ವಾರ್ಷಿಕೋತ್ಸವ

0
193

ಬೆಂಗಳೂರು ಪ್ರತಿನಿಧಿ ವರದಿ
ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ರಾಜರಾಜೇಶ್ವರಿ ನಗರದಲ್ಲಿ ನಡೆಯಿತು. ಸಂಗೀತ ವಿದ್ವಾನ್ ಕಲಾಶ್ರೀ ಹೊಸಹಳ್ಳಿ ಅನಂತ ಅವಧಾನಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
 
music_annual day
 
ಕಲಾವಿದನಾಗಲು ಕೆಲವು ಅಂಶಗಳಿವೆ. ಉತ್ತಮವಾದ ಶಾರೀರ, ಕಲಿಯುವ ಉತ್ಸಾಹ, ಮನೆಯವರ ಪ್ರೋತ್ಸಾಹ ಹಾಗೂ ಇವೆಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಗುರುಗಳು ಸಿಗಬೇಕು. ಆಗ ಮಾತ್ರ ಆತ ಮನೆಯವರಿಗೆ ಹಾಗೂ ಕಲಿಸಿದ ಗುರುಗಳಿಗೆ ಹೆಸರನ್ನು ತರುತ್ತಾನೆ. ಅಂತೆಯೇ ಚಿನ್ಮಯ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಷ್ಟೇ ಶೃತಿಶುದ್ಧವಾಗಿ, ಲಯಶುದ್ಧವಾಗಿ ನೂರಾರು ವಿದ್ಯಾರ್ಥಿಗಳು ಪಿಳ್ಳಾರಿಗೀತೆಗಳನ್ನು ಹಾಡಿರುವುದನ್ನು ಗಮನಿಸಿದರೆ ಇದರ ಹಿಂದೆ ಚಿನ್ಮಯ ಅವರ ಶ್ರಮ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಈ ಶ್ರಮ ಅವರಿಗೆ ಸಂಪೂರ್ಣವಾದಂತಹ ಫಲವನ್ನು ಕೊಡುವಂತಾಗಲಿ, ಈ ಸಂಗೀತ ಶಾಲೆ ಚಿರಕಾಲ ನಿರಂತರವಾಗಿ ಬೆಳಗಲಿ ಎಂದು ಸಂಗೀತ ವಿದ್ವಾನ್ ಕಲಾಶ್ರೀ ಹೊಸಹಳ್ಳಿ ಅನಂತ ಅವಧಾನಿಗಳು ಆಶಿಸಿದ್ದರು.
 
 
 
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಡಾ.ಆರ್ ಅರುಣಾಚಲಂ, ಸುಗಮ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಉಪಸ್ಥಿತರಿದ್ದರು. ವಿದ್ಯಾಲಯದ ವಿವಿಧ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ನಡೆಯಿತು. ವಿದ್ವಾನ್ ಬಳ್ಳಾರಿ ಸುರೇಶ್ ಕೆ. ಪಿಟೀಲಿನಲ್ಲಿ ಹಾಗೂ ವಿದ್ವಾನ್ ಜಿ.ಎಲ್ ರಮೇಶ್ ಮೃದಂಗದಲ್ಲಿ ಸಹಕರಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
 
 
 
ಕಾರ್ಯಕ್ರಮದ ಕೊನೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಿಂತಕ ಹೆಚ್.ಎನ್ ರಾಘವೇಂದ್ರ ರಾವ್ ಶಾಸ್ತ್ರೀಯ ಸಂಗೀತ ಸಾಧನೆಯೆಂಬುದು ಭಕ್ತ ಹಾಗೂ ಪರಮಾತ್ಮನ ನಡುವೆ ಏರ್ಪಡುವ ಅತ್ಯಂತ ವ್ಯವಸ್ಥಿತ ಸೇತುವೆ. ಇಂತಹ ಸಂಗೀತದ ಆರಾಧನೆಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಾಡುತ್ತಿರುವ ವಿದ್ಯಾರ್ಥಿಗಳು ಸರಸ್ವತಿಯ ಪುತ್ರ ಪುತ್ರಿಯರು ಎಂದು ವಿದ್ಯಾರ್ಥಿಗಳನ್ನು ಕೊಂಡಾಡಿ ಈ ಸಾಧನೆ ನಿರಂತರವಾಗಿ ನಡೆಯಲಿ ಎಂದರು.
 
 
ಈ ಸಂದರ್ಭದಲ್ಲಿ ರಾಜರಾಜೇಶ್ವರಿನಗರದ ಬಿ.ಬಿ.ಎಂ.ಪಿ ಸದಸ್ಯೆ ನಳಿನಿ ಮಂಜುನಾಥ್, ಮಂಜುನಾಥ್, ಉದ್ಯಮಿ ಗಂಗಾಧರ ಮೂರ್ತಿ, ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಖ್ಯಾತ ಕಿರುತೆರೆ ನಟ ರಾಜೇಶ್ ಧೃವ (ಅಖಿಲ್) ಸಂಸ್ಥೆಗೆ ಶುಭಕೋರುವ ಮಾತುಗಳನ್ನಾಡಿದರು. ಸಂಗೀತದ ತರಗತಿಗಳನ್ನು ನಡೆಸಲು ತಮ್ಮ ತಮ್ಮ ಮನೆಗಳನ್ನು ಬಿಟ್ಟು ಕೊಟ್ಟ ಹಲವು ಪಾಲಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
 
 
 
ಹಸ್ತ ಸಾಮುದ್ರಿಕಾ ಜ್ಯೋತಿಷಿ ಆನಂದ್, ಸಂಸ್ಥೆಯ ಅಧ್ಯಕ್ಷರಾದ ಚಾರ್ಟಡ್ ಅಕೌಂಟೆಂಟ್ ಭರತ್ ರಾವ್ ಕೆ.ಎಸ್, ಸಂಸ್ಥೆಯ ಸಂಸ್ಥಾಪಕ, ಪ್ರಾಂಶುಪಾಲಕ ಚಿನ್ಮಯ ಎಂ.ರಾವ್ ಹಾಗೂ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here