ಲಾಕ್ ಡೌನ್ ಹಾಗೂ ಜಾಲತಾಣಗಳಲ್ಲಿ ಯಕ್ಷಗಾನ – 2

0
930

ಎಂ‌ .ಶಾಂತರಾಮ ಕುಡ್ವ, ಮೂಡುಬಿದಿರೆ

ಕಳೆದ ಸಂಚಿಕೆಯ ಕೊನೆಯಲ್ಲಿ ಇದು ಸಮಗ್ರ ಲೇಖನವಲ್ಲ ಎಂದು ಕೊನೆಯಲ್ಲಿ ತಿಳಿಸಿದ್ದೆ . ಜಾಲತಾಣಗಳನ್ನು ಇನ್ನಷ್ಟು ಮಂದಿ ಬಳಸಿ ಯಕ್ಷಗಾನದ ಕಂಪನ್ನು ಹರಡಿದ ಮಾಹಿತಿಗಳಿವೆ .
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯೆ ಹಾಗೂ ಯಕ್ಷಗಾನ ಕಲಾವಿದೆಯಾದ ಶ್ರೀಮತಿ ಅಶ್ವಿನೀ ಕೊಂಡದಕುಳಿಯವರು ತನ್ನ ತಮ್ಮ ಶ್ರೀಚರಣನೊಂದಿಗೆ , ಸಿದ್ದಕಟ್ಟೆ ವಿಶ್ವನಾಥ ಶೆಟ್ಟರ ” ಪಾಂಚಜನ್ಯ ” ಪ್ರಸಂಗದ ಜನಪ್ರಿಯ ಹಾಡಾದ ” ಯಾರೇ ನೀನು ಭುವನ ಮೋಹಿನಿ ” ಗೆ ಮನೆಯಲ್ಲೇ ನಾಟ್ಯ ಮಾಡುತ್ತಿರುವುದು ಫೇಸ್‌ಬುಕ್‌ , ಯೂಟ್ಯೂಬ್ ನಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ . ದೂರದ ಸಿರ್ಸಿಯ ಗೋಳಿಕೊಪ್ಪದಿಂದ ನಿರ್ಮಲಾ ಹೆಗಡೆ ಎಂಬ ಹವ್ಯಾಸೀ ಯಕ್ಷಗಾನ ಕಲಾವಿದರು ಒಂಭತ್ತು ನಿಮಿಷಗಳ ಕಾಲದ ಕೊರೋನಾ ಜಾಗ್ರತಿಯ ಕುರಿತಾದ ಒಂದು ಯಕ್ಷಗಾನದ ವೀಡಿಯೋ ಮಾಡಿ ವೀಕ್ಷಕರನ್ನು ರಂಜಿಸಿದ್ದಾರೆ . ಗಜಾನನ ಭಟ್ ರವರು ಪದ್ಯ ರಚಿಸಿ ತಾವೇ ಭಾಗವತಿಕೆ ಮಾಡಿರುವ ಈ ವೀಡಿಯೋದಲ್ಲಿ , ಶಂಕರ ಭಾಗವತ , ಯಲ್ಲಾಪುರ ಮದ್ದಲೆವಾದನದಲ್ಲಿ ಸಹಕರಿಸಿದ್ದಾರೆ . ನಿರ್ಮಲಾ ಹೆಗಡೆಯವರು ಉತ್ತಮವಾದ ನಾಟ್ಯ ಪ್ರಸ್ತುತಿಯೊಂದಿಗೆ ನಿರೂಪಣೆಯನ್ನೂ ಮಾಡಿದ್ದಾರೆ . ಇದು ಸಿರ್ಸಿಯ
” ಹೆಜ್ಜೆಗೆಜ್ಜೆ ” ಯ ಕಾರ್ಯಕ್ರಮ ಆಗಿದ್ದು ಮಯೂರಿ ಉಪಾಧ್ಯಾಯರು ಸಹಕರಿಸಿದ್ದಾರೆ . ಎಂ.ಕೆ. ಗೋಳಿಕೊಪ್ಪರ ವೀಡಿಯೋವನ್ನು ಬಿಂದು ಹೆಗಡೆಯವರು ಸಂಕಲನ ಮಾಡಿದ್ದಾರೆ . ಇದೂ ಫೇಸ್‌ಬುಕ್‌, ಯೂಟ್ಯೂಬ್ ನಲ್ಲಿ ಸಾವಿರಾರು ವೀಕ್ಷಕರ ಮನ ಗೆದ್ದಿದೆ .
ಏಕವ್ಯಕ್ತಿ ಯಕ್ಷಗಾನದ ಮೂಲಕ ಪ್ರಸಿದ್ಧಿ ಗಳಿಸಿರುವ ಸುಪ್ರಸಿದ್ಧ ಕಲಾವಿದರಾದ ಮಂಟಪ ಪ್ರಭಾಕರ ಉಪಾಧ್ಯರಿಂದ ಸ್ಫೂರ್ತಿಗೊಂಡು ಅವರ ಮಗಳಾದ ಪ್ರಮದಾ ಉಪಾಧ್ಯರ ಪರಿಕಲ್ಪನೆಯಲ್ಲಿ ” ಮಧುಮಾಸ – ಹೆಣ್ಣಿನ ಹೆಜ್ಜೆಗೆ ವಸಂತನ ಗೆಜ್ಜೆ ” ನಾಟ್ಯ ಪ್ರಸ್ತುತಿ ಫೇಸ್‌ಬುಕ್‌ , ಯೂಟ್ಯೂಬ್ ನಲ್ಲಿ ಸಾವಿರಾರು ವೀಕ್ಷಕರ ಮೆಚ್ಚುಗೆ ಗಳಿಸಿದೆ . ವಿದ್ವಾನ್ ಗಣಪತಿ ಭಟ್ ರ ಭಾಗವತಿಕೆಯೊಂದಿಗೆ ಎ.ಪಿ.ಪಾಟಕ್ ರ ಮದ್ದಲೆವಾದನ ಈ ಪ್ರಸ್ತುತಿಗೆ ಬಳಸಲಾಗಿದೆ . ಕುಂದಾಪುರ ಕುಂಭಾಶಿಯಿಂದ ಅಶ್ವಿನೀ ಕೊಂಡದಕುಳಿ , ಸಾಗರದಿಂದ ಸೌಮ್ಯ ಅರುಣ್ , ಶಿವಮೊಗ್ಗದಿಂದ ನವ್ಯ ಭಟ್ , ಬೆಂಗಳೂರಿನಿಂದ ಪ್ರಮದಾ ಉಪಾಧ್ಯ , ಮಯೂರಿ ಉಪಾಧ್ಯರು ತಮ್ಮ ತಮ್ಮ ಮನೆಗಳಿಂದಲೇ ನೃತ್ಯದ ಹೆಜ್ಜೆ ಹಾಕಿ ಎಡಿಟ್ ಮಾಡಿ ವೀಡಿಯೋ ಮಾಡಲಾಗಿತ್ತು .9.25 ನಿಮಿಷಗಳ ಈ ನಾಟ್ಯ ಫೇಸ್‌ಬುಕ್‌, ಯೂಟ್ಯೂಬ್ ನಲ್ಲಿ ಸಾವಿರಾರು ವೀಕ್ಷಕರ ಮೆಚ್ಚುಗೆ ಪಡೆದಿದೆ .
ಕಳೆದ ಸಂಚಿಕೆಯಲ್ಲಿ ಆಡಿಯೋ ಮೂಲಕ ರಂಜಿಸಿದವರ ಬಗ್ಗೆ ಉಲ್ಲೇಖಿಸಿರಲಿಲ್ಲ . ಆಡಿಯೋ ಮೂಲಕ ಹಲವಾರು ಭಾಗವತರು , ಚೆಂಡೆ – ಮದ್ದಲೆವಾದಕರು ಜಾಲತಾಣಗಳಲ್ಲಿ ರಂಜಿಸಿ , ಲಾಕ್ ಡೌನ್ ನ ಅವಧಿಯನ್ನು ಯಕ್ಷಗಾನದ ಮೂಲಕ ಸದುಪಯೋಗಪಡಿಸಿದ್ದಾರೆ . ಪ್ರಾರಂಭದಲ್ಲಿ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಎಂ.ಎ.ಹೆಗಡೆ ಹಾಗೂ ಯಕ್ಷ ಕವಿ ಶ್ರೀಧರ್ ಡಿ.ಎಸ್.ರವರು ಕೊರೋನಾ ಜಾಗ್ರತಿಗಾಗಿ ರಚಿಸಿದ ಪದ್ಯಗಳನ್ನು ಮದ್ದಲೆವಾದಕರಾದ ಎ.ಪಿ.ಪಾಟಕ್ ರವರು ತಾವೇ ಹಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮೆಚ್ಚುಗೆ ಗಳಿಸಿತ್ತು . ಬಡಗು ತಿಟ್ಟಿನ ಸುಪ್ರಸಿದ್ಧ ಭಾಗವತರಾಗಿರುವ ಸುರೇಂದ್ರ ಪಣಿಯೂರರು , ಕಳೆದ 25 ದಿನಗಳಿಂದ ” ಪಣಿಯೂರ್ – ಯಕ್ಷ ಭಾಮಿನಿ ” ಎಂಬ ಶೀರ್ಷಿಕೆಯಲ್ಲಿ ದಿನಂಪ್ರತಿ ಒಂದೊಂದು ಯಕ್ಷಗಾನದ ಭಾಮಿನಿಗಳನ್ನು ಹಾಡಿ , ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ . ಪಣಿಯೂರರು ಪ್ರತೀ ದಿನವೂ ಬೇರೆ ಬೇರೆ ಪ್ರಸಂಗಗಳ , ಅಪೂರ್ವ ರಾಗಗಳನ್ನು ಬಡಗು ನಡುತಿಟ್ಟಿನ ಕುಂಜಾಲು ಶೈಲಿಯಲ್ಲಿ ಹಾಡಿದ್ದಾರೆ .ಪದ್ಯಗಳ ವಿವರಣೆಯನ್ನೂ ನೀಡುತ್ತಿದ್ದಾರೆ .ಇದು ಸಾವಿರಾರು ಶ್ರೋತೃಗಳ ಮೆಚ್ಚುಗೆ ಪಡೆದಿದೆ . ( ಪಣಿಯೂರರು ತೆಂಕುತಿಟ್ಟಿನ ಭಾಗವತಿಕೆಯನ್ನೂ ಮಾಡಬಲ್ಲರು ) . ತೆಂಕು ತಿಟ್ಟಿನ ಸುಪ್ರಸಿದ್ಧ ಯುವ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರು ( ಹನುಮಗಿರಿ ಮೇಳದ ಭಾಗವತರು ) ತಾವು ಮನೆಯಿಂದಲೇ ಯಕ್ಷಗಾನದ ಹಾಡನ್ನು ಹಾಡಿ , ಸುಪ್ರಸಿದ್ಧ ಮದ್ದಲೆ ವಾದಕರಾದ ಕೃಷ್ಣಪ್ರಕಾಶ್ ಉಳಿತ್ತಾಯರಿಗೆ ಕಳಿಸಿ ಕೊಟ್ಟಿದ್ದರು . ಆ ಹಾಡಿಗೆ ನಂತರ ಉಳಿತ್ತಾಯರು ,ಆ ಪದ್ಯಗಳನ್ನು ಬ್ಲೂಟೂತ್ ನ ಮೂಲಕ ಕೇಳಿ ತಮ್ಮ ಮನೆಯಿಂದಲೇ ಮದ್ದಲೆ ನುಡಿಸಿ , ಎಡಿಟ್ ಮಾಡಿ ವಾಟ್ಸಾಪ್ ಗಳಲ್ಲಿ ಪೋಸ್ಟ್ ಮಾಡಿದ್ದು , ಇದು ಸಾವಿರಾರು ಶ್ರೋತೃಗಳನ್ನು ಮುಟ್ಟುವಲ್ಲಿ ಸಫಲವಾಗಿತ್ತು . ಈ ಕೆಲಸವು ಕಠಿಣವಾದ ಪರಿಶ್ರಮ . ಯಾಕೆಂದರೆ , ಆ ಪದ್ಯಗಳು ಮೊದಲೇ ಹೇಳಲ್ಪಟ್ಟಿದ್ದು ಮದ್ದಲೆಯ ಘಾತಗಳು ನಂತರ ಅಳವಡಿಸಬೇಕಾದುದು . ಇದಕ್ಕಾಗಿ ಹಲವಾರು ಭಾರಿ ಮದ್ದಲೆ ನುಡಿಸಿ , ಪದ್ಯದ ಸಮನ್ವಯಕ್ಕೆ ತರುವುದು ಒಂದು ಸಾಹಸವೇ ಹೌದು . ಲಾಕ್ ಡೌನ್ ಸಂದರ್ಭದಲ್ಲಿ ಉಳಿತ್ತಾಯರು ಅತ್ಯಂತ ಸಕ್ರಿಯರಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು . ಭಾಗವತರಾದ ಪುತ್ತೂರು ರಮೇಶ್ ಭಟ್ ಹಾಗೂ ಕಾವ್ಯಶ್ರೀ ನಾಯಕ್ ರಿಂದಲೂ ” ಅಗರಿ ಶೈಲಿ ” ಯ ಯಕ್ಷಗಾನ ಹಾಡುಗಳನ್ನು ಹಾಡಿಸಿ , ಉಳಿತ್ತಾಯರು ನಂತರ ಇದೇ ರೀತಿ ,ತಾವೇ ಮದ್ದಲೆ ನುಡಿಸಿ ಪೋಸ್ಟ್ ಮಾಡಿದ್ದರು . ಉತ್ತಮ ಬರಹಗಾರರಾಗಿರುವ ಉಳಿತ್ತಾಯರು , ತಾವೇ ಹಲವಾರು ಯಕ್ಷಗಾನ ಹಾಡುಗಳನ್ನು ರಚಿಸಿ ,ಕೆಲವನ್ನು ಸುಪ್ರಸಿದ್ಧ ಭಾಗವತರಾದ ಸತ್ಯನಾರಾಯಣ ಪುಣಿಚಿತ್ತಾಯರಿಂದರಿಂದ ಹಾಡಿಸಿದ್ದಾರೆ . ಇದಕ್ಕೆ ಹನುಮಗಿರಿ ಮೇಳದ ಪ್ರಸಿದ್ಧ ಯುವ ಮದ್ದಲೆಗಾರರಾದ ಚೈತನ್ಯಕೃಷ್ಣ ಪದ್ಯಾಣರು ಮದ್ದಲೆ ನುಡಿಸಿದ್ದಾರೆ . ಹಾಗೆಯೇ ಉಳಿತ್ತಾಯರ ಇನ್ನೊಂದು ಕೊರೋನಾ ಮುಕ್ತಿಗೆ ಕಟೀಲು ಭ್ರಮರಾಂಬಿಕೆಯಲ್ಲಿ ಪ್ರಾರ್ಥಿಸುವ ಪದ್ಯರಚನೆಗೆ ಯುವ ಮಹಿಳಾ ಭಾಗವತರಾದ ಕು .ಅಮೃತಾ ಅಡಿಗರ ಹಾಡುಗಾರಿಕೆಯಲ್ಲಿ ಕೌಶಿಕ್ ರಾವ್ ಪುತ್ತಿಗೆ ಮದ್ದಲೆ ನುಡಿಸಿದ್ದಾರೆ . ಇದನ್ನು ಯಕ್ಷಧ್ರುವ ಸುಕುಮಾರ್ ಜೈನರು ಫೇಸ್‌ಬುಕ್‌ ಗೆ ಪೋಸ್ಟ್ ಮಾಡಿದ್ದಾರೆ . ( ಇದು ಆಡಿಯೋ ) ಉಳಿತ್ತಾಯರು ರಚಿಸಿದ ಕೊರೋನಾ ರೋಗದ ನಿವಾರಣೆ ಮಾಡಲು ಪ್ರಾರ್ಥಿಸುವ ಹಲವಾರು ಸುಂದರ ಸಾಹಿತ್ಯಕ್ಕೆ ಕನ್ನಡಿಕಟ್ಟೆಯವರು ಸುಶ್ರಾವ್ಯವಾಗಿ ಹಾಡಿದ್ದು , ಉಳಿತ್ತಾಯರೇ ಮದ್ದಲೆ ನುಡಿಸಿದ್ದಾರೆ . ಅಗರಿ ಶೈಲಿಯ ಹಾಡುಗಾರಿಕೆಯಲ್ಲಿ ಪ್ರಭುತ್ವ ಸಾಧಿಸಿರುವ ಕನ್ನಡಿಕಟ್ಟೆಯವರು ಈ ಸಂದರ್ಭದಲ್ಲಿ ಹಾಡಿದ ಅಗರಿಶೈಲಿಯ ಪದ್ಯಗಳಿಗೆ ಉಳಿತ್ತಾಯರು ಮದ್ದಲೆ ನುಡಿಸಿದ್ದಾರೆ . ಉಳಿತ್ತಾಯರ ರಚನೆಯ ಕೆಲವು ಪದ್ಯಗಳನ್ನು ಕನ್ನಡಿಕಟ್ಟೆಯವರು ಹಾಡಿ , ಉಜ್ರೆಯ ಶಿತಿಕಂಠ ಭಟ್ಟರು ಮದ್ದಲೆ ನುಡಿಸಿದ್ದಾರೆ . ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರುಗಳಾದ ಪುತ್ತಿಗೆ ರಘುರಾಮ ಹೊಳ್ಳ , ರಾಮಕೃಷ್ಣ ಮಯ್ಯರೂ ಈ ಸಂದರ್ಭದಲ್ಲಿ ಹಾಡಿದ ಪದ್ಯಗಳಿಗೆ ಉಳಿತ್ತಾಯರೇ ಸಾಥಿ ಯಾಗಿ ಮಿಂಚಿದ್ದಾರೆ . ಮುರಾರಿ ಕಡಂಬಳಿತ್ತಾಯರೂ ಕೆಲವೆಡೆ ಚೆಂಡೆಯ ನುಡಿತದ ಮೂಲಕ ಗಮನ ಸೆಳೆದಿದ್ದಾರೆ . ದಿನೇಶ್ ಉಪ್ಪೂರರ ರಚನೆಗಳನ್ನು ಹೊಳ್ಳ – ಉಳಿತ್ತಾಯರು ಚೆನ್ನಾಗಿ ಪ್ರಸ್ತುತ ಪಡಿಸಿ ರಂಜಿಸಿದ್ದಾರೆ . ಬಡಗುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಹಿಲ್ಲೂರು ರಾಮಕೃಷ್ಣ ಹೆಗ್ಡೆಯವರ ಪದ್ಯಗಳಿಗೆ ತೆಂಕುತಿಟ್ಟಿನ ಸುಪ್ರಸಿದ್ಧ ಯುವ ಮದ್ದಲೆ ವಾದಕರಾದ ಚೈತನ್ಯಕೃಷ್ಣ ಪದ್ಯಾಣರು ಮದ್ದಲೆ ನುಡಿಸಿರುವುದು ಗಮನಾರ್ಹ . ಪುಣಿಚಿತ್ತಾಯರ ಸುಶ್ರಾವ್ಯವಾದ ಕೆಲವಾರು ಹಾಡುಗಳಿಗೂ ಚೈತನ್ಯರೇ ಮದ್ದಲೆವಾದನದಲ್ಲಿ ಸಹಕರಿಸಿದ್ದಾರೆ .ಉಳಿತ್ತಾಯರು ಪಾರ್ತಿಸುಬ್ಬರ ” ಪಂಚವಟಿ ” ಪ್ರಸಂಗದ ಜನಪ್ರಿಯ ಹಾಡಾದ ” ನೋಡಿ ನಿರ್ಮಲ ಜಲ ಸಮೀಪದಿ ” ಪದ್ಯಕ್ಕೆ ತಾವೇ ಭಾಗವತಿಕೆ ಮಾಡಿದಾಗ ಉದಯವಾಣಿ ಪತ್ರಿಕೆಯ ಕುಂದಾಪುರ ವಿಭಾಗದ ಉಪ ಮುಖ್ಯ ವರದಿಗಾರರು ಹಾಗೂ ಹವ್ಯಾಸೀ ಮದ್ದಲೆವಾದಕರಾದ ಲಕ್ಷ್ಮಿ ಮಚ್ಚಿನರು ಉತ್ತಮವಾಗಿ ಮದ್ದಲೆ ನುಡಿಸಿದ್ದುದೂ , ಯಕ್ಷಗಾನ ಆಸಕ್ತರ ಗಮನ ಸೆಳೆದಿದೆ .
ಅನೂಪ ಸ್ವರ್ಗ ಎಂಬ ಯುವ ಮದ್ದಲೆವಾದಕರೋರ್ವ ತಾನೇ ಬರೆದು ರಾಗ ಸಂಯೋಜಿಸಿರುವ ” ದೇಶವಿದೇಶಗಳಲಿ ಪಸರಿಸಿರುವ ಕೊರೋನಾ ” ಎಂಬ ಜನ ಜಾಗ್ರತಿಯ ಹಾಡನ್ನು ತಾನೇ ಯಕ್ಷಗಾನ ಶೈಲಿಯಲ್ಲಿ ಹಾಡಿ , ಮದ್ದಲೆ ನುಡಿಸಿ ವೀಡಿಯೋ ಮಾಡಿ ಫೇಸ್‌ಬುಕ್‌, ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದುದನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ . ಹನುಮಗಿರಿ ಮೇಳದ ಉದಯೋನ್ಮುಖ ಯುವ ಭಾಗವತರಾದ ಚಿನ್ಮಯ ಕಲ್ಲಡ್ಕರು ಕೊರೋನಾ ಜಾಗ್ರತಿಯ ಕುರಿತಾದ ಪದ್ಯಗಳನ್ನು ಚೆನ್ನಾಗಿ ಹಾಡಿದಾಗ ದೂರದಿಂದಲೇ ಚೈತನ್ಯ ಪದ್ಯಾಣರು ಮದ್ದಲೆಯ
ಸಾಥಿಯನ್ನು ನೀಡಿದ್ದು ವೀಡಿಯೋ ರೂಪದಲ್ಲಿ ಫೇಸ್‌ಬುಕ್‌, ಯೂಟ್ಯೂಬ್ ನಲ್ಲಿ ಪೋಸ್ಟ್ ಆಗಿದೆ . ಶಶಿಧರ ಕೋಟ ರಚಿಸಿದ ಕೊರೋನಾ ಜಾಗ್ರತಿಯ ಪದ್ಯಗಳು ” ಯಕ್ಷ ಸಾರಂಗ ” ದ ಮೂಲಕ , ಕೆ.ಪಿ.ಹೆಗ್ಡೆಯವರ ಸುಶ್ರಾವ್ಯ ಕಂಠದಲ್ಲಿ ಜಾಲತಾಣಗಳಲ್ಲಿ ಹಂಚಲ್ಪಟ್ಟಿದೆ . ರಾಘವೇಂದ್ರ ಹೆಗಡೆಯವರು ಮದ್ದಲೆವಾದನದಲ್ಲಿ ಸಹಕರಿಸಿದ್ದಾರೆ . ದಿನೇಶ್ ಉಪ್ಪೂರರು ರಚಿಸಿದ ಕೊರೋನಾ ಜಾಗ್ರತಿಯ ಹಾಡುಗಳು ತೆಂಕು – ಬಡಗು ತಿಟ್ಟಿನ ಪ್ರಸಿದ್ಧ ಭಾಗವತರಾದ ಗಣೇಶ್ ರಾವ್ ಹೆಬ್ರಿಯವರ ಸುಮಧುರ ಕಂಠದಲ್ಲಿ ಯಕ್ಷಗಾನಾಸಕ್ತರ ಮನ ಆಕರ್ಷಿಸಿದೆ . ಪಕಳಕುಂಜ ಶಾಮ ಭಟ್ಟರ ರಚನೆಗಳನ್ನು ಪುಣಿಚಿತ್ತಾಯರು ಚೆನ್ನಾಗಿ ಹಾಡಿದ್ದಾರೆ . ಮೂಡಬಿದಿರೆಯ ಬಾಲಕಿ , ಶಿವಕುಮಾರ್ ಮೂಡಬಿದಿರೆ ಹಾಗೂ ಶ್ರೀನಿವಾಸ ಬಳ್ಳಮಂಜರ ಶಿಷ್ಯೆಯಾಗಿರುವ ಪ್ರಕೃತಿ ಮಾರೂರು ಇವಳು ಭಾಗವತಿಕೆಯ ತುಣುಕೊಂದನ್ನು ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದಾಳೆ .
” ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ( ರಿ ) ಮಂಗಳೂರು ” ಇವರು ಪಾವಂಜೆಯಲ್ಲಿ ಪ್ರಸ್ತುತ ಪಡಿಸುತ್ತಿರುವ ” ತಾಳಮದ್ದಳೆ ಸಪ್ತಾಹ ” ವು ಇಂದು 4 ನೇ ದಿವಸದ ಪ್ರದರ್ಶನ ನೀಡುತ್ತಿದೆ.
ನಿನ್ನೆ ( 27.05.2020 ) ಯಕ್ಷರಂಗದಲ್ಲಿ ಸಂಚಲನ ಮೂಡಿಸಿದ ಗುಂಡ್ಮಿ ಕಾಳಿಂಗ ನಾವಡರ 30 ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ತೆಕ್ಕಟ್ಟೆಯಲ್ಲಿ ಯಶಸ್ವಿ ಕಲಾವೃಂದ ( ರಿ ) ಕೊಮೆ , ತೆಕ್ಕಟ್ಟೆ ಯವರ ವತಿಯಿಂದ 3 ನೇ ವರ್ಷದ ಸಂಸ್ಮರಣೆ ಹಾಗೂ ಸುಪ್ರಸಿದ್ಧ ಕಲಾವಿದರಿಂದ
” ಭೀಷ್ಮವಿಜಯ ” ತಾಳಮದ್ದಳೆಯು ಫೇಸ್‌ಬುಕ್‌ ಲೈವ್ ನಲ್ಲಿ ಪ್ರದರ್ಶಿತವಾಯಿತು . ನಾವಡರ ಆಪ್ತರಾದ , ” ನಾವಡರ ಜೀವದ ಗೆಳೆಯ ” ಎನಿಸಿರುವ , ಹೋಟೆಲ್ ಉದ್ಯಮಿ ಗಣಪತಿ ಪೈ ( ಗಂಪು ) ಯವರು ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದ್ದರು . ಜೂನ್‌ 3 ರಿಂದ 10 ರ ತನಕ ಸುಪ್ರಸಿದ್ಧ ಅರ್ಥಧಾರಿ ಉಜ್ರೆ ಅಶೋಕ ಭಟ್ ರ ಸಾರಥ್ಯದ ” ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ” ದ ವತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ( ರಿ ) ಉಜ್ರೆ ಹಾಗೂ ರೋಟರಿ ಕ್ಲಬ್ ಉಜ್ರೆಯ ಸಹ ಪ್ರಾಯೋಜಕತ್ವದಲ್ಲಿ ಉಜ್ರೆಯಲ್ಲಿ ತೆಂಕು – ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ” ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ – ಯಕ್ಷಾವತರಣ ” ವು ಫೇಸ್‌ಬುಕ್‌ , ಯೂಟ್ಯೂಬ್ , ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಜರುಗಲಿದೆ .
ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಹಳೆ ಹಾಗೂ ಈಗಿನ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ” ಯಕ್ಷಂಟೈನ್ ” ಶೀರ್ಷಿಕೆಯಲ್ಲಿ ‌ಇಂದು ಸಂಜೆ 6.00 ಘಂಟೆಗೆ ಯೂಟ್ಯೂಬ್ ನಲ್ಲಿ ” ದಶಾವತಾರ ಕಥಾಸಾರ ” ಎಂಬ ಕಾರ್ಯಕ್ರಮ ಜರುಗಲಿದ್ದು , ಇದರಲ್ಲಿ 23 ಮಂದಿ ಆಳ್ವಾಸ್ ಕಾಲೇಜಿನ ” ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಬುದ್ದ ಹಳೆ ಹಾಗೂ ಈಗಿನ ವಿದ್ಯಾರ್ಥಿಗಳು , ವಿವಿಧ ಪ್ರದೇಶಗಳಿಂದ ಯಕ್ಷನಾಟ್ಯದ ಮೂಲಕ ರಂಜಿಸಲಿದ್ದಾರೆ . ನಿತೇಶ್ ಪೂಜಾರಿ ಮಾರ್ನಾಡರ ನಿರೂಪಣೆಯಲ್ಲಿ ಆಳ್ವಾಸ್ ನ ಹಳೆ ವಿದ್ಯಾರ್ಥಿ ಆದಿತ್ಯ ಅಂಬಲಪಾಡಿಯವರ ನೇತೃತ್ವ ಇದೆ . ಇದು 1 ನೇ ಭಾಗವಾಗಿದ್ದು , ಇನ್ನೂ ಹಲವಾರು ಕಂತುಗಳನ್ನು ಪ್ರದರ್ಶಿಸುವ ನಿರೀಕ್ಷೆ ಇದೆ .
ಸುಪ್ರಸಿದ್ಧ ಅರ್ಥಧಾರಿಗಳಾದ ಭಾಸ್ಕರ್ ರೈ ಕುಕ್ಕುವಳ್ಳಿಯವರ ಪರಿಕಲ್ಪನೆಯಲ್ಲಿ ಕೊರೋನಾ ಜನಜಾಗ್ರತಿಯ ಕಥಾಹಂದರದ
” ನಾರಾಯಣಾಸ್ತ್ರ – ಕರೋನಾಸ್ತ್ರ ” ಎಂಬ ತಾಳಮದ್ದಳೆಯು ಜಾಲತಾಣಗಳಾದ ಫೇಸ್‌ಬುಕ್‌ , ಯೂಟ್ಯೂಬ್ , ಪೊಸಕುರಲ್ ಹಾಗೂ ರೇಡಿಯೋಗಳಲ್ಲಿ ಪ್ರಸಾರಗೊಳ್ಳಲಿದೆ . ಕುಕ್ಕುವಳ್ಳಿಯವರ ಕಥೆಗೆ ಡಾ.ದಿನಕರ ಎಸ್ .ಪಚ್ಚನಾಡಿಯವರು ಪ್ರಸಂಗ ರಚಿಸಿದ್ದಾರೆ . ವಿದ್ಯಾಧರ ಶೆಟ್ಟಿ , ಪೊಸಕುರಲ್ ರವರು ಪ್ರಸ್ತುತ ಪಡಿಸಿದ್ದಾರೆ . ಪಾತ್ರವರ್ಗದಲ್ಲಿ ಡಾ.ಪ್ರಭಾಕರ ಜೋಷಿ , ಕುಕ್ಕುವಳ್ಳಿ , ತುಳು ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲಸಾರ್ , ಡಾ.ದಿನಕರ ಎಸ್. ಪಚ್ಚನಾಡಿ , ಸದಾಶಿವ ಆಳ್ವ ತಲಪಾಡಿ , ವಿದ್ಯಾಧರ ಶೆಟ್ಟಿ , ಪ್ರಶಾಂತ್ ಸಿ.ಕೆ .ಯವರಿದ್ದು , ಭಾಗವತಿಕೆಯಲ್ಲಿ ದೇವಿಪ್ರಸಾದ್ ಆಳ್ವ ತಲಪಾಡಿ , ಚೆಂಡೆ – ಮದ್ದಲೆಯಲ್ಲಿ ರೋಹಿತ್ ಉಚ್ಚಿಲ‌, ರಾಜೇಶ್ ಜೆಪ್ಪು ಸಹಕರಿಸಿದ್ದಾರೆ .
ಮೊನ್ನೆಯ ಲೇಖನದಲ್ಲಿ ಉಲ್ಲೇಖಿಸಿದ ಸಣ್ಣ ಬಾಲಕರ ” ಮಹಾಗಣಪತಿ ಯಕ್ಷಗಾನ ಮೇಳ ಜಂಬೆಹಾಡಿ ” ಯ ಮಕ್ಕಳು ಶಂಕರನಾರಾಯಣ – ಹೊಸಂಗಡಿಯ ಯಡಮೊಗೆ ಎಂಬ ಊರಿನ ಸಮೀಪದ ಜಂಬೆಹಾಡಿಯವರು ಎಂದು ಇದನ್ನು ಫೇಸ್‌ಬುಕ್‌ ನಲ್ಲಿ ಲೈವ್ ನೀಡಿದ , ಹಾಲಾಡಿ ಮೇಳದ ಕಲಾವಿದರಾಗಿರುವ ಗಣೇಶ ಬಳೆಗಾರ , ಶಂಕರನಾರಾಯಣರು ತಿಳಿಸಿದ್ದಾರೆ . ಆ ಮಕ್ಕಳಲ್ಲಿ ಕೆಲವರು ಗೋಳಿಗರಡಿ ಮೇಳದ ಸ್ತ್ರೀ ಪಾತ್ರಧಾರಿ ದಿನೇಶ ಯಡಮೊಗೆಯವರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆ ಕಲಿಯುತ್ತಿದ್ದಾರೆ ಹಾಗೂ ಉಳಿದ ಮಕ್ಕಳೂ , ಅವರ ಪೋಷಕರೂ , ಯಕ್ಷಗಾನದ ಕುರಿತಾಗಿ ಅಪಾರ ಪ್ರೇಮವುಳ್ಳವರು ಎಂಬ ಮಾಹಿತಿಯನ್ನು ಬಳೆಗಾರರು ನೀಡಿದ್ದಾರೆ . ಆ ಮಕ್ಕಳು ಮುಂದಕ್ಕೆ ಉತ್ತಮ ಕಲಾವಿದರಾಗಲಿ ಎಂದು ಶುಭವನ್ನು ಕೋರುತ್ತೇನೆ . ( ಇದೂ ಸಮಗ್ರವಾದ ಲೇಖನವಲ್ಲ . ಇನ್ನೂ ಬಹಳಷ್ಟು ಮಂದಿ ಈ ಸಂದರ್ಭದಲ್ಲಿ ಯಕ್ಷಗಾನದ ವಿವಿಧ ಪ್ರಸ್ತುತಿ ಮಾಡಿದ್ದಾರೆ )

LEAVE A REPLY

Please enter your comment!
Please enter your name here