ಲೋಧಾ ಶಿಫಾರಸುಗಳನ್ನು ಅಂಗೀಕರಿಸಿದ ಕೋರ್ಟ್

0
662

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸುಧಾರಣೆಗಾಗಿ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿ ಮಾಡಿದ್ದ ಬಹುತೇಕ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಸೋಮವಾರ ಅಂಗೀಕರಿಸಿದೆ.
 
ಲೋಧಾ ಸಮಿತಿ ಶಿಫಾರಸು ಜಾರಿಗೆ ಕೋರ್ಟ್ ಬಿಸಿಸಿಐಗೆ 6 ತಿಂಗಳುಗಳ ಕಾಲಾವಕಾಶವನ್ನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ನ್ಯಾಯಮೂರ್ತಿ ಇಬ್ರಾಹಿಂ ಖಲೀಫುಲ್ಲಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು 6 ತಿಂಗಳ ಒಳಗೆ ಸಮಿತಿಯ ಶಿಫಾರಸುಗಳ ಜಾರಿಗೆ ಆದೇಶ ನೀಡಿದೆ.
 
 
2014ರ ಜನವರಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪಗಳಿಗೆ ಗುರಿಯಾದಾಗ ಭಾರತೀಯ ಕ್ರಿಕೆಟ್​ನ್ನು ಸುಧಾರಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಿ ಶಿಫಾರಸು ಮಾಡುವಂತೆ ಸೂಚಿಸಿ, ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಿಸಿತ್ತು. ಸಮಿತಿಯ ಶಿಫಾರಸುಗಳು ಬಿಸಿಸಿಐಯಲ್ಲಿ ಗಮನಾರ್ಹ ಸುಧಾರಣೆ ತರುವುದು ಎಂದು ನ್ಯಾಯಮೂರ್ತಿ ಲೋಧಾ ವರದಿ ಸಲ್ಲಿಸುತ್ತಾ ಹೇಳಿದ್ದರು.
 
 
ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳೇನು?
* ಯಾವುದೇ ಸಚಿವ ಅಥವಾ ಸರ್ಕಾರಿ ಅಧಿಕಾರಿಗಳು ಬಿಸಿಸಿಐ ಹುದ್ದೆ ವಹಿಸಿಕೊಳ್ಳುವಂತಿಲ್ಲ.
* 70 ವರ್ಷ ಮೇಲ್ಪಟ್ಟವರಿಗೆ ಬಿಸಿಸಿಐ ಹುದ್ದೆ ನಿಷೇಧ
* ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರಬೇಕು
* 9 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಯಾರೂ ಪದಾಧಿಕಾರಿಗಳಾಗುವಂತಿಲ್ಲ
* ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನವರು ಬಿಸಿಸಿಐನಲ್ಲಿ ಇರುವಂತಿಲ್ಲ
* ಐಪಿಎಲ್‌ಗೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸಬೇಕು
* ಬೆಟ್ಟಿಗ್ ನಿಷೇಧಕ್ಕೆ ಕಾಯ್ದೆ ತರಬೇಕು
* ಒಬ್ಬರಿಗೆ ಒಂದೇ ಹುದ್ದೆ ನೀಡಬೇಕು
* ಒಂದು ರಾಜ್ಯಕ್ಕೆ ಒಂದೇ ಮತ ಸೇರಿದಂತೆ ಹಲವಾರು ಆಡಳಿತಾತ್ಮಕ ಸುಧಾರಣೆಗಳನ್ನು ನ್ಯಾಯಮೂರ್ತಿ ಲೋಧಾ ಸಮಿತಿ ಶಿಫಾರಸು ಮಾಡಿತ್ತು.

LEAVE A REPLY

Please enter your comment!
Please enter your name here