ಯುಗಾದಿಯ ವಿಶೇಷ ರುಚಿಗಳು…

0
953

ವಾರ್ತೆ ರೆಸಿಪಿ
ಯುಗಾದಿ ಹಬ್ಬದ ವಿಶೇಷ ಅಡುಗೆಯೆಂದರೆ ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣದಲ್ಲಿ ಮಾಡುವರು.ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು.
ಯುಗಾದಿಯ ವಿಶೇಷ ಅಡುಗೆಗಳು:
ಬೇಳೆ ಒಬ್ಬಟ್ಟು
ಬೇಕಾಗುವ ಸಾಮಾಗ್ರಿಗಳು: ಮೈದಾಹಿಟ್ಟ 250ಗ್ರಾಂ., ಬೆಲ್ಲ 200ಗ್ರಾಂ., ಬೆಣ್ಣೆ 50ಗ್ರಾಂ., ಎಣ್ಣೆ 250ಗ್ರಾಂ., ಗೋಧಿಹಿಟ್ಟು 250 ಗ್ರಾಂ., ಏಲಕ್ಕಿ ಪುಡಿ 2 ಚಮಚ, ಅರಶಿನ 1 ಚಮಚ, ತೊಗರಿಬೇಳೆ 250ಗ್ರಾಂ.
ತಯಾರಿಸುವ ವಿಧಾನ: ಒಂದು ಸ್ಟೀಲ್ ಪಾತ್ರೆಯಲ್ಲಿ ತೊಗರಿಬೇಳೆ, ನೀರು ಹಾಕಿ ಪಾತ್ರೆಯನ್ನು ಒಲೆಯ ಮೇಲಿಟ್ಟು ಕಾಯಿಸಬೇಕು. ಬೇಳೆ ಬೆಂದ ಮೇಲೆ ಬೆಲ್ಲದ ಪುಡಿ, ಏಲಕ್ಕಿ ಪುಡಿ ಹಾಗೂ ಅರಸಿನ ಹಾಕಬೇಕು. ಮಿಶ್ರಣ ಗಟ್ಟಿಯಾಗುತ್ತಿದ್ದಂತೆಯೇ ಪಾತ್ರೆಯನ್ನು ಒಲೆಯಿಂದ ಇಳಿಸಿ ಆರಲು ಬಿಡಿ. ಮೈದಾಹಿಟ್ಟು, ಗೋಧಿಹಿಟ್ಟು ಮತ್ತು ಬೆಣ್ಣೆಯನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಬೇಕು. ನೀರು ಹಾಕಿ ಚೆನ್ನಾಗಿ ಕಲೆಸಿ ಮಿಶ್ರಣವನ್ನು ನಯವಾದ ಹಿಟ್ಟನ್ನಾಗಿ ಮಾಡಬೇಕು. ಈ ಹಿಟ್ಟಿನಿಂದ ಚಪಾತಿ ಉಂಡೆಗಳನ್ನು ಮಾಡಬೇಕು. ಈ ಉಂಡೆಯನ್ನು ಎಣ್ಣೆಯಲ್ಲಿ ನೆನೆಸಿ. ನಂತರ ಒಂದೊಂದೇ ಉಂಡೆಯನ್ನು ತೆಗೆದು ಅದುಮಿ ಅದರೊಳಗೆ ಬೇಳೆ-ಬೆಲ್ಲದ ಹೂರಣವನ್ನು ತುಂಬಬೇಕು. ಮತ್ತೆ ಉಂಡೆಗಳನ್ನು ಗುಂಡಗೆ ಹೊಸತಿರಿ. ಲಟ್ಟಣಿಗೆ ಮಣೆಯ ಮೇಲೆ ಒಂದೊಂದೇ ಉಂಡೆಗಳನ್ನಿಟ್ಟು ಗುಂಡಗೆ ಅಗಲವಾಗಿ ಲಟ್ಟಿಸಿ. ಒಬ್ಬಟ್ಟು ತವಾವನ್ನು ಗ್ಯಾಸ್ ಒಲೆಯ ಇಟ್ಟು ಕಾಯಿಸಿ ಒಬ್ಬಟ್ಟಿನ ಹಾಳೆಗಳನ್ನು ಹರವಿ ಎರಡೂ ಕಡೆ ಬೇಯಿಸಿ. ನಂತರ ತಟ್ಟೆಗೆ ಹಾಕಿ ಹಾಲು-ತುಪ್ಪದೊಂದಿದೆ ಬಡಿಸಿ.
 
 
ಕೊಬ್ಬರಿ ಹೂರಣದ ಒಬ್ಬಟ್ಟು
ಬೇಕಾಗುವ ಸಾಮಾಗ್ರಿಗಳು: ಮೈದಾಹಿಟ್ಟು 50ಗ್ರಾಂ., ಬೆಲ್ಲ300ಗ್ರಾಂ., ಬೆಣ್ಣೆ 50ಗ್ರಾಂ., ಅರಶಿನ 3 ಚಮಚ, ಹಸಿಕೊಬ್ಬರಿ ತುರಿ 250ಗ್ರಾಂ., ಏಲಕ್ಕಿ ಪುಡಿ 2 ಚಮಚ, ಎಣ್ಣೆ 250ಗ್ರಾಂ., ಗಸಗಸೆ 10ಗ್ರಾಂ.
ತಯಾರಿಸುವ ವಿಧಾನ: ಹಸಿಕೊಬ್ಬರಿ ಏಲಕ್ಕಿ ಪುಡಿ, ಬೆಣ್ಣೆ ಬೆಲ್ಲದ ಪುಡಿ ಇವುಗಳನ್ನು ಒಂದು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಕಾಯಿಸಬೇಕು. 2-3 ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ. ಗಟ್ಟಿಯಾದ ನಂತರ ಹೂರಣ ತಯಾರಾದ ಮೇಲೆ ಪಾತ್ರೆಯನ್ನು ಒಲೆಯಿಂದ ಇಳಿಸಿ. ಮಿಶ್ರಣ ಸ್ವಲ್ಪ ಆರಿದ ಮೇಲೆ ಮೂದಾಹಿಟ್ಟು, ಅರಶಿನ, ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಕಲೆಸುವಾಗ ಉಳಿದ ಎಣ್ಣೆ ಹಾಕಿ. ಹಿಟ್ಟನ್ನು ಚೆನ್ನಾಗಿ ನಾದಿದ ಬಳಿಕ 20 ನಿಮಿಷ ಹಾಗೆ ಬಿಡಿ. ನಂತರ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿ. ಲಟ್ಟಣಿಯಿಂದ ತೆಳುವಾಗಿ ಲಟ್ಟಿಸಿ ಉದುರಿಸಿ. ಕಾವಲಿ ಅಥವಾ ತವಾವನ್ನು ಒಲೆಯ ಮೇಲೆ ಇಟ್ಟು ಕಾಯಿಸಿ. ಒಬ್ಬಟ್ಟನ್ನು ಅದರ ಮೇಲೆ ಹಾಕಿ ಎರಡೂ ಕಡೆ ಬೇಯಿಸಿ. ನಂತರ ತಟ್ಟೆಗಳಿಗೆ ಹಾಕಿ ಬಿಸಿ ಇರುವಾಗಲೇ ತಿನ್ನಿರಿ.
 
ಸಕ್ಕರೆ ಒಬ್ಬಟ್ಟು:
ಬೇಕಾಗುವ ಸಾಮಾಗ್ರಿಗಳು: ಮೈದಾಹಿಟ್ಟು 500ಗ್ರಾಂ., ಸಕ್ಕರೆ 350ಗ್ರಾಂ., ಏಲಕ್ಕಿ ಪುಡಿ 2 ಚಮಚ, ಗೋಡಂಬಿ ಪುಡಿ 10ಗ್ರಾಂ., ಪಚ್ಚಕರ್ಪೂರ 1 ಚಮಚ, ಬೆಣ್ಣೆ 50ಗ್ರಾಂ., ಎಣ್ಣೆ 250ಗ್ರಾಂ., ಒಣಕೊಬ್ಬರಿ ತುರಿ 100ಗ್ರಾಂ.
ತಯಾರಿಸುವ ವಿಧಾನ: ಒಂದು ಅಗಲವಾದ ಪಾತ್ರೆಯಲ್ಲಿ ಏಲಕ್ಕಿ ಪುಡಿ, ಪಚ್ಚಕರ್ಪೂರ, ಸಕ್ಕರೆ, ನೀರು, ಬೆಣ್ಣೆ, ಗೋಡಂಬಿ ಪುಡಿ ಹಾಕಿ ಪಾತ್ರೆಯಲ್ಲಿ ಒಲೆಯ ಮೇಲಿಟ್ಟು ಕಾಯಿಸಿ. ಕುದಿಯುವಾಗ ಒಣಕೊಬ್ಬರಿ ತುರಿ ಹಾಕಿ, ಸಕ್ಕರೆ ಪಾಕ ಸಿದ್ಧವಾದ ಮೇಲೆ ಪಾತ್ರೆಯನ್ನು ಒಲೆಯಿಂದ ಇಳಿಸಿ. ಆರಿದ ನಂತರ ಅದಕ್ಕೆ ಮೈದಾಹಿಟ್ಟು, ಎಣ್ಣೆ ಹಾಕಿ ಮಿಶ್ರಣವನ್ನು ಚೆನ್ನಾಗಿ ಕಲೆಸಿ. ಹಿಟ್ಟು ಮಾಡಿದ ಮೇಲೆ ಹಲವಾರು ಉಂಡೆಗಳನ್ನು ಮಾಡಿ. ಲಟ್ಟಣಿಗೆಯಿಂದ ಅಗಲವಾದ ಲಟ್ಟಿಸಿ ಬಿಸಿ ಕಾವಲಿ ಮೇಲೆ ಹಾಕಿ ಎರಡೂ ಕಡೆ ಬೇಯಿಸಿ. ಸಕ್ಕರೆ ಒಬ್ಬಟ್ಟು ಗರಿಗರಿಯಾದ ನಂತರ ಕಾವಲಿಯಿಂದ ತೆಗೆದು ತಟ್ಟೆಗೆ ಹಾಕಿ.
 
ಬೇಳೆ ಹೂರಣದ ಸಾರು
ಬೇಕಾಗುವ ಪದಾರ್ಥಗಳು: ಬೇಳೆ ಹೂರಣ ಬೇಯಿಸಿದ ನೀರು 500ಗ್ರಾಂ, ಜೀರಿಗೆ 500ಗ್ರಾಂ., ಕರಿಬೇವು 4 ಎಸಳು, ಶುಂಠಿ 1ಚೂರು, ಉಪ್ಪು ರುಚಿಗೆ, ರಸಂಪುಡಿ 2 ಚಮಚ, ಎಣ್ಣೆ 2 ಚಮಚ, ಇಂಗು ಸ್ವಲ್ಪ, ಸಾಸಿವೆ 1 ಚಮಚ.
ತಯಾರಿಸುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಕಾಯಿಸಿ. ಸಾಸಿವೆ ಒಗ್ಗರಣೆ ಮಾಡಿ, ಜೀರಿಗೆ ಹಾಕಿ ಹುರಿಯಿರಿ.ಕರಿಬೇವು ಕರಿಯಿರಿ. ಹೂರಣದ ನೀರು ಹಾಕಿ ಉಪ್ಪು, ರಸಂ ಪುಡಿ ಹಾಕಿ ಕುದಿಸಿ. ಇಂಗು, ಶುಂಠಿಯನ್ನು ಪ್ರತ್ಯೇಕವಾಗಿ ಹುರಿದು ಹಾಕಿ. 8-10 ನಿಮಿಷಗಳ ನಂತರ ಪಾತ್ರೆಯನ್ನು ಒಲೆಯಿಂದ ಇಳಿಸಿ ಅನ್ನದೊಂದಿಗೆ ಸವಿಯಿರಿ.
ಬೇಯಿಸಿದ ಮಾವಿನಕಾಯಿಯ ಚಟ್ನಿ
ಬೇಕಾಗುವ ಸಾಮಗ್ರಿಗಳು:
ಮಾವಿನ ಕಾಯಿ – 1 (ದೊಡ್ಡ ಗಾತ್ರದ್ದು) ತೆಂಗಿನ ಕಾಯಿ – ಅರ್ಧ ಭಾಗ ಉಪ್ಪು – ರುಚಿಗೆ ತಕ್ಕಷ್ಟು ಹಸಿಮೆಣಸು – 2 ಅಥವಾ 3 (ಖಾರಕ್ಕೆ ತಕ್ಕಂತೆ) ಇಂಗು – ಕಡಲೇಕಾಳಿನ ಗಾತ್ರದಷ್ಟು ಬೇವಿನ ಎಸಳು – 4 ಅಥವಾ 5 ಕಡ್ಡಿ ಮೆಣಸು (ಕೆಂಪು ಮೆಣಸು) – 1 ಸಾಸಿವೆ – 1/2 ಚಮಚ ತೆಂಗಿನೆಣ್ಣೆ – 1 ಚಮಚ(ಒಗ್ಗರಣೆಗೆ)
ಮಾಡುವ ವಿಧಾನ:
ಮೊದಲಿಗೆ ಮಾವಿನ ಕಾಯಿಯನ್ನು ಒಂದು ಬೋಗುಣಿಯೊಳಗೆ ಇಟ್ಟು ಅದು ಮುಳುಗುವಷ್ಟು ನೀರನ್ನು ಹಾಕಿ ಬೇಯಿಸಲಿಡಬೇಕು. ಮೊದಲು ಕೆಲ ನಿಮಿಷಗಳ ಕಾಲ ಅದು ತುಸು ಮೇಲೆ ತೇಲುತ್ತಿರುತ್ತದೆ. ಆಮೇಲೆ ತಳಭಾಗ ಬೇಯುತ್ತಿದ್ದಂತೆ ಕಂತಲು ಶುರುವಾಗುತ್ತದೆ. 2 ನಿಮಿಷ ಬಿಟ್ಟು ಅದನ್ನು ಮೇಲೆ ಕೆಳಗೆ ಮಾಡಬೇಕು. ಆಗ ಎಲ್ಲಾ ಭಾಗಗಳೂ ಸರಿಯಾಗಿ ಬೇಯುತ್ತವೆ. 10 ನಿಮಿಷಗಳೊಳಗೆ ಒಂದು ಮಾವಿನಕಾಯಿ ಚೆನ್ನಾಗಿ ಬೆಂದಿರುತ್ತದೆ. ಬೆಂದ ನಂತರ ಇದನ್ನು ತಣಿಯಲು ಬಿಡಬೇಕು. ಚೆನ್ನಾಗಿ ತಣಿದ ಮಾವಿನಕಾಯಿಯನ್ನು ಸರಿಯಾಗಿ ನುರಿದು, ಇದಕ್ಕೆ ಉಪ್ಪು, ಹಸಿಮೆಣಸಿನ ಚೂರುಗಳು ಹಾಗೂ ಇಂಗನ್ನು ಹಾಕಿ ಕಾಯಿತುರಿಯೊಂದಿಗೆ ನುಣ್ಣಗೆ ಬೀಸಬೇಕು. ನೀರನ್ನು ಬೇಕಿದ್ದರೆ(ಗಟ್ಟಿಯಾಗಿದ್ದರೆ) ಸೇರಿಸಿ ಹದಮಾಡಬೇಕು. ಇದಕ್ಕೆ ಸಾಸಿವೆ, ಕರಿಬೇವಿನ ಎಸಳುಗಳು ಹಾಗೂ ಕಡ್ಡಿಮೆಣಸಿನ ಚೂರುಗಳ ಒಗ್ಗರಣೆ ಕೊಡಬೇಕು. ತುಸು ಸಿಹಿ ಬೇಕೆಂದೆನಿಸುವವರು ಬೇಕಿದ್ದಲ್ಲಿ ಸ್ವಲ್ಪ ಬೆಲ್ಲವನ್ನೂ ಚಟ್ನಿಗೆ ಹಾಕಿ ಕಲಕಬಹುದು. ಬಿಸಿ ಅನ್ನಕ್ಕೆ, ಚಪಾತಿ, ದೋಸೆಗೆ ಈ ಚಟ್ನಿ ತುಂಬಾ ರುಚಿಕರವಾಗಿರುತ್ತದೆ. ಯುಗಾದಿ ಹಬ್ಬದಂದು ಬೇಯಿಸಿದ ಮಾವಿನಕಾಯಿ ಚಟ್ನಿಯನ್ನು ಮಾಡಲು ಮರೆಯಬೇಡಿ.
 
 
ಸಜ್ಜಪ್ಪ
ಬೇಕಾಗುವ ಪದಾರ್ಥಗಳು:
ಚಿರೋಟಿ ರವೆ 1 ಬಟ್ಟಲು ತುಪ್ಪ 1 ಟಿಸ್ಪೂನ್ ಕಾಯಿತುರಿ 2 ಬಟ್ಟಲು ಬೆಲ್ಲ 1 ಬಟ್ಟಲು ಏಲಕ್ಕಿ ಪುಡಿ 1 ಟಿಸ್ಪೂನ್ ದ್ರಾಕ್ಷಿ ಮತ್ತು ಗೋಡಂಬಿ 1/4 ಬಟ್ಟಲು (ತುಪ್ಪದಲ್ಲಿ ಹುರಿದದ್ದು)
ಮಾಡುವ ವಿಧಾನ:
ಮೊದಲಿಗೆ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ತುಪ್ಪವನ್ನು ಸುರಿದು ಕಲಸಿಟ್ಟಿಕೊಳ್ಳಿ. ಈ ಮಿಶ್ರಣಕ್ಕೆ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಚೆನ್ನಾಗಿ ನಾದಬೇಕು. ಹತ್ತರಿಂದ ಹದಿನೈದು ನಿಮಿಷದವರೆಗೆ ಹಿಟ್ಟನ್ನು ನೆನೆಯಲು ಬಿಡಿ. ಆ ಸಮಯದಲ್ಲಿ ಇನ್ನೊಂದೆಡೆ ಹೂರಣಕ್ಕೆ ಸಿದ್ಧತೆ ನಡೆಸಿ.
ಹೂರಣವನ್ನು ಮಾಡುವ ವಿಧಾನ :
ಕಾಯಿತುರಿ ಹಾಗೂ ನುಣ್ಣಗೆ ಜಜ್ಜಿಕೊಂಡ ಬೆಲ್ಲವನ್ನು ಒಂದು ಬಾಣಲೆಯಲ್ಲಿ ಹಾಕಿ ಹುರಿಯಿರಿ. ನಂತರ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ ಸ್ಟೋವ್‌ನಿಂದ ಕೆಳಗಿಳಿಸಿ. ನಂತರ ಮೊದಲೇ ಕಲಸಿಟ್ಟಿದ್ದ ಹಿಟ್ಟನ್ನು ತೆಗೆದುಕೊಂಡು, ಸಣ್ಣ ಸಣ್ಣಗೆ ದುಂಡಾಕಾರದ ಉಂಡೆಗಳನ್ನು ಮಾಡಿ. ಅದರೊಳಕ್ಕೆ ಹೂರಣವನ್ನು ತುಂಬಿ. ಆಮೇಲೆ ಹಿಟ್ಟಿನ ತುದಿಯಿಂದ ಮುಚ್ಚಿ ಎಣ್ಣೆ ಕೈಯಿಂದ ಕೈಯಲ್ಲಿ ದುಂಡಾಕಾರಕ್ಕೆ ತಟ್ಟಬೇಕು. ಹೀಗೆ ಲಟ್ಟಿಸಿದ ಪೂರಿ ಆಕಾರದ ದುಂಡಗಿನ ಸಜ್ಜಪ್ಪವನ್ನು ಎಣ್ಣೆಯಲ್ಲಿ ಕರಿಯಿರಿ. ಕೆಂಪಗೆ ಕರಿದ ಬಿಸಿಬಿಸಿಯಾದ, ಮತ್ತು ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ.
 
ಮಿಶ್ರ ಕೋಸಂಬರಿ
ಬೇಕಾಗುವ ಸಾಮಾಗ್ರಿಗಳು: ಹೆಸರುಬೇಳೆ 250ಗ್ರಾಂ., ಕರಿಬೇವು 6 ಎಸಳು, ಸೌತೆಕಾಯಿ 1 ಚಮಚ, ಉಪ್ಪು ರುಚಿಗೆ, ಕಡಲೆಬೇಳೆ 250ಗ್ರಾಂ., ಮೆಣಸಿನಕಾಯಿ 6 ಕೊಬ್ಬರಿ ತುರಿ 150ಗ್ರಾಂ., ಎಣ್ಣೆ 2 ಚಮಚ.
ಹೆಸರುಬೇಳೆ, ಕಡಲೆಬೇಳೆಯನ್ನು ಒಮದೇ ಪಾತ್ರೆಗೆಹಾಕಿ ನೀರಿನಲ್ಲಿ 1 ಗಂಟೆ ನೆನೆಸಿ. ಕರಿಬೇವು, ಸೌತೆಕಾಯಿ, ಮೆಣಸಿನಕಾಯಿಗಳನ್ನು ಸಣ್ಣಗೆ ಹೆಚ್ಚಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲೆ ಇಟ್ಟು ಕಾಯಿಸಿ. ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಕರಿಬೇವು, ಮೆಣಸಿನಕಾಯಿ ಹಾಕಿ ಹುರಿಯಿರಿ. ಎಲ್ಲಾ ಪದಾರ್ಥಗಳನ್ನು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 
ಕ್ಯಾರೆಟ್ ಕೊಸಂಬರಿ:
ಬೇಕಾಗುವ ಸಾಮಾಗ್ರಿಗಳು: ಕ್ಯಾರೆಟ್ 250ಗ್ರಾಂ., ತೆಂಗಿಕಾಯಿ 1/4 ಭಾಗ, ಮೆಣಸಿನಕಾಯಿ 4, ಕೊತ್ತಂಬರಿ ಸೊಪ್ಪು, ಇಂಗು, ಸಾಸಿವೆ, ಉಪ್ಪು, ಎಣ್ಣೆ.
ಮಾಡುವ ವಿಧಾನ: ಕ್ಯಾರೆಟನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು. ಈ ತುರಿದ ಕ್ಯಾರೆಟ್ ಗೆ ತೆಂಗಿನತುರಿ, ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಬೇಕು. ನಂತರ ಸಾಸಿವೆ, ಇಂಗು ಒಗ್ಗರಣೆ ಕೊಡಬೇಕು.

LEAVE A REPLY

Please enter your comment!
Please enter your name here