರುದೇವರು “ಆಗ ಶೆಣೈ ಅವರ ಮಕ್ಕಳು ಸಣ್ಣವರಾಗಿದ್ದರು. ಹಾಗಾಗಿ ದೈವಶಕ್ತಿಯಿಂದ ಅನುಕಂಪ ತೋರಿಸಿದೆ. ಇವಾಗ ಹಾಗಿಲ್ಲ ಎಂದರು.

ಗುರುದೇವರು ಜೀವನದಲ್ಲಿ ಸೋಲುಂಡ ಭಕ್ತರ ಒಳಿತಿಗಾಗಿ ಅನುಗ್ರಹಸಿಸುತ್ತಿದ್ದರು. ಕಪಟಿಗಳಿಗೆ ಅವರದೆಯಾದ ರೀತಿಯಲ್ಲಿ ಶಿಕ್ಷಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಭಕ್ತರ ಉದ್ಧಾರಗೊಳಿಸಲು ವಿಧಿಯ ನಡೆಯನ್ನು ಬದಲಿಸಿ ಅನುಗ್ರಹಿಸುತ್ತಿದ್ದರು. ಗುರುದೇವರು ಕಾರಣ ಇಲ್ಲದೆ ವಿಧಿಯ ನಿರ್ಣಯವನ್ನು ಬದಲಿಸಲು ಹೋಗುತ್ತಿರಲಿಲ್ಲ. ಯಾವ ಸಂದರ್ಭದಲ್ಲಿ ಹೇಗೆ ಅನುಗ್ರಹಿಸ ಬೇಕೆಂದು ಗುರುದೇವರು ನಿರ್ಣಯಿಸುತ್ತಿದ್ದರು. ಈ ಘಟನೆ 1954 ರಲ್ಲಿ ನಡೆದಿರುವುದೆಂದು ಅಂದಾಜಿಸಲಾಗಿದೆ. ಈ ಘಟನೆ ಮೌಖಿಕವಾಗಿ ಪ್ರಚಲಿತದಲ್ಲಿದ್ದರೂ ಬಹಳಷ್ಟು ಗುರುದೇವರ ಚರಿತೆಗಳಲ್ಲಿ ಆಯಾಯ ಕೃತಿಯ ಲೇಖಕರು ಉಲ್ಲೇಖಿಸಿದ್ದಾರೆ.

Advertisement

ತಾರಾನಾಥ್‌ ಮೇಸ್ತ ಶಿರೂರು.

LEAVE A REPLY

Please enter your comment!
Please enter your name here