ಲಿಂಗ ತಾರತಮ್ಯವನ್ನು ನಿರ್ಮೂಲನೆ ಮಾಡಬೇಕು: ಸಿಎಂ

0
314

ಬೆಂಗಳೂರು ಪ್ರತಿನಿಧಿ ವರದಿ
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ. 33 ರಷ್ಟು ಮೀಸಲಾತಿ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇ 50 ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿದೆ. ಮಹಿಳೆಯರಿಗೆ ಸಮಾನವಾದ ಅವಕಾಶ ಸಿಕ್ಕಿದಾಗ ಮಾತ್ರ ನಾಡಿನ, ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
 
 
 
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಫಾಟಿಸಿ ಮಾತನಾಡಿದ ಅವರು , ಅಂದು ಬೇರೆ ಬೇರೆ ಸಮುದಾಯದ ಜನರು ಶೋಷಣೆ ಅನುಭವಿಸಿದ ರೀತಿಯಲ್ಲೇ ಮಹಿಳೆಯರು ಕೂಡಾ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಸಮಾಜವಾದಿ, ದೇಶ ಕಂಡ ಶ್ರೇಷ್ಠ ರಾಜಕಾರಣಿ ಲೋಹಿಯಾ ಅವರು ಹೇಳುತ್ತಿದ್ದರು ಎಂದು ಸಮಾರಂಭದಲ್ಲಿ ನೆನಪಿಸಿಕೊಂಡರು.
 
 
 
ಈ ವರ್ಷದ ಘೋಷ ವಾಕ್ಯ “ಮಹಿಳೆಯರು ಬದಲಾವಣೆಯತ್ತ ಧೈರ್ಯದಿಂದ ಮುನ್ನುಗಿ” ಎಂಬುದು. ನಮ್ಮ ರಾಜ್ಯದಲ್ಲಿ ಬಹಳಷ್ಟು ಮಹಿಳೆಯರು ಶ್ರೇಷ್ಠ ಕೈಗಾರಿಕೋದ್ಯಮಿಗಳಾಗಿ ಹೊರಹೊಮ್ಮಿದ್ದಾರೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಅವರಿಗೆಲ್ಲ ನನ್ನ ಧನ್ಯವಾದಗಳು ಎಂದರು.
 
 
 
ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು 70 ವರ್ಷವಾದರೂ ಸಮಾಜದಲ್ಲಿ ಲಿಂಗ ತಾರತಮ್ಯವಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾದರೆ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡಬೇಕು. ನಮ್ಮ ಸರ್ಕಾರ ಕೈಗಾರಿಕಾ ನೀತಿ ಹೊಸ ಯೋಜನೆಯನ್ನು ತಂದಿದ್ದು ಮಹಿಳಾ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ದೇಶದಲ್ಲಿಯೇ ನಮ್ಮ ರಾಜ್ಯದ ಕೈಗಾರಿಕಾ ನೀತಿಯು ಉತ್ತಮವಾಗಿದೆ ಎಂದು ಅವರು ತಿಳಿಸಿದರು.
 
 
 
ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ, ಸರ್ಕಾರದ ಅಪರ ಮುಖ್ಯ ಪ್ರಧಾನ ಕಾರ್ಯದರ್ಶಿ ರತ್ನಪ್ರಭಾ ಸೇರಿದಂತೆ ಅನೇಕ ಮಹಿಳಾ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here