ರಾಜ್ಯದಲ್ಲಿ 12 ಲಕ್ಷ ಮಣ್ಣಿನ ಮಾದರಿ ಪರೀಕ್ಷೆ

0
241

ಬೆಂಗಳೂರು ಪ್ರತಿನಿಧಿ ವರದಿ
ಕೃಷಿ ಇಲಾಖೆ ಸದ್ಯ ರೈತರ 12 ಲಕ್ಷ ಮಣ್ಣಿನ ಮಾದರಿಗಳನ್ನು ಪರೀಕ್ಷೆಗೆ ನಡೆಸಲಾಗಿದ್ದು ಮುಂದಿನ ಆರು ತಿಂಗಳಿನಲ್ಲಿ 16.5 ಲಕ್ಷ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಮಾಡುವ ಗುರಿ ಹೊಂದಿದೆ ಎಂದು ಕೃಷಿ ಸಚಿವ ಬೈರೇಗೌಡ ಅವರು ತಿಳಿಸಿದರು.
 
 
 
ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖೆ ಇವರ ಸಹಯೊಗದಲ್ಲಿ ಇಂದು ಜಿ.ಕೆ.ವಿ.ಕೆ.ಯ ಡಾ. ಬಾಬುರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಣ್ಣು ದಿನಾಚರಣೆ ಮತ್ತು ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ಸಮಸ್ಯೆಗಳಿಗೆ ದೀರ್ಘ ಕಾಲದ ಪರಿಹಾರ ಕೇವಲ ವೈಜ್ಞಾನಿಕ ಕೃಷಿ ಪದ್ದತಿಯು ಅಳವಡಿಕೆಯಿಂದ ಮಾತ್ರ ಸಾಧ್ಯ ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಕೃಷಿ ಪದ್ದತಿಯ ಅಳವಡಿಕೆಯಿಂದ ಇಳುವರಿ ಜಾಸ್ತಿ ಬರುವಂತೆ ಶ್ರಮಿಸಬೇಕು. ವೈಜ್ಞಾನಿಕ ಕೃಷಿಯ ಮುಖ್ಯ ಅಂಶವೆಂದರೆ ಮಣ್ಣಿನ ಗುಟ್ಟಮಟ್ಟ. ಮಣ್ಣು 12 ಅಂಶಗಳ ಪರೀಕ್ಷೆಯ ನಂತರ ಅದು ಸಾಗುವಳಿ ಯೋಗ್ಯ ಮಣ್ಣು ಎಂದು ನಿರ್ಧರಿಸಲಾಗುತ್ತದೆ. ಮಣ್ಣಿನ ಗುಣಮಟ್ಟ ಹೆಚ್ಚಿಸಿದರೆ ರೈತರಿಗೆ ಶೇ 20 ರಷ್ಟು ಜಾಸ್ತಿ ಇಳುವರಿ ಬರುತ್ತದೆ. 2017 ರ ಅಂತ್ಯದೊಳಗೆ ರಾಜ್ಯದ ಎಲ್ಲಾ ರೈತರಿಗೆ ಮಣ್ಣಿನ ಕಾರ್ಡ್ ಪೂರೈಸಲಾಗುವುದು ಎಂದು ತಿಳಿಸಿದರು.
 
 
 
ಎಲ್ಲಾ ಕೃಷಿ ಅಧಿಕಾರಿಗಳಿಗೆ ಟ್ಯಾಬ್ ನೀಡಲಾಗಿದ್ದು, ರೈತರ ಮಣ್ಣು ಪರೀಕ್ಷೆಯ ಮಾಹಿತಿಯನ್ನು ಜಿ.ಪಿ.ಎಸ್. ತಂತ್ರಾಂಶದಿಂದ ಪಡೆಯಲಾಗುವುದು. ಆ ಪ್ರದೇಶಕ್ಕೆ ಹೋದಾಗ ಮಾತ್ರ ಪರೀಕ್ಷೆಯು ಸಫಲಗೊಂಡು ಈ ಕುರಿತು ಸಂದೇಶ ರವಾನೆಯಾಗುತ್ತದೆ. ಇದರಲ್ಲಿ ಯಾವುದೇ ಅಕ್ರಮ ನಡೆಯುವುದಿಲ್ಲ. ಈ ಯೋಜನೆಗೆ ರಾಜ್ಯ ಹಾಗೂ ಕೇಂದ್ರದ ಸುಮಾರು 200 ಕೋಟಿ ವೆಚ್ಚವಾಗಲಿದ್ದು ನಂತರ ರೈತರಿಗೆ ನೀಡುವ ಮಣ್ಣಿನ ಆರೋಗ್ಯ ಚೀಟಿ ವಿತರಿಸಲಾಗುವುದು. ರೈತರಿಂದ ರೈತರಿಗೆ ಎಂಬ ಮಾಹಿತಿ ಕೇಂದ್ರವನ್ನು ಸಹ ತೆರೆಯಲಾಗಿದ್ದು, ತಜ್ಞರು, ಪ್ರಗತಿಪರ ರೈತರು ಕೃಷಿ ಚಟುವಟಿಕೆಗಳನ್ನು ಹಂಚಿಕೊಳ್ಳಲು ಇದು ವೇದಿಕೆಯಾಗಿದೆ ಎಂದವರು ತಿಳಿಸಿದರು.
 
 
 
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಇಲಾಖೆ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ಇತ್ತೀಚಿನ ದಿನಗಳಲ್ಲಿ ರೈತರು ಕಡಿಮೆ ಇಳುವರಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಸಹಾಯಕ್ಕೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹನಿ ನೀರಾವರಿ, ವಿವಿಧ ಕೃಷಿ ತಳಿಗಳ ಅಭಿವೃದ್ಧಿ, ರಸಗೊಬ್ಬರಗಳ ಸಮರ್ಪಕ ಬಳಕೆ, ಬಿತ್ತನೆಯಲ್ಲಿ ಲಘು ಪೋಷಕಾಂಶದ ಬಳಕೆಯಿಂದ ರೈತರು ತಮ್ಮ ಬೆಳೆಗಳ ಇಳುವರಿ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣಮಾಡಿದ ಕೃಷಿ ಇಲಾಖೆ ಆಯುಕ್ತರಾದ ಪಾಂಡುರಂಗ ಬಿ. ನಾಯಕ್, ಪ್ರತಿ ವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇಂದು ಕೃಷಿ ಪದ್ಧತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಹೊಸ ತಂತ್ರಜ್ಞಾನಗಳ ಬಳಕೆಯನ್ನು ಕೃಷಿಕರು ಮಾಡಬೇಕು. ಅಲ್ಲದೆ, ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಸಾಧಕರಿಗೆ ಪ್ರಶಸ್ತಿಯನ್ನು ಸಹ ನೀಡಲಾಗುತ್ತಿದೆ. ರೈತರಿಗೆ 2 ವರ್ಷಗೊಳಿಗೊಮ್ಮೆ ಮಣ್ಣಿನ ಆರೋಗ್ಯ ಚೀಟಿಯನ್ನು ವಿತರಿಸಲಾಗುವುದು ಎಂದರು.
 
 
 
ಅತ್ಯುತ್ತಮ ರೈತ ಪ್ರಶಸ್ತಿ – ಮಂಜುನಾಥ್, ದೇವನಹಳ್ಳಿ ಸೇರಿದಂತೆ 8 ಸಾಧಕರಿಗೆ ವಿವಿಧ ಕೃಷಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕೃಷಿ ಸಂಬಂಧಿತ ಅತ್ಯುತ್ತಮ ಲೇಖನ ಬರೆದ ದ್ವಾರಕನಾಥ್, ಪ್ರದೀಪ್ ಕುಮಾರ್ ಹಾಗೂ ಶಿವರಾಂ ಅವರಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್. ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ. ನಾರಾಯಣಸ್ವಾಮಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ಸಹಾಯಕ ಮಹಾ ನಿರ್ದೇಶಕರಾದ ಡಾ. ಪಿ.ಎನ್. ಪಾಂಡೆ ಹಾಗೂ ಅದೇ ಸಂಸ್ಥೆಯ ಹೆಚ್. ಆರ್.ಡಿ. ಸಹಾಯಕ ಮಹಾ ನಿರ್ದೇಶಕರಾದ ಡಾ. ಎಂ.ಬಿ. ಚೆಟ್ಟಿ, ಕೃಷಿ ಇಲಾಖೆ ನಿರ್ದೇಶಕರಾದ ಬಿ.ವೈ. ಶ್ರೀನಿವಾಸ್ ಉಪಸ್ಥಿತರಿದ್ದರು.
 
 
 
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸುವರ್ಣ ರೈತ ಭವನ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. ಅಲ್ಲದೆ ಕೃಷಿ ಸಾಧಕರು ಪುಸ್ತಕ ಹಾಗೂ ಭಿತ್ತಿಪತ್ರಗಳನ್ನು ಸಚಿವರು ಬಿಡುಗಡೆಗೊಳಿಸಿದರು.

LEAVE A REPLY

Please enter your comment!
Please enter your name here