ರೋಗದ ಚಿಂತನೆಗಿಂತ ರೋಗ ನಿರೋಧಕತೆಗೆ ಹೆಚ್ಚು ಚಿಂತಿಸಿ

0
358

 
ಚಿಗುರು ಅಂಕಣ: ರಾಧಾಕರಷ್ಣ ಹೊಳ್ಳ
ನಮ್ಮ ಜನರೇ ಹೀಗೆ. ದಾಸ್ತಾನು ತೀರುವಳಿ ಮಾರಾಟ, ದರ ಕಡಿತದ ಮಾರಾಟ ಎಂದಾಕ್ಷಣ ಮುಗಿ ಬೀಳುತ್ತಾರೆ. ಒಬ್ಬನನ್ನು ಹಿಂಬಾಲಿಸಿಕೊಂಡು ಮತ್ತೊಬ್ಬ ಹೋಗುವುದೇ ಹೆಚ್ಚು. ಸ್ವಂತಿಕೆಯ ಯೋಚನೆಯಲ್ಲಿ, ಅಥವಾ ತಾರ್ಕಿಕವಾಗಿ ಏನನ್ನು ಮಾಡಲೂ ನಾವು ಅಂಜಿಕೊಳ್ಳುತ್ತೇವೆ. ಕಂಡ ಕಂಡವರ ಮಾತಿಗೆ ಕಿವಿ ಕೊಟ್ಟು ದಾರಿ ತಪ್ಪುತ್ತೇವೆ. ಇದು ಕೊನೆಗೆ ದಾರಿ ಹೋಕರ ಮಾತನ್ನು ಕೇಳುತ್ತಾ ಕತ್ತೆಯನ್ನು ತಲೆಯಲ್ಲಿ ಹೊತ್ತುಕೊಂಡು ಹೋದಂತಾಗುತ್ತದೆ.
 
 
ಈ ವರ್ಷ ಅತಿಯಾದ ಪ್ರಮಾಣದಲ್ಲಿ ಮಳೆ ಬಂದ ಕಾರಣದಿಂದ ಭಾರೀ ಕೊಳೆ ರೋಗ ಭಾಧಿಸಿದೆ. ಜನ ಮಾತಾಡುವುದೇ ಕೊಳೆರೋಗದ ಬಗ್ಗೆ. ಕೆಲವರಲ್ಲಿ ಸಿಂಪರಣೆ ಮಾಡಿಯೂ ಕೊಳೆ ಬಂದಿದೆ. ಕೆಲವೆಡೆ ಜನ ಸಿಗದೆ ಸಿಂಪರಣೆ ಮಾಡಲಾಗದೇ ಕೊಳೆ ಬಂದಿದೆ. ಮೈಲುತುತ್ತೆ + ಸುಣ್ಣ ದ ಬೋರ್ಡೊ ಬಳಸಿದಲ್ಲಿ ಮತ್ತು ರಂಜಕಯುಕ್ತ ಸಸ್ಯ ಟಾನಿಕ್ ಬಳಸಿದಲ್ಲಿಯೂ ಕೊಳೆರೋಗ ಇದೆ. ಕರಾವಳಿಯ ಅಡಿಕೆ ಬೆಳೆಗಾರರೆಲ್ಲರಿಗೂ ಕೊಳೆ ರೋಗ ನಿದ್ದೆಗೆಡಿಸಿದೆ. ಕಂಡ ಕಂಡಕಂಡವರಲ್ಲಿ ರೋಗ ನಿವಾರಣೆಯ ಕುರಿತಾಗಿಯೇ ಚರ್ಚೆ. ಇನ್ನೂ ವಿರಾಮವಿಲ್ಲದೆ ಸುರಿಯುತ್ತಿರುವ ಮಳೆಯ ಮಧ್ಯೆ ರೈತರು ಕೊಳೆ ಬಂದದ್ದನ್ನು ನಿಲ್ಲಿಸುವ ಪ್ರಯತ್ನದಲ್ಲಿದ್ದಾರೆ. ಕೊಳೆ ರೋಗ ನಿವಾರಣೆಗೆ ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಡುವ ಪ್ಲಾಂಟ್ ಟಾನಿಕ್ ಗಳು ಬಂದ ನಂತರ ಜನ ಹೆಚ್ಚು ಚುರುಕಾಗಿದ್ದಾರೆ. ಹೊಸ ಹೊಸದನ್ನು ಪ್ರಯೋಗಿಸಿ ನೊಡುವ ತವಕದಲ್ಲಿದ್ದಾರೆ. ಈ ತವಕವೇ ಅವರನ್ನು ಕತ್ತೆ ಹೊರುವಂತೆ ಆಗದಿದ್ದರೆ ಸಾಕು.!
 
 
ಕೊಳೆ ಬಂದದ್ದನು ನಿವಾರಣೆ ಮಾಡುವ ನಿಟ್ಟಿನಲ್ಲಿ ಈಗ ಹೊಸ ವದಂತಿಗಳು ರೈತ ವರ್ಗದ ಕಿವಿಯನ್ನು ಅರಳಿಸುತ್ತಿದೆ. ಈ ತನಕ ಕೊಳೆಗೆ ಸಿಂಪರಣೆ ಹೇಳುತ್ತಿದ್ದವರು ಈಗ ಬುಡಕ್ಕೆ ಎರೆಯುವುದನ್ನು ಹೇಳುತ್ತಿದ್ದಾರೆ. ಕಳೆದ ಮೂರು ನಾಲ್ಕು ದಿನದಿಂದ ಪ್ಲಾಂಟ್ ಟಾನಿಕ್ (ಬಯೋ ಔಷಧಿ) ಮಾರಾಟ ಮಾಡುವವರಿಗೆ ಪುರುಸೊತ್ತೇ ಇಲ್ಲ. ಅದನ್ನೇ ಬುಡಕ್ಕೆ ಹಾಕಲಿಕ್ಕೆಂದೆ ಸಾಮಾಗ್ರಿ ಒಯ್ಯುತ್ತಿದ್ದಾರೆ. 1 ಲೀ. ಟಾನಿಕ್ ಅನ್ನು 100 ಲೀ. ನೀರಿಗೆ ಬೆರೆಸಿ ಹೊಯ್ಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೇ ಬುಡದಲ್ಲಿ ತೂತು ಮಾಡಿ ಎರೆಯಲಿಕ್ಕೆ ಪ್ರಾರಂಭಿಸಿದ್ದಾರೆ. ಕೆಲವರು ಕ್ಯಾಲ್ಸಿಯಂ + ಬೋರಾನ್ ಒಳಗೊಂಡ ಮಿಶ್ರಣ, ಸೂಕ್ಷ್ಮ ಪೊಷಕಾಂಶ , ಹ್ಯೂಮಿಕ್ಆಮ್ಲ ಮುಂತಾದವುಗಳನ್ನು ಬಳಸಿ ರೋಗ ನಿವಾರಣೆಯಾಗುವುದೇ ಎಂದು ಪರೀಕ್ಷೆ ಮಾಡಲು ಹೊರಟಿದ್ದಾರೆ
ಇದು ಒಂದು ಅವೈಜ್ಞಾನಿಕ ಕ್ರಮವಾಗಿದ್ದು ಪ್ರಾರಂಭದಲ್ಲೇ ಹೇಳಿದಂತೆ ದಾಸ್ತಾನು ತೀರುವಳಿಗೆ ಮಾರಾಟಗಾರರು ಹಾಕಿದ ಯೋಜನೆಯಂತಿದೆ.
 
 
 
ಎಲ್ಲಾ ನಮೂನೆಯ ಈ ರಂಜಕ ಯುಕ್ತ ಸಸ್ಯ ಬಲವರ್ಧಕ ಔಷಧಿಗಳೂ ನೀರಿನಲ್ಲಿ ಕರಗುವ ಗೊಬ್ಬರಗಳಾಗಿದ್ದು ಇದನ್ನು ಸಸ್ಯಗಳು ಅನುಕೂಲಕರ ಸನ್ನಿವೇಶಗಳಲ್ಲಿ ಮಾತ್ರ ತಕ್ಷಣ ಹೀರಿಕೊಳ್ಳುತ್ತವೆ. ಹಿತಮಿತವಾದ ಮಣ್ಣಿನ ತೇವಾಂಶ, ವಾತಾವರಣದ ಬೆಚ್ಚಗಿನ ತಾಪಮಾನ ಮತ್ತು ಬೇರುಗಳು ಪೋಷಕಾಂಶಗಳನ್ನು ಸ್ವೀಕರಿಸುವಷ್ಟು ಸುಸ್ಥಿತಿಯಲ್ಲಿರುವಾಗ ಮಾತ್ರವೇ ಅದರ ಕ್ಷಮತೆ ಉತ್ತಮವಾಗಿರುತ್ತದೆ. ನೀರಿನಲ್ಲಿ ಕರಗುವ ಗೊಬ್ಬರಗಳೆಲ್ಲವೂ ನೀಡಿದ 48 ಗಂಟೆಯೊಳಗೆ ಮೇಲಿನ ಅನುಕೂಲಕರ ಪರಿಸ್ಥಿತಿಗಳಿದ್ದರೆ ಸಸ್ಯಗಳು ಹೀರಿಕೊಳ್ಳುತ್ತವೆ, ನಿಜ. ಆದರೆ ಅದು ಅನುಕೂಲಕರವಾಗಿರದೇ ಇದ್ದಲ್ಲಿ ಅಷ್ಟೇ ವೇಗವಾಗಿ ಇಳಿದು ಹೋಗುತ್ತ್ತೆಯೆಂಬುದೂ ಸತ್ಯ ಆದ ಕಾರಣ ಸಸ್ಯ ಬಲವರ್ಧಕ ಔಷಧಿಗಳನ್ನು ಈ ಮಳೆಗೆ, ನೆಲ ವಿಪರೀತವಾಗಿ ತೇವದಿಂದಿರುವಾಗ, ಮಣ್ಣಿನಲ್ಲಿ ಒರತೆ ಇರುವಾಗ ನೆಲಕ್ಕೆ ಎರೆಯುವುದರಲ್ಲಿ ಯಾವುದೇ ಅರ್ಥವಿಲ್ಲ.
 
 
ಇನ್ನು ನೂರಾರು ವರ್ಷಗಳಿಂದ ಅಡಿಕೆ ಬೇಸಾಯ ಮಾಡುತ್ತಾ ಬಂದಿರುವ ನಮಗೆ ಕೊಳೆ ರೋಗ ಏನು, ಅದು ಹೇಗೆ ಬರುತ್ತದೆ ಎಂಬ ಬಗ್ಗೆ ಜ್ಞಾನ ಸಾಲದು. ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರವನ್ನು ಮುನ್ನೆಚ್ಚರಿಕೆ ಕ್ರಮದಲ್ಲೇ ನಿಯಂತ್ರಿಸಬೇಕೇ ವಿನಹ ಬಂದ ನಂತರ ನಿಯಂತ್ರಿಸುವುದು ಕಷ್ಟ ಸಾಧ್ಯ. ಕೊಳೆರೋಗಕ್ಕೆ ಕಾರಣವಾದ ಫೈಟೋಪ್ಥೆರಾ ಶಿಲೀಂದ್ರದ ಬೀಜಕಗಳು ( sporangia) ಸುಪ್ತಾವಸ್ಥೆಯಲ್ಲಿ ಇರುವ ಸಮಯದಲ್ಲಿ ಅದನ್ನು ನಾಶ ಮಾಡಬೇಕು. ಮಳೆಗಾಲ ಬರುವ ಸಮಯದಲ್ಲಿ ಅದು ಸುಪ್ತಾವಸ್ಥೆ ಕಳೆದು ಮೊಳೆಯಲು ಪ್ರಾರಂಭವಾಗಿ ಬೀಜಾಣುಗಳನ್ನು (sspore) ಹೊರಹಾಕುತ್ತವೆ. ಹೆಚ್ಚು ಮಳೆ ಬೀಳತೊಡಗಿದಾಗ ಕೋಟ್ಯಾಂತರ ಸಂಖ್ಯೆಯಲ್ಲಿ ವಂಶಾಭಿವೃದ್ದಿಯಾಗುತ್ತದೆ. ಪರಾವಲಂಭಿಯಾದ ಈ ಶಿಲೀಂದ್ರವು ನೆಲದಲ್ಲಿ, ಅಡಿಕೆ ಮರದ ಸುಳಿಯಲ್ಲಿ, ಹೋಗೊಂಚಲಿನ ಬುಡದಲ್ಲಿ, ಮರದ ಗಂಟುಗಳಲ್ಲಿ ವಾಸವಾಗಿರುತ್ತವೆ ಮತ್ತು ಅಲ್ಲೇ ಸಂಖ್ಯಾಭಿವೃದ್ದಿಯಾಗಿ ಎಂಟು ಹತ್ತು ವರ್ಷದ ತನಕವೂ ಬದುಕಿರುತ್ತದೆ.
 
 
 
ಬೀಜಕಗಳ ಹಂತದಲ್ಲಿರುವಾಗ ಅದನ್ನು ಹತೋಟಿಮಾಡಲು ಸುಲಭ. ಮೊಳೆತು ಸಂಖ್ಯಾಭಿವೃದ್ದಿಯಾದ ನಂತರ ಅದನ್ನು ನಿಯಂತ್ರಣಕ್ಕೆ ತರುವುದು ಕಷ್ಟ ಸಾಧ್ಯ ಎಂಬುದಾಗಿ ಲೆಸ್ಲಿ ಸಿ ಕೋಲ್ಮನರೇ ಅವರ ಕೊಳೆ ರೋಗ ಹತೋಟಿ ಕ್ರಮ ಎಂಬ ಕನ್ನಡ ಪುಸಕದಲ್ಲಿ ವಿವರವಾಗಿ ಹೇಳಿದ್ದಾರೆ. ಆದ ಕಾರಣ ಅಡಿಕೆ ಬೆಳೆಗಾರರು ಕೊಳೆ ರೋಗಕ್ಕೆ ಮಳೆಗಾಲ ಪ್ರಾರಂಭದ ಹಂತದಲ್ಲೇ ಸಿಂಪರಣೆ ಮಾಡಬೇಕೇ ವಿನಹ ಕಾಯಿ ದೊಡ್ದದಾಗಲು ಕಾಯಬಾರದು. ಉತ್ತಮ ಗುಣಮಟ್ಟದ ಮೈಲುತುತ್ತೆಗೂ ಶಿಲೀಂದ್ರದ ಬೀಜಾಣುವನ್ನು ಮೊಳೆಯದಂತೆ ಮಾಡುವ ಶಕ್ತಿ ಇದೆ ಎಂಬುದು ಸತ್ಯ.
 
 
ಕೊಳೆ ರೋಗ ಬಂದರೆ ಅಡಿಕೆ ಫಸಲು ಮಾತ್ರ ನಷ್ಟವಾಗುವುದಲ್ಲ. ಇದರ ನಂತರದ ಪ್ರತಿಫಲ ಮರವೇ ಸಾಯುವುದು, ಅಥವಾ ಮುಂದಿನ ವರ್ಷ ಫಸಲು ಕ್ಷೀಣಿಸುವುದು. ಮರದ ಹೂಗೊಂಚಲಿನ ಭಾಗ ಮತ್ತು ಸುಳಿ ಭಾಗದಿಂದ ಸಸ್ಯದ ಅಂಗಾಂಶದೊಳಗೆ ಸೇರಿದ ಶಿಲೀಂದ್ರವು ಮರವನ್ನೇ ಕೊಳೆಯಿಸಿ ಸಾಯಿಸುತ್ತವೆ. ಕೊಳೆ ರೋಗ ಬಂದಿದೆ ಎಂದು ನಮಗೆ ಗೊತ್ತಾಗುವುದು ಅಡಿಕೆ ಉದುರಲು ಪ್ರಾರಂಭವಾದ ನಂತರ. ಆದರೆ ಆ ಸಮಯಕ್ಕೆ ಶಿಲೀಂದ್ರವು ಭಾರೀ ಸಂಖ್ಯೆಯಲ್ಲಿ ವೃದ್ದಿಯಾಗಿರುತ್ತವೆ. ಒಂದು ಮರದಲ್ಲಿ ಉದುರಿದೆ ಎಂದರೆ ಅದು ಹಲವು ಮರಗಳ ಕಾಯಿಗೆ ಭಾದಿಸಿದೆ ಎಂದರ್ಥ.
 
 
 
ಶಿಲೀಂದ್ರವು ಎಳೆ ಅಡಿಕೆ ಕಾಯಿಯ ಮೃದು ತೊಗಟೆಯ ಮೂಲಕ ಒಳ ಸೇರಿ ತಿರುಳಿನಲ್ಲಿ ವಂಶಾಭಿವೃದ್ದಿಯಾಗಿ ಮತ್ತೆ ಸಿಪ್ಪೆಯ ಮೂಲಕ ಹೊರಬಂದಾಗ ಕಾಯಿಗಳು ಬೆಂದಂತಾಗಿ ಕೆಳಕ್ಕೆ ಉದುರಿರುತ್ತದೆ. ಸಾರಜನಕ ಅತಿಯಾಗಿರುವ ತೋಟಗಳಲ್ಲಿ ಕೊಳೆರೋಗ ಹೆಚ್ಚು. ಸಸ್ಯ ಆರೋಗ್ಯ, ಮಣ್ಣಿನ ರಸಸಾರ ತಟಸ್ಥೀಕರಣ , ತೋಟದ ನೈರ್ಮಲ್ಯ ಮತ್ತು ಸಮರ್ಪಕ ಪೊಷಕಾಕಂಶ ನಿರ್ವಹಣೆಯಿಂದ ಕೊಳೆರೋಗವನ್ನು ದೂರವಿರಿಸಬಹುದು. ಹೊಸ ಕೊಳೆ ಔಷಧಿಗಳು ಈ ತತ್ವದ ಮೇಲೆ ಕೆಲಸಮಾಡುವಂತವುಗಳಾಗಿವೆ.
 
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here