'ವಿದ್ಯಾರ್ಥಿ ಸಾಧನೆಗೆ ಪಾಲಕರ ಸಹಕಾರ ಪೂರಕ'

0
261

ವರದಿ: ಕಾವ್ಯ ಸುವರ್ಣ
ಬೋಧಕರ ಪ್ರಯತ್ನದ ಜೊತೆಗೆ ಪಾಲಕರ ಸಹಕಾರವಿದ್ದಾಗ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಸುಲಭ ಸಾಧ್ಯವಾಗುತ್ತದೆ ಎಂದು ಎಸ್ಡಿಎಂ ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಎಸ್ ಮೋಹನ್ ನಾರಾಯಣ ಹೇಳಿದರು.
 
 
ಎಸ್ಡಿಎಂ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಶನಿವಾರ ನಡೆದ ಶಿಕ್ಷಕ ಮತ್ತು ಪಾಲಕರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಲ್ಲಿ ನಾವು ಒಳ್ಳೆಯ ಬದಲಾವಣೆಗಳನ್ನು ಕಾಣಬೇಕಾದರೆ ಶಿಕ್ಷಕರು ಮಾತ್ರವಲ್ಲದೇ ಪಾಲಕರ ಪಾಲು ಬಹುಮುಖ್ಯ. ಪೋಷಕರು ಚರ್ಚೆಗೆ ಪೂರಕ ವಾತಾವರಣ ನಿರ್ಮಿಸಬೇಕು. ತಮ್ಮ ನಿಲುವನ್ನು ವಿದ್ಯಾರ್ಥಿಗಳ ಮೇಲೆ ಹೇರದೆ, ಅವರ ಭಾವನೆಗಳಿಗೆ ಸ್ಪಂದಿಸಬೇಕು. ಇದಕ್ಕೆ ಪೋಷಕರ ಸಹಕಾರ ಬಹಳ ಅಗತ್ಯ ಎಂದರು.
 
 
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ಹಲವು ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಬೋಧಕರ ಮೂಲಕ ವಿವರಗಳನ್ನು ಪಡೆದು ಅದಕ್ಕನುಗುಣವಾಗಿ ನಿಗಾವಹಿಸಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಯ ಸರ್ವತೋಮುಖ ಏಳ್ಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
 
 
ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರ್ ಹೆಬ್ಬಾರ್ ಮಾತನಾಡಿ ಕಾಲೇಜಿನ ಆಭಿವೃದ್ಧಿಗೆ ಎಲ್ಲಾ ಪಾಲಕರು ಸಹಕಾರವನ್ನು ನೀಡಬೇಕು ಎಂದು ನುಡಿದರು.
ಪೋಷಕರು ಕಾಲೇಜಿನ ಅಭಿವೃದ್ಧಿಯ ಕುರಿತಾಗಿ ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಿದರು. ಶಿಕ್ಷಕ – ಪೋಷಕರ ಸಂಘದ ಅಧ್ಯಕ್ಷರಾದ ಆಶಾಕಿರಣ ಇವರು ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ರಶ್ಮಿ ವಂದಿಸಿದರು. ವಾಣಿಜ್ಯ ವಿಭಾಗದ ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here