ವನಿತಾ ಫೈಟರ್ ಪೈಲಟ್

0
318
ಲೇಖಾ
ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಮೂವರು ಮಹಿಳಾ ಫೈಟರ್ ಪೈಲಟ್ ಗಳು…
ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ ಗಳಾಗಿ ಮೂವರು ಮಹಿಳೆಯರು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಹೈದರಾಬಾದ್ ಹೊರವಲಯದ ಡಿಂಡಿಗಲ್​ನಲ್ಲಿನ ವಾಯಪಡೆ ಅಕಾಡೆಮಿಯಲ್ಲಿ ಯಶಸ್ವೀ ತರಬೇತಿ ಪೂರೈಸಿದ ಅವನಿ ಚತುರ್ವೇದಿ, ಭಾವನಾ ಕಾಂತ್ ಮತ್ತು ಮೋಹನಾ ಸಿಂಗ್ ಅವರನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ವಾಯಪಡೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು. ಈ ಮೂಲಕ ದೇಶದ ಮೊದಲ ಮಹಿಳಾ ಫೈಟರ್‌ ಪೈಲಟ್‌ಗಳೆಂಬ ಖ್ಯಾತಿಗೆ ಪಾತ್ರರಾದರು.
ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಇದು ಸುವರ್ಣದಿನ. ಈ ಮೂವರು ಮಹಿಳೆಯರು ಯುದ್ಧ ವಿಮಾನದ ಫೈಲಟ್ ಗಳಾಗಿ ಸೇರ್ಪಡೆಯಾಗುತ್ತಿರುವುದು ದೇಶದ ಇನ್ನಷ್ಟು ಮಹಿಳೆಯರು ವಾಯುಪಡೆ ಸೇರ್ಪಡೆಯಾಗಲು ಸ್ಪೂರ್ತಿಯಾಗಿದೆ ಎಂದರು.
ಈ ಮೂವರೂ ಮಹಿಳಾ ಪೈಲಟ್‌ಗಳು ಯುದ್ಧವಿಮಾನದ ಚಾಲನೆಯ ಪ್ರಾಥಮಿಕ ತರಬೇತಿಯನ್ನು ಕರ್ನಾಟಕದ ಬೀದರ್‌ ವಾಯುನೆಲೆಯಲ್ಲಿ ಪಡೆದಿದ್ದಾರೆ. 150 ತಾಸುಗಳ ಹಾರಾಟದ ಅನುಭವವನ್ನು ತರಬೇತಿ ಅವಧಿಯಲ್ಲಿ ಅವರು ಗಳಿಸಿಕೊಂಡಿದ್ದಾರೆ. ಇವರಿಗೆ ಮುಂದಿನ ವರ್ಷ ಸುಖೋಯ್ ಮತ್ತು ತೇಜಸ್ ಯುದ್ಧ ವಿಮಾನಗಳನ್ನು ಹಾರಿಸುವ ಅವಕಾಶ ಲಭ್ಯವಾಗಲಿದೆ.
ಕೆಡೆಟ್‌ ಭಾವನಾ ಕಾಂತ್‌ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಬಿಇ ಇಂಜಿನಿಯರಿಂಗ್‌ (ಮೆಡಿಕಲ್‌ ಇಲೆಕ್ಟ್ರಾನಿಕ್ಸ್‌)ನ್ನು ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪೂರೈಸಿದ್ದಾರೆ.  ‘ನನ್ನ ದೇಶ ಮತ್ತು ಹೆತ್ತವರು ಅಭಿಮಾನ ಪಡುವಂತೆ ಫೈಟರ್‌ ಪೈಲಟ್‌ ಆಗಬೇಕೆಂಬುದು ನನ್ನ ಕನಸಾಗಿತ್ತು ಎಂದು ಹೇಳುತ್ತಾರೆ.
ಕೆಡೆಟ್‌ ಅವನಿ ಚತುರ್ವೇದಿ ಇಂಜಿನಿಯರಿಂಗ್‌ ಪೂರೈಸಿದ್ದಾರೆ. ಜೈಪುರದ ಬನಸ್ತಲಿ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಪದವಿ ಪಡೆದಿರುವ ಇವರು, ಕಾಲೇಜಿನ ಫ್ಲೈಯಿಂಗ್‌ ಕ್ಲಬ್‌ನಲ್ಲಿ ಆರಂಭಿಕ ಪೈಲಟ್‌ ತರಬೇತಿ ಪಡೆದಿದ್ದರು. ಇದೇ ಅವರಿಗೆ ವಾಯುಪಡೆಗೆ ಸೇರಲು ಪ್ರೇರಣೆಯಾಯಿತು. ‘ಅತ್ಯುತ್ತಮ ಯುದ್ಧವಿಮಾನ ಚಾಲನೆ ಮಾಡುವ ಆಸೆ ನನ್ನದು ಎಂದು ಅವನಿ ಹೇಳುತ್ತಾರೆ.
ಇನ್ನು ಕೆಡೆಟ್‌ ಮೋಹನಾ ಸಿಂಗ್‌ ಅವರು ರಾಜಸ್ಥಾನ ಮೂಲದವರಾಗಿದ್ದು, ಅಮೃತಸರದ ಜಿಐಎಮ್‌ಇಟಿಯಲ್ಲಿ ಪದವಿ ಪಡೆದಿದ್ದಾರೆ. ಮೋಹನಾ ಸಿಂಗ್ ಅವರ ತಂದೆ-ತಾತ ಇಬ್ಬರೂ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ತಾತ ವಾಯುಪಡೆ ವಿಮಾನ ಸಿಬ್ಬಂದಿಯಾಗಿದ್ದು, ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here