ಮೋಜಿನ ಮಂದ ಬೆಳಕಿನಲ್ಲಿ ಚಾರ್ಮುಡಿ ವೈಭವ

0
525

 
ವಿಶೇಷ ವರದಿ: ಹರೀಶ್ ಕೆ.ಆದೂರು
ಸಭ್ಯರಿಗಿಲ್ಲಿ ಪ್ರಕೃತಿಯ ಸವಿಸವಿಯುವುದು ಕಷ್ಟ
ಕ್ಲನ್…ಕ್ಲನ್ ಕ್ಲನ್…ಒಂದರಮೇಲೊಂದು ದೊಡ್ಡ ದೊಡ್ಡ ಬಾಟಲಿಗಳು ನೋಡ ನೋಡುತ್ತಿದ್ದಂತೆಯೇ ಪುಡಿಯಾದವು…ಕೇಕೆ ಮೋಜು ಮಸ್ತಿ… ಆ ನಿಸರ್ಗ ಸೌಂದರ್ಯದ ನಡುವೆ ಮಾದಕತೆಯ ಮಾತು… ಇವೆಲ್ಲವನ್ನೂ ಸಹಿಸಿಕೊಂಡು ತನ್ನ ಸೌಂದರ್ಯವನ್ನು ಮತ್ತಷ್ಟು ಮತ್ತಷ್ಟು ಹೆಚ್ಚಿಸುತ್ತಾ ಪ್ರಯಾಣಿಕರನ್ನು ಮೋಡಿ ಮಾಡಿ ಆಕರ್ಷಿಸುತ್ತದೆ ನಿಸರ್ಗದ ಸ್ವರ್ಗ ಚಾರ್ಮಾಡಿ ಘಾಟ್!
 
charmady9
 
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಾಯಾನಗರಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆ ಚಾರ್ಮಾಡಿ. ಅತ್ಯಂತ ಸುಂದರ ಘಾಟಿ. ಅಷ್ಟೇ ಅಪಾಯಕಾರಿಯೂ ಹೌದು. ಕಡಿದಾದ ಹಾದಿ.. ಅತಿ ಸುಂದರ …ಒಂದನ್ನೊಂದು ಮೀರಿಸುವ ನಿತ್ಯಹರಿದ್ವರ್ಣ ಬೆಟ್ಟಗಳ ಸಾಲು. ಉತ್ತಮ ಮಳೆಯಾದುದರಿಂದ ರಸ್ತೆಯಂಚಿನಲ್ಲೆಲ್ಲಾ ಹಸಿರ ಹುಲ್ಲಿನ ಚಿತ್ತಾರ. ಎಂತಹವರನ್ನೂ ಮರುಳುಮಾಡುವ ಮೋಡಿ ಚಾರ್ಮಾಡಿಯದ್ದು. ಆ ರೀತಿಯ ನಿಸರ್ಗ ಸೌಂದರ್ಯ ಅಲ್ಲಿದೆ. ಆಹ್ಲಾದಕರ ವಾತಾವರಣ. ಲಕ್ಷಾಂತರ ಗಿಡಮರಗಳನ್ನು ಸುತ್ತಿ ಬರುವ ಚೇತೋಹಾರಿ ಗಾಳಿ…ಅಲ್ಲಲ್ಲ ಕುಳಿರ್ಗಾಳಿ! ಇದು ಮೋಜು ಮಸ್ತಿ ಮಾಡುವವರಿಗೊಂದು ಸ್ವರ್ಗದಂತೆ ಭಾಸವಾಗುತ್ತಿದೆ.
 
 
ನೈಜ ಪ್ರಕೃತಿ ಪ್ರಿಯರಿಗೆ ಅಲ್ಲಿ ಪ್ರಕೃತಿಯ ಸವಿ ಸವಿಯಲು ಕೊಂಚ ಕಷ್ಟ ಸಾಧ್ಯವೇ…ಎಲ್ಲೆಂದರಲ್ಲಿ ಕುಡುಕರು…ಪಡ್ಡೆ ಹುಡುಗರು…ಸಿಗರೇಟು, ಬೀಡಿ ಮಾದಕ ದ್ರವ್ಯಗಳೊಂದಿಗೆ ಕಾಣಸಿಗುತ್ತಿದ್ದಾರೆ. ಕುಡಿದು ಮೋಜು ಮಾಡಿ ಕೇಕೆ ಹಾಕುತ್ತಾ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಸಾಗುವ ಮಂದಿ ಒಂದರೆಕ್ಷಣ ಪ್ರಕೃತಿಯ ಸವಿ ಸವಿಯೋಣವೆಂದು ಅಲ್ಲಿ ವಾಹನ ನಿಲ್ಲಿಸುವುದು ವಾಡಿಕೆ.
 
 
 
 
ಇದಕ್ಕೊಂದು ನಿಯಂತ್ರಣ ಬೇಡವೇ…?
ಹಸಿರ ಹೊನ್ನಿನ ರಾಶಿಯೊಳಗೆ ನೈಜ ಪ್ರಕೃತಿಯ ಆರಾಧಕನಿಗೆ ಅನ್ಯಾಯವಾಗುತ್ತಿದೆ. ಮೋಜು ಮಸ್ತಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಘಾಟಿ ರಸ್ತೆಯಲ್ಲಿರುವ ಸುಂದರ ನಿಸರ್ಗವನ್ನು ಹಾಳುಗೆಡಹುವವರನ್ನು ಹದ್ದುಬಸ್ತಿನಲ್ಲಿಡುವ ಕಾರ್ಯ ನಡೆಯಬೇಕಾಗಿದೆ. ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದೇ ಆದಲ್ಲಿ ಚಾರ್ಮಾಡಿಯ ನೈಜ ಸೌಂದರ್ಯ ಉಳಿಯಬಹುದು. ರಾಶಿ ರಾಶಿ ಒಡೆದ ಬಾಟಲಿಗಳು, ಪ್ಲಾಸ್ಟಿಕ್ , ತಂಪು ಪಾನೀಯಗಳ ಬಾಟಲಿಗಳಿಂದ ತುಂಬಹೊರಟ ನಿಸರ್ಗವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಮೋಜು ಮಸ್ತಿಗೊಂದು ಮಿತಿಯಿದೆ. ಅತಿಯಾದರೆ ಅದೂ ಅಪಾಯವೇ ಅಲ್ಲವೇ…

LEAVE A REPLY

Please enter your comment!
Please enter your name here