ರಾಜ್ಯದ ಎಲ್ಲಾ ಪಶು ಆಸ್ಪತ್ರೆ ಮೇಲ್ದರ್ಜೆಗೆ :ಸಚಿವ ಎ.ಮಂಜು

0
492

ರಾಜ್ಯದಲ್ಲಿನ ಎಲ್ಲಾ ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆ ಸಚಿವರಾದ ಎ.ಮಂಜು ತಿಳಿಸಿದ್ದಾರೆ.
 
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೂಡಿಗೆ ಜರ್ಸಿತಳಿ ಸಂವರ್ಧನಾ ಕ್ಷೇತ್ರ ಇವರ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಮದಲಾಪುರದ ಬ್ಯಾಡಗೊಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕ ಮೇಕೆ ಸಾಕಾಣಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 
ಹಾಲು ಉತ್ಪಾದಕರ ಮೇಕೆ ಸಾಕಾಣಿಕಾ ಘಟಕವನ್ನು ರಾಜ್ಯದಲ್ಲಿ ಪ್ರಥಮವಾಗಿ ಸ್ಥಾಪಿಸಲಾಗುತ್ತಿದೆ. ಇದರ ಉಪಯೋಗ ರೈತರಿಗೆ ತಲುಪಬೇಕು. ರಾಜ್ಯದಲ್ಲಿ ಸುಮಾರು 690 ವೈದ್ಯರ ಕೊರತೆಯಿದ್ದು, 550 ಪಶು ವೈದ್ಯರನ್ನು ನೇರ ನೇಮಕಾತಿ ಮೂಲಕ ಒಂದು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು.
 
ಕೃಷಿ ಜೊತೆಗೆ ಹೈನುಗಾರಿಕೆ ಉಪ ಕಸುಬಾಗಿ ತೊಡಗಿಸಿಕೊಳ್ಳುವುದರಿಂದ ಗ್ರಾಮೀಣ ಜನರ ಆರ್ಥಿಕ ಸಮೃದ್ಧಿಗೆ ಉಪಯುಕ್ತವಾಗುತ್ತದೆ. ಆ ದಿಸೆಯಲ್ಲಿ ಮೇಕೆ ಸಾಕಾಣಿಕೆ ಮತ್ತು ಮೇಕೆ ಹಾಲು ಉತ್ಪಾದಕರ ಘಟಕ ಸ್ಥಾಪನೆಗೆ ಮುಂದಾಗಲಾಗಿದೆ. ಮೇಕೆ ಸಾಕಾಣಿಕೆ ಘಟಕವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವರಾದ ಎ.ಮಂಜು ಹೇಳಿದರು.
 
ವೈಜ್ಞಾನಿಕವಾಗಿ ಮೇಕೆ ಸಾಕಾಣಿಕೆ ಮಾಡಿ ಕೂಡಿಗೆ ಮದಲಾಪುರದ ಹಾಲು ಉತ್ಪಾದಕ ಮೇಕೆ ಸಾಕಾಣಿಕಾ ಘಟಕವನ್ನು ರಾಜ್ಯದಲ್ಲಿ ಮಾದರಿಯಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಸುಮಾರು 22 ಸಾವಿರ ಹೆಚ್ಚು ಜನರಿಗೆ ಸ್ವ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಪಶುಭಾಗ್ಯ ಯೋಜನೆಯಡಿ ಹಸು, ಕುರಿ, ಕೋಳಿ ಸೇರಿದಂತೆ ಹಲವು ಘಟಕಗಳನ್ನು ನೀಡಿ ಉತ್ತೇಜನ ನೀಡಲಾಗಿದೆ. ಹಾಗೆಯೇ 10 ಸಾವಿರ ಮಹಿಳೆಯರಿಗೆ 7500 ರೂ. ಸಹಾಯಧನದಡಿ 2 ಕುರಿ ಅಥವಾ ಆಡು ನೀಡಲಾಗಿದೆ ಎಂದರು.
 
ರಾಜ್ಯದಲ್ಲಿ ಸುಮಾರು 9 ಲಕ್ಷ ಜನರು ಪಶುಪಾಲನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಇದರಿಂದ ಸುಮಾರು 72 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆ ನಿಟ್ಟಿನಲ್ಲಿ ಹಾಲು ಉತ್ಪಾದಕರಿಗೆ 5 ರೂ.ವರೆಗೆ ಸಹಾಯಧನ ನೀಡಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 6 ದಿನವೂ ಮಕ್ಕಳಿಗೆ ಹಾಲು ನೀಡಲು ತೀರ್ಮಾನಿಸಲಾಗಿದೆ ಎಂದು ಎ.ಮಂಜು ತಿಳಿಸಿದರು.
 
ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಆ ನಿಟ್ಟಿನಲ್ಲಿ ಪ್ರತೀ ತಾಲ್ಲೂಕಿಗೆ ಮೇವು ಸಂಗ್ರಹಿಸಲು 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಬರಗಾಲ ಎದುರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ರೈತರ ಜೊತೆ ಸರ್ಕಾರ ಬೆನ್ನುಲುಬಾಗಿದೆ ಎಂದು ಸಚಿವ ಮಂಜು ತಿಳಿಸಿದರು.
 
 
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ಬಹಳ ವರ್ಷಗಳ ಹಿಂದೆ ಹಸುಗಳನ್ನು ಸಾಕಿ ಹಾಲು ಮಾರಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿದ್ದರು. ಆ ನಿಟ್ಟಿನಲ್ಲಿ ಹೈನುಗಾರಿಕೆ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಆಡು ಹಾಲಿಗೆ ಬೇಡಿಕೆ ಇದ್ದು, ಇದರ ಉಪಯುಕ್ತತೆ ಗಮನಿಸಿ ಮೇಕೆ ಸಾಕಾಣಿಕಾ ಘಟಕವನ್ನು ಸ್ಥಾಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ರಾಸುಗಳ ಔಷಧಿ ಪೂರೈಕೆ, ಪಶು ವೈದ್ಯರ ನಿಯೋಜನೆ ಆಗಬೇಕು ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ಮನವಿ ಮಾಡಿದರು.
 
 
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಅವುಗಳು ಕಡುಬಡವರಿಗೆ ತಲುಪುವಂತಾಗಬೇಕು. ಹೈನುಗಾರಿಕೆ ಸ್ವಉದ್ಯೋಗಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
 
 
ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಬಹಳ ವರ್ಷಗಳ ಹಿಂದೆ ಕೂಡಿಗೆಯಿಂದ ಶಿರಂಗಾಲದವರೆಗೆ ರೇಷ್ಮೆ ಬೆಳೆಯುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಮಾಯಾವಾಗುತ್ತಿದೆ. ರೇಷ್ಮೆಗೂಡಿಗೆ 500 ರೂ.ವರೆಗೂ ಬೇಡಿಕೆ ಇದೆ. ಸದ್ಯ 70 ಲಕ್ಷ ರೂ. ಆದಾಯದಲ್ಲಿ ರೇಷ್ಮೆ ಮಾರಾಟ ಮಂಡಳಿ ನಡೆಯುತ್ತಿದೆ. ರೇಷ್ಮೆ ಬೆಳೆಯುವ ನಿಟ್ಟಿನಲ್ಲಿ ಇನ್ನಷ್ಟು ಉತ್ತೇಜನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಲಾಖೆಯ ಆಯುಕ್ತರಾದ ಕೆ.ಎಸ್.ಶೇಖರ್ 5 ಕೋಟಿ ರೂ. ವೆಚ್ಚದಲ್ಲಿ ಮೇಕೆ ಸಾಕಾಣಿಕೆ ಮತ್ತು ಹಾಲು ಸಾಗಾಣಿಕೆಗೆ ಅವಕಾಶ ಮಾಡಲಾಗುತ್ತದೆ. ಇಲ್ಲಿನ ರೈತರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಮೇಕೆ ಸಾಕಾಣಿಕೆ ಹಾಗೂ ಹಾಲು ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತದೆ ಎಂದು ತಿಳಿಸಿದರು.
 
 
ಮೇಕೆ ಹಾಲಿಗೆ ಪ್ರತೀ ಲೀಟರ್ಗೆ 150 ರಿಂದ 200 ರೂ. ಬೇಡಿಕೆ ಇದೆ. ಅಮೃತ ಮಹಲ್ ತಳಿಗಳ ಅಭಿವೃದ್ಧಿ, ನಾಟಿ ಹಸುಗಳ ಸಂರಕ್ಷಣೆ, ದಾವಣಗೆರೆಯಲ್ಲಿ ಪ್ರಯೋಗಾಲಯ ಹೀಗೆ ಹಲವು ಕಾರ್ಯಕ್ರಮಗಳನ್ನು ಪಶುಪಾಲನಾ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಮೇಕೆ ಹಾಲು ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಈ ಘಟಕದಲ್ಲಿ ಇನ್ನೂರು ಆಡುಗಳನ್ನು ಸಾಕಿ ಹಾಲು ಉತ್ಪಾದಿಸಿ, ಸಂಸ್ಕರಿಸಿ ವಿತರಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
 
 
ತಾ.ಪಂ.ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್ ಅವರು ಮಾತನಾಡಿದರು. ಜಿ.ಪಂ.ಸದಸ್ಯರಾದ ಮಂಜುಳಾ, ಪೂರ್ಣಿಮಾ ಗೋಪಾಲ್, ಸವಿತಾ, ಎಸ್.ಎನ್.ರಾಜಾರಾವ್, ತಾ.ಪಂ.ಸದಸ್ಯರಾದ ಗಣೇಶ್ ಇತರರು ಇದ್ದರು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಪರ ನಿರ್ದೇಶಕರಾದ ಡಾ.ಎಂ.ಟಿ. ಮಂಜುನಾಥ್ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸಿ.ನಾಗರಾಜು, ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕ್ಷೇತ್ರದ ಉಪ ನಿರ್ದೇಶಕರಾದ ಡಾ.ಎಂ.ಸಿ.ಪದ್ಮನಾಭ, ಪಶುವೈದ್ಯ ಇಲಾಖೆಯ ಪಾಲಿಕ್ಲಿನಿಕ್ ವಿಭಾಗದ ಡಾ.ಆನಂದ್, ಇತರರು ಇದ್ದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ದೇವದಾಸ್ ಅವರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here