ಯಾವ ಧರ್ಮವೂ ಗೋಹತ್ಯೆಯನ್ನು ಪ್ರಚೋದಿಸಿಲ್ಲ – ಶ್ರೀಸಂಸ್ಥಾನ

0
490

ನಮ್ಮ ಪ್ರತಿನಿಧಿ ವರದಿ
ಇಂದು ಭಾರತದ ಸಂತವರೇಣ್ಯರಲ್ಲಿ ಸಹಮತವಿಲ್ಲ. ಸಹಮತವಿದ್ದಿದ್ದರೆ ಜಗತ್ತಿನ ಯಾವ ಶಕ್ತಿಯೂ ಭಾರತವನ್ನು ಎದುರಿಸಲು ಸಾಧ್ಯವಿರಲಿಲ್ಲ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಹೇಳಿದರು.
 
 
 
ಸಿಂಧನೂರಿನ ಆರ್.ಜಿ.ಎಂ. ಶಾಲೆಯ ಆವರಣದಲ್ಲಿ ನಡೆದ ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಅಂಗವಾಗಿ ನಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಪ್ರಪಂಚದಲ್ಲಿಯೇ ಪವಿತ್ರವಾದ ನೆಲ ಇವತ್ತು ಗೋವಿನ ರಕ್ತದಿಂದ ಅಪವಿತ್ರಗೊಂಡಿದೆ. ರಕ್ತದ ಮಡುವಿನಲ್ಲಿ ಗೋವು ಅನುದಿನ ತೊಳಲುತ್ತಿದ್ದಾಳೆ. ಗೋವನ್ನು ಕಡಿಸಬೇಡಿ ಹಾಗೂ ಗೋವನ್ನು ಕೆಡಿಸಬೇಡಿ ಎನ್ನುವ ಎರಡು ಮುಖ್ಯ ವಾಕ್ಯಕ್ಕಾಗಿ ಇಂದು ಮಂಗಲಗೋಯಾತ್ರೆ ನಡೆಯುತ್ತಿದೆ. ಹುಟ್ಟಿದ ಕೂಡಲೇ ಅಳುವ ಮಾನವ ಇತರರನ್ನು ಅಳಿಸುತ್ತಾನೆ. ಹುಟ್ಟಿದಾಕ್ಷಣ ‘ಅಂಬಾ’ ಎನ್ನುವ ಗೋವು ಜಗನ್ಮಾತೆಯಾಗಿ ಕಾಣಿಸಿಕೊಳ್ಳುತ್ತಾಳೆ ಎಂದರು.
 
 
 
ಹಿಂದೂಧರ್ಮದಲ್ಲಿ ಎಲ್ಲಿಯೂ ಗೋಹತ್ಯೆಯನ್ನು ಪ್ರಚೋದಿಸಿಲ್ಲ. ವೇದದಲ್ಲಿ ಗೋವಿನ ಹಿಂಸೆಯೇ ಸೂಕ್ತವಲ್ಲ ಎಂಬ ಮಾತಿದೆ. ಒಂದು ವೇಳೆ ಹಾಗೆ ಹೇಳಿದ್ದರೆ ವೇದವೂ ಮಾನ್ಯವಾಗುತ್ತಿರಲಿಲ್ಲ. ಪೈಗಂಬರರು ತುಪ್ಪ ಅರೋಗ್ಯದಾಯಕವೆಂದೂ, ಗೋಮಾಂಸ ವಿಷಕಾರಕವೆಂದೂ ಸಾರುತ್ತಾರೆ. ಕ್ರಿಸ್ತನ ಜನನ ಸ್ಥಳವಾದ ಗೋಶಾಲೆ ಕ್ರಿಶ್ಚಿಯನ್ನರಿಗೆ ತೀರ್ಥಯಾತ್ರೆಯ ಸ್ಥಳದಂತೆ. ಹಾಗಾಗಿ ಕ್ರಿಸ್ಮಸ್ ಆಚರಣೆಯನ್ನು ನಿಜಾರ್ಥದಲ್ಲಿ ಗೋವನ್ನು ಉಳಿಸುವುದರೊಡನೆ ಆಚರಣೆ ಮಾಡಬೇಕು. ಕರುಣೆ, ದಯೆಗಳನ್ನೇ ಬೋಧಿಸಿದ ಜೈನ ಬೌದ್ಧ ಧರ್ಮಗಳೂ ಗೋಹತ್ಯೆಯನ್ನು ಹೇಳಲು ಸಾಧ್ಯವಿಲ್ಲ. ಹೀಗೆ ಗಮನಿಸಿದರೆ ಯಾವ ಧರ್ಮವೂ ಗೋಹತ್ಯೆಯನ್ನು ಪ್ರಚೋದಿಸಿಲ್ಲ. ಒಂದೊಮ್ಮೆ ಗೋಹತ್ಯೆಯನ್ನು ಪ್ರತಿಪಾದಿಸಿದ ಧರ್ಮವಿದ್ದಲ್ಲಿ ಅದು ‘ಧರ್ಮ’ವೇ ಅಲ್ಲ ಎಂದರು.
 
 
 
ರೈತನ ಬೆವರಿನ ಹನಿ ಬಿದ್ದರೆ ಭೂಮಿ ಹಸುರಾಗುತ್ತಾಳೆ ಹಾಗೂ ಹಸನಾಗುತ್ತಾಳೆ. ಆದರೆ ಇಂದು ರೈತನ ಬೆವರಿನಿಂದ ಫಲಭರಿತವಾಗಬೇಕಾದ ಭೂಮಿಗೆ ಗೋವಿನ ರಕ್ತ ಬೀಳುತ್ತಿದೆ. ಅದರಿಂದಲೇ ಬರಗಾಲ ಜನರನ್ನು ಪೀಡಿಸುತ್ತಿದೆ. ಹಾಗಾಗಿ ಗೋವುಗಳ ರಕ್ಷಣೆಯ ಮೂಲಕ ಮಾತ್ರ ನಾವೆಲ್ಲರೂ ಬದುಕಬಹುದಾಗಿದೆ ಎಂದು ಗೋಸಂದೇಶ ನೀಡಿದರು.
 
 
 
ಸಿಂಧನೂರಿನ ರಂಭಾಪುರಿ ಖಾಸಾ ಶಾಖಾಮಠದ ಶ್ರೀಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಹೆತ್ತತಾಯಿಯನ್ನು ಎಷ್ಟು ಪೂಜ್ಯ ಭಾವನೆಯಿಂದ ಕಾಣುತ್ತೇವೆಯೋ ಅದೇ ಭಾವದಿಂದ ಗೋವನ್ನು ಕಾಣುವ ಏಕೈಕ ಪರಂಪರೆ ಭಾರತದ್ದಾಗಿದೆ. ಹಿಂದೆ ಹೆಣ್ಣು ಕೊಡುವ ಸಂದರ್ಭದಲ್ಲಿ ಗೋಸಂಪತ್ತನ್ನು ಪರಿಗಣಿಸಿ ನೀಡಲಾಗುತ್ತಿತ್ತು. ಆದರೆ ಇಂದಿನ ಮಕ್ಕಳಿಗೆ ಎತ್ತಿನಗಾಡಿಯ ಮಹತ್ತ್ವವನ್ನು ತಿಳಿಸುವಲ್ಲಿ ಕೂಡಾ ನಾವು ವಿಫಲರಾಗುತ್ತಿದ್ದೇವೆ. ಪರೋಪಕಾರಿ ಗುಣದ ಔನ್ನತ್ಯವನ್ನು ಸಾರುವ, ಗೋಮಾತೆಯ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
 
 
 
ಈ ಸಂದರ್ಭದಲ್ಲಿ ಮಂಗಲಗೋಯಾತ್ರೆಯನ್ನು ಪರಿಕಲ್ಪಿಸಿ, ದಿವ್ಯ ನೇತೃತ್ವ ಕರುಣಿಸಿದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳನ್ನು, ಸಾನಿಧ್ಯವಹಿಸಿದ್ದ ಸಂತ ಮಹಾಂತರು ಸತ್ಕರಿಸಿದರು. ನಂತರ ಗೋಸೇವೆಯಲ್ಲಿ ತೊಡಗಿಸಿಕೊಂಡ ಸುಕಾಲಪೇಟೆಯ ರಾಘವೇಂದ್ರ ಮತ್ತು ಚನ್ನಬಸವ ಯಾದವ್ ರವರನ್ನು ಗುರುತಿಸಲಾಯಿತು.
ಪೂಜ್ಯರಾದ ಶ್ರೀಪರಮಪೂಜ್ಯಸ್ವಾಮಿಗಳು ಸಭೆಯನ್ನುದ್ದೇಶಿಸಿ ಆಶೀರ್ವಚನವಿತ್ತರು.
 
 
 
ನಾದಸ್ವರದ ಮಂಗಲರವದೊಡನೆ ಮಂಗಲಗೋಯಾತ್ರೆಯ ಗೋಮಾತೆಯ ಮಂಗಲರಥ, ಗೋವಿನ ಮಂಗಲಕಾರ್ಯದ ಮಹತ್ತ್ವವನ್ನು ನಗರದ ಬೀದಿಗಳಲ್ಲಿ ಶೋಭಾಯಾತ್ರೆಯ ಮೂಲಕ ಬಿತ್ತರಿಸಿತು. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀ ಮಹಾಲಿಂಗಸ್ವಾಮಿಗಳು, ಶ್ರೀಸಂಗಯ್ಯಸ್ವಾಮಿಗಳು, ಶ್ರೀ ಬಸವರಾಜ ಸ್ವಾಮಿಗಳು, ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಶ್ರೀ ನಾಗಪ್ಪ ತಾತ ಗೌಡನಬಾವಿ ಹಾಗೂ ಇನ್ನಿತರ ಗೋಬಂಧುಗಳು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದರು.⁠⁠⁠⁠

LEAVE A REPLY

Please enter your comment!
Please enter your name here