ರಾಜ್ಯದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ

0
430

ವಿಶೇಷ ಲೇಖನ
ಮಾನವ ಕಂಡುಹಿಡಿದ ವಿಜ್ಞಾನ ವಿಧಾನವೇ ಹೆಣ್ಣುಕುಲಕ್ಕೆ ಶಾಪವಾಗುತ್ತಿದೆ. ಹೌದು ಭ್ರೂಣ ಹತ್ಯೆ ತಡೆಗಟ್ಟಲು ರೂಪಿಸಿಕೊಂಡಿರುವ ಭ್ರೂಣ ಪತ್ತೆ ತಡೆ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
 
 
ರಾಜ್ಯದಲ್ಲಿ ಲಿಂಗಅನುಪಾತದಲ್ಲಿ ಭಾರೀ ವ್ಯತ್ಯಾಸವಾಗಿದೆ ಎಂದು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲಿ(ಎನ್ ಎಫ್ ಎಚ್ ಎಸ್) ಅಘಾತಕಾರಿ ಮಾಹಿತಿಯೊಂದನ್ನು ಹೊರಬಿದ್ದಿದೆ. 2005-2006ರ ಲಿಂಗಾನುಪಾತದಲ್ಲಿ 1000 ಪುರುಷರಿಗೆ 1028 ರಷ್ಟಿದ್ದ ಮಹಿಳೆಯರ ಸಂಖ್ಯೆ 2015-16ನೇ ಸಾಲಿಗೆ 979ಕ್ಕೆ ಕುಸಿದಿದೆ.
 
 
ರಾಜ್ಯದಲ್ಲಿ ಹೆಚ್ಚುತ್ತಿರುವ ಲಿಂಗ ಅಸಮಾನತೆ ಮತ್ತು ಹೆಣ್ಣು ಭ್ರೂಣ ಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 1994ರಲ್ಲಿ “ಜನನ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನಗಳ ದುರುಪಯೋಗದ ನಿಯಂತ್ರಣ ಮತ್ತು ನಿವಾರಣಾ ಅಧಿನಿಯಮ” (ಪ್ರಿ-ಕನ್ಸೆಷ್ಷನ್ ಅಂಡ್ ಪ್ರಿ-ನಟಲ್ ಡಯಾಗ್ನಸ್ಟಿಕ್ ಟೆಕ್ನಿಕ್ಸ್ ಆ್ಯಕ್ಟ್) ಜಾರಿಗೊಳಿಸಲಾಗಿದೆ. ಹಾಗೂ ಇದಕ್ಕೆ 2003ರಲ್ಲಿ ತಿದ್ದುಪಡಿಯನ್ನೂ ಸಹ ತರಲಾಗಿದೆ. ಆದರೆ, ಈ ಕಾಯ್ದೆ ಜಾರಿಯಾಗಿ ಎರಡು ದಶಕಗಳೇ ಕಳೆದರೂ, ಮತ್ತು ತಿದ್ದುಪಡಿ ಮಾಡಿ ದಶಕಗಳೇ ಪೂರೈಸಿದ್ದರೂ, ಪರಿಣಾಮ ಮಾತ್ರ ಶೂನ್ಯವಾಗಿದೆ.
 
 
ಇದಕ್ಕೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವ ಅಗತ್ಯವಿದ್ದು, ಭ್ರೂಣ ಹತ್ಯೆ ತಡೆಗಟ್ಟುವ ಕಾಯ್ದೆಯನ್ನು ಉಲ್ಲಂಘಿಸಿದರೆ ಶಿಕ್ಷೆ ಕುರಿತೂ ಜಾಗೃತಿ ಮೂಡಿಸಬೇಕು. ಅಂತೆಯೇ ಬೇರೆ ರಾಜ್ಯಗಳಲ್ಲಿ ಲಿಂಗತಾರತಮ್ಯವನ್ನು ಸರಿದೂಗಿಸಲು ಕೈಗೊಳ್ಳುತ್ತಿರುವ ಕ್ರಮಗಳನ್ನು ರಾಜ್ಯದಲ್ಲಿಯೂ ಅನುಸರಿಸಬೇಕಾದ ಅಗತ್ಯವಿದೆ.
 
 
ಬೆಂಗಳೂರು-916, ಬೆಳಗಾವಿ-973, ಮೈಸೂರು-985, ತುಮಕೂರು-984, ಕಲಬುರಗಿ-971, ಬಳ್ಳಾರಿ-983, ವಿಜಯಪುರ-960, ದಕ್ಷಿಣ ಕನ್ನಡ-1020, ದಾವಣಗೆರೆ-972, ರಾಯಚೂರು-1000, ಬಾಗಲಕೋಟೆ-989, ಧಾರವಾಡ-971, ಮಂಡ್ಯ-995, ಹಾಸನ-1010, ಶಿವಮೊಗ್ಗ-998, ಬೀದರ್-956, ಚಿತ್ರದುರ್ಗ-974, ಹಾವೇರಿ-950, ಕೋಲಾರ-978, ಉತ್ತರ ಕನ್ನಡ 979, ಕೊಪ್ಪಳ-986, ಚಿಕ್ಕಬಳ್ಳಾಪುರ-972, ಉಡುಪಿ- 1094, ಯಾದಗಿರಿ-989, ಚಿಕ್ಕಮಗಳೂರು-1008, ರಾಮನಗರ-976, ಗದಗ-982, ಚಾಮರಾಜನಗರ-993, ಬೆಂಗಳೂರು ಗ್ರಾಮಾಂತರ-946, ಕೊಡಗು-1019.
 
 
ಹೆಣ್ಣು ಮಕ್ಕಳ ಉಳಿವು, ರಕ್ಷಣೆ ಮತ್ತು ಸಬಲೀಕರಣ ಖಚಿತಪಡಿಸಿಕೊಳ್ಳಲು ಸಂಘಟಿತ ಮತ್ತು ಒಮ್ಮುಖವಾಗಿರುವ ಪ್ರಯತ್ನಗಳು ಅಗತ್ಯವಿದೆ ಅದಕ್ಕಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೊ ಬೇಟಿ ಪಢಾವ್ (BBBP) ಉಪಕ್ರಮವನ್ನು ಘೋಷಿಸಿದೆ.ಬೇಟಿ ಬಚಾವೊ, ಬೇಟಿ ಪಢಾವ್ (BBBP) ಯೋಜನೆಯನ್ನು ಅಕ್ಟೋಬರ್, 2014 ರಲ್ಲಿ ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತ (ಸಿಎಸ್ಆರ್)ಸಮಸ್ಯೆಯನ್ನು ಬಗೆಹರಿಸಲು ಪರಿಚಯಿಸಲಾಯಿತು.

LEAVE A REPLY

Please enter your comment!
Please enter your name here