ರಾಜ್ಯಾದ್ಯಂತ ಅಮೃತಗರ್ಭ ಆಂದೋಲನ: ರಾಘವೇಂದ್ರಶ್ರೀ

0
231

ಬೆಂಗಳೂರು ಪ್ರತಿನಿಧಿ ವರದಿ
ಸ್ವಾತಂತ್ರ್ಯ ಸೇನಾನಿ ಮಂಗಲ ಪಾಂಡೆಯ ಸ್ಪೂರ್ತಿಯೊಂದಿಗೆ ಏಳುರಾಜ್ಯಗಳಲ್ಲಿ ಸಂಚರಿಸುವ ಮಂಗಲ ಗೋಯಾತ್ರೆ ನಾಳೆಯಿಂದ ಆರಂಭವಾಗಲಿದ್ದು, ಗೋಯಾತ್ರೆಗೆ ಪೂರಕವಾಗಿ ಅಮೃತಪಥ ಹಾಗೂ ಅಮೃತಗರ್ಭ ಆಂದೋಲನವನ್ನು ನಾಡಿನಾದ್ಯಂತ ಕೈಗೊಳ್ಳಲಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
 
 
 
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠ ಶ್ರೀರಾಮಾಶ್ರಮದಲ್ಲಿ ನಡೆದ ರುಮೆನೊಟಮಿ (ಗೋವಿನ ಹೊಟ್ಟೆಯಿಂದ ಪ್ಲ್ಲಾಸ್ಟಿಕ್ ಹೊರ ತೆಗೆಯುವ ಶಸ್ತ್ರಚಿಕಿತ್ಸೆ) ಕುರಿತಾದ ಪತ್ರಿಕಾಗೋಷ್ಟಿಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಅಮೃತಪಥ ಆಂದೋಲನವು ಗೋವು ಸಂಚರಿಸುವ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಹಾಗೂ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯವಾದರೆ, ಅಮೃತಗರ್ಭವು ಪ್ಲಾಸ್ಟಿಕ್ ತಿಂದು ಪ್ರಾಣಾಪಾಯದಲ್ಲಿರುವ ಗೋವುಗಳನ್ನು ರುಮೆನೊಟಮಿ ಶಸ್ತ್ರಚಿಕಿತ್ಸೆಯಮೂಲಕ ಪ್ಲಾಸ್ಟಿಕ್ ಹೊರತೆಗೆದು ರಕ್ಷಿಸುವ ಆಂದೋಲನವಾಗಿದೆ ಎಂದರು.
 
ಗೋರಕ್ಷಣೆ ಎಂದರೆ ಕೇವಲ ಕಸಾಯಿಕಾನೆಗೆ ಹೊಗುವ ಗೋವುಗಳನ್ನು ರಕ್ಷಿಸುವುದು ಮಾತ್ರವಾಗಿರದೇ, ತಳಿ ಸಂರಕ್ಷಣೆ, ಪ್ಲಾಸ್ಟಿಕ್ ನಿಂದ ಗೋವನ್ನು ರಕ್ಷಿಸುವುದು ಇತ್ಯಾದಿಗಳು ಕೂಡ ಗೋರಕ್ಷಣೆಯ ಭಾಗವೇ ಆಗಿದೆ. ಜನಜಾಗೃತಿಯನ್ನು ಮೂಡಿಸುವ ದಿಶೆಯಲ್ಲಿ ಈಗಾಗಲೇ ಗೋಪರಿವರವನ್ನು ರಾಜ್ಯಾದ್ಯಂತ ಸಂಘಟಿಸಲಾಗಿದ್ದು, ಗೋಪ್ರೇಮಿಗಳ ಮೂಲಕ ಗೋವುಗಳಿಗೆ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸಲು ಯೋಜಿಸಲಾಗಿದೆ. ಪರಿಸರವನ್ನು ಸ್ವಚ್ಛವಾಗಿಸುವ ಹೊಣೆ ಸರ್ಕಾರದ್ದಾಗಿದ್ದು, ಗೋವುಗಳಿಗೆ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸಲು ಕೈಜೋಡಿಸುವಂತೆ ವ್ಯವಸ್ಥೆಯ ಮೇಲೆ ಒತ್ತಡ ಹೇರ‍ಲಾಗುವುದು ಎಂದರು.
 
 
 
ಪತ್ರಿಕಾಗೋಷ್ಟಿಯಲ್ಲಿ ಡಾ. ಯತಿರಾಜು, ಡೀನ್ ವೆಟರ್ನರಿ ಕಾಲೇಜು ಮತ್ತು ಅಧ್ಯಕ್ಷ ಐಬಿಎ ಕರ್ನಾಟಕ ಹಾಗೂ ಡಾ. ಎನ್ ಬಿ ಶ್ರೀಧರ್, ಫಾರ್ಮಾಕಾಲಜಿ ಪ್ರೊಫೆಸರ್ ಮತ್ತು ಕಾರ್ಯದರ್ಶಿ ಐಬಿಎ ಕರ್ನಾಟಕ ಇವರುಗಳು ಭಾಗವಹಿಸಿ ರುಮೆನೊಟಮಿ ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಿ, ಶ್ರೀರಾಮಚಂದ್ರಾಪುರಮಠದ ಈ ಆಂದೋಲನಕ್ಕೆ ಐಬಿಎ ಕರ್ನಾಟಕದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
 
 
ಮಂಗಲ ಗೋಯಾತ್ರೆ – ಶುಭಾರಂಭ :
ಸಪ್ತರಾಜ್ಯಗಳಲ್ಲಿ ಸಂಚರಿಸುವ ಮಂಗಲ ಗೋಯಾತ್ರೆ ನವೆಂಬರ್ 8 ರಂದು ಆರಂಭಗೊಳ್ಳಲಿದ್ದು, ಬೆಂಗಳೂರಿನ ರಾಜರಾಜೇಶ್ವರೀ ನಗರದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಸಂತರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ 1008 ಗೋ ಪೂಜೆಯನ್ನು ಆಯೋಜಿಸಲಾಗಿದ್ದು, ಸಾವಿರಾರು ಸಂಖ್ಯೆಯ ಗೋಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.
mata_gomangala-yathre

LEAVE A REPLY

Please enter your comment!
Please enter your name here