ಲೆಕ್ಕ ಬಹಿರಂಗ ಪಡಿಸಿ

0
399

 
ಬೆಂಗಳೂರು ಪ್ರತಿನಿಧಿ ವರದಿ
2008ಕ್ಕಿಂತ ಮೊದಲು ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಏನಾಗಿತ್ತು ಎಂಬುದು ಸಮಾಜಕ್ಕೆ ಗೊತ್ತಾಗಬೇಕು. 2008ರ ಬಳಿಕ ಇಲ್ಲಿವರೆಗೆ ಏನಾಗಿದೆ ಅನ್ನೋದನ್ನ ಇವತ್ತು ಐ.ಎಸ್.ಒ ಪ್ರಮಾಣ ಪತ್ರವೇ ಹೇಳ್ತಾ ಇದೆ. ಅಲ್ಲಿ ಏನಾಗ್ತಾ ಇದೆ, ಅಲ್ಲಿ ಆಡಳಿತ ಹೇಗಿದೆ ಅನ್ನೋದನ್ನ ಐ.ಎಸ್.ಒ ಪ್ರಮಾಣ ಪತ್ರವೇ ಸಾಬೀತು ಮಾಡ್ತಾ ಇದೆ. ವಿಶ್ವಮಟ್ಟದ ಆಡಳಿತ ಇದೆ, ಪಾರದರ್ಶಕತೆ ಇದೆ, ಸುರಕ್ಷೆ ಇದೆ ಅನ್ನೋದನ್ನ ವಿಶ್ವವೇ ಒಪ್ಪುವ ರೀತಿಯಲ್ಲಿ ಇವತ್ತು ಸಾಬೀತಾಗಿದೆ. ನಮ್ಮ ಸವಾಲು 2008ಕ್ಕಿಂತ ಹಿಂದೆ ಅಲ್ಲಿ ಏನಾಗ್ತಾ ಇತ್ತು ಅನ್ನೋದನ್ನ ತನಿಖೆ ನಡೆಸಬೇಕು. ಆ ಬಗ್ಗೆ ತನಿಖೆ ಆಗಬೇಕು. 2008ಕ್ಕಿಂತ ಹಿಂದೆ ಅಲ್ಲಿ ಸರ್ಕಾರದ ಆಡಳಿತ ಇತ್ತು ಅಲ್ಲಿ ಏನಾಗಿತ್ತು? ಲೆಕ್ಕ ಪತ್ರ ಇತ್ತ ಇಲ್ವೋ? ಆಡಳಿತ ಏನಾಗಿತ್ತು, ಸುರಕ್ಷೆ ಏನಾಗಿತ್ತು, ಸ್ವಚ್ಛತೆ ಏನಾಗಿತ್ತು, ಅದರ ಅವಸ್ಥೆ ಏನಿತ್ತು ಅನ್ನೋದರ ಬಗ್ಗೆ ಪಾರದರ್ಶಕವಾಗಿರುವ ತನಿಖೆಯನ್ನು ಮಾಡಬೇಕು ಅಂತ ಆಗ್ರಹವನ್ನು ಸರ್ಕಾರಕ್ಕೆ ಮಾಡ್ತೇವೆ. ಸರ್ಕಾರವೇ ತಾನು ಪಾರದರ್ಶಕವಾಗಿದ್ದರೆ ತೋರಿಸಿಕೊಳ್ಳಲಿ. 2008ಕ್ಕಿಂತ ಹಿಂದೆ ತಾನು ಏನು ಆಡಳಿತ ಮಾಡಿದ್ದೇನೆ ಅನ್ನೋದನ್ನ ಸರ್ಕಾರ ಸಾರ್ವಜನಿಕರ ಮುಂದೆ ತೆರೆದಿಡಲಿ. ಸರ್ಕಾರದ ಆಡಳಿತದಲ್ಲಿ ಏನಿತ್ತು ಹೇಗಿತ್ತು ಅನ್ನೋದನ್ನ ಕೂಲಂಕುಶವಾಗಿ ತನಿಖೆ ಮಾಡಿ ಅದನ್ನ ಸಮಾಜದ ಮುಂದೆ ಬಿಚ್ಚಿಡಲಿ. ಆಗ ಗೊತ್ತಾಗ್ತದೆ ರಾಮಚಂದ್ರಾಪುರಮಠದ ಏನು ಮಾಡಿದೆ ಅಲ್ಲಿ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಐ.ಎಸ್.ಓ ಪ್ರಮಾಣ ಪತ್ರ ದೊರಕಿರುವುದು ಅತೀವ ಹರ್ಷವನ್ನುಂಟುಮಾಡಿದೆ ಎಂದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಜೊತೆಯಲ್ಲಿ ತತ್ಪೂರ್ವದ ಆಡಳಿತದ ಬಗ್ಗೆ ತನಿಖೆಗೆ ಆಗ್ರಹಿಸಿದರು.
 
 
 
ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಐ.ಎಸ್.ಓ ಪ್ರಮಾಣಪತ್ರ
ಶ್ರೀರಾಮಚಂದ್ರಾಪುರಮಠವು ಶಿಸ್ತಿಗೆ ಹೆಸರಾಗಿದ್ದು, ಶ್ರೀಮಠದ ಆಡಳಿತಕ್ಕೊಳಪಟ್ಟಿರುವ ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿನ ಸುವ್ಯವಸ್ಥಿತ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸುವ ಐ.ಎಸ್.ಓ ಪ್ರಮಾಣಪತ್ರ ಸೋಮವಾರ ದೊರಕಿದೆ.
 
 
ಪ್ರಾಚೀನ ಕಾಲದಿಂದಲೂ ಶ್ರೀರಾಮಚಂದ್ರಾಪುರಮಠದ ಆಡಳಿತದಲ್ಲಿದ್ದ ಶ್ರೀಮಹಾಬಲೇಶ್ವರ ದೇವಾಲಯವನ್ನು 2008ರಲ್ಲಿ ಘನಸರ್ಕಾರವು ಶ್ರೀಮಠಕ್ಕೆ ಮರುಹಸ್ತಾಂತರಿಸುವ ಮೂಲಕ ದೇವಾಲಯದಲ್ಲಿ ಅಭಿವೃದ್ಧಿಯ ಮಹಾಪರ್ವಕ್ಕೆ ಹಾಗೂ ಗೋಕರ್ಣದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಹಾಡಿತು. ಅಂದಿನಿಂದಲೇ ದಕ್ಷ ಆಡಳಿತ, ಪರಿಪೂರ್ಣ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ, ಧಾರ್ಮಿಕ – ಸಾಮಾಜಿಕ ಕಾರ್ಯದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವುದರ ಮುಖಾಂತರ ಶ್ರೀಮಠದ ಆಡಳಿತವು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
 
 
ದೇವಸ್ಥಾನದಲ್ಲಿ ಮೂರಂಶದ ಗುಣಮಟ್ಟ ನೀತಿ
ದೇವಹಿತ- ಪಾರಂಪರಿಕವಾಗಿ ನಡೆದುಕೊಂಡು ಬಂದ ಸಂಪ್ರದಾಯಬದ್ಧ ಧಾರ್ಮಿಕ ಆಚರಣೆ, ಶ್ರೀಮಹಾಬಲೇಶ್ವರ ದೇವರ ಪೂಜಾಕೈಂಕರ್ಯವನ್ನು ಸಮರ್ಪಕ ರೀತಿಯಲ್ಲಿ ಮುಂದುವರಿಸುವುದು
ಭಕ್ತಹಿತ – ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಧ್ಯಾತ್ಮಿಕವಾಗಿ ಹಾಗೂ ಹಾಗೂ ಇತರೆ ಮೂಲಸೌಕರ್ಯಗಳನ್ನು, ಅನುಕೂಲಗಳನ್ನು ಕಲ್ಪಿಸುವ ಮೂಲಕ ಗರಿಷ್ಠಮಟ್ಟದ ಸಂತೃಪ್ತಿಯನ್ನು ಒದಗಿಸುವುದು.
ಸೇವಕಹಿತ – ಗೋಕರ್ಣ ದೇವಸ್ಥಾನದ ಆಡಳಿತ ಸಿಬ್ಬಂದಿ ಹಾಗೂ ಉಪಾಧಿವಂತರ ಸಹಕಾರದೊಂದಿಗೆ ದೇವರ ಸೇವೆಯನ್ನು ಮಾಡುವವರಿಗೆ ಗುಣಮಟ್ಟದ ಬದುಕು ಸಾಧಿಸುವಲ್ಲಿ ಎಲ್ಲ ರೀತಿಯ ಸೇವಾ ಸೌಕರ್ಯಗಳನ್ನು ಒದಗಿಸುವುದು.
 
 
ಪ್ರಮಾಣ ಪತ್ರ ಸಿಕ್ಕಿದ್ದು ಹೀಗೆ..
ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆ, ಪೂಜಾ ವ್ಯವಸ್ಥೆ, ಸ್ವಚ್ಛತೆ, ಸುರಕ್ಷೆ, ದೇವರ ದರ್ಶನ ವ್ಯವಸ್ಥೆ ಹಾಗೂ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆಗಳನ್ನು ಸಮಗ್ರವಾಗಿ ಅಭ್ಯಸಿಸಿ, ತಜ್ಞರ ಪರಿಶೋಧನೆಗೆ ಒಳಪಡಿಸಲಾಗಿತ್ತು. ಎಲ್ಲ ವ್ಯವಸ್ಥೆಗಳು ಮತ್ತು ಆಡಳಿತ ನಿರ್ವಹಣೆಯು, ISO 9001:2008 ಅರ್ಹತಾ ನಿಯಮಗಳಿಗೆ ಅನುಗುಣವಾಗಿರುವುದು ಖಾತರಿಯಾದ ಬಳಿಕ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಐ.ಎಸ್.ಓ ಪ್ರಮಾಣಪತ್ರ ನೀಡಲಾಗಿದೆ. ಇದು ಶ್ರೀಮಠದ ಸುವ್ಯವಸ್ಥಿತ ಆಡಳಿತಕ್ಕೆ ಕೈಗನ್ನಡಿ ಹಾಗೂ ಪಾರದರ್ಶಕ ನಿರ್ವಹಣೆಗೆ ಸಾಕ್ಷಿಯಾಗಿದೆ.
 
 
 
ಉತ್ತಮ ಆಡಳಿತದ ಸ್ಥಿರೀಕರಣ
ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಶ್ರೀರಾಮಚಂದ್ರಾಪುರಮಠದ ಆಡಳಿತದ ಕುರಿತಾಗಿ ನಾಡಿನಾದ್ಯಂತ ಉತ್ತಮ ಪ್ರತಿಕ್ರಿಯೆ ಇದ್ದು, ಈ ಕುರಿತಾಗಿ ಲಕ್ಷಾಂತರ ಜನರು ತಮ್ಮ ಮೆಚ್ಚುಗೆಯನ್ನು ದಾಖಲಿಸಿದ್ದು, ಇದೀಗ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ದೊರಕಿರುವ ಐ.ಎಸ್.ಓ ಪ್ರಮಾಣಪತ್ರವು ಇವೆಲ್ಲವುಗಳನ್ನು ಸ್ಥಿರೀಕರಿಸುವಂತಿದೆ.
ISO 9001:2008 ಬಗ್ಗೆ ಒಂದಿಷ್ಟು
Ø ಕಂಪನಿ, ಸಂಸ್ಥೆ ಅಥವಾ ವ್ಯಕ್ತಿಗಳು ತಮ್ಮ ಹಣಕಾಸು ನಿರ್ವಹಣೆ, ಆಡಳಿತ ವ್ಯವಸ್ಥೆಯ ಗುಣಮಟ್ಟವನ್ನು ಸುಸೂತ್ರವಾಗಿ ಒಂದು ಚೌಕಟ್ಟಿನೊಳಗೆ ರೂಢಿಸಿಕೊಂಡಿರುವುದನ್ನು ಪ್ರಮಾಣೀಕರಿಸುವ ಪ್ರಮಾಣಪತ್ರ.
Ø ನಿತ್ಯ ವ್ಯವಹಾರಗಳನ್ನು ನಿಗದಿತ ಗುಣಮಟ್ಟದಲ್ಲಿ ಒಂದು ಚೌಕಟ್ಟಿನೊಳಗೆ ನಿರ್ವಹಿಸುವುದನ್ನು ಖಾತರಿ ಪಡಿಸುವುದು ಮತ್ತು ಅದನ್ನು ಎಲ್ಲ ರೀತಿಯಲ್ಲೂ ಸುಧಾರಿಸುವ ಕೆಲಸವನ್ನು ಹಂತ ಹಂತವಾಗಿ ನಿರಂತರವಾಗಿ ಮಾಡುವುದು.
Ø ಪ್ರಮಾಣೀಕರಿಸುವ ಕೆಲಸವನ್ನು ತೃತೀಯ ಸಂಸ್ಥೆಯೊಂದು ಮಾಡುವುದಾಗಿದ್ದು, ಅದು ಹಣಕಾಸು ನಿರ್ವಹಣೆ, ಆಡಳಿತ ಹಾಗೂ ಒಟ್ಟಾರೆ ವ್ಯವಸ್ಥೆಯ ಗುಣಮಟ್ಟದ ಮೌಲ್ಯಮಾಪನ ಮಾಡಿ ಬಳಿಕವಷ್ಟೇ ಪ್ರಮಾಣಪತ್ರ ಒದಗಿಸಲು ಶಿಫಾರಸು ಮಾಡುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳವರ ಕಾರ್ಯದರ್ಶಿ – ಐ.ಎಸ್.ಓ. ವಿಭಾಗ ಕೃಷ್ಣನಾರಾಯಣ ಮುಳಿಯ, ಶ್ರೀಗಳವರ ಕಾರ್ಯದರ್ಶಿ ಮತ್ತು ಪದನಿಮಿತ್ತ ಆಡಳಿತಾಧಿಕಾರಿ – ಶ್ರೀಸಂಸ್ಥಾನ ಮಹಾಬಲೇಶ್ವರ ದೇವಾಲಯ ಜಿ.ಕೆ. ಹೆಗಡೆ, ಶ್ರೀಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here