ಯೋಗ ಮತ್ತು ವಿದೇಶ ಪ್ರಯಾಣದಿಂದ ಬೆಲೆಯೇರಿಕೆ ನಿಲ್ಲುವುದಿಲ್ಲ

0
225

 
ವರದಿ-ಚಿತ್ರ: ವಿ.ಎಸ್ ಬೇರಿಂಜ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇದ್ದರೂ ಅವರನ್ನು ಲೆಕ್ಕಿಸದೆ ಸದಾ ವಿದೇಶದಲ್ಲಿರುವ ನರೇಂದ್ರ ಮೋದಿಯವರು ಯೋಗದ ಬಗ್ಗೆ ನೀಡುತ್ತಿರುವ ಪ್ರಚಾರದಿಂದ ಬೆಲೆಯೇರಿಕೆ ಕಡಿಮೆಯಾಗುವುದಿಲ್ಲ. ಈ ದೇಶದ ಜನರ ಮೂಲಭೂತ ಸಮಸ್ಯೆಗಳತ್ತ ಗಮನಹರಿಸದೆ ಹಿಂದಿನ ಕೇಂದ್ರ ಸರಕಾರಗಳು ಜ್ಯಾರಿಮಾಡಿದ್ದ ಯೋಜನೆಗಳನ್ನೇ ಹೆಸರು ಬದಲಾಯಿಸಿ ತನ್ನದೆಂದು ಹೇಳಿಕೊಳ್ಳುತ್ತಿರುವ ಈಗಿನ ಬಿಜೆಪಿ ನೇತೃತ್ವದ ಕೇಂದ್ರದ ಎನ್ ಡಿಎ ಸರಕಾರದ ಸಾಧನೆ ಶೂನ್ಯವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಆರೋಪಿಸಿದರು.
 
 
 
ಇಂದು ಮಂಗಳೂರಿನ ಕೆಬಿಇಎ ಬೇಂಕ್ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್ (ಎಐಟಿಯುಸಿ)ಯ 80ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
 
 
 
ಮೋದಿಯವರ ವಿದೇಶ ಪ್ರಯಾಣಕ್ಕಾಗಿ ಅಮೇರಿಕಾದ ಬರಾಕ್ ಒಬಾಮ ಉಪಯೋಗಿಸುವ ಮಾದರಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ಸುಸಜ್ಜಿತ ಐಶಾರಾಮಿ ವಿಮಾನ ತಯಾರಾಗುತ್ತಿದ್ದು ಆ ಮೂಲಕ ಸರಕಾರದ ಬೊಕ್ಕಸದ ಹಣವನ್ನು ಲೂಟಿಗೈಯ್ಯಲಾಗುತ್ತಿದೆ. ಭಾಷಣದಲ್ಲಿ ನಿಪುಣರಾಗಿರುವ ಪ್ರಧಾನ ಮಂತ್ರಿಯವರು ಸುಳ್ಳನ್ನು ಸತ್ಯವಾಗಿಸುವ ಪ್ರಚಾರಪ್ರಿಯರಾಗಿದ್ದಾರೆ. ಆದರೆ ಈ ಎಲ್ಲಾ ಪ್ರಚಾರದಿಂದ, ಯೋಗ ಮತ್ತು ವಿದೇಶ ಪ್ರಯಾಣದಿಂದ ಬೆಲೆಯೇರಿಕೆ ನಿಲ್ಲುವುದಿಲ್ಲ, ಜನರ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದಿದ್ದಾರೆ.
 
 
ರೂಪಾಯಿ 1000 ವರೆಗೆ ಪಿಂಚಣಿಯು ಎಐಟಿಯುಸಿ ಕಾರ್ಮಿಕರ ಹೋರಾಟದ ಫಲವೇ ಹೊರತು ಮೋದಿಯ ಕೊಡುಗೆಯಲ್ಲ. ಆದರೆ ಎಪ್ರಿಲ್ನಿಂದ ಜ್ಯಾರಿಯಾಗಬೇಕಾದ ಪಿಂಚಣಿಯನ್ನು ಸೆಪ್ಟೆಂಬರ್ ನಲ್ಲಿ ಜ್ಯಾರಿ ಮಾಡಿ ಐದು ತಿಂಗಳ ಪಿಂಚಣಿಯನ್ನು ವಂಚಿಸಿದ್ದು ಮೋದಿಯ ಕೊಡುಗೆ. ‘ಕೋಟ್ಪಾ’ ಕಾಯ್ದೆಯನ್ನು ಜ್ಯಾರಿ ಮಾಡಿ ಬೀಡಿ ಕೈಗಾರಿಕೆಯನ್ನು ಮುಚ್ಚಲು ಹೊರಟ ಕೇಂದ್ರದ ಬಿಜೆಪಿ ಹಾಗೂ 2015-16ನೇ ಸಾಲಿನ ತುಟ್ಟಭತ್ತೆಯನ್ನು ಕಾರ್ಮಿಕರಿಗೆ ಪಾವತಿಸದಂತೆ ಮಾಲಕರಿಗೆ ವಿನಾಯಿತಿ ನೀಡಿದ ಕಾಂಗ್ರಸ್ ಸರಕಾರವನ್ನು ಕಾರ್ಮಿಕರು ತಿರಸ್ಕರಿಸಬೇಕೆಂದು ಅವರು ಕರೆ ನೀಡಿದರು.
 
 
ಸಭೆಯ ಅಧ್ಯಕ್ಷತೆಯನ್ನು ಯೂನಿಯನ್ ಅಧ್ಯಕ್ಷೆ ಸುಲೋಚನ ವಹಿಸಿದ್ದರು. ಮಾಜಿ ಕಾರ್ಪೊರೇಟರ್ ಬಿ.ಕೆ ಕೃಷ್ಣಪ್ಪ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹೆಚ್.ವಿ ರಾವ್, ಎಸ್. ಚಂದಪ್ಪ ಅಂಚನ್, ಸುರೇಶ್ ಕುಮಾರ್, ಎ. ಪ್ರಭಾಕರ್ ರಾವ್ ಸಾಂದರ್ಭಿಕವಾಗಿ ಮಾತನಾಡಿದರು. ಬೀಡಿ ಕೈಗಾರಿಕೆ, ಕಾಮಿಕರು ಹಾಗೂ ಜನಸಾಮಾನ್ಯರಿಗೆ ಸಂಬಂಧಿಸಿ ಹಲವಾರು ನಿರ್ಣಯಗಳನ್ನು ಮಹಾಸಭೆ ಅಂಗೀಕರಿಸಿದ್ದು ಸಂಬಂಧಿಸಿದ ಇಲಾಖೆಗೆ ಕಳುಹಿಸಲು ತೀರ್ಮಾನಿಸಲಾಯಿತು. ಗತ ವರ್ಷದ ವರದಿ ಮತ್ತು ಲೆಕ್ಕ ಪತ್ರವನ್ನು ಮಹಾಸಭೆ ಸರ್ವಾನುಮತದಿಂದ ಅಂಗೀಕರಿಸಿತು.
 
 
ಪದಾಧಿಕಾರಿಗಳು: ಮುಂದಿನ ಅವಧಿಗೆ 59 ಜನರ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸುಲೋಚನ ಕವತ್ತಾರು, ಉಪಾಧ್ಯಕ್ಷರುಗಳಾಗಿ ಎಂ. ಶಿವಪ್ಪ ಕೋಟ್ಯಾನ್, ಗುಣವತಿ ಚಿತ್ರಾಪುರ, ಸೆಲಿಮತ್ ಪಂಜಿಮೊಗರು, ಕಾರ್ಯದರ್ಶಿಯಾಗಿ ವಿ.ಎಸ್. ಬೇರಿಂಜ, ಕೋಶಾದಿಕಾರಿಯಾಗಿ ಎಂ. ಕರುಣಾಕರ್, ಜೊತೆ ಕಾರ್ಯದರ್ಶಿಗಳಾಗಿ ಚಿತ್ರಾಕ್ಷಿ ಕುಂಜತ್ತ್ಬೈಲ್, ರೂಪಾ ಸಿದ್ದಾರ್ಥನಗರ, ದಯಾವತಿ ಕರ್ನೆರೆ- ಇವರುಗಳನ್ನು ಆರಿಸಲಾಯಿತು.

LEAVE A REPLY

Please enter your comment!
Please enter your name here