ನಮ್ಮ ಪ್ರತಿನಿಧಿ ವರದಿ
ರಾಜ್ಯದಲ್ಲಿ ಮುಂಗಾರು ಮಳೆ ಅರ್ಭಟ ಹೆಚ್ಚಾಗಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದೆ. ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ ತಾಲೂಕಿನಲ್ಲೂ ಭಾರೀ ವರ್ಷಧಾರೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ಗರಿಷ್ಠ 106.4 ಮೀ.ಮೀ ಮಳೆಯಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ 127.7 ಮಿಲಿ.ಲೀಟರ್ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 177.5 ಮಿಲಿ ಲೀಟರ್ ಮಳೆಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ 104.8 ಮಿಲಿ ಲೀಟರ್ ಮಳೆಯಾಗಿದೆ. ಸೋಮವಾರ ಪೇಟೆಯಲ್ಲಿ 100.8 ಮಿಲಿ ಲೀಟರ್ ಮಳೆಯಾಗಿದೆ.
ಭಾಗಮಂಡಲದಲ್ಲಿ ಅತಿಹೆಚ್ಚು ಮಳೆಯಾಗಿದ್ದು, 255.4 ಮಿ.ಮೀ ದಾಖಲಾಗಿದೆ. ಇಲ್ಲಿನ ನದಿ-ಹಳ್ಳ-ತೊರೆಗಳು ತುಂಬಿ ಹರಿಯುತ್ತಿದೆ. ಇಲ್ಲಿನ ಶಾಲೆ-ಕಾಲೇಜುಗಳಿಗೆ ನಿನ್ನೆಯಿಂದಲೇ ರಜೆ ನೀಡಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ವರುಣನ ಅರ್ಭಟ ಹೆಚ್ಚಾಗಿದೆ.
ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಜಲಲ ಜಲಧಾರೆ ಸುರಿಯುತ್ತಿದೆ. ಭಾರೀ ಮಳೆಯಿಂದ ತುಂಗಾ ಜಲಾಶಯ ತಿಂಬು ಹರಿಯುತ್ತಿದೆ. ಜಲಾಶಯ ತುಂಬಿದ್ದರಿಂದ 46 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಕ್ಕೆ ಬಿಡಲಾಗಿದೆ. ಇದರಿಂದ ನದಿ ಪಾತ್ರಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮುನ್ನಚ್ಚೆರಿಗೆ ನೀಡಲಾಗಿದೆ.
ದ.ಕ ಜಿಲ್ಲೆಯಲ್ಲೂ ಧಾರಾಕಾರ ಮಳೆ ಮುಂದುವರಿದಿದೆ. ಇದರಿಂದ ಕುಮಾರಧಾರಾ ನದಿ ಅಪಾಯದಪಟ್ಟ ಮೀರಿ ಹರಿಯುತ್ತಿದೆ. ಕುಮಾರಧಾರಾ ನದಿ ಸೇತುವೆಯೆ ಮೇಲೆ ಹರಿಯುತ್ತಿದೆ. ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇನ್ನೂ ಒಳಹರಿವು ಹೆಚ್ಚಾದಲ್ಲಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ.