ಮೆಹಬೂಬಾ ಮುಫ್ತಿಗೆ ಭರ್ಜರಿ ಜಯ

0
518

 
ವರದಿ: ಲೇಖಾ
ಮಾಜಿ ಸಿಎಂ ಮುಫ್ತಿ ಮೊಹಮದ್ ಸಾವಿನಿಂದಾಗಿ ತೆರವಾಗಿದ್ದ ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ವಿಧಾನಸಭಾ ಕ್ಷೇತ್ರಕ್ಕೆ ನಡೆದಿರುವ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ, ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವಿಜಯ ಸಾಧಿಸಿದ್ದಾರೆ. 11 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.
 
 
 
ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಶನಿವಾರ ಬೆಳಗ್ಗೆ ನಡೆದ ಮತ ಎಣಿಕೆ ಕಾರ್ಯದಲ್ಲಿ ಪಿಡಿಪಿ ಪಕ್ಷದ ಅಭ್ಯರ್ಥಿ ಮೆಹಮೂಬಾ ಮುಫ್ತಿ ಅವರು 11 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಸಾಧಿಸುವ ವಿಜೇತರಾಗಿದ್ದಾರೆ. 5 ನೇ ಸುತ್ತಿನ ಎಣಿಕೆ ಮುಕ್ತಾಯವಾಗಿದ್ದು, ಪ್ರತಿಸ್ಪರ್ಧಿಗಳಾದ ನ್ಯಾಷನಲ್ ಕಾನ್ಪರೆನ್ಸ್​ನ ಇಫ್ತಿಕಾರ್ ಮಿಸ್​ಗರ್ ಮತ್ತು ಕಾಂಗ್ರೆಸ್​ನ ಹಿಲಾಲ್ ಷಾ ಪರಾಭವಗೊಂಡಿದ್ದಾರೆ.
 
 
 
ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿರುವ ಮೆಹಬೂಬಾ, ಮತ ಯಂತ್ರಗಳಲ್ಲಿ ತಮಗೆ ಅಧಿಕ ಮತ ಬರುವಂತೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್​ನ ಹಿಲಾಲ್ ಷಾ ಆರೋಪಿಸಿದರು. ಇದರಿಂದ ಕೆಲ ಕಾಲ ಮತ ಎಣಿಕೆ ಸ್ಥಗಿತವಾಗಿತ್ತು. ನಾಲ್ಕನೇ ಸುತ್ತಿನ ಮತ ಎಣಿಕೆ ಮುಗಿದಾಗಲೂ ಮೆಹಬೂಬಾ ಮುನ್ನಡೆ ಸಾಧಿಸಿದಾಗ ಚುನಾವಣಾ ವ್ಯವಸ್ಥೆಗೆ ಧಿಕ್ಕಾರ ಕೂಗಿ ಹಿಲಾಲ್ ಮತ್ತವರ ಬೆಂಬಲಿಗರು ಮತಗಟ್ಟೆಯಿಂದ ಹೊರ ನಡೆದರು.
 
 
 
ಅನಂತ್ ನಾಗ್ ಕ್ಷೇತ್ರದಲ್ಲಿ ಒಟ್ಟು 28,500 ಮತಗಳು ಬಿದ್ದಿದ್ದು, ಈ ಪೈಕಿ ಮುಫ್ತಿ ಮೆಹಬೂಬಾ ಅವರು ಒಟ್ಟು 17,701 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ನ ಹಿಲಾಲ್ ಶಾ 5,616 ಮತಗಳು ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಇಫ್ತಿಕಾರ್ ಮಿಸ್​ಗರ್ ಕೇವಲ 2,811 ಮತಗಳನ್ನು ಮಾತ್ರ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
 
 
 
ಅನಂತನಾಗ್ ಕ್ಷೇತ್ರದ ಸಂಸದರಾಗಿದ್ದ ಮೆಹಬೂಬಾ ತಮ್ಮ ತಂದೆ, ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ನಿಧನದ ನಂತರ ರಾಜ್ಯ ರಾಜಕಾರಣದ ಗದ್ದುಗೆ ಏರಿದ್ದರು.

LEAVE A REPLY

Please enter your comment!
Please enter your name here