ರೈತರ ಆತ್ಮವಿಶ್ವಾಸ ಹೆಚ್ಚಸಲಿರುವ ರಾಜ್ಯಮಟ್ಟದ ಕೃಷಿಮೇಳ

0
548

ವರದಿ: ಸುನೀಲ್ ಬೇಕಲ್
ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ನಡೆಯಲಿರುವ 37ನೇ ರಾಜ್ಯಮಟ್ಟದ ಕೃಷಿಮೇಳಕೃಷಿಯಲ್ಲಿ ವೈಜ್ಞಾನಿಕತೆ, ತಂತ್ರಜ್ಞಾನದ ಬಳಕೆ, ವಿವಿಧ ರೀತಿಯ ಕೃಷಿಯ ಅನುಷ್ಠಾನದ ಬಗ್ಗೆ ಮಾಹಿತಿ ಒದಗಿಸುವುದರೊಂದಿಗೆ ಕೃಷಿ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವ ರೈತರ ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದು ಬೈಲಹೊಂಗಲ ಕ್ಷೇತ್ರದ ಶಾಸಕ ವಿಶ್ವನಾಥ ಪಾಟೀಲ್ ಅಭಿಪ್ರಾಯಪಟ್ಟರು.
 
 
 
ಅವರು ಬೈಲಹೊಂಗಲದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 37ನೇ ರಾಜ್ಯಮಟ್ಟದ ಕೃಷಿಮೇಳದ ಪೂರ್ವಬಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
 
 
ರೈತರ ಆರ್ಥಿಕ ಸಂಕಷ್ಠಕ್ಕೆ ಅವರು ಅನುಸರಿಸುತ್ತಿರುವ ಅವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಏಕಬೆಳೆ ಪದ್ದತಿಯೇ ಕಾರಣವಾಗಿದ್ದು ರೈತರು ತಮ್ಮಲ್ಲಿರುವ ಭೂಮಿಯನ್ನು ಪಾಲುಮಾಡಿಕೊಂಡು ವಿವಿಧ ಬೆಳೆಯನ್ನು ಬೆಳೆಸಿದಾಗ ಬೆಲೆ ಏರುಪೇರಿನಿಂದ ಎದುರಾಗುವ ಆರ್ಥಿಕ ಸಂಕಷ್ಠದಿಂದ ಹೊರಬರಬಹುದು. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯು ಅಷ್ಟೇ ಮುಖ್ಯ ಎಂದರು.
 
 
ಸಮಾರಂಭವನ್ನು ಉದ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್ ಮಂಜುನಾಥ್ ಸಾಮಾನ್ಯವಾಗಿ ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಕೇಂದ್ರಗಳು ಮಾತ್ರಕೃಷಿ ಮೇಳಗಳನ್ನು ಆಯೋಜಿಸುತ್ತವೆ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳೆದ 37 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಕೃಷಿ ಮೇಳಗಳನ್ನು ವಿವಿಧ ಪ್ರದೇಶಗಳಲ್ಲಿ ಆಯೋಜಿಸುತ್ತ ಬಂದಿದ್ದು ವರ್ಷದಿಂದೊರ್ಷಕ್ಕೆ ಕೃಷಿ ಮೇಳದ ಆಕರ್ಷಣೆ, ಮಹತ್ವ ಹೆಚ್ಚುತ್ತಲೇ ಸಾಗಿದೆ. ಕೃಷಿಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿರುವ ರೈತರ ಆತ್ಮವಿಶ್ವಾಸ ವೃದ್ಧಿಸುವುದೆ ಕೃಷಿಮೇಳದ ಮೂಲ ಧ್ಯೇಯವಾಗಿದೆ.
 
 
 
ಕೃಷಿಮೇಳದಲ್ಲಿ ನಿರ್ಣಯಿಸಲಾದ ಅನೇಕ ನಿರ್ಣಯಗಳು ಸರಕಾರದ ಮಟ್ಟದಲ್ಲಿ ಅನುಷ್ಠಾನವಾಗಿರುವುದು ಕೃಷಿಮೇಳದ ಮಹತ್ವವನ್ನು ತಿಳಿಸುತ್ತದೆ. ಈ ಭಾಗದ ರೈತರು ಕಳೆದ ಮೂರ್ನಾಲ್ಕು ವರ್ಷಗಳಿಂದ ಬರವನ್ನು ಎದುರಿಸುತ್ತಿದ್ದಾರೆ.ಆದರೆ ಇಲ್ಲಿ ಯಥೇಚ್ಛವಾಗಿ ಬೆಳೆಯಲಾಗುವ ಕಬ್ಬಿನ ಕೃಷಿಗೆ ಅತಿಯಾದ ನೀರು ಪೋಲಾಗುತ್ತಿದೆ. ಹನಿ ನೀರಾವರಿಯಲ್ಲೂ ಕಬ್ಬಿನ ಕೃಷಿಯನ್ನು ಖಖ ಮಾದರಿಯಲ್ಲಿ ಯಶಸ್ವಿಯಾಗಿ ಮಾಡಬಹುದೆಂಬುದನ್ನು ಸಂಸ್ಥೆ ತೋರಿಸಿಕೊಟ್ಟಿದೆ.
 
 
 
ಕಳೆದ 26 ವರ್ಷಗಳ ಹಿಂದೆ ಪೂಜ್ಯರ ಕಲ್ಪನೆಯಂತೆ ರೈತರ ಪ್ರಗತಿಬಂಧು ಗುಂಪುಗಳನ್ನು ರಚಿಸಲು ಪ್ರಾರಂಭಿಸಿದ್ದು ಇಂದು ರಾಜ್ಯಾದ್ಯಂತ 80,000 ಮಿಕ್ಕಿದ ರೈತರ ಸಂಘಗಳಿದ್ದು 3,50,000ರೈತರು ಸದಸ್ಯರಾಗಿರುತ್ತಾರೆ. ಗ್ರಾಮಾಭಿವೃದ್ಧಿ ಯೋಜನೆಯು ರೈತರ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
 
 
ಕೃಷಿ ಮೇಳದಲ್ಲಿ 600ಕ್ಕೂ ಮಿಕ್ಕಿದ ವಿವಿಧ ಮಳಿಗೆಗಳನ್ನು ತೆರೆಯಲಾಗುತ್ತಿದ್ದು ಇದರಲ್ಲಿ ವಿವಿಧ ಇಲಾಖೆಗಳು, ಸ್ವಸಹಾಯ ಸಂಘದ ಸದಸ್ಯರ ಉತ್ಪನ್ನಗಳ ಮಾರಾಟ, ವಸ್ತು ಪ್ರದರ್ಶನ ಮತ್ತು ಮಾರಾಟ, ಯಂತ್ರೋಪಕರಣಗಳ ಪ್ರದರ್ಶನ, ಜಾನುವಾರು ಪ್ರದರ್ಶನ, ಶ್ವಾನ ಪ್ರದರ್ಶನ, ಕೃಷಿ ಸಂಬಂಧಿತ ಮಾದರಿಗಳು ಇತ್ಯಾದಿ ಮಳಿಗೆಗಳನ್ನು ತೆರೆದು ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಕಾರ್ಯವಾಗಲಿದೆ.
 
 
ಮೂರು ದಿನಗಳ ಕಾಲ ನಡೆಯುವ ಕೃಷಿಮೇಳದಲ್ಲಿ ಮೂರು ಲಕ್ಷಕ್ಕೂ ಮಿಕ್ಕಿರೈತರು, ರೈತ ಮಹಿಳೆಯರು ಭಾಗವಹಿಸಲಿದ್ದು ರೈತರಿಗೆ ಅಗತ್ಯವಾದ ವಿವಿಧ ಗೋಷ್ಠಿಗಳು, ಸ್ಥಳೀಯ ಮತ್ತುರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಇತ್ಯಾದಿ ಕಾರ್ಯಕ್ರಮಗಳನ್ನು ಅರ್ಥ ಪೂರ್ಣವಾಗಿ ಆಯೋಜಿಸಲಾಗುವುದು. ಮೇಳಕ್ಕೆ ಬಂದಂತಹ ಪ್ರತಿಯೊಬ್ಬರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯಿರುತ್ತದೆ. ಕೃಷಿ ಮೇಳವು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅತ್ಯಂತ ಪ್ರೀತಿಯ ಕಾರ್ಯಕ್ರಮವಾಗಿದ್ದು ಮೂರು ದಿನಗಳಕಾಲ ಹೆಗ್ಗಡೆಯವರು ಕೃಷಿ ಮೇಳದಲ್ಲಿ ಪಾಲ್ಗೊಂಡು ಕೃಷಿಮೇಳದ ಯಶಸ್ಸಿಗೆ ಮಾರ್ಗದರ್ಶನ ನೀಡುವರು. ಕೃಷಿಮೇಳ ಧರ್ಮಸ್ಥಳದ ಕಾರ್ಯಕ್ರಮವಾಗದೆ ಊರಿನವರ ಕಾರ್ಯಕ್ರಮವಾಗಬೇಕೆಂಬುದು ಪೂಜ್ಯರ ಆಶಯವಾಗಿದ್ದು ಸ್ಥಳೀಯಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ಇಲಾಖೆಗಳು, ಸಾರ್ವಜನಿಕರು, ರೈತಬಾಂಧವರು ಪೂರ್ಣ ಪ್ರಮಾಣದ ಸಹಕಾರ ನೀಡಿ ಮೇಳದಯಶಸ್ಸಿಗೆ ಸಹಕರಿಸಬೇಕೆಂದು ಕೋರಿದರು.
 
 
ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಎನ್.ಜಯಶಂಕರ ಶರ್ಮಕೃಷಿ ಮೇಳದ ಸ್ವಾಗತ ಸಮಿತಿರಚನೆ, ರೂಪುರೇಷೆ, ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಿತ್ತೂರು ಶಾಸಕ ಡಿ.ಬಿ ಇನಾಂದಾರ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಂತೇಶ್ ಕೌಜಲಗಿ, ಪುರಸಭೆ ಅಧ್ಯಕ್ಷ ಬಸವರಾಜಜನ್ಮಟ್ಟಿ, ಕೆ.ಎಂ.ಎಫ್ ನಿರ್ದೇಶಕ ಈಶ್ವರ ಉಳ್ಳೆಗಡ್ಡಿ, ಗಣ್ಯರಾದ ಉಮೇಶ್ ಮುಪ್ಪಯ್ಯನವರ ಮಠ, ಸಿ.ಆರ್ ಪಾಟೀಲ, ಐ.ಎಲ್ ಪಾಟೀಲ, ಅಶೋಕಕುಲಗೋಡ, ನಿಂಗಪ್ಪಚೌಡನ್ನವರ್, ತಾ.ಪಂ.ಅಧ್ಯಕ್ಷೆ ಶೈಲಾಸಿದ್ರಾಮನಿ, ಜಿಲ್ಲಾರೈತ ಮೋರ್ಚಾ ಅಧ್ಯಕ್ಷ ಬಸವನಗೌಡ ಸಿದ್ರಾಮನಿ, ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ನಿರ್ದೇಶಕ ಮನೋಜ್ ಮಿನೇಜಸ್, ಧಾರವಾಡಜಿಲ್ಲಾ ನಿರ್ದೇಶಕ ದಿನೇಶ್ ಎಂ. ಉಪಸ್ಥಿತರಿದ್ದರು. ಜಿಲ್ಲಾ ನಿರ್ದೇಶಕ ಸುರೇಶ್ ಮೊಲಿ ಸ್ವಾಗತಿಸಿ, ಕೃಷಿ ಅಧಿಕಾರಿ ನಾಗೇಶ್ ಬೆಣ್ಣಿ ವಂದಿಸಿದರು. ಯೋಜನಾಧಿಕಾರಿ ನಾಗರಾಜ ನಾಯ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here