ಯಕ್ಷರಗಾನ ಬಂತು ಪತ್ತನಾಜೆ…

0
948

ಎಂ.ದೇವಾನಂದ ಭಟ್ , ಬೆಳುವಾಯಿ.
ಈ ಆರಾಧನಾ ಕಲೆಯ ಅನೂಚಾನವಾಗಿರುವ ಪರಂಪರೆಯನ್ನು ಬೆನ್ನಲ್ಲಿ ಹೊತ್ತು ವರ್ತಮಾನದ ಅವಕಾಶಗಳನ್ನು ಎದುರು ನೋಡುತ್ತಾ,ಸವಾಲು,ಸಮಸ್ಯೆಗಳನ್ನು ಎದುರಿಸುತ್ತಾ ,ಬರುವ ಕಾಲದ ಆಶೋತ್ತರಗಳಿಗೆ ಮನದಲ್ಲೇ ಕೃಷಿ ಮಾಡುತ್ತಾ, ಬೇಕು ಬೇಡಗಳನ್ನು ಅಲೋಚಿಸುವ ಕಲಾವಿದ ಈ ವರುಷ ತಿರುಗಾಟ ಪೂರ್ಣಗೊಳ್ಳದೆ ಪತ್ತನಾಜೆ ಬಂದರೂ ಯಾವುದರ ಬಗ್ಗೆಯೂ ಚಿಂತನೆ ನಡೆಸದೆ ಒಂದೇ ಚಿಂತೆಗೆ ಒಳಗಾಗಿದ್ದಾನೆ, ಅದೇ ಭವಿಷ್ಯದ ದಿನಗಳು ಹೇಗೆ ? ಎಂದು. ಇದು ಯಕ್ಷ ಪ್ರಶ್ನೆ, ರಂಗಕಲೆಯ ಭವಿಷ್ಯದ ಭದ್ರ ಬುನಾದಿಗೆ ಪ್ರಕೃತಿ ಮುನಿದಳೆ? ಸೊರಗಿದ ಕಲಾವಿದನ ಜೀವನ ಗಾಳಿಗೆ ಸಿಕ್ಕ ತರಗೆಲೆಯಂತಾಯಿತೆ.!


ಶ್ರೀಮಂತಕಲೆ ಯಕ್ಷಗಾನ ಬೇಕಾದ ಒಡವೆ ಇದ್ದೂ ಬಡವಾಗುವ ಕಾಲ ಬಂದಿದೆಯೇ..ಹೀಗೆ ಎಲ್ಲಾಕಲಾವಿದರಲ್ಲಿ ಗೊಂದಲದ ಗೂಡು ಮಡುಕಟ್ಟಿದೆ,
ಒಂದೇ ಒಂದು ಆಟ…ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ ಎಂಬ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದೆ. ಅಗೆಅಗೆದು ಕಂಬ ನೆಟ್ಟು ರಂಗಮಂಟಪ ಬಿಗಿವ, ಸುತ್ತು ಬಟ್ಟೆ ಎಳೆದು ಟೆಂಟು ಕಟ್ಟುವ, ಪೌರಾಣಿಕ ಪ್ರಪಂಚದ ಜಗಮಗಿಸುವ ರಂಗಸ್ಥಳದಲ್ಲಿ ಪರದೆ ಬಿಡುವ, ವೇಷಧಾರಿ ಪಾತ್ರವಾಗುವ ಚೌಕಿಯಲ್ಲಿ ಪಾತ್ರಕ್ಕೊಪ್ಪುವ ವೇಷಭೂಷಣಾದಿ ಆಭರಣ ನೀಡುವ …ಹೀಗೆ ಎಲ್ಲರೂ ಮುಂದಿನ ದಿನಗಳಲ್ಲಿ ಉದರಂಭರಣೆಗಾಗಿ ಎಲ್ಲಿ ಯಾವ ವೇಷ ಹಾಕುತ್ತಾರೋ ಗೊತ್ತಿಲ್ಲ…


ಹೊರ ಜಗತ್ತು ರಾತ್ರಿ ಮಲಗಿರುವಾಗ ನಿದ್ರೆಬಿಟ್ಟು ಆ ರಾತ್ರಿಯನ್ನೆ ತನ್ನ ಪ್ರತಿಭಾ ಪ್ರಭೆಯಿಂದ ಹಗಲನ್ನಾಗಿಸಿ ಇಂದ್ರಚಂದ್ರನಾಗಿ ರಂಗದಲ್ಲಿ ಮೆರೆದು ಪ್ರೇಕ್ಷಕ ಪ್ರಭುವಿಗೆ ಮನೋಲ್ಲಾಸ ನೀಡುವ ಕಲಾವಿದ ಇಂದು ಮುದುಡಿಕೂತಿದ್ದು ಭವಿಷ್ಯದ ಸೂರ್ಯರಶ್ಮಿಗಾಗಿ ಹಾತೊರೆಯುವಂತಾಗಿದೆ. ಹಿಂದೆ ಚಾಲ್ತಿಯಲ್ಲಿದ್ದ ಪ್ರಭುದ್ದ ಪ್ರಸಿದ್ದ ಕಲಾವಿದರಾಗಿದ್ದರೆ ಮನೆಯೇ ಗುರಕುಲವಾಗುತ್ತಿತ್ತು. ನೇಪತ್ಯ ಕಲಾವಿದರಂತೂ ತಿರುಗಾಟದಲ್ಲಿ ಚಿಂದಿಯಾಗಿದ್ದ ಚಾರುಚೂರುಗಳನ್ನು ಹೊಂದಿಸಿ ಹೊಲಿವ, ಬಣ್ಣದ ಬೇಗಡೆ ಹಚ್ಚುವ ಕಜ್ಜದಲ್ಲಿ ಕಾಲಕಳೆಯುತ್ತಿದ್ದರು.ತಿರುಗಾಟದಲ್ಲಿ ದೊರೆವ ಅಷ್ಟಿಷ್ಟು ಅದಾಯ ಮತ್ತೆ ಆರು ತಿಂಗಳ ಮಳೆಗಾಲಕ್ಕಾಧಾರವಾಗ ಬೇಕಿತ್ತು. ಮುಂದಿನ ತಿರುಗಾಟ ಯಾವ ಮೇಳದಲ್ಲಿ ಎಂದು ಕರಾರು ಮಾಡಿಕೊಂಡು ಮುಂಗಡ ತಂದು ಮಳೆಗಾಲದ ದಿನ ದೂಡಬಹುದಿತ್ತು.
ಇದೆಲ್ಲವೂ ಕನ್ನಡಿಯೋಗಿನ ಗಂಟೆ ಸರಿ.ಅಷ್ಟು ಮಾತ್ರವಲ್ಲದೆ ಎಲ್ಲರನ್ನು ಸಾರಸಗಟಾಗಿ ಕಾಡುವ ಈ ವರುಷದ ಘೋರಮಾರಕ ಅದರ ಹೆಸರೆತ್ತಿದರೆ ಎಲ್ಲಿ ಅಂಟುವುದೋ ಎಂಬ ಭಯ…..ಇದು ಯಾರನ್ನು ಬಿಟ್ಟಿಲ್ಲ ಎಂಬಂತೆ ಕ್ಯಾಂಪು ಹೋದ ಕಡೆಗೆಲ್ಲಾ ಡೇರೆ ಸುತ್ತಲಿನ ಮಂಡಕ್ಕಿ , ಚಾ , ಬೋಂಡ ಅಂಗಡಿಗಳ ಕಾಯಕಕ್ಕೆ ಈ ಬಾರಿ ಮಾರಿ ಪರ್ಯಾಯದ ಹೊರೆ.


ಈ ಆಟ,ತಿರುಗಾಟದ ಜತೆ ಅವಿನಾಭಾವ ಸಂಬಂಧವಿರಿಸಿಕೊಂಡ ಅನೇಕಾನೇಕ ಸಂಗತಿಗಳು ಬರುವ ಮಳೆಗಾಲದ ಮೋಡದ ಹಿಂದೆ ಮರೆಯಾಗಿ ಬಿಟ್ಟಿದೆ. ಅಲೆದು ಹೇಗೊ 180 ಆಟ ಮಾಡಿ ಆಡಿದ ಸಂಧರ್ಭ ತಿರುಗಾಟವನ್ನು ಒಟ್ಟು 365 ದಿನಗಳಿಗೆ ಲೆಕ್ಕ ಹಾಕಿ ಸರಿದೂಗಿಸುವ ಆನೇಕ ಸಂಗತಿಗಳಿವೆ. ಕಾಲಸ್ಥ ಕಲೆಯಾದ ಈ ಯಕ್ಷಗಾನ ಕಲೆಯ ತಿರುಗಾಟದಲ್ಲಿ ಆನೇಕ ದಾಖಲೆಗಳನ್ನು ದಾಖಲಿಸುವ ಕಾರ್ಯ ಎಲ್ಲೋ ಒಂದು ಕಡೆ ತಣ್ಣಗೆ ಜರಗುತ್ತಾ ಇರುತ್ತದೆ. ಮುಂದೆ ಹದಾ ಮಳೆಯ ದಿನಗಳಲ್ಲಿ ತಿರುಗಾಟದ ಸಂಧರ್ಭಗಳಲ್ಲಿ ಕಂಡ ಪ್ರಸಂಗದ ಪದ್ಯ ಗುನುಗುತ್ತಾ ಏನ ಪೇಳಲಿ ನಾನು… ಎನ್ನುವುದು ಯಕ್ಷಗಾನ ಪ್ರಭಾವಲಯದೊಳಗಿನ ಮನಸ್ಸಿನ ಸಹಜ ಸ್ಥಿತಿಯಾಗಿದೆ.


ಕಳೆದುದಕ್ಕೆ ಮರುಗದೆ ಮುಂದಿನ ಭವಿಷ್ಯದ ಬಗ್ಗೆ ಒಳಿತನ್ನೆ ಆ ಭಗವಂತನಲ್ಲಿ ಸಂಪ್ರಾರ್ಥಿಸುತ್ತಾ ಕರಾವಳಿಯ ನೀರವರಾತ್ರಿಗಳಲ್ಲಿ ಪುರಾಣಲೋಕದ ಸತ್ವ, ತತ್ವ, ಸತ್ಯವನ್ನು ಹಿಮ್ಮೇಳ ಮುಮ್ಮೇಳಗಳೊಂದಿಗೆ ಈ ರಂಗದಲ್ಲಿ ಪ್ರತಿಷ್ಟಾಪಿಸುವ ದೃಶ್ಯಲೋಕದ ಚಕ್ರವರ್ತಿ ಯಾಗಲಿ ಈ ಯಕ್ಷಗಾನ ಎಂಬ ಸದಾಶಯಗಳೊಂದಿಗೆ ಕಲಾವಿದರಿಗೆ ಒದಗಿ ಬಂದ ಕಷ್ಟಕಾರ್ಪಣ್ಯಗಳೆಲ್ಲ ದೂರವಾಗಿ ನವಮನೋಲ್ಲಾಸದಿಂದ ಮತ್ತೆ ಚೈತನ್ಯ ತುಂಬಿ ರಂಗಸ್ಥಳ ಮೆರೆಯಲಿ ಎಂಬ ಆಶಯ ಮಾತ್ರ ನನ್ನದು.
ನಮಸ್ಕಾರಗಳು.

Advertisement

ಚಿತ್ರಕೃಪೆ: ದೇವಾನಂದ ಭಟ್‌ ಬೆಳುವಾಯಿ

LEAVE A REPLY

Please enter your comment!
Please enter your name here