ಯಕ್ಷತೂಣೀರ ಸಂಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವ

0
444

ವರದಿ: ಗೋವಿಂದಬಳ್ಳಮೂಲೆ
” ಗುರುಹಿರಿಯರನ್ನು ಮುಂದಿರಿಸಿಕೊಂಡು ಅವರ ಮಾರ್ಗದರ್ಶನದೊಂದಿಗೆ ಮಾಡುವ ಕಾರ್ಯಕ್ರಮಗಳು ಸಾಂಗವಾಗಿ ಅಚ್ಚುಗಟ್ಟಾಗಿ ಯಶಸ್ವಿಯಾಗಿ ಜರಗುತ್ತವೆ. ಸದಾ ಇದನ್ನು ಗಮನದಲ್ಲಿಟ್ಟುಕೊಂಡು ಯಕ್ಷತೂಣೀರ ಸಂಪ್ರತಿಷ್ಠಾನವು ಕಳೆದ ಮೂರುವರ್ಷಗಳಿಂದ ನಿರಂತರವಾಗಿ ಉತ್ತಮ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದು ನಮಗೆ ಸಂತೋಷವನ್ನು ಉಂಟುಮಾಡಿದೆ. ಇವರು ಮಾಡುತ್ತಿರುವ ಎಲ್ಲಾ ಸತ್ಕಾರ್ಯಗಳಿಗೆ ನಮ್ಮ ಆರಾಧ್ಯದೇವರಾದ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ಸ್ವಾಮಿಯ, ಮತ್ತು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂರ್ಣಾನುಗ್ರಹ ದೊರಕಲಿ ” ಎಂಬುದಾಗಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ನುಡಿದರು.
 
 
 
ಕೋಟೂರಿನ ಸ್ಕಂದ ಕೈಗಾರಿಕಾ ಸಂಸ್ಥೆಯಲ್ಲಿ ಕಾರ್ತಿಕೇಯ ಸಭಾಂಗಣದ ದಿ.ಕುಂಡತ್ತಾನ ಕೃಷ್ಣ ಭಟ್ಟ ವೇದಿಕೆಯಲ್ಲಿ ಜರಗಿದ ಯಕ್ಷತೂಣೀರ ಸಂಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವವನ್ನು ಉದ್ಘಾಟಿಸುತ್ತಾ ಆಶೀರ್ವಚನ ನೀಡಿ ಅವರು ಈ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀಗಳವರು ” ಯಕ್ಷತೂಣೀರ – 2017 ” ಸಕಾಲಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು.
 
 
 
” ಬದುಕಿನ ಸಮಸ್ಯೆಗಳನ್ನು ಓದಿ ಹೇಳುವುದಲ್ಲ ಜೀವನ. ಸಮಸ್ಯೆಯನ್ನು ಮೀರಿ ಪ್ರಪಂಚದಲ್ಲಿ ಸಾಧನೆ ಮಾಡುತ್ತೇವೆ ಎಂಬ ಸಂಕಲ್ಪ ಯಾರಲ್ಲಿ ಇದೆಯೋ ಅವರು ಯಶಸ್ವಿಯಾಗುತ್ತಾರೆ ಎಂಬುದಕ್ಕೆ ವಿಷ್ಣು ಪ್ರಿಯ ಸಾಕ್ಷಿ. ತನ್ನ ಕಣ್ಣು ಕಾಣದಿದ್ದರೂ ಕೂಡಾ ಕಣ್ಣು ಕಾಣಿಸುತ್ತಾ ಇರುವ ನಮ್ಮನ್ನು ಕಣ್ಣು ತೆರೆಸುವಂತೆ ಅವಳು ಹಾಡಿದ್ದಾಳೆ . ಅವಳ ಸಾಧನೆ ವಿಶ್ವಮಾನ್ಯವಾಗುವಂತೆ ಬೆಳಗುತ್ತದೆ. ಯಕ್ಷತೂಣೀರ ಸಂಪ್ರತಿಷ್ಠಾನವು ಇಂದು ವಿಷ್ಣು ಪ್ರಿಯಳನ್ನು ಗೌರವಿಸುತ್ತಾ ಇರುವುದು ತುಂಬಾ ಶ್ಲಾಘನೀಯ ಕಾರ್ಯ ” ಎಂಬುದಾಗಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ನುಡಿದರು.
 
 
ಶ್ರೀ ರಾಮ ಪ್ರಸಾದ್ ಕಾಸರಗೋಡು ಅವರು ಸಭಾಧ್ಯಕ್ಷರಾಗಿ ಶುಭಹಾರೈಸಿದರು.ಪ್ರತಿಷ್ಠಾನದ ಅಧ್ಯಕ್ಷರಾದ ಈಶ್ವರಭಟ್ ಬಳ್ಳಮೂಲೆ ಶುಭಾಶಂಸನೆಯಿತ್ತರು. ಕಾರ್ಯಕ್ರಮದಂಗವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಹಿರಿಯ ಯಕ್ಷಗಾನ ಕಲಾವಿದರಾದ ಬೆಳ್ಳಿಗೆ ನಾರಾಯಣ ಮಣಿಯಾಣಿ, ಕೂಡ್ಲು ಜಯ ಬಲ್ಯಾಯ ಹಾಗೂ ಕೂಡ್ಲು ಆನಂದ ಇವರನ್ನು ಶಾಲು ಹೊದೆಸಿ ಫಲ, ಸ್ಮರಣಿಕೆ ಮತ್ತು ಸನ್ಮಾನಪತ್ರಗಳನ್ನಿತ್ತು ಗೌರವಿಸಲಾಯಿತು.
 
 
ಕೇರಳ ಶಾಲಾ ಕಲೋತ್ಸವದಲ್ಲಿ ರಾಜ್ಯ ಮಟ್ಟದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸರಕಾರೀ ವೃತ್ತಿಪರ ಹಿರಿಯ ಮಾಧ್ಯಮಿಕ ಶಾಲೆ ಕಾರಡ್ಕದ 8 ನೇ ತರಗತಿಯ ಅಂಧ ವಿದ್ಯಾರ್ಥಿನಿ ಕುಮಾರಿ ವಿಷ್ಣುಪ್ರಿಯ ಇವಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಬಳಿಕ ಕುಮಾರಿ ವಿಷ್ಣು ಪ್ರಿಯ ಹಾಡಿದ ‘ ಇನ್ನುದಯ ಬಾರದೆ ‘ ಎಂಬ ಹಾಡು ಸೇರಿದ ಕಲಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿತು.
 
 
 
ಸಕಾಲಿಕ ಸಂಚಿಕೆಯ ಸಂಪಾದಕರಾದ ಪೆರಡಂಜಿ ಗೋಪಾಲಕೃಷ್ಣ ಭಟ್ ಅವರು ಸಂಚಿಕೆಯ ಕುರಿತು ವಿವರಣೆಗಳನ್ನಿತ್ತರು. ಗೀತಾ ಶಾಮಮೂರ್ತಿ, ಪಲ್ಲವಿ ಹರಿಕೃಷ್ಣ, ವಿಜಯಲಕ್ಷ್ಮಿ ಮುರಳಿಸ್ಕಂದ ಇವರು ಪ್ರಾರ್ಥನೆ ಹಾಡಿದರು. ಡಾ. ಶಿವಕುಮಾರ್ ಅಡ್ಕ, ರಾಘವೇಂದ್ರ ಉಡುಪುಮೂಲೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುರಳಿಸ್ಕಂದ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಗೋವಿಂದಬಳ್ಳಮೂಲೆ, ಕೃಷ್ಣ ಭಟ್ ಅಡ್ಕ, ಅನುಪಮಾ ರಾಘವೇಂದ್ರ ಉಡುಪುಮೂಲೆ ಇವರು ಸನ್ಮಾನ ಪತ್ರ ವಾಚಿಸಿದರು. ರಾಜೇಶ್ವರಿ ಈಶ್ವರ ಭಟ್ , ಹರಿಕೃಷ್ಣ ಪೆರಡಂಜಿ ಸಾಂದರ್ಭಿಕ ಸಹಕಾರಗಳನ್ನಿತ್ತರು. ಸ್ಕಂದ ಕೈಗಾರಿಕಾ ಸಂಸ್ಥೆಯ ಸಿಬ್ಬಂದಿಗಳು ಕಾರ್ಯಕ್ರಮ ವ್ಯವಸ್ಥೆಯಲ್ಲಿ ಸಹಕರಿಸಿದರು.
 
 
ಗಣಪತಿ ಮಧುರಕಾನನ ಸ್ವಾಗತ ಮತ್ತು ಸುಬ್ರಹ್ಮಣ್ಯ ಅಡ್ಕ ಧನ್ಯವಾದವಿತ್ತರು. ಬಳಿಕ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಇವರಿಂದ ‘ ರತಿಕಲ್ಯಾಣ ‘ ಯಕ್ಷಗಾನ ಬಯಲಾಟವು ಸಂಪನ್ನವಾಯಿತು.

LEAVE A REPLY

Please enter your comment!
Please enter your name here