ರಸ

0
1098

 
ಭೂಮಿಕಾ ಅಂಕಣ: ಅನುಪಮಾ ರಾಘವೇಂದ್ರ
|| ರಸೋ ವೈ ಸಃ ||
|| ವಿಭಾವಾನುಭಾವ ವ್ಯಭಿಚಾರೀ ಸಂಯೋಗಾದ್ರಸನಿಷ್ಪತ್ತಿಃ ||
ವಿಭಾವ, ಅನುಭಾವ, ವ್ಯಭಿಚಾರಿ ಭಾವಗಳ ಸಂಯೋಗದಿಂದ ರಸ ಹುಟ್ಟುತ್ತದೆ. ಯಾವುದು ಅಸ್ವಾದ್ಯತೆ ಅಂದರೆ ಯಾವುದು ರುಚಿಸುವುದೋ ಅದುವೇ ರಸ. ಸವಿಕೊಡುವ ಸ್ಥಾಯೀಭಾವವೇ ರಸ. ರಸಗಳು ಭಾವಗಳಿಂದ ಉತ್ಪನ್ನವಾಗುವುವೋ ಭಾವಗಳು ರಸಗಳಿಂದ ಉತ್ಪನ್ನವಾಗುವುವೋ ಎಂಬುದೊಂದು ಯಕ್ಷಪ್ರಶ್ನೆ. ‘ರಸ ಭಾವಯಂತಿ’ ಎಂದರೆ ರಸಗಳು ಭಾವಗಳಿಂದ ಹುಟ್ಟುತ್ತವೆಯೇ ಹೊರತು ರಸಗಳಿಂದ ಭಾವಗಳು ನಿಷ್ಪತ್ತಿಯಾಗುವುದಿಲ್ಲ. ಭಾವವಿಲ್ಲದೆ ರಸವಿಲ್ಲ, ರಸವಿಲ್ಲದೆ ಭಾವವಿಲ್ಲ. ಅವೆರಡರ ಸಿದ್ಧಿಯೂ ಅಭಿನಯದಲ್ಲಿದೆ.
|| ಶೃಂಗಾರ ಹಾಸ್ಯ ಕರುಣಾ ರೌದ್ರ ವೀರ ಭಯಾನಕಾಃ
ಭೀಭತ್ಸಾದ್ಭುತ ಸಂಜ್ಞೌ ಚೇತ್ಯಷ್ಠೌ ನಾಟ್ಯೇರಸಃ ಸೃತಃ ||
ನಾಟ್ಯ ಶಾಸ್ತ್ರದಲ್ಲಿ ಎಂಟು ರಸಗಳ ವಿವರಣೆ ಇದೆ. ಸ್ಥಾಯಾದಿಭಾವಗಳೊಡನೆ ತಲ್ಲೀನತೆ ಹೊಂದಿರುವುದರಿಂದ ಉದ್ಭವಿಸುವ ರಸಗಳ ಮೂಲ ಮನೋಭಾವಗಳನ್ನು ಅನುಸರಿಸಿ ಶೃಂಗಾರ, ವೀರ, ಬೀಭತ್ಸ, ರೌದ್ರ ರಸಗಳಲ್ಲಿ ಸ್ವಾದಗಳು ಕ್ರಮವಾಗಿ ವಿಕಾ, ವಿಸ್ತಾರ, ಕ್ಷೋಭ, ವಿಕ್ಷೇಪ ಎಂದು ನಾಲ್ಕು ವಿಧದಲ್ಲಿ ವಿಂಗಡಿಸಿದ್ದಾರೆ. ಶೃಂಗಾರ ರಸದ ಸ್ವಾದವು ಚಿತ್ತವಿಕಾಸ ರೂಪದ್ದು, ವೀರರಸದ ಸ್ವಾದವು ಚಿತ್ತ ವಿಸ್ತಾರವಾದದ್ದು, ಬೀಭತ್ಸ ರಸದ ಸ್ವಾದವು ಚಿತ್ತಕ್ಷೋಭ ರೂಪದ್ದು, ರೌದ್ರರಸದ ಸ್ವಾದವು ಚಿತ್ತ ವಿಕ್ಷೇಪ ರೂಪದ್ದು. ಈ ಮೂಲ ನಾಲ್ಕು ರಸಗಳಿಂದಲೇ ಉಳಿದ ನಾಲ್ಕು ರಸಗಳ ಉತ್ಪತ್ತಿಯಾಗಿವೆ. ಶೃಂಗಾರ ರಸದಿಂದ ಹಾಸ್ಯರಸದ ಉತ್ಪತ್ತಿ , ರೌದ್ರರಸದಿಂದಲೇ ಕರುಣ ರಸದ ಉತ್ಪತ್ತಿ, ವೀರರಸದಿಂದ ಅದ್ಭುತ, ಬೀಭತ್ಸದಿಂದ ಭಯಾನಕ ರಸದ ಉತ್ಪತ್ತಿಯಾಗಿ ಎಂಟು ರಸಗಳೆಂದು ವಿಂಗಡಿಸಿ ನಾಟ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಆದರೆ ನಾಟ್ಯಶಾಸ್ತ್ರದ ನಂತರದ ಕಾಲಘಟ್ಟದಲ್ಲಿ ನಾಟ್ಯಪ್ರಯೋಗಕಾರರು ಶಾಂತವನ್ನು ಒಂಭತ್ತನೇ ರಸವಾಗಿ ಪರಿಗಣಿಸಿದರು .
ಒಂದೊಂದು ಸ್ಥಾಯೀ ಭಾವಕ್ಕೂ ಒಂದೊಂದು ರಸ. ಹಾಗೆಯೇ ಒಂದೊಂದು ರಸಕ್ಕೂ ಒಂದೊಂದು ಬಣ್ಣ ಹಾಗೂ ಅಧಿದೇವತೆಗಳು ಇವೆ. ಶೃಂಗಾರ ರಸಕ್ಕೆ ಹಸಿರು ಬಣ್ಣ ಹಾಗೂ ವಿಷ್ಣು ಅಧಿದೇವತೆ, ಹಾಸ್ಯ ರಸಕ್ಕೆ ಬಿಳಿ ಬಣ್ಣ ಹಾಗೂ ಮನ್ಮಥ ಅಧಿದೇವತೆ, ರೌದ್ರ ರಸಕ್ಕೆ ಕೆಂಪು ಬಣ್ಣ ಹಾಗೂ ರುದ್ರ ಅಧಿದೇವತೆ, ವೀರ ರಸಕ್ಕೆ ಕಿತ್ತಲೆ ವರ್ಣ ಹಾಗೂ ಇಂದ್ರ ಅಧಿದೇವತೆ, ಭಯಾನಕ ರಸಕ್ಕೆ ಕಪ್ಪು ಬಣ್ಣ ಹಾಗೂ ಕಾಲ ಅಧಿದೇವತೆ, ಬೀಭತ್ಸ ರಸಕ್ಕೆ ನೀಲಿ ಬಣ್ಣ ಹಾಗೂ ಮಹಾಕಾಲ ಅಧಿದೇವತೆ, ಅದ್ಭುತ ರಸಕ್ಕೆ ಹಳದಿ ಬಣ್ಣ ಹಾಗೂ ಬ್ರಹ್ಮ ಅಧಿದೇವತೆ. ಆದರೆ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಿಲ್ಲದ ಶಾಂತ ರಸಕ್ಕೆ ಬಣ್ಣ ಹಾಗೂ ಅಧಿದೇವತೆಗಳ ವಿವರಣೆ ಇಲ್ಲ.
ರಸಾನುಭವವು ಹೊರಗಿನಿಂದ ಬಂದಂತಹುದಲ್ಲ. ಇದು ಪ್ರೇಕ್ಷಕನಲ್ಲಿಯೇ ಹುದುಗಿರುವ ಆಂತರಿಕ ಅನುಭವಗಳ ಆವಿಷ್ಕಾರ. ನರ್ತಕನು ಪ್ರಕೃತಿಯಲ್ಲಿರುವ ಸತ್ಯವನ್ನು ಪರಿಷ್ಕಾರಗೊಳಿಸಿ, ಅನುಕರಣೆ ಮಾಡುತ್ತಾ ಪುನರ್ ಸೃಷ್ಟಿಸುವ ಉದ್ದೇಶದಿಂದ ಭಾವವಿಭಾವಾದಿ ಸಂಚಾರಿಭಾವಗಳಿಂದ ಸ್ಥಾಯೀಭಾವವನ್ನು ಅಭಿನಯಿಸಿದಾಗ ಅವುಗಳು ಸಹೃದಯ ಪ್ರೇಕ್ಷಕನಲ್ಲಿ ಸುಪ್ತವಾಗಿರುವ ಭಾವಗಳನ್ನು ಎಚ್ಚರಗೊಳಿಸುತ್ತದೆ. ಎಚ್ಚರಗೊಂಡ ಭಾವಗಳನ್ನು ಹೃತ್ಪೂರ್ವಕವಾಗಿ ನಟನ ಜೊತೆ ಅನುಭವಿಸಿದ ಪ್ರೇಕ್ಷಕ ವೈಯಕ್ತಿಕವಾದ ಪರಿಧಿಯಿಂದ ವಿಮೋಚನೆ ಹೊಂದಿ, ಕ್ರೂರಾದಿ ಭಾವಗಳು ಶೋಧಿತಗೊಂಡು ಸಮಾಧಾನ ಮನಸ್ಸನ್ನೂ, ವಿಲಕ್ಷಣವಾದ ಶಾಂತಿಯನ್ನೂ ಪಡೆಯಲು ಸಾಧ್ಯ. ಕಲಾವಿದನೊಂದಿಗೆ ಹೃದಯ ಸಂವಾದ ನಡೆಸಲು ಸಾಧ್ಯ. ಇದನ್ನೇ ಅಭಿನವಗುಪ್ತಪಾದನು ಈ ರೀತಿಯಾಗಿ ಸೂತ್ರೀಕರಿಸಿದ್ದಾನೆ.
|| ಯಥೋ ಹೃದಯ ಸಂವಾದಿ ತಸ್ಯಭಾವೋ ರಸೋದ್ಭವ
ಶರೀರಂ ವ್ಯಾಪ್ಯತೆ ತೆನ ಶುಷ್ಕಂ ಕಾಷ್ಠಮಿವಾಗ್ನಿನಾ ||
ಒಣಗಿದ ಮರದಲ್ಲಿ ಬೆಂಕಿಯು ಆವರಿಸುವಂತೆ ಸಮಾಧಾನ ಮನಸ್ಸಿನ ಸಹೃದಯಿಯನ್ನು ರಸವು ವ್ಯಾಪಿಸುತ್ತದೆ. ಹೃದಯಕ್ಕೆ ಸಂವಾದಿಯಾದುದರ ಆಸ್ವಾದತೆಯಿಂದ ರಸ ಅನುಭವಕ್ಕೆ ಬರುತ್ತದೆ. ಸಹೃದಯ ಪ್ರೇಕ್ಷಕನಲ್ಲಿ ಸುಪ್ತವಾಗಿಯೂ ವಾಸನಾರೂಪವಾಗಿಯೂ ಇರುವ ಭಾವವು ಉದ್ದೀಪನಗೊಂಡು, ಅನುಭವಿತಗೊಂಡು, ವಿರೇಚನ ಹೊಂದಿ, ಶೋಧನೆಗೊಳಗಾಗಿ ಸಾಧಾರಣೀಕರಣಗೊಂಡು ಸಮಾಧಾನ ಹೊಂದಿ ಆಸ್ವಾದನೆಗೊಳಗಾದಾಗ ಅನುಭವ ಜನ್ಯ ಆನಂದ ರಸ. ಭಾವಗಳಲ್ಲಿ ತಲ್ಲೀನತೆ ಹೊಂದುವುದರಿಂದ ಸಹೃದಯರಲ್ಲಿ ಆತ್ಮಾನಂದ ಉದ್ಭವಿಸುವುದೇ ಸ್ವಾದ. ಈ ಸ್ವಾದವೇ ರಸ . ಇದು ತಾತ್ವಿಕವಾದ ಸುಖಾನುಭವ ಅಲ್ಲ . ಪರಬ್ರಹ್ಮಸ್ವಾದಕ್ಕೆ ಸದೃಶವಾದದ್ದು. ಬ್ರಹ್ಮಸ್ವಾದದಲ್ಲಿ ಮನುಷ್ಯನು ಸಮಾಧಿಯಿಂದ ಹಿಂದಕ್ಕೆ ಬರದೆ ಅದರಲ್ಲೇ ಲೀನನಾಗುತ್ತಾನೆ. ಆದರೆ ಇಲ್ಲಿ ಹರ್ಷಹೊಂದಿ ಪುನಃ ತಾನು ಹಿಂದಿದ್ದ ಸಾಧಾರಣ ಸ್ಥಿತಿಗೆ ಮರಳುತ್ತಾನೆ.
ಅನುಪಮಾ ರಾಘವೇಂದ್ರ
[email protected]

LEAVE A REPLY

Please enter your comment!
Please enter your name here