ಲಯನ್ಸ್ ಸೇವಾ ಕಾರ್ಯಗಳಲ್ಲಿ ಭಕ್ತಿಯ ಲೇಪವಿರಲಿ- ಲ| ರೊನಾಲ್ಡ್ ಗೋಮ್ಸ್

0
125


ಮೂಡುಬಿದಿರೆ: ನಾವು ಸೇವಿಸುವ ಆಹಾರದಲ್ಲಿ ಪ್ರಸಾದ, ಹಸಿವಿನಲ್ಲಿ ಉಪವಾಸ, ಕುಡಿಯುವ ನೀರಿನಲ್ಲಿ ತೀರ್ಥ, ಕೇಳುವ ಸಂಗೀತದಲ್ಲಿ ಕೀರ್ತನೆ, ವಾಸವಿರುವ ಮನೆಯಲ್ಲಿ ದೇವಸ್ಥಾನ, ನಮ್ಮ ಚಟುವಟಿಕೆಗಳಲ್ಲಿ ಸೇವೆ, ಭಕ್ತಿಯಲ್ಲಿ ಮಾನವೀಯತೆಯನ್ನು ಕಾಣುವ ಸುಂದರವಾದ ಸಂಸ್ಕøತಿ ನಮ್ಮದಾಗಿದ್ದು ಲಯನ್ಸ್ ಸದಸ್ಯರು ಗೈಯುವ ಸೇವಾ ಕಾರ್ಯಗಳಲ್ಲಿ ಭಕ್ತಿಯ ಲೇಪವಿರಲಿ ಎಂದು ಲಯನ್ಸ್ ಜಿಲ್ಲೆ 317ಡಿಯ ಗವರ್ನರ್ ಲ| ರೊನಾಲ್ಡ್ ಗೋಮ್ಸ್ ಕರೆಯಿತ್ತರು.


ಮೂಡುಬಿದಿರೆ ಲಯನ್ಸ್ ಕ್ಲಬ್‍ಗೆ ತಮ್ಮ ಅಧಿಕೃತ ಭೇಟಿಯ ಸಂದರ್ಭ ಇಲ್ಲಿನ ಹೋಟೆಲ್ ಪಂಚರತ್ನ ಇಂಟರ್‍ನ್ಯಾಶನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರೀತಿಯೊಂದಿಗೆ ಸೇವೆ ಎಂಬ ಜಿಲ್ಲೆ 317ಡಿಯ ಈ ವರ್ಷದ ಧ್ಯೇಯವಾಕ್ಯವನ್ನು ಮೂಡುಬಿದಿರೆ ಲಯನ್ಸ್ ಕ್ಲಬ್ ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಅವರು ಸಂತೃಪ್ತಿ ವ್ಯಕ್ತಪಡಿಸಿದರು.

Advertisement


ಮೂಡುಬಿದಿರೆ ಲಯನ್ಸ್ ಅಧ್ಯಕ್ಷ ಮೆಲ್ವಿನ್ ಡಿಕೋಸ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಗೈದಿರುವ ಹಿರಿಯ ವೈದ್ಯರಾದ ಡಾ| ಪದ್ಮನಾಭ ಉಡುಪ, ಡಾ| ರತ್ನಾಕರ ಶೆಟ್ಟಿ, ಡಾ| ಕೆ.ಎನ್. ಶೆಟ್ಟಿ, ಪ್ರಸೂತಿ ತಜ್ಞೆ ಪುಷ್ಪಾವತಿ ಕರಿಂಜೆ ಅವರನ್ನು ಸನ್ಮಾನಿಸಲಾಯಿತು. ಸೇವಾ ನಿವೃತ್ತಿ ಪಡೆದಿರುವ ಹಿರಿಯ ಲಯನ್ಸ್ ಸದಸ್ಯ ವೆಂಟೇಶ್ ಪ್ರಭು ಮತ್ತು ಸ್ಥಾಪಕ ಸದಸ್ಯ ನಾಗಣ್ಣ ಶೆಟ್ಟಿ-ಮೀರಾ ಟೀಚರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಾಯೋಜಕರೂ ಆಗಿರುವ ಹಿರಿಯ ಲಯನ್ಸ್ ಸದಸ್ಯ ತಿಮ್ಮಯ್ಯ ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಮುನ್ನಾರಾವ್, ಆಲ್ವಿನ್ ಮಿನೇಜಸ್, ವಿನೋದ್ ಡೇಸಾ ಮತ್ತು ಹರೀಶ್ ತಂತ್ರಿ ಸನ್ಮಾನ ಪತ್ರ ವಾಚಿಸಿದರು. ವಿವಿಧ ಸೇವಾ ಕಾರ್ಯಕ್ರಮಗಳಡಿ ಸೂಕ್ತ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳಿಗೆ ಸಹಾಯಧನ ವಿತರಿಸಲಾಯಿತು.


ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್ ಉಪಸ್ಥಿತಿಯಲ್ಲಿ ಉಪ ರಾಜ್ಯಪಾಲ ವಸಂತ ಶೆಟ್ಟಿ, ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ, ಜಿಲ್ಲಾ ಕ್ಯಾಬಿನೆಟ್ ಪದಾಧಿಕಾರಿಗಳಾದ ಗೋವರ್ಧನ್ ಶೆಟ್ಟಿ, ಸಂಜಿತ್ ಶೆಟಿ, ಪ್ರಾಂತೀಯ ಅಧ್ಯಕ್ಷ ರಾಜು ಶೆಟ್ಟ್ಟಿ ಶುಭಾಶಂಸನೆಗೈದರು. ವಲಯ ಅಧ್ಯಕ್ಷ ಜಯರಾಮ ಶೆಟ್ಟಿಗಾರ್, ಹೆರಾಲ್ಡ್ ತಾವ್ರೋ, ನಿಕಟಪೂರ್ವ ಅಧ್ಯಕ್ಷ ಡಾ| ಕೆ. ಎನ್. ಶೆಟ್ಟಿ, ಮೇದಿನಿ ಗೌಡ, ಮುರಳೀಧರನ್ ಮತ್ತಿತರರು ಉಪಸ್ಥಿತರಿದ್ದರು.


ಅಧ್ಯಕ್ಷ ಮೆಲ್ವಿನ್ ಡಿಕೋಸ್ತ ಸ್ವಾಗತಿಸಿದರು. ಕಾರ್ಯದರ್ಶಿ ದಾಮೋದರ ನಾಯಕ್ ವರದಿ ವಾಚಿಸಿದರು. ರೊನಾಲ್ಡ್ ಸೆರಾವೋ ಧ್ವಜ ವಂದನೆ ನೆರವೇರಿಸಿದರು. ಆ್ಯಂಡ್ರ್ಯೂ ಡಿಸೋಜ ನೀತಿ ಸಂಹಿತೆ ಬೋಧಿಸಿದರು. ವಿನೋದ್ ಕುಮಾರ್ ಗವರ್ನರ್ ಅವರನ್ನು ಸಭೆಗೆ ಪರಿಚಯಿಸಿದರು. ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ರಾಜ್ಯಪಾಲರ ಜೊತೆಗೆ ಸ್ಥಳೀಯ ಸದಸ್ಯರು ಇಲ್ಲಿನ ಸ್ಪೂರ್ತಿ ವಿಶೇಷ ಶಾಲೆಗೆ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಅವರಿಗೆ ಲಯನ್ಸ್ ಸಹಾಯ ಧನದ ಚೆಕ್ಕನ್ನು ಹಸ್ತಾಂತರಿಸಿದರು. ಹಲವು ವರ್ಷಗಳಿಂದ ಮೂಡುಬಿದಿರೆಯಲ್ಲಿ ವೈದ್ಯಕೀಯ ಸೇವೆ ನೀಡುತ್ತಾ ಬಂದಿರುವ ಲಯನ್ಸ್ ಸ್ಥಾಪಕ ಸದಸ್ಯ ಲ. ಡಾ| ರಾಮಭಟ್ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಲಾಯಿತು. ಮೂಡುಬಿದಿರೆ ಕೈಕಂಬ ಜಂಕ್ಷನ್‍ನಲ್ಲಿ ಕೆ.ಇ.ಬಿ. ಕಚೇರಿ ಮುಂಭಾಗದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಿರುವ ಸಿಸಿ ಕೆಮರಾವನ್ನು ಜಿಲ್ಲಾ ರಾಜ್ಯಪಾಲರು ಉದ್ಘಾಟಿಸಿದರು. ತದನಂತರ ಕೀರ್ತಿನಗರದ ಲಯನ್ಸ್ ಪಾರ್ಕ್‍ನಲ್ಲಿ ಪ್ರಸಕ್ತ ವರ್ಷ ರೂ. 3.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮೇಲ್ಛಾವಣಿ ವೇದಿಕೆಯನ್ನು ಮತ್ತು ಕಂಪೌಂಡ್ ಕಾಮಗಾರಿಯನ್ನು ಜಿಲ್ಲಾ ರಾಜ್ಯಪಾಲರು ಅನಾವರಣಗೊಳಿಸಿದರು.

LEAVE A REPLY

Please enter your comment!
Please enter your name here