ಲಾಕ್‌ ಡೌನ್‌ ಸಡಿಲಿಕೆಯಿಂದ ಸಾಮುದಾಯಿಕ ರೋಗಭೀತಿ ನಿಶ್ಚಿತ

0
1730

ಸಡಿಲಿಕೆ ಮಾಡೋ ಮುಂಚೆ ಕೊಂಚ ಯೋಚಿಸಿ…

ವಾರ್ತೆ ವಿಶೇಷ: ಹರೀಶ್‌ ಕೆ.ಆದೂರು.

ಮೂಡುಬಿದಿರೆ: ಲಾಕ್‌ ಡೌನ್‌ ಸಡಿಲಿಕೆಯೇ? ಎಂಬ ಮಾತು ಕೇಳಿ ಬರುತ್ತಿದ್ದಂತೆಯೇ ಅಕ್ಷರಶಃ ಎಲ್ಲರ ಎದೆಯಲ್ಲೂ ಢವ…ಢವ ಆರಂಭಗೊಂಡಿದೆ. ʻಅತಿ ಬುದ್ದಿವಂತಿಕೆʼಹೊಂದಿದ   ಮಂದಿ ಎದೆಯುಬ್ಬಿಸಿ ʻನನಗೇನಾಗುವುದಿಲ್ಲ ಎಂಬಂತೆʼ ನಗರದಾದ್ಯಂತ ಅನಾವಶ್ಯಕ ತಿರುಗುವುದನ್ನು ಬಿಟ್ಟರೆ, ಪ್ರಜ್ಞಾವಂತರು ಅಕ್ಷರಶಃ ತಲೆ ಕೆಡಿಸುವಂತಾಗಿದೆ. ಲಾಕ್‌ ಡೌನ್‌ ಕೊಂಚ ಸಡಿಲಿಕೆ ಮಾಡಿದ ದಿನದಿಂದ ಕೊರೊನಾ ಭೀತಿ ರಾಜ್ಯದಾದ್ಯಂತ ಹೆಚ್ಚಾಗಿದೆ. ಸೋಂಕು ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇನ್ನು ಸಂಪೂರ್ಣ ಸಡಿಲಿಕೆ ಮಾಡಿದರಂತೂ ಬದುಕುವುದೇ ಕಷ್ಟ ಎಂಬಂತಹ ಭೀತಿ ಜನತೆಯಲ್ಲಿ ಮೂಡಿದೆ.

ಮುಂದಿನ ದಿನಗಳಲ್ಲಿ ಲಾಕ್‌ ಡೌನ್‌ ವಿಭಿನ್ನ ಸ್ವರೂಪದಲ್ಲಿ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಲಾಕ್‌ ಡೌನ್‌ ಸಂಪೂರ್ಣ ನಿಲ್ಲುವುದಿಲ್ಲ ಬದಲಾಗಿ ಸ್ವರೂಪದಲ್ಲಿ ಬದಲಾವಣೆಯಾಗುವುದಂತೂ ನಿಶ್ಚಿತ ಎಂಬುದು ಅದರರ್ಥ. ಹಲವು ವಲಯಗಳಿಗೆ ವಿನಾಯ್ತಿ ಸಾಧ್ಯತೆ ಎಂಬ ಸೂಚನೆಯಿದ್ದಂತಿತ್ತು. ಲಾಕ್‌ ಡೌನ್ ೩.೦ದ ಸಂದರ್ಭ  ಬೆಳಗ್ಗೆ ೭ರಿಂದ ಸಾಯಂಕಾಳ ೭ರ ತನಕ ಸಡಿಲಿಕೆ ಮಾಡಿದ್ದೇ ನೋಡಿ ದೊಡ್ಡ ಗಂಢಾಂತರಕ್ಕೆ ಕಾರಣವಾಗಿದೆ. ಜನತೆ ಯಾವುದೇ ಭೀತಿಯಿಲ್ಲದೆ , ಮುಂಜಾಗ್ರತಾ ಕ್ರಮಗಳನ್ನೂ ಅಳವಡಿಸಿಕೊಳ್ಳದೆ ತಿರುಗಾಡುವಂತಾಗಿದೆ…! ಇದು ಅಚ್ಚರಿಯೇ ಸರಿ. ಹೊರ ದೇಶ,ಹೊರ ರಾಜ್ಯಗಳಿಂದ ಜಿಲ್ಲೆಗಾಗಮಿಸಿದ ಮಂದಿಯಿಂದ ರೋಗ ಹರಡುವ ಭೀತಿ ಹೆಚ್ಚಾಗತೊಡಗಿದೆ.

Advertisement

ಜನತೆ ಜಾಗೃತರಾಗಬೇಕು: ಒಂದೊಮ್ಮೆ ಲಾಕ್‌ ಡೌನ್‌ ಸ್ವರೂಪ ಬದಲಾದರೆ ಸಂಪೂರ್ಣ ಕೊರೊನಾ ಮುಕ್ತ ವಾಗಿದೆ ಎಂದು ಅರ್ಥವಲ್ಲ. ಜನರ ಜನ ಜೀವನದ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಆರ್ಥಿಕ ಸಂಕಷ್ಟ ಹೋಗಲಾಡಿಸುವ ಹಿನ್ನಲೆಯಲ್ಲಿ ಸಡಿಲಿಕೆಯಾಗಿದೆಯಷ್ಟೇ. ಕೊರೊನಾ ಮಹಾಮಾರಿ ನಮ್ಮಲ್ಲರ ನಡುವೆಯೇ ಇದೆ ಎಂಬ ಸತ್ಯವನ್ನು ಜನತೆ ಅರ್ಥೈಸಿಕೊಳ್ಳಬೇಕಾಗಿದೆ. “ನಮ್ಮಲ್ಲಿ ಕೊರೊನಾ ಇಲ್ಲವಲ್ಲ…ಮತ್ಯಾಕೆ ನಾವು ಮನೆಯಲ್ಲಿರಬೇಕೆಂಬ”ಮೊಂಡು ವಾದ ಮಂಡಿಸಿ ಊರೂರು ಸುತ್ತುವ ಜನತೆ ಕೊರೊನಾದ ಭೀಕರತೆ, ಇದರಿಂದಾಗಬಹುದಾದ ಸಮಸ್ಯೆಗಳ ಗಂಭೀರತೆಯನ್ನು ಅರ್ಥೈಸಿಕೊಳ್ಳಲೇ ಬೇಕು.

ಗ್ರಾಮೀಣ ಭಾಗದಲ್ಲಿ ಕ್ಯಾರೇ ಇಲ್ಲ! : ಜಿಲ್ಲೆಯ ಗ್ರಾಮೀಣ ಭಾಗವನ್ನೊಮ್ಮೆ ನೋಡಿದರೆ ಮೈ ಝುಂ ಎನ್ನಿಸುತ್ತಿದೆ. ಸಣ್ಣ ಸಣ್ಣ ಕ್ಯಾಂಟೀನ್‌, ಹೊಟೇಲ್‌ ಯಥಾಸ್ಥಿತಿಯಲ್ಲಿ ಕಾರ್ಯ  ನಿರ್ವಹಿಸುತ್ತಿದೆ. ಯಾವೊಂದು ಶುಚಿತ್ವಕ್ಕಾಗಲೀ, ಮುಂಜಾಗ್ರತಾ ಕ್ರಮಗಳನ್ನಾಗಲೀ, ಸೋಶಿಯಲ್‌ ಡಿಸ್ಟೆನ್ಸ್‌ ಗಳನ್ನಾಗಲೀ ಇವರ್ಯಾರೂ ಪಾಲಿಸುತ್ತಿಲ್ಲ. ಮುಖಕ್ಕೆ ಮಾಸ್ಕ್‌ ಇಲ್ಲ. ಕೈಗಳಲ್ಲಿ ಗ್ಲೌಸ್‌ ಇಲ್ಲ…ಸ್ಯಾನಿಟೈಸಿಂಗ್‌ ವ್ಯವಸ್ಥೆಯಂತೂ ಇಲ್ಲವೇ ಇಲ್ಲ…ಸೋಶಿಯಲ್‌ ಡಿಸ್ಟೆನ್ಸ್‌ ಗೆ ಜಾಗವೇ ಇಲ್ಲ!..ಈ ರೀತಿಯ ಪರಿಸ್ಥಿತಿ ಬೆಳ್ತಂಗಡಿ ತಾಲೂಕಿನ ಹಲವು ಪ್ರದೇಶಗಳಲ್ಲಿ, ಮೂಡುಬಿದರೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕಂಡು ಬಂದಿವೆ. ದೂರದೂರುಗಳಿಂದ ಸಿಮೆಂಟ್‌, ಇತರೆ ಹೊರೆಗಳನ್ನು ಹೇರಿಕೊಂಡು ಬರುವ ಲಾರಿಗಳಲ್ಲಿರುವ ಚಾಲಕ, ಕ್ಲೀನರ್‌ ಗಳು ಈ ಹೊಟೇಲ್‌ ಗಳಿಗೆ ಬಂದು ಚಹಾ ಸೇವಿಸುತ್ತಾರೆ. ಮುಖ ತೊಳೆಯುತ್ತಾರೆ, ಉಗುಳುತ್ತಾರೆ. ಅವರ ಆರೋಗ್ಯ ಸ್ತಿತಿ ಹೇಗಿದೆ? ಅವರೆಲ್ಲಿಂದ ಬಂದರು? ಎಲ್ಲೆಲ್ಲಿಗೆ ಹೋಗಿದ್ದರು…? ಇದ್ಯಾವುದೂ ಅರಿಯದಂತಹ ಪರಿಸ್ತಿತಿ ಉಂಟಾಗಿದೆ. ಒಟ್ಟಿನಲ್ಲಿ ಎಲ್ಲಿಂದಲೋ ಬಂದು ಗ್ರಾಮೀಣ ಭಾಗಗಳಲ್ಲೂ ರೋಗ ಹರಡುವ ಭೀತಿ ನಿರ್ಮಾಣವಾಗಿದೆ.

ಸಮಾಜಿಕ ಅಂತರಕ್ಕಿಲ್ಲ ಬೆಲೆ: ಗ್ರಾಮೀಣ ಭಾಗದಲ್ಲಿ ಜನತೆ ಸಾಮಾಜಿಕ ಅಂತರವನ್ನು ಕೊಂಚವೂ ಪಾಲಿಸುತ್ತಿಲ್ಲ.ದಿನಸಿ ಅಂಗಡಿಗಳಲ್ಲಿ, ತರಕಾರಿ ಅಂಗಡಿಗಳಲ್ಲಿ, ಮೀನು ಖರೀದಿಯ ಸಂದರ್ಭ ಇವೆಲ್ಲವನ್ನೂ ಮರೆತು ಬಿಟ್ಟಿದ್ದಾರೆ. ಅಂಗಡಿ ಜಗುಲಿ, ಮೋರಿ ಕಟ್ಟೆಗಳಲ್ಲಿ ಕುಳಿತು ಪಟ್ಟಾಂಗ ಹೊಡೆಯುವ ಸ್ಥಿತಿಯೂ ಕಂಡು ಬರುತ್ತಿದೆ. ಪ್ರಯಾಣಿಕರ ತಂಗುದಾಣಗಳಲ್ಲಿ ಹರಟೆಹೊಡೆಯುತ್ತಾ ಕುಳಿತು, ಬೀಡಾ ಉಗುಳುವ ಮಂದಿಗೆ ಕೊರತೆಯೇ ಇಲ್ಲ ಎಂಬಂತಾಗಿದೆ.

ಸೋಶಿಯಲ್‌ ಡಿಸ್ಟೆನ್ಸ್‌ ಪಾಲನೆ

ದ್ವಿಚಕ್ರ ವಾಹನದಲ್ಲಿ ಮೂರು ನಾಲ್ಕು ಮಂದಿ ಕ್ಯಾರೇ ಎನ್ನದೆ ಜಾಲಿ ರೈಡ್‌ ಮಾಡತೊಡಗಿದ್ದಾರೆ. ಇಲ್ಲಿ ಸಾಮಾಜಿಕ ಅಂತರ ಬಿಡಿ, ಮಾಸ್ಕ್‌ ಕೂಡಾ ಬಳಸುತ್ತಿಲ್ಲ!. ತ್ರಿಚಕ್ರ ವಾಹನದಲ್ಲೂ ಏಳೆಂಟು ಮಂದಿ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಸಂಚರಿಸುತ್ತಿದ್ದಾರೆ. ಗೇರು ಕಾರ್ಖಾನೆಗಳಿಗೆ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳಲ್ಲಿ ಅಂತರದ ಮಾತು ಬಿಡಿ ಉಸಿರಾಡಲೂ ಕಷ್ಟ ಎಂಬಂತಹ ಪರಿಸ್ಥಿತಿ ಕಂಡು ಬರುತ್ತಿದೆ. ಒಟ್ಟಿನಲ್ಲಿ ಜನತೆ ಕೊರೊನಾದ ಬಗ್ಗೆ ಜಾಗೃತರಾಗಿಲ್ಲ ಎಂಬುದು ಸ್ಪಷ್ಟ.

ಕ್ವಾರಂಟೈನ್‌ ಮಂದಿ ಬೀದಿಗಳಲ್ಲಿ! : ಹೊರ ಪ್ರದೇಶಗಳಿಂದ ಬಂದವರು ಕ್ವಾರಂಟೈನ್‌ಗೆ ಒಳಗಾಗಬೇಕೆಂಬ ಸೂಚನೆಯಿದೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕ್ವಾರಂಟೈನ್‌ ಬಿಟ್ಟು ಸೂಪರ್‌ ಮಾರ್ಕೆಟ್‌, ಮೊಬೈಲ್‌ ರೀಚಾರ್ಜ್‌, ಬಟ್ಟೆ ಅಂಗಡಿಗೆ ಸುತ್ತುವ ವಿಚಾರ ಇದೀಗ ಬೆಳಕಿಗೆ ಬಂದಿವೆ. ಹಾಗಿದ್ದರೆ ಈ ಕೊರೊನಾ ನಿಯಂತ್ರಣ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಲಾರಂಭಿಸಿದೆ.

ಸಮಸ್ಯೆ ಕಟ್ಟಿಟ್ಟ ಬುತ್ತಿ: ಲಾಕ್‌ ಡೌನ್‌ ಸಡಿಲಿಕೆಯಾದರೆ ಕೊರೊನಾ ಸಾಮುದಾಯಿಕವಾಗಿ ಹಬ್ಬುವುದರಲ್ಲಿ ಎರಡು ಮಾತಿಲ್ಲ. ಲಾಕ್‌ ಡೌನ್‌ ವಿನಾಯ್ತಿ ವೇಳೆಯೇ ಜನತೆ ಅಂತರ ಮರೆತು ಓಡಾಡುತ್ತಿದ್ದಾರೆ. ಇನ್ನು ಸಂಪೂರ್ಣ ವಿನಾಯ್ತಿಯಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯ. ಲಾಕ್‌ ಡೌನ್‌ ೪.೦ ಇನ್ನಷ್ಟು ಬಿಗಿಯಾಗಿ , ಸಂಪೂರ್ಣ ರೋಗ  ಹತೋಟಿಗೆ ತರುವ ಕಾರ್ಯ ಆದರೆ ಉತ್ತಮ ಎಂಬ ಅಭಿಪ್ರಾಯ ಸಾಮುದಾಯಿಕ ವಲಯದಿಂದ ಕೇಳಿ ಬರುತ್ತಿದೆ. ಗಡಿಭಾಗಗಳಲ್ಲಿ ʻಚೆಕ್‌ ಪೋಸ್ಟ್‌ʼ ಅಳವಡಿಸಿದ್ದರೂ ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಲ್ಲಿ ಸೋಲುತ್ತಿದೆ. ಅನೇಕ ಒತ್ತಡಗಳ ನಡುವೆ ಅಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಹಾಗಾಗಿ ಅಂತರ್‌ ಜಿಲ್ಲೆಗಳಿಂದ, ಸುಲಭವಾಗಿ ಜಿಲ್ಲೆಗಾಗಮಿಸುತ್ತಿದ್ದಾರೆ. ಸ್ಕ್ರೀನಿಂಗ್‌ ವ್ಯವಸ್ಥೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಸರಕಾರ , ಸಂಬಂಧಪಟ್ಟವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಬೇಕು. ಸಾಮುದಾಯಿಕವಾಗಿ ಸೋಂಕು ಹರಡುವ ಮುನ್ನ ಎಚ್ಚೆತ್ತುಕೊಂಡಲ್ಲಿ ಉತ್ತಮ ಎಂಬ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here