ಮೊಬೈಲ್ ಮೇನಿಯಾ ….

0
534

ನಾ ಕಂಡಂತೆ ಲೇಖನ: ಜಿ.ಎನ್. ದಿವ್ಯಾ ರಾವ್. 
ಓದುಗರಲ್ಲಿ ಕ್ಷಮೆಯಾಚಿಸುತ್ತಾ ಈ ಲೇಖನ ಆರಂಭಿಸುತ್ತಿದ್ದೇನೆ. ಕಾರಣ ಲೇಖನದ ವಿಷಯ. ‘ಮೊಬೈಲ್’ ಬಗ್ಗೆ ಬರೆಯುವಾಗ ಬಹಳ ಜಾಗೂರುಕರಾಗಿರಬೇಕು. ಒಂದು ನಮ್ಮ ಬದುಕಿನಲ್ಲಿ ಮೊಬೈಲ್ ಫೋನು ಆಕ್ರಮಿಸಿಕೊಂಡಿರುವ ಮಹತ್ತರ ಸ್ಥಾನದಿಂದಾಗಿ ಹೀಗೆ ಬರೆದರೆ ತಪ್ಪಿತಸ್ಥ ಭಾವನೆ ಕಾಡದಿರದು. ಮೊಬೈಲಿನ ಜನಪ್ರಿಯತೆ ಎಷ್ಟಿದೆಯೆಂದರೆ ಅದರ ಬಗ್ಗೆ ಬರೆಯುವುದು ಒಂದು ರೀತಿ ಸಂಕಟ ಮೈಮೇಲೆ ಎಳೆದುಕೊಂಡಂತೆ. ಮೊಬೈಲ್ ಅಭಿಮಾನಿಗಳ ಸಂಘಟನೆ ಏನಾದರು ಇದ್ದಲ್ಲಿ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುವುದೆಂಬ ಅಳುಕು. ಇನ್ನೊಂದು ಚರ್ಚೆ ಹಳಸಿ ನಾರುತಿರುವುದು.. . ಹೌದು ಮೊಬೈಲ್ ಎಂಬ ಸಾಧನ ಎಷ್ಟೊಂದು ಚರ್ಚೆ, ಟೀಕೆಗಳಿಗೆ ಗ್ರಾಸವಾಗಿದಿಯೆಂದರೆ ಒಂದು ತರಹದಲ್ಲಿ ನಮ್ಮ ಸಮಾಜದ ಕೆಲ ರಾಜಕಾರಣಿ ಹಾಗು ವಿವಾದಾತ್ಮಕ ಬುದ್ದಿಜೀವಿಗಳಂತೆ… ಆಡಿಕೊಂಡಷ್ಟು, ಮಾತಾಡಿದಷ್ಟು ಸ್ಥಾನ-ಮಾನ , ಬೆಲೆ ಜಾಸ್ತಿ… ಏನೇ ಇರಲಿ ಎಷ್ಟೇ ಚರ್ಚೆ ನಡೆದಿರಲಿ ಮೊಬೈಲ್ ಫೋನ್ ಗಳ ಪ್ರಾಮುಖ್ಯತೆಗಂತೂ ಯಾವುದೇ ಕುಂದು ಬಂದಿಲ್ಲವೆನ್ನಿ….
 
 
 
ಮೊನ್ನೆ ಶಿವಮೊಗ್ಗದ ಸರ್ಕಲ್ ಒಂದರಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕಾರು ನಿಲ್ಲಿಸಿದಾಗ ಕಂಡ ದೃಶ್ಯವೊಂದು ಈ ಲೇಖನದ ಸ್ಪೂರ್ತಿ… ಆ ಕೆಲ ಸೆಕೆಂಡ್ ಗಳಲ್ಲಿ ಪಕ್ಕದಲ್ಲಿ ಬೈಕ್ ನಿಲ್ಲಿಸಿಕೊಂಡ ಯುವಕನೊಬ್ಬ ತಕ್ಷಣವೇ ಜರ್ಕಿನ್ ಒಳಗಿಂದ ಮೊಬೈಲ್ ಹೊರ ತೆಗೆದು ಚಕಚಕ ಟೈಪ್ ಮಾಡತೊಡಗಿದ.. ಇನ್ನೊಂದು ಪಕ್ಕದಲ್ಲಿ ಮತ್ತೊಂದು ಬೈಕ್.. ಗಂಡ ಹೆಂಡತಿ ಮಧ್ಯೆ ಮಗು.. ಮಗು ನಮ್ಮ ಕಾರನ್ನೇ ಪಿಳಿಪಿಳಿ ನೋಡುತ್ತಿತ್ತು.. ಕಿವಿಯಲ್ಲಿ ಇಯರ್ ಫೋನ್… ಹಾಡು ಕೇಳುತ್ತಿದ್ದಿರಬಹುದ … ಇದು ಸರ್ವೇ ಸಾಮಾನ್ಯ ದೃಶ್ಯವೆನ್ನಿ. ಆದರೆ ಯೋಚಿಸಿ, ಒಂದು ನಿಮಿಷದ ನಿಲುಗಡೆಯಲ್ಲೂ ಮೊಬೈಲ್ ಬಳಸುವ ಅನಿವಾರ್ಯತೆಯಾದರು ಎಷ್ಟು… ಮಕ್ಕಳು ಬೈಕ್ ರೌಂಡ್ ನನ್ನು ಎಷ್ಟು ಸಂಭ್ರಮಿಸಬೇಕು.. ಅಂಥದ್ದರಲ್ಲಿ ಮಗು ಆಚೆ ಈಚೆ ನೋಡದೆ ಕಿವಿಗೆ ಐಆರ್ ಫೋನ್ ಸಿಕ್ಕಿಸಿ ಜಗತಲ್ಲಿ ಮೊಬೈಲ್ ಒಂದೇ ಅಥವಾ ಮೊಬೈಲೇ ಒಂದು ಜಗತ್ತ್ಎಂದಾದರೆ ಎಂತಹ ವಿಪರ್ಯಾಸ ಅಲ್ಲವೇ..
 
 
 
ಪೂನಾದ ಹೋಟೆಲ್ ಒಂದರಲ್ಲಿ ಊಟ ಮಾಡುವಾಗಿನ ಅನುಭವ.. ಎದುರು ಸಾಲಿನಲ್ಲಿ ಮೂರು ಟೇಬಲ್ ಗಳ ಜೋಡಿಸಿ ಫ್ಯಾಮಿಲಿ ಗೆಟ್ ಟುಗೆದರ್ … ಒಂದು ಟೇಬಲ್ ನಲ್ಲಿ ಹೆಂಗಸರ ಮಾತು, ನಗು ಇನ್ನೊಂದರಲ್ಲಿ ಗಂಡಸರ ಸಮಾಲೋಚನೆ.. ಮಧ್ಯದ ಟೇಬಲ್ ನಲ್ಲಿ ಎಲ್ಲಿ ಕುಳಿತಿದ್ದೇವೆ ಎಂಬ ಪರಿವೆಯೇ ಇಲ್ಲದ ಪುಟ್ಟ ಮಕ್ಕಳು.. ಆಗಲೇ ನೀರು ಚಲ್ಲಿ, ಸ್ಪೂನ್ ಬೀಳಿಸಿ ಗೋಬಿ ಮಂಚೂರಿ ಬೇಕೇ ಬೇಕು ಅಂದು ರಂಪಾಟ ಮಾಡಿದ್ದ ನನ್ನ ಮಗನ ಮುಂದೆ ಅಬ್ಬಾ ಎಷ್ಟು ಡೀಸೆಂಟ್ ಆ ಮಕ್ಕಳು ಎನಿಸಿತು. ತಿನ್ನಲಿಕ್ಕೂ ಅದು-ಇದು ಎಂದು ರಗಳೆ ಇಲ್ಲವಲ್ಲ ಎಂಬ ಅಚ್ಚರಿ ಮೊದಲಾಯಿತಾದರೂ.. ನಂತರ ತಿಳಿಯಿತೆನ್ನಿ ಅವರ ಗಾಂಭೀರ್ಯದ ರಹಸ್ಯ ಕೈಯಲ್ಲಿರುವ ಮೊಬೈಲ್.. ಗೇಮ್ಸ್ ಆಡುವುದರಲ್ಲೇ ಬಾಲ್ಯದ ಅಮೂಲ್ಯ ಆನಂದದಿಂದ ವಂಚಿತರಾಗುತ್ತಿರುವ ಆ ಮಕ್ಕಳಿಗಿಂತ ನನ್ನ ಮಗ ಸಹಜವಾಗಿ ಬೆಳೆಯುತ್ತಿದ್ದಾನೆಂಬ ಸಮಾಧಾನವಾಯಿತೆನ್ನಿ. ಜೋಗುಳ ಹಾಡಲು ತಾಳ್ಮೆಯಿಲ್ಲದ ಎಷ್ಟೋ ತಾಯಂದಿರು ಮಗುವಿನ ಕಿವಿಗೆ ಇಯರ್ ಫೋನ್ ತುರುಕಿ ಹಾಡು ಕೇಳಿಸಿ ನಿದ್ದೆ ಬರಿಸುವಷ್ಟು ಮಟ್ಟಿಗೆ ಪರಿಸ್ಥಿತಿ ಬಂದು ಮುಟ್ಟಿದೆ. ಇಷ್ಟು ಸಣ್ಣ ವಯಸ್ಸಿನಲ್ಲೇ ನನ್ನ ಮಗ/ಳು ಮೊಬೈಲ್ ಆಪರೇಟ್ ಮಾಡುವುದೆಂದು ಹೆಮ್ಮೆ ಪಡುವ ಪೋಷಕರಿಗೆ ಈ ಮೊಬೈಲೇ ಮಕ್ಕಳನ್ನು ಪೋಷಕರನ್ನು ಸಪರೇಟ್ ಮಾಡುತ್ತಿದೆ ಎಂದು ತಿಳಿದು ಡೆಸ್ಪರೇಟ್ ಆಗುವ ಕಾಲ ಸಮೀಪದಲೇ ಇದೆ ಎಂಬ ಅರಿವಿಲ್ಲವಷ್ಟೆ.
 
 
ಅಂದಹಾಗೆ ಮೊಬೈಲಿನ ಸಾಧಕ ಬಾಧಕಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಮಗ್ಯಾರಿಗೂ ಇಲ್ಲ ಎನ್ನುವುದು ಸತ್ಯ.. ಏಕೆಂದರೆ ನಮ್ಮ ಜೀವನದಲ್ಲಿ ಅಂತಹ ಒಂದು ವಿಶೇಷಾಸ್ಥಾನ ನಾವೇ ಅದಕ್ಕೆ ಕೊಟ್ಟು ಬಿಟ್ಟಿದ್ದೇವೆ.. ಮೊಬೈಲಿನ ಅಗತ್ಯ ಅನಿವಾರ್ಯ.. ಬೇರೆ ದಾರಿಯಿಲ್ಲದೆ ಒಪ್ಪಿಕೊಳ್ಳಬೇಕಾಗಿದೆ.. ನಮ್ಮ ಜೀವನದ ಪ್ರತಿ ಹಂತದಲ್ಲೂ ಮೊಬೈಲ್ ಎಂಬ ಮಾನವ ಅನ್ವೇಷಿತ ಸಾಧನ ಹತೋಟಿ ಸಾಧಿಸಿ ಬಿಟ್ಟಿದೆ. ಮೊಬೈಲ್ ಎಂಬುದು ಅಲ್ಲಾದ್ದೀನ್ನ ಜಿನ್ ಅಂತೆ ಕೇಳಿದ್ದನ್ನು ಕೊಡುವ ತೋರುವ ಕಲ್ಪತರುವಾಗಿದೆ. ಕ್ಷಣಿಕ ಉಪಯೋಗಕ್ಕಿಂತ ಧೀರ್ಘಕಾಲದ ಹಾನಿಯ ಬಗ್ಗೆ ನಾವು ಜಾಣ ಕಿವುಡರಂತೆ ತೆಪ್ಪಗಿದ್ದೇವೆ. ಮೊಬೈಲ್ ಎಂಬ ಮಾಯಾಜಾಲದ ವ್ಯಾಪ್ತಿ ಬಹು ದೊಡ್ಡದು ಹಾಗೆ ಬಹು ಶಕ್ತಿಶಾಲಿ ಕೂಡ. ಮೊನ್ನೆ ಮೊನ್ನೆ ಮಗಳು ಹೊಸ ಫೋನ್ ಕೊಂಡಳೆಂದು ಹಳೆ ಫೋನ್ ತನಗೆ ಕೊಟ್ಟಿದ್ದಾಳೆ, ಟಚ್ ಸ್ಕ್ರೀನ್ ಆಪರೇಟ್ ಮಾಡ್ಲಿಕ್ಕೆ ಬರದು ಎಂದು ಗೋಳಾಡುತ್ತಿದ್ದ ಪಕ್ಕದ ಮನೆಯ ೬೫ ವರ್ಷದ ಆಂಟಿ ಒಂದರ ಮೇಲೊಂದು ವಾಟ್ಸ್ ಅಪ್ ಲ್ಲಿ ಮೆಸೇಜ್ ಮಾಡಶುರು ಮಾಡಿದಾಗ ವ್ಹಾರೆ ವ್ಹಾ ಮೊಬೈಲ್ ಎಂಥೆಂಥವರನ್ನು ದಾಸರನ್ನಾಗಿಸಿ ಕೊಂಡೆಯಲ್ಲ ಎಂದು ನಿಟ್ಟುಸಿರು ಬಿಡಬೇಕಾಯಿತು. ಮೋಬೈಲ್ ಎಂಬ ಮಾಯಾ ವಸ್ತುವಿನ ಬಲೆಗೆ ದಾಸರಾಗದವರು ಬಹಳ ಕಡಿಮೆ. ಮೊಬೈಲ್ ಫೋನ್ ಸಂಪರ್ಕ ಕ್ಷೇತ್ರದಲ್ಲಿ ಕ್ಷಿಪ್ರ ಕ್ರಾಂತಿ ಹುಟ್ಟು ಹಾಕಿರುವುದು ಖಂಡಿತಾ ಶ್ಲಾಘನೀಯ. ಜಗತ್ತು ನಮ್ಮ ಅಂಗೈಯಲ್ಲಿ ಸಾಧ್ಯವಾದುದು ಈ ಸಾಧನದಿಂದ ಎಂದರೆ ತಪ್ಪಾಗಲಾರದು. ಈ ಒಂದು ಚಿಕ್ಕ ಸಾಧನದಿಂದ ಮನುಕುಲಕ್ಕೆ ಆದ ಉಪಕಾರಕ್ಕೆ ನಾವು ತಲೆಬಾಗಲೇ ಬೇಕೆನ್ನಿ. ಆದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ಮೊಬೈಲ್ ದೇವರಮುಂದೆ ಬಗ್ಗಿಸಿದ ತಲೆ ಎತ್ತಲಾಗದ ಸ್ಥಿತಿ… ಮೊಬೈಲಿನಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಪರಿಣಿತರಿಂದ ಸಾಕಷ್ಟು ಎಚ್ಚರಿಕೆ ಬರುತ್ತಲೇ ಇದ್ದರು ನಮಗಲ್ಲವೆಂಬಂತೆ ಕಡೆಗಣಿಸುತ್ತಿದ್ದೇವೆ.
 
ಮೊಬೈಲ್ ಕಲ್ಚರ್ ಮಾನವನ ಜೀವನವನ್ನೇ ದಿಕ್ಕನ್ನೇ ಬದಲಾಗಯಿಸಿದೆ. ಕೇವಲ ಸಂಪರ್ಕ ಸಾಧನವಾಗಿ ಉಳಿಯದೆ ಮೊಬೈಲ್ ಇಂದು ಪ್ರತಿಷ್ಠೆಯ ಪ್ರತೀಕವಾಗಿ ಬೆಳೆದಿದೆ. ಫೇಸ್ಬುಕ್, ವಾಟ್ಸಪ್ ಮೊದಮೊದಲು ಟೀಕೆಗೊಳಗಾದರೂ ನಾವು ಅವುಗಳನ್ನ ಎರಡೂ ಹಸ್ತಗಳಿಂದ ಸ್ವೀಕರಿಸಿ, ಕೈಯಲ್ಲೇ ಹಿಡಿದಿಟ್ಟು ಪೋಷಿಸುತ್ತಿದ್ದೇವೆನ್ನಿ. ಅಂದಹಾಗೆ ಮೊಬೈಲ್ ಕಲ್ಚರಿನ ಸಧ್ಯದ ಅತಿರೇಕ ಎಂದರೆ ‘ಸೆಲ್ಫಿ’ ಅಲೆ. ಸಂಪರ್ಕ,ಮಾಹಿತಿ,ಮಯೋರಂಜನೆ ಎಲ್ಲ ಹಳತಾಗಿ ಮೊಬೈಲಿನ ಪ್ರಸಕ್ತ ಅವಶ್ಯಕತೆ ಎಂದರೆ ಫೋಟೋ ಕ್ಲಿಕ್ಕಿಸಲು.. ಅದರಲ್ಲೂ ಸೆಲ್ಫಿ… ಸೆಲ್ಫಿ ಬಗ್ಗೆ ಬರೆಯುವಾಗ ಇನ್ನೊಂದು ಅನುಭವದ ಅವಲೋಕನವಾಗಿಯೇ ಬಿಡಲಿ… ಕೆಲ ದಿನಗಳ ಹಿಂದೆ ನಮ್ಮ ವಿದ್ಯಾರ್ಥಿಗಳನ್ನ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ದಿದ್ದೆವು. ಡಾಕ್ಯುಮೆಂಟೇಶನ್, ಪ್ರವಾಸ ಸ್ಮರಣೀಯವಾಗಿರಲೆಂದು ಕ್ಯಾಮೆರಾ ಅಥವಾ ಮೊಬೈಲ್ ಫೋನೆಗಳ ತರಲು ನಿಂಬಂಧನೆ ಹೇರಲಿಲ್ಲ.. ಆದರೆ ನಮ್ಮ ತಪ್ಪಿನ ಅರಿವಾದದ್ದು ಮಕ್ಕಳು ಪ್ರೇಕ್ಷಣೀಯ ಸ್ಥಳಗಳನ್ನ ನೋಡುವ, ಅರಿಯುವ ಗೋಜಿಗೇ ಹೋಗದೆ ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ಮಗ್ನರಾದಾಗ.. ಹೆಗ್ಗೋಡಿನ ನೀನಾಸಂ ಆವರಣದಲ್ಲಿಯಂತೂ ನಾನು ಕೈಯಲ್ಲಿ ಬಡಿಗೆ ಹಿಡಿದು ದನಗಳನ್ನ ದೊಡ್ಡಿಗೆ ದಬ್ಬುವಂತೆ ವಿದಾರ್ಥಿ/ನಿ ಯರನ್ನ ಬಸ್ಸಿಗೆ ತಳ್ಳಬೇಕಾಯಿತು.ಬಸ್ನಲ್ಲಿ ಕುಳಿತರೂ ಮಲೆನಾಡ ಪ್ರಕೃತಿ ಸೊಬಗ ಸವಿಯುವ ವ್ಯವಧಾನ ಇವರಿಗಿಲ್ಲ.. ವಾಟ್ಸಪ್ ನಲ್ಲಿ ಮೆಸೇಜ್,ತೆಗೆದ ಫೋಟೋಗಳ ರವಾನೆ ಇಷ್ಟೇ ಇವರ ಪ್ರವಾಸದ ಪ್ರಹಸನವಾಯಿತು..
 
 
ಇನ್ನು ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದಕ್ಕೋ,ನೆಟವರ್ಕ್ ಸಿಗದ ಕಾರಣವೋ ಕೆಲ ಮಕ್ಕಳು ಹಾಡು ಹರಟೆ ಅಂತ ಪ್ರವಾಸವನ್ನು ಜೀವಂತವಾಗಿರಿಸಿದರೆನ್ನಿ. ಅಲ್ಲೂ ಕೆಲವರು ಇಯಾರ್ ಫೋನ್ ಸಿಕ್ಕಿಸಿ ಮ್ಯೂಸಿಕ್ ಮೂವಿ ಎಂದು ಥೀಯೇಟರ್ ಅನುಭವವನ್ನೂ ಪಡೆದರು.. ಇನ್ನು ಈ ಸೆಲ್ಫಿ ದೆಸೆಯಿ೦ದಾ ಗುತ್ತಿರುವ ಅವಘಡ ಅನಾಹುತಗಳು ದಿನ ನಿತ್ಯದ ಸತ್ಯ.. ಯಾವುದೇ ಸಭೆ ಇರಲಿ, ಸಮಾರಂಭವಿರಲಿ ಸನ್ನಿವೇಶವಿರಲಿ ಸೆಲ್ಫಿ ತೆಗೆಯುವವರ ಒಂದು ವರ್ಗ ಇಲ್ಲದ್ದಿಲ್ಲ.ಮುಖ, ಮೂತಿ ಸೊಟ್ಟಗೆ ಮಾಡಿಕೊಂಡು ಫೋಟೋಕ್ಲಿಕ್ಕಿಸಿ ಕೊಂಡರೆ ದೊಡ್ಡ ವಿಕ್ಟರಿ ಎಂಬ ಅಮಲು. ಮದುವೆ ಮುಂತಾದ ಸಮಾರಂಭಗಳಲ್ಲಿ ಫೋಟೋಗ್ರಾಫರ್ ವಿಡಿಯೋಗ್ರಾಫರ್ ಗಳು ಸಾಲದೆಂಬಂತೆ ಸೆಲ್ಫಿಗಾಫರ್ ಗಳದ್ದೇ ಹವಾ… ಕಾಕತಾಳೀಯವೆಂಬಂತೆ ಈ ಲೇಖನ ಟೈಪ್ ಮಾಡುವಾಗಲೇ ಟಿವಿ ಯಲ್ಲಿ ಕೇಳಿಬಂದ ತಾಜಾ ಸುದ್ದಿ.. ಹಿಂದಿ ಚಿತ್ರನಟ ಅಕ್ಷಯ್ ಕುಮಾರ್ ತಮ್ಮ ಮುಂದಿನ ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಟಾಯ್ಲೆಟ್ನೊಳಗಡೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಪ್ರಚಾರಗಳಿಸಿದ್ದಾರಂತೆ.. ಇದು ಇನ್ನೆಷ್ಟು ಅಕ್ಷಯ್ ಹಾಗು ಸೆಲ್ಫಿ ಫ್ಯಾನ್ಸ್ಗಳಿಗೆ ದಾರಿದೀಪವಾಗಲಿದೆಯೋ ಮೊಬೈಲೆದೇವರೇ ಬಲ್ಲ.. ಸದಾ ಮೊಬೈಲನ್ನೇ ದಿಟ್ಟಿಸುತ್ತಾ ಕಣ್ಣು ಮಂಜಾಗಿ ದೃಷ್ಟಿ ಕಳೆದು ಕೊಂಡು, ಬೆನ್ನು ಮೂಳೆ ಬಾಗಿ ಅನಿವಾರ್ಯವಾಗಬಹುದಾದ ವಾಕಿಂಗ್ ಸ್ಟಿಕ್ಕಿನ ತಯಾರಿಯೇ ಈ ಸೆಲ್ಫಿ ಸ್ಟಿಕ್ ಇರಲೂ ಬಹುದು.
 
ಮೊದಲೇ ಹೇಳಿದಂತೆ ಮೊಬೈಲಿನ ಮೋಡಿಗೆ ವಯಸ್ಸಿನ ಭೇಧವಿಲ್ಲದಂತೆ ಎಲ್ಲರೂ ಮಾರು ಹೋಗುವವರೇ. ಇನ್ನ್ಯಾವುದೇ ಚಟಗಳಾಗಲೇ ನಿರ್ಧಿಷ್ಟ ವಯಸ್ಕರನ್ನ ತಮ್ಮ ಬಲೆಗೆ ಬೀಳಿಸುತ್ತವೆ. ಆದರೆ ಮೊಬೈಲ್ ಚಟ ಹಾಗಲ್ಲ.. ಇದಕ್ಕೆ ವಯಸ್ಸು ವರ್ಗದ ನಿಯಮವಿಲ್ಲ.. ನಾವುಗಳು ನಮ್ಮ ಜೀವನದ ಇಪ್ಪತ್ತರ ಅಥವಾ ಮೂವತ್ತರ ದಶಕದಲ್ಲಿ ಮೊಬೈಲಿನ ಮಾಯೆಗೆ ಬಿದ್ದೆವು.. ಆದರೆ ನಮ್ಮ ನಂತರದ ಪೀಳಿಗೆ ಹುಟ್ಟುತ್ತಲೇ ಮೊಬೈಲಿನ ಮಡಿಲಲ್ಲಿ ಆಡುತ್ತಿವೆ. ದೊಡ್ಡವರಿಗೆ ಮೊಬೈಲ್ ಚಟವಾದರೆ ಚಿಕ್ಕ ಮಕ್ಕಳಿಗೆ ಆಟ. ದೈಹಿಕ ವ್ಯಾಯಾಮ ಸಿಗುವ ಆಟ ಆಡಿಕೊಂಡು ಕುಣಿದು ಕುಪ್ಪಳಿಸ ಬೇಕಾದ ಪುಟಾಣಿಗಳು ಇಂದು ಮೂಲೆಯಲ್ಲಿ ಮೊಬೈಲ್ ಹಿಡಿದು ಕುಳಿತಿರುವದು ದುರ್ವಿಧಿ . ಮಕ್ಕಳ ಹಠ ಚೇಷ್ಟೆಗೆ ಕಡಿವಾಣ ಹಾಕಿದ ಮೊಬೈಲ್ಗೆ ಏಷ್ಟೋ ಪೋಷಕರು ಆಭಾರಿಗಳಾಗಿರುವುದು ಬಹು ದೊಡ್ಡ ವಿರೋಧಾಭಾಸ . ದೀಪಾವಳಿ ಸಂಜೆ ಆಗಸದಲ್ಲಿ ಬೆಳಕಿನ ಚಿತ್ತಾರ, ಪಟಾಕಿ ಸದ್ದಿಗೆ ಕಾರಿನಲ್ಲಿ ಕುಳಿತ ನಾನೇ ವಯಸ್ಸನ್ನ ಮರೆತು ಖುಷಿಯಿಂದ ಸಂಭ್ರಮಿಸುತ್ತಿದ್ದಾಗ ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿ ಇದ್ಯಾವುದರ ಪರಿವೇ ಇಲ್ಲದಂತ್ತಿದ್ದ ಆ ಪುಟಾಣಿ ಹುಡುಗನ ಬಗ್ಗೆ ನನಗೆ ಮರುಕ ಹುಟ್ಟಿದ್ದು ತಪ್ಪಿರಲಾರದು.
 
ಮೊಬೈಲ್ ಎಂಬುದು ಒಂದು ಸಮೂಹ ಸನ್ನಿಯಂತಾಗಿದೆ ನಮ್ಮ ಸಮಾಜದಲ್ಲಿ. ಸಮ್ಮೋಹನಕ್ಕೊಳಗಾದವರಂತೆ ನಾವು ಪರಿಣಾಮಗಳನ್ನ ನಿರ್ಲಕ್ಷಿಸುತ್ತಿದ್ದೇವೆ, ಅದರ ಗುಲಾಮರಾಗುತ್ತಿದ್ದೇವೆ ಎಂಬುದು ಮುಂದಿನ ಪೀಳಿಗೆಗೂ ನಾವು ತಂದೊಡ್ಡುತ್ತಿರುವ ದುರಂತ. ನಮ್ಮ ನಾಡಿನ, ನಮ್ಮ ಸಮೂಹದ ಯಾವ ಕಲ್ಚರನ್ನ ನಾವು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತೀವೋ ಇಲ್ಲವೋ ಮೊಬೈಲ್ ಕಲ್ಚರನ್ನ ಮಾತ್ರ ತಪ್ಪದೆ ಹಸ್ತಾಂತರಿಸಲು ಪಣ ತೊಟ್ಟಂತಿದೆ ನಮ್ಮ ನಡುವಳಿಕೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಅನತಿ ವಿಷದಲ್ಲೂ ಔಷಧಿ ಗುಣ ಇದೆ ಎಂಬುದು ಸುಳ್ಳಲ್ಲ. ಇದೇ ಮೊಬೈಲ್ನಲ್ಲಿ ವಾಟ್ಸಪ್ ಫೇಸ್ಬುಕ್ ಮುಂತಾದ ತಾಣಗಳಲ್ಲಿ ದಿನೇ ದಿನೇ ಹಲವಾರು ಎಚ್ಚರಿಕೆಯ ಸಂದೇಶ ಬರುತ್ತಲೇ ಇವೆ. ಇತ್ತೀಚೆಗಷ್ಟೇ ವಾಟ್ಸಪ್ ನಲ್ಲಿ ರವಾನೆಯಾದ ಸಂದೇಶ “ಮನೆಯಲ್ಲಿ ಮೊಬೈಲ್ ಹಾಳಾಯಿತೆ೦ದರೆ ಮಕ್ಕಳೇ ಕಾರಣ.. ಮಕ್ಕಳು ಹಾಳಾದರೆಂದರೆ ಮೊಬೈಲೇ ಕಾರಣ..” ಮೊದಲರ್ಧ ಓದಿದ ಕೂಡಲೇ ಹೌದೌದು ಅನ್ನುವ ನಾವು ದ್ವಿತೀಯಾರ್ಧಕ್ಕೆ ತುಟಿ ಪಿಟಕ್ಕೆನ್ನದೆ ಬೇರೆಯವರಿಗೆ ಫಾರ್ವರ್ಡ್ ಮಾಡಿ ಜವಾಬ್ದಾರಿ ಮುಗಿಯಿತ್ತೆನ್ದು ಕೈ ತೊಳೆದ ಕೊಳ್ಳುತ್ತೇವೆ. ತಂಬಾಕು ಪ್ಯಾಕೆಟಿನ ಮೇಲಿನ “ತಂಬಾಕು ಕೊಲ್ಲುತ್ತದೆ ” ಎಂಬ ಎಚ್ಚರಿಕೆಯ ಸಾಲಿನಂತೆ ಈ ಎಚ್ಚರಿಕೆಯೂ ಕಸದ ತೊಟ್ಟಿಗೆ ಸೇರುತ್ತಿದೆ.
 
ಮೊಬೈಲ್ ಮಾನವನ ಅಸಾಧ್ಯ ಬುದ್ಧಿವಂತಿಕೆಯ ಅದ್ಭುತ ಫಲಿತಾ೦ಶ. ಈ ಸಾಧನೆಗೆ ಮನುಕುಲ ಸದಾ ಧನ್ಯವಾಗಿರಬೇಕೇ ವಿನಃ ಪಶ್ಚಾತ್ತಾಪ ಪಡುವಂತೆ ನಮ್ಮಿಂದಲೇ ಆಗಬಾರದು. ಹಿತ ಮಿತ ಉಪಯೋಗದಿಂದ ಖಂಡಿತಾ ಅನುಕೂಲ, ಅಭಿವೃದ್ಧಿ ಸಾಧ್ಯ.
ಅದೇ ಮೊಬೈಲ್ ಮೇಲಿನ ಮೋಹ ಮೇನಿಯಾ ಆಗಿ ಪರಿವರ್ತನೆಯಾದಲ್ಲಿ ಮನುಕುಲವೇ ಮನೋವ್ಯಾಕುಲತೆಯಿಂದ ಬಳಲ ಬೇಕಾಗುವುದು ಅಕ್ಷರಶಃ ನಿಜ.

LEAVE A REPLY

Please enter your comment!
Please enter your name here