ನಿತ್ಯ ಅಂಕಣ-೧೦೧ : ತಾರಾನಾಥ್ ಮೇಸ್ತ, ಶಿರೂರು.
ಪ್ರತಿಯೊಂದು ದೇವಸ್ಥಾನಗಳಿಗೆ, ಅದರದೇ ಸ್ಥಳ ಪುರಾಣಗಳಿರುತ್ತವೆ. ಹಾಗೆಯೇ ಇತಿಹಾಸ- ಪುರಾಣಪ್ರಸಿದ್ಧ ದೇವಾಸ್ಥನಗಳಲ್ಲಿ ಪಾರ್ವತಿ ದೇವಿ ಸ್ವರೂಪಿಣೀ ಆಗಿರುವ ವಜ್ರೇಶ್ವರಿ ದೇವಿ ದೇವಾಲಯವೂ ಒಂದು. ಇದು ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಮುಂಬೈ ಪಶ್ಚಿಮ ರೈಲು ನಿಲ್ದಾಣದಿಂದ ಇಲ್ಲಿಗೆ ಸುಮಾರು 29 ಕೀ.ಮಿ ದೂರದಲ್ಲಿರುವ ಸಣ್ಣ ಬೆಟ್ಟದ ಮೇಲೆ ವಜೇಶ್ವರಿ ದೇವಿಯ ದೇವಾಲಯ ಇದೆ. ಈ ಸ್ಥಳವನ್ನು ವಜ್ರೇಶ್ವರಿ ಹೆಸರಿನಿಂದಲೇ ಕರೆಯಲಾಗುತ್ತದೆ. ವಜ್ರೇಶ್ವರಿ ದೇವಿಯನ್ನು ವಜ್ರಬಾಯಿ, ವಜ್ರಯೋಗಿನಿ ಅಂತಲೂ ಕರೆಯುತ್ತಾರೆ. ವಜ್ರೇಶ್ವರಿ ದೇವಿ ಪಾರ್ವತಿ, ಆದಿಮಾಯೆಯ ಅವತಾರ ಎಂದು ಪರಿಗಣಿಸಲಾಗಿದೆ.
ಸುರಪಾಲ ಇಂದ್ರ ಮತ್ತು ಸಹದೇವತೆಗಳು ಲೋಕ ಕಂಟಕನಾಗಿ ಮೆರೆಯುತ್ತಿದ್ದ ಕಾಳಿಕಾಲ ಅಸುರನನ್ನು ಸಂಹಾರಗೊಳಿಸಲು ಪಾರ್ವತಿ ದೇವಿಯಲ್ಲಿ ನೆರವುಯಾಚಿಸುತ್ತಾರೆ. ನಾನು ಆಪತ್ಕಾಲದಲ್ಲಿ ನೆರವಿಗೆ ಬರುತ್ತೇನೆ. ಅಲ್ಲಿಯವರೆಗೆ ನೀವು ಹೋರಾಟ ಮುಂದುವರಿಸಿ ಎಂದು, ಪಾರ್ವತಿ ದೇವಿಯು ಇಂದ್ರಾದಿ ದೇವತೆಗಳಿಗೆ ಅಭಯ ನೀಡುತ್ತಾಳೆ. ಮುಂದೆ ದೇವತೆಗಳಿಗೂ ಕಾಳಿಕಾಲ ಅಸುರರ ನಡುವೆ ಯುದ್ಧ ನಡೆಯುತ್ತದೆ. ಕಾಳಿಕಾಲ ರಾಕ್ಷಸನು ದೇವತೆಗಳು ಎಸೆದ ಎಲ್ಲಾ ಆಯುಧಗಳನ್ನು ತುಂಡರಿಸಿ ಬಿಟ್ಟು ಇಂದ್ರನಿಗೆ ಭಯ ಹುಟ್ಟಿಸುತ್ತಾನೆ. ಇಂದ್ರ ದಿಕ್ಕುಕಾಣದೆ ತನ್ನ ವಜ್ರಾಯುಧವನ್ನು ಕಾಳಿಕಾಲ ಅಸುರನ ಮೇಲೆ ಪ್ರಯೋಗಿಸುತ್ತಾನೆ. ಬಲಿಷ್ಠನಾದ ರಾಕ್ಷಸ ಕಾಳಿಕಾಲನು ವಜ್ರಾಯುಧವನ್ನು ಹಿಡಿದು ತುಂಡುಗಳಾಗಿ ಎಸೆಯುತ್ತಾನೆ. ಆಪತ್ಕಾಲದಲ್ಲಿ ಪಾರ್ವತಿದೇವಿಯು ವಜ್ರಾಯುಧದಿಂದ ಪ್ರಕಟಳಾಗುತ್ತಾಳೆ. ಲೋಕ ಕಂಟಕನಾಗಿದ್ದ ಅಸುರ ಕಾಳಿಕಾಲನನ್ನು ವಧಿಸುತ್ತಾಳೆ. ಇಂದ್ರನ ವಜ್ರಾಯುಧದಿಂದ ಪ್ರತ್ಯಕ್ಷಳಾದ ದೇವಿಯು ವಜ್ರೇಶ್ವರಿ ಎಂದು ಕರೆಯಲ್ಪಡುತ್ತಾಳೆ. ಹೀಗೊಂದು ಪುರಾಣ ಕಥೆ ಇದೆ.
ಮತ್ತೊಂದು ಸ್ಥಳ ಪುರಾಣ ಈ ರೀತಿ ಇದೆ. ಸಪ್ತಋಷಿಗಳಲ್ಲಿ ಒರ್ವರಾದ ಮಹಾಮುನಿ ವಸಿಷ್ಠರು ತ್ರಿಚಂಡಿ ಯಾಗ ಮಾಡಲು ಸಂಕಲ್ಪಿಸಿದರು. ಅದರಂತೆ ತ್ರಿಚಂಡಿ ಯಾಗ ಪ್ರಾರಂಭಿಸಿದರು. ಋಷಿಗಳಿಗೆ, ದೇವಾನು ದೇವತೆಗಳಿಗೆ ಆಹ್ವಾನ ನೀಡಿದ್ದರು. ಅವರನ್ನು ವಸಿಷ್ಠರು ಆತಿಥ್ಯ ನೀಡಿ ಸನ್ಮಾನಿಸಿದರು. ದೇವತೆಗಳ ರಾಜನಾದ ಇಂದ್ರನು, ಯಜ್ಞಕಾರ್ಯದಲ್ಲಿ ವಸಿಷ್ಠರು ತನಗೆ ಅಪಮಾನ ಮಾಡಿದರು. ಗೌರವ ಆತಿಥ್ಯ ನೀಡಲಿಲ್ಲ ಎಂದು ಸಿಟ್ಟಾಗುತ್ತಾನೆ. ಯಜ್ಞವನ್ನು ವಿಘ್ನಗೊಳಿಸಲು ನಿರ್ಧರಿಸುತ್ತಾನೆ. ಇಂದ್ರ ಯಜ್ಞಭೂಮಿಯಿಂದ ನೀರನ್ನು ಬರಿದಾಗಿಸುತ್ತಾನೆ. ವಸಿಷ್ಠರು ದರ್ಭೆಯ ಬಾಣದಿಂದ ಪಾತಾಳದಿಂದ ಬಾಣಗಂಗಾ ತರಿಸುತ್ತಾರೆ. ಸ್ವರ್ಗದಿಂದ ಸ್ವರ್ಗಗಂಗೆಯನ್ನು ತರಿಸುತ್ತಾರೆ. ಅಲ್ಲಿಗೆ ಜಲಕ್ಷಾಮದ ನಿವಾರಣೆಯಾಗುತ್ತದೆ. ಇಂದ್ರನು ಕುಪಿತನಾಗಿ ರೋಗ ರುಜಿನಗಳನ್ನು ಯಜ್ಞಭೂಮಿಯಡೆಗೆ ರವಾಸಿದ. ಆಗ ಋಷಿ ಮುನಿಗಳೆಲ್ಲರು ರೋಗಪೀಡಿತರಾಗಿ ಅಸ್ವಸ್ಥರಾದರು. ವಸಿಷ್ಠರು ಹಲವು ವನಸ್ಪತಿ ಔಷಧಿಗಳನ್ನು ಸೃಷ್ಟಿಸಿ, ವ್ಯಾಧಿಗಳ ಉಪಶಮನಕ್ಕಾಗಿ ಬಿಸಿನೀರಿನ ಬುಗ್ಗೆಗಳಿಗಾಗಿ ದೇವತೆಗಳನ್ನು ಪ್ರಾರ್ಥಿಸಿದರು.
ಆವಾಗ ಉಮಾ, ರಮಾ, ಸಾವಿತ್ರಿ ತೀರ್ಥ ಕುಂಡಗಳು ತ್ರಿಭುವನೇಶ್ವರ ದೇವಾಲಯದ ಮುಂದೆ ರಚಿತಗೊಂಡವು. ಅಲ್ಲದೆ ಸೂರ್ಯ, ಚಂದ್ರ, ಇಂದ್ರ, ವರುಣ, ವಾಯು, ಕುಬೇರ ತೀರ್ಥಗಳು ಹಾಗೂ ರುದ್ರ, ವಿಷ್ಣು, ಬ್ರಹ್ಮತೀರ್ಥಗಳು, ಅಗ್ನಿ, ತೇಜ ತೀರ್ಥಗಳು. ಮತ್ತು ಗಂಧರ್ವ, ಯಕ್ಷ, ಕಿನ್ನರ ತೀರ್ಥಗಳು, ಅತ್ತಿ, ಅನುಸೂಯಾ, ವಸಿಷ್ಠ ತೀರ್ಥ, ಋಷಿಮುನಿ ತೀರ್ಥಗಳು ಹೀಗೆ ಆ ಪ್ರದೇಶದಲ್ಲಿ ಒಟ್ಟು 360 ತೀರ್ಥಕುಂಡಗಳು ಉದ್ಭವಗೊಂಡವು. ಈಗ ಅವುಗಳಲ್ಲಿ ಕೆಲವು ತೀರ್ಥಕುಂಡಗಳು ಉಳಿದುಕೊಂಡಿವೆ. ರೋಗಬಾಧಿತ ಅಸ್ವಸ್ಥ ಎಲ್ಲಾ ಋಷಿ ಪರಿವಾರದವರು ತೀರ್ಥಸ್ನಾನ ಮಾಡಿ ಸ್ವಸ್ಥರಾದರು. ಮತ್ತಷ್ಟು ಸಿಟ್ಟುಗೊಂಡ ಇಂದ್ರನು, ತ್ರಿಚಂಡಿಯಾಗ ಪ್ರಾರಂಭಿಸಿದಾಗ ತನ್ನ ವಜ್ರಾಯುಧವನ್ನು ವಸಿಷ್ಠರ ಮೇಲೆ ಪ್ರಯೋಗಿಸಿದನು. ವಜ್ರಾಯುಧ ವಸಿಷ್ಠರ ಮೇಲೆ ಬಿಳುವ ಸಮಯದಲ್ಲಿ ಪಾರ್ವತಿದೇವಿ ಪ್ರತ್ಯಕ್ಷಳಾಗಿ ವಜ್ರಾಯುಧವನ್ನು ನುಂಗಿದಳು. ಅಂದಿನಿಂದ ಆ ಸ್ಥಳವು “ವಜ್ರೇಶ್ವರಿ” ಎಂದು ಹೆಸರು ಪಡೆಯಿತು.
ಸೋಲುಂಡ ಇಂದ್ರನು ಪಾರ್ವತಿಯ ಮೊರೆಹೊಕ್ಕನು. ಆದರೆ ದೇವಿಯು ವಸಿಷ್ಠರಲ್ಲಿ ಕ್ಷಮೆಯಾಚಿಸಲು ಹೇಳುತ್ತಾಳೆ. ಅದರಂತೆ ಇಂದ್ರನು ವಸಿಷ್ಠರಲ್ಲಿ ತಪ್ಪನ್ನು ಮನ್ನಿಸೆಂದು ಕ್ಷಮೆಯಾಚಿಸುತ್ತಾನೆ. ದಯಾಳುವಾದ ವಸಿಷ್ಠರು ಕ್ಷಮಿಸುತ್ತಾರೆ. ಮುಂದೆ ತ್ರಿಚಂಡಿಯಾಗುವು ಪೂರ್ಣಾಹುತಿ ಪಡೆಯುತ್ತದೆ. ಪಾರ್ವತಿ ತೆರಳಲು ಸಿದ್ದಳಾದಾಗ, ವಸಿಷ್ಠರು ದೇವಿಯರೆಲ್ಲರು ಈ ತಪೋಭೂಮಿ-ಯಜ್ಞಭೂಮಿಯಲ್ಲಿ ನೆಲೆ ಇರುವಂತೆ ಪ್ರಾರ್ಥಿಸುತ್ತಾರೆ. ಹಾಗೆಯೆ ವಸಿಷ್ಠರ ಪ್ರಾರ್ಥನೆಯಂತೆ ವಜ್ರೇಶ್ವರಿಯಲ್ಲಿ ತನ್ನ ಪರಿವಾರದೊಂದಿಗೆ ವಜ್ರೇಶ್ವರಿ ದೇವಿಯಾಗಿ ನೆಲೆನಿಂತು ಭಕ್ತರನ್ನು ಹರಸುತ್ತಿದ್ದಾಳೆ.
ಭಾರತ ದೇಶದಲ್ಲಿದ್ದ ಪೊರ್ಚುಗ್ರೀಸರು ವಜ್ರೇಶ್ವರಿ ದೇವಸ್ಥಾನದ ಮೇಲೆ ದಾಳಿ ನಡೆಸಿದ ವಿಧ್ವಂಸಕ ಕೃತ್ಯವು ನಡೆಯುತ್ತದೆ. ನಂತರ ದೇವಸ್ಥಾನದ ಪುರ್ನನಿರ್ಮಾಣವು 1739 ರಲ್ಲಿ ನಡೆಯುತ್ತದೆ. ಈ ದೇವಸ್ಥಾನದ ಕುರಿತು ಐತಿಹಾಸಿಕ ಕಥೆ ಈ ರೀತಿ ಇದೆ. ಪೊರ್ಚುಗ್ರಿಸರು ದೇವಸ್ಥಾನ ಸನಿಹದ ಕೋಟೆಯನ್ನು ವಶ ಪಡಿಸುಕೊಳ್ಳುತ್ತಾರೆ. ಆ ಸಮಯದಲ್ಲಿ ಸ್ಥಳಿಯ ರಾಜನಾಗಿದ್ದ ಬಾಜೀರಾವ್ ಪೇಶ್ವೆಯ ಸಹೋದರ ಅಪ್ಪ ಪೇಶ್ವೆ, ವಜ್ರೇಶ್ವರಿ ದೇವಿಯಲ್ಲಿ ಕೋಟೆ ತಮ್ಮ ವಶಕ್ಕೆ ಮರಳಿಸುವಂತೆ ಪ್ರಾರ್ಥಿಸುತ್ತಾನೆ. ಒಂದು ವೇಳೆ ಕೋಟೆ ಮರಳಿ ನಮ್ಮ ಪಾಲಿಗೆ ದಕ್ಕಿದರೆ, ದೇವಿಗೆ ದೇವಸ್ಥಾನ ನಿರ್ಮಿಸುವುದಾಗಿ ಸಂಕಲ್ಪ ಮಾಡುತ್ತಾನೆ. ಅದೇ ದಿನ ರಾತ್ರಿ ದೇವಿಯು ಈತನ ಕನಸಿನಲ್ಲಿ ಬಂದು, ಕೋಟೆಯನ್ನು ಮರಳಿ ಪಡೆಯುವ ತಂತ್ರಗಳನ್ನು ಹೇಳುತ್ತಾಳೆ. ಮರುದಿನ ಅದೇ ತಂತ್ರದಿಂದ ಕೋಟೆಯನ್ನು ಮರಳಿ ಪಡೆಯಲು ಯಶಸ್ವಿಯಾಗುತ್ತಾನೆ. ಮುಂದೆ ಸಂಕಲ್ಪಿಸಿದಂತೆ ದೇವಾಲಯದ ಕಾರ್ಯವು ರಾಜನಿಂದ ನಡೆಯುತ್ತದೆ.
ಇಂತಹ ಪೌರಾಣಿಕ ಐತಿಹಾಸಿಕ ಹಿನ್ನಲೆಯುಳ್ಳ ಪಾವನಕ್ಷೇತ್ರ ವಜ್ರೇಶ್ವರಿಗೆ ಅವಧೂತ ಭಗವಾನ್ ನಿತ್ಯಾನಂದರ ಪಾದಸ್ಪರ್ಶ ಪಡೆಯುತ್ತದೆ. ಪುರಾತನ ಪವಿತ್ರ ಸ್ಥಳದ ಮಹತ್ವವು ಅವರಿಗೆ ತಿಳಿಯುತ್ತದೆ. ಗತ ಇತಿಹಾಸ, ಕ್ಷೇತ್ರ ಮಹಿಮೆಯನ್ನು ಮುಂದಿನ ಸಮಾಜಕ್ಕೆ ತಿಳಿಯುವಂತೆ ಮಾಡಲು ಸಜ್ಜಾಗುತ್ತಾರೆ. ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿ ನವ ವಜ್ರೇಶ್ವರಿಯ ನಿರ್ಮಾಣಕ್ಕೆ ಮುಂದಾಗುತ್ತಾರೆ. ಬಾಬಾರ ಅವಿರತ ಪರಿಶ್ರಮದಿಂದ ವಜ್ರೇಶ್ವರಿ ಕ್ಷೇತ್ರವು ಮೂಲ ಸೌಕರ್ಯ ವ್ಯವಸ್ಥೆ ಮೊದಲಾದ ನಿರ್ಮಾಣಗಳಿಂದ ಪ್ರಸಿದ್ಧಿ ಹೊಂದುತ್ತದೆ.