ಲಕ್ಷದೀಪೋತ್ಸವದಲ್ಲಿ ಕರಕುಶಲ ಆಕರ್ಷಣೆ

0
405

ವರದಿ: ಪವಿತ್ರ ಬಿದ್ಕಲ್ಕಟ್ಟೆ
ಚಿತ್ರಗಳು: ಪವನ್ ಎಂ.ಸಿ
ಇವತ್ತಿನ ಸುದ್ದಿ ನಾಳೆಗೆ ರದ್ದಿ, ಹೌದು ಇದು ಸಾಮಾನ್ಯ ಅಭಿಪ್ರಾಯ. ಆದರೆ ಅದೇ ಪತ್ರಿಕೆಗಳನ್ನು ಬಳಸಿ ದಿನನಿತ್ಯದ ಅಗತ್ಯ ಸಾಮಾಗ್ರಿ ರೂಪಿಸಿದರೆ? ಅಂಥ ಕರಕೌಶಲ್ಯ ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಇಂತಹ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದು ಧರ್ಮಸ್ಥಳದ ಲಕ್ಷದೀಪೋತ್ಸವ.
 
 
ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ರುಡ್ಸೆಟ್ ಕೂಡ ಒಂದು. ಇಲ್ಲಿ ಅದೆಷ್ಟೋ ಜನರ ಯಶೋಗಾಥೆಯಿದೆ. ಅನಗತ್ಯವೆಂದು ಎಸೆದ ವಸ್ತುಗಳಲ್ಲೇ ಕಸದಿಂದ ರಸ ತೆಗೆದು ಜೀವನ ನಡೆಸುವ ಅದೆಷ್ಟೋ ಕುಟುಂಬಗಳು ನಮ್ಮ ನಡುವೆಯೇ ಇವೆ. ಇಂಜಿನಿಯರ್ ವೃತ್ತಿ ತ್ಯಜಿಸಿ ಇಂತಹದ್ದೊಂದು ಅಪರೂಪದ ಕಾರ್ಯದಲ್ಲಿ ತೊಡಗಿಸಿಕೊಂಡವರಲ್ಲಿ ಮುಂಚೂಣಿಯಲ್ಲಿರುವವರು ರವಿಶಂಕರ್.
 
 
ಮೂಲತಃ ಮೈಸೂರಿನವರಾದ ಇವರು ಮೆಕಾನಿಕಲ್ ವಿಷಯದಲ್ಲಿ ಬಿ.ಇ ಮುಗಿಸಿ ಸ್ವಲ್ಪ ಕಾಲ ಅದೇ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತದನಂತರ ಬೇಡವೆಂದು ಎಸೆದ ಪತ್ರಿಕೆಗಳಲ್ಲೂ ಜೀವನ ಕಟ್ಟಿಕೊಳ್ಳಬಹುದು ಎಂಬ ಬಹುದೊಡ್ಡ ನಿರೀಕ್ಷೆಯೊಂದಿಗೆ ಹೊಸ ದಾರಿ ಹಿಡಿದರು.
 
 
15 ವರ್ಷಗಳಿಂದ ಹ್ಯಾಂಡ್ಮೇಡ್ ಉತ್ಪನ್ನಗಳನ್ನು ದೇಶದುದ್ದಕ್ಕೂ ಪೂರೈಸುತ್ತಿದ್ದಾರೆ. ಲಾಭಕ್ಕಾಗಿ ಪತ್ರಿಕೆಗಳನ್ನು ಉಪಯೋಗಿಸಿಕೊಂಡವರು ಹಲವರಿದ್ದಾರೆ. ಆದರೆ ಪರಿಸರಕ್ಕಾಗಿ ಪತ್ರಿಕೆಗಳನ್ನು ಉಪಯೋಗಿಸಿಕೊಂಡವರಿಲ್ಲ. ಈ ನಿಟ್ಟಿನ ಹಾದಿ ನನ್ನದು ಎನ್ನುತ್ತಾರೆ.
 
 
ಹ್ಯಾಂಡ್ಮೇಡ್ ಪೇಪರ್, ಪೆನ್ನು, ಫೋಟೋ ಫ್ರೇಮ್, ವಿಸಿಟಿಂಗ್ ಕಾರ್ಡ್ ಕೇಸ್, ಪೆನ್ ಸ್ಟ್ಯಾಂಡ್, ಕ್ಯಾರಿ ಬ್ಯಾಗ್, ಪೇಪರ್ ಫೈಲ್, ಕಾರ್ಡ್ ಬೋಡ್ ಹೀಗೆ ಹತ್ತು ಹಲವು ವಿಧದ ಪೇಪರ್ ಬಳಸಿ ಮಾಡಿದ ವಸ್ತುಗಳನ್ನು ಲಕ್ಷದೀಪೋತ್ಸವದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇವರ ಈ ವಿಭಿನ್ನ ಪ್ರಯತ್ನಕ್ಕಾಗಿ ಕರ್ನಾಟಕದಲ್ಲಿ ಮೊದಲ ಬಾರಿಗೆ 2006ರಲ್ಲಿ ‘ಉದ್ಯಮ ರತ್ನ’ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಇವರದ್ದು.
 
 
ಪ್ರಸ್ತುತ ರುಡ್ಸೆಟ್ ಸಂಸ್ಥೆಯಲ್ಲಿ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು, ಸ್ವಸಾಮಥ್ರ್ಯ ಅಭಿವೃದ್ಧಿ ಕುರಿತಾದ ವಿಷಯಗಳ ಬಗೆಗೆ ಮಾಹಿತಿ ಕಾರ್ಯಾಗಾರವನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ದುಡಿಯುವ ಮನಸೊಂದಿದ್ದರೆ ಮಾರ್ಗಗಳು ಹಲವು ಎಂಬ ದಾರಿಯನ್ನು ಧರ್ಮಸ್ಥಳದ ಭಕ್ತಾದಿಗಳಿಗೆ ತಿಳಿಸುವ ಮೂಲಕ ಪರಿಸರ ಕಾಳಜಿಯ ಜೊತೆಜೊತೆಗೆ ಸ್ವಉದ್ಯೋಗದ ದಾರಿ ತೋರುತ್ತಿದ್ದಾರೆ.

LEAVE A REPLY

Please enter your comment!
Please enter your name here