ಲಿವ್ ಇನ್ ಸ್ಟೈಲ್

0
264

 
ಅರಿತುಕೋ ಬದುಕ ವೈಖರಿ ಅಂಕಣ: ಸಂಚನ ಎಂ ಎಸ್
ಆಧುನೀಕರಣ , ನಗರೀಕರಣ, ವಾಣಿಜ್ಯೀಕರಣ, ವ್ಯಾಪಾರೀಕರಣ ಈ ಎಲ್ಲವುಗಳ ವೈಭವೀಕರಣದಲ್ಲೇ ಮುಳುಗಿ ಹೋಗಿದ್ದಾನೆ ಮನುಷ್ಯ ಇಂದು. ಜಿಂಕೆಯಂತೆ ಓಡುತ್ತಿರುವ ನಮ್ಮ ಬದುಕಲೊಮ್ಮೆ ಕೊಂಚ ನಿಂತು, ಚಿಂತಿಸದ ಅದರ ವೈಖರಿ(ಸ್ಟೈಲ್) ಅನ್ನೂ ಗಮನಿಸದ ಧಾವಂತದಲ್ಲಿದ್ದೇವೆ ನಾವಿಂದು. ನಮ್ಮೆಲ್ಲರ ಈ ವೇಗದ ಬದುಕಿನ ಹಾದಿಯಲ್ಲಿ ಒಂದು ಸಣ್ಣ ಹಂಪ್ ಕೂಡ ಇಲ್ಲ. ಈ ವೇಗವು ಅತಿಯಾದರೆ ಅಪಾಯ ಅಪಘಾತಗಳು ನಿಶ್ಚಿತವೆಂಬ ಅರಿವು ಅವನಿಗಿದ್ದಂತಿಲ್ಲ. ಇನ್ನಾದರೂ ಈ ಹೈ-ಸ್ಪೀಡ್ ಗೆ ಬ್ರೇಕ್ ಅನ್ನು ಹಾಕಿ, ನಮ್ಮ ಬದುಕನ್ನು ಸರಿಯಾದ ಹಾದಿಯಲ್ಲಿ ಸರಿಯಾದ ವೇಗದಲ್ಲಿ ಮುನ್ನಡೆಸಬೇಕಾದ ಅನಿವಾರ್ಯತೆಯ ಹೊಸ್ತಿಲಲ್ಲಿ ನಾವಿದ್ದೇವೆ.
 
ಪ್ರತಿಯೊಂದು ಜೀವಿಗೂ ಅವರ ಜೀವನದಲ್ಲಿ ಅವರದೇ ಆದ ಸ್ಟೈಲ್ ಎಂಬುದು ಇದ್ದೇ ಇದೆ. ಹೆಚ್ಚೇಕೆ ನಮ್ಮ ಸುತ್ತ ಆವರಿಸಿರುವ ಈ ರಮಣಿಯ ಪ್ರಕೃತಿಯು ಸಹ ಎಂದೂ ತನ್ನ ಸ್ಟೈಲ್ ಅನ್ನು ಬಿಟ್ಟು ಕೊಟ್ಟಿಲ್ಲ. ಆದರೆ ಮನುಷ್ಯ ಜೀವಿ ಮಾತ್ರ ತಾನ್ಯಾರೆಂದು ತನಗೆ ತಾನೆ ತಿಳಿಯಲು ನೆರವಾಗುವ, ತಾನೇನೆಂದು ಜಗತ್ತಿಗೆ ತಿಳಿಸಲು ನೆರವಾಗುವ ಒಟ್ಟಿನಲ್ಲಿ ತನ್ನ ಉನ್ನತಿಗೆ ಸಕಲ ರೀತಿಯಲ್ಲಿ ನೆರವಾಗಬಲ್ಲ ತನ್ನ ನಿಜ ವೈಖರಿ(ಸ್ಟೈಲ್) ಅನ್ನೇ ಮರೆತಂತೆ ನಟಿಸುತ್ತಿದ್ದಾನೆ. ಫ್ಯಾಶನ್ ಎಂಬ ಮಾಯಾ ಜಾಲವು ನಮಗೆ ನಮ್ಮದಲ್ಲದ ಆಚಾರ, ವಿಚಾರ, ಆಹಾರ, ಆರೋಗ್ಯ, ಆನಂದ ಪ್ರತಿಯೊಂದನ್ನೂ ಸಹ ನೀನು ಖರೀದಿಸಿ ಪಡೆದರೆ ಮಾತ್ರ ಶೈನ್ ಆಗಬಲ್ಲೆ ಎಂಬ ಭ್ರಮೆಯನ್ನು ಹುಟ್ಟಿಸಿದೆ. ಈ ಭ್ರಮೆಯಲ್ಲಿ ಬದುಕು ಸಾಗಿಸುತ್ತಿರುವ ನಾವುಗಳು ಇದೇ ನಮ್ಮ ನಿಜವಾದ ಸ್ಟೈಲ್ ಎಂದು ಬಲವಾಗಿ ನಂಬಲು ಆರಂಭಿಸಿದ್ದೇವೆ.
 
 
 
ಸ್ಟೈಲ್ ಎಂಬುದು ತೀರಾ ವೈಯಕ್ತಿಕ ವಿಚಾರ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ, ಆತನ ಧೋರಣೆಯ ಪ್ರತಿಬಿಂಬದಂತೆ ತೋರುವುದೇ ಸ್ಟೈಲ್. ಸ್ಟೈಲ್ ಎಂದರೆ ಫ್ಯಾಶನ್ ಎಂದು ತಿಳಿಯುವುದು ದಡ್ಡತನವಲ್ಲದೆ ಬೇರೇನೂ ಅಲ್ಲ. ಫ್ಯಾಶನ್ ಎಂಬುದು ಅತಿವೇಗದಲ್ಲಿ ಮಿಂಚಿ ಮರೆಯಾಗುವ ವಿಷಯ. ಆದರೆ ಸ್ಟೈಲ್ ಎಂಬುದು ಶಾಶ್ವತವಾದ ಸದಾ ಅನುಸರಣೀಯ ವಿಷಯ. ಒಂದು ಪುಟ್ಟ ಉದಾಹರಣೆಯೊಂದಿಗೆ ಇದನ್ನು ವಿವರಿಸುವುದಾದರೆ ಈಗ ನಮ್ಮ ನಡುವೆಯೇ ಇರುವ ಒಬ್ಬ ವ್ಯಕ್ತಿ ತನ್ನ ಆಹಾರ, ಆರೋಗ್ಯ, ವ್ಯಾಯಾಮ, ಆಧ್ಯಾತ್ಮ ಇವುಗಳ ಬಗೆಗೆ ವಿಶೇಷ ಆಸಕ್ತಿ ವಹಿಸಿ ಜಾಣ್ಮೆಯ ಹೆಜ್ಜೆಯನ್ನಿಟ್ಟರೆ ಅದನ್ನು ಈಗಿನ ಫ್ಯಾಶನ್ , ಹೊಸದೊಂದು ಟ್ರೆಂಡ್ ಎಂದು ಭಾವಿಸುವುದು ನಮ್ಮ ಮೂರ್ಖತನವಾಗುತ್ತದೆ. ಕಾರಣ ಈ ಮೇಲ್ಕಂಡ ಯಾವುದೇ ಸಂಗತಿಗಳನ್ನು ಒಂದು ದಿನ ಅಥವಾ ಎರಡು ದಿನ ಆವರಿಸಿದಂತೆ ಮಾಡಿ ನಂತರ ಅವುಗಳಿಗೆ ತಿಲಾಂಜಲಿ ಹಾಕುವ ಪ್ರಶ್ನೆಯೇ ಇಲ್ಲ. ಬದಲಿಗೆ ಇವುಗಳು ಆ ಜೀವಿಯ ಜೀವನದುದ್ದಕ್ಕೂ ಸೌಖ್ಯವನ್ನು ನೀಡುತ್ತಾ ಸಂಗಾತಿಯಂತೆ ಜೊತೆಬರುವ ಸಂಗತಿಗಳು. ಇದರ ಆಧಾರದ ಮೇಲೆಯೇ ನಾವು ಆ ವ್ಯಕ್ತಿಯ ಜೀವನ ವೈಖರಿ(ಲೈಫ್ ಸ್ಟೈಲ್) ಸುಂದರವಾಗಿದೆ ಎಂದು ನಿರ್ಧರಿಸಬಹುದು.
 
 
 
ಬಾಹ್ಯವಾಗಿ ನಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ಸ್ಮೈಲ್(ನಗು)ನ ಪಾತ್ರ ಎಷ್ಟು ಮುಖ್ಯವಾದುದೋ, ಅದರ ಜೊತೆ ಕೇವಲ ಬಾಹ್ಯಮಾತ್ರವಲ್ಲದೆ, ಅಂತರಿಕವಾಗಿಯೂ ನಮ್ಮ ಸೌಂದರ್ಯವನ್ನು ನೂರ್ಮಡಿಗೊಳಿಸುವಲ್ಲಿ ಸ್ಟೈಲ್ ನ ಪಾತ್ರ ಅತಿಮುಖ್ಯವಾದುದೆಂಬುದನ್ನು ನಾವಿಂದು ತಿಳಿಯುವ. ನಮ್ಮ ಅಂತರಂಗ -ಬಹಿರಂಗವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಳಗಿಸಿ ಭವ್ಯಗೊಳಿಸುವ ನಮ್ಮೊಳಗಿನ ಬೆಳಕಿನಂತ ಸ್ಟೈಲ್ ಅನ್ನು ಬದುಕಿನ ಪಥದುದ್ದಕ್ಕೂ ಹೊತ್ತೊಯ್ಯುವ.
ಸಂಚನ ಎಂ. ಎಸ್.
[email protected]

LEAVE A REPLY

Please enter your comment!
Please enter your name here