ಮೆಸ್ಕಾಂ ಉಪಕಚೇರಿಗೆ ಮುತ್ತಿಗೆ

0
396

 
ವರದಿ: ಸುನೀಲ್ ಕುಮಾರ್
ಹೆಚ್ಚುವರಿ ಡಿಪಾಸಿಟ್ ವಸೂಲಿ ಹಾಗೂ ವಿದ್ಯುತ್ ದರ ಏರಿಕೆಯ ವಿರುದ್ಧ, ಮೆಸ್ಕಾಂ ಅಧಿಕಾರಿಗಳ ದಬ್ಬಾಳಿಕೆಗಳ ವಿರುದ್ಧ ಆಗಸ್ಟ್ 12 ರಂದು ನಗರದ ನೆಹರೂ ಮೈದಾನದ ಬಳಿಯಲ್ಲಿರುವ ಮೆಸ್ಕಾಂ ಉಪಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಮಂಗಳೂರು ನಗರ ದಕ್ಷಿಣ ಸಮಿತಿಯ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
 
ನಮ್ಮನ್ನಾಳುವ ಸರ್ಕಾರಗಳು ವಿಪರೀತವಾಗಿ ವಿದ್ಯುತ್ ದರವನ್ನು ಏರಿಸುವ ಮೂಲಕ ಜನತೆಗೆ ತೀರಾ ಸಂಕಷ್ಟವನ್ನು ತಂದೊಡ್ಡಿದೆ. ಬೆಲೆಯೇರಿಕೆಯನ್ನು ತಡೆಗಟ್ಟಬೇಕಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಬದಲು, BPL ರೇಷನ್ ಕಾರ್ಡನ್ನು ಕಡಿತಗೊಳಿಸುವ ಹುನ್ನಾರವನ್ನು ರಾಜ್ಯ ಸರ್ಕಾರವು ನಿರಂತರವಾಗಿ ನಡೆಸುತ್ತಿದೆ. BPL ರೇಷನ್ ಕಾರ್ಡನ್ನು ಇಲ್ಲವಾಗಿಸಲು ವಿದ್ಯುತ್ ಬಿಲ್ಲನ್ನು ಮಾನದಂಡವನ್ನಾಗಿಸಿ, ಮಿತವಾಗಿ ವಿದ್ಯುತ್ನ್ನು ಉಪಯೋಗಿಸಿದರೂ, ಸರ್ಕಾರವು ಮಾತ್ರ ಸದ್ದಿಲ್ಲದೆ ಪ್ರತೀ ಯುನಿಟ್ ದರವನ್ನು ವಿಪರೀತವಾಗಿ ಏರಿಸಿ, ಭಾರೀ ಮೊತ್ತದ ಕರೆಂಟ್ ಬಿಲ್ಲ್ ಬರುವಂತೆ ಮಾಡಿದೆ. ಒಂದು ಕಡೆ ವಿದ್ಯುತ್ ಬಿಲ್ಲನ್ನು ಪಾವತಿಸಲು ಹೆಣಗಾಡುತ್ತಿರುವ ಸಾಮಾನ್ಯ ಜನತೆ, ಮತ್ತೊಂದು ಕಡೆ ತನಗೆ ಗೊತ್ತಿಲ್ಲದೆ ತಮ್ಮ BPL ರೇಷನ್ ಕಾರ್ಡನ್ನು ಕಳೆದುಕೊಳ್ಳುತ್ತಿದ್ದಾರೆ.
 
 
ಇನ್ನೊಂದು ಆಘಾತಕಾರಿ ವಿಷಯವೆಂದರೆ ಜನತೆಯ ಮೇಲೆ ಹೆಚ್ಚುವರಿ ಡಿಪಾಸಿಟ್ ಹೆಸರಲ್ಲಿ ಮೆಸ್ಕಾಂ ನಡೆಸುವ ಹಗಲು ದರೋಡೆಯು ಅಕ್ಷಮ್ಯ ಅಪರಾಧವಾಗಿದೆ. ವಿದ್ಯುತ್ ಬಿಲ್ಲನ್ನೇ ಪಾವತಿಸಲು ಪರದಾಡುತ್ತಿರುವ ಜನಸಾಮಾನ್ಯರು, ಹೆಚ್ಚುವರಿ ಡಿಪಾಸಿಟ್ ಹೆಸರಲ್ಲಿ ರೂ. 3,000/-, 2,000/-, 1,500/-ರಷ್ಟು ಹಣವನ್ನು ಪಾವತಿಸುವುದಾದರೂ ಹೇಗೆ….? ಎಂದು ಸಿಪಿಐ(ಎಂ) ಪ್ರಶ್ನಿಸಿದೆ.
 
ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಲ್ಲಿ ಕೇಳಿದರೆ ಉಡಾಫೆಯ ಮಾತುಗಳು ಕೇಳಿ ಬರುತ್ತಿದೆಯೇ ಹೊರತು ಸ್ಪಷ್ಟವಾದ ನಿರ್ದೇಶನಗಳಿಲ್ಲ. ಮಾತ್ರವಲ್ಲದೆ ಡಿಪಾಸಿಟ್ನ್ನು ನಿಗದಿತ ದಿನಗಳಲ್ಲಿ ಕಟ್ಟದೇ ಹೋದಲ್ಲಿ ಕರೆಂಟ್ ಕಟ್ ಮಾಡುವುದಾಗಿ ಬೆದರಿಕೆಯನ್ನು ಕೂಡ ಹಾಕಲಾಗಿದೆ. ಕಳೆದ 5 ವರ್ಷಗಳ ಹಿಂದೆ ಇದೇ ರೀತಿ ಡಿಪಾಸಿಟ್ ವಸೂಲಿ ಮಾಡುವುದರ ವಿರುದ್ಧ ಜನತೆ ನಡೆಸಿದ ಪ್ರಬಲ ಹೋರಾಟದಿಂದಾಗಿ ಡಿಪಾಸಿಟ್ ಸಂಗ್ರಹ ನಿಲ್ಲಿಸಲಾಯಿತು. ಮಾತ್ರವಲ್ಲದೆ ಅದುವರೆಗೆ ಸಂಗ್ರಹಿಸಿದ ಹಣವನ್ನು ವಿದ್ಯುತ್ ಬಿಲ್ಲ್ಗೆ ಸಮದೂಗಿಸಲಾಗುವುದೆಂದು ಅಧಿಕಾರಿಗಳು ಹೇಳಿದ್ದರೂ ಇವತ್ತಿನವರೆಗೂ ಮಾಡಿಲ್ಲ. ಹಾಗಾದರೆ ಡಿಪಾಸಿಟ್ ಹೆಸರಲ್ಲಿ ಅಂದು ಸಂಗ್ರಹಿಸಿದ್ದ ಕೋಟ್ಯಾಂತರ ರೂ. ಹಣವು ಎಲ್ಲಿ ಹೋಗಿದೆ….? ಎಂಬ ಸಂಶಯ ಮೂಡುತ್ತಿದೆ.
 
ಹೆಚ್ಚುವರಿ ಡಿಪಾಸಿಟ್ ವಸೂಲಿ ಹೆಸರಿನಲ್ಲಿ ಮೆಸ್ಕಾಂ ನಡೆಸುವ ಹಗಲು ದರೋಡೆಯನ್ನು ನಿಲ್ಲಿಸಲು ಹಾಗೂ ಮೆಸ್ಕಾಂ ಅಧಿಕಾರಿಗಳ ದಬ್ಬಾಳಿಕೆಗಳ ವಿರುದ್ಧ ಆಗಸ್ಟ್ 12ರಂದು ಬೆಳಿಗ್ಗೆ 10.00ಕ್ಕೆ ನಗರದ ಮಿನಿ ವಿಧಾನಸೌಧದಿಂದ ಮೆರವಣಿಗೆ ಹೊರಟು, ಬಳಿಕ ನೆಹರೂ ಮೈದಾನದ ಬಳಿಯಲ್ಲಿರುವ ಮೆಸ್ಕಾಂನ ಉಪಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದ್ದು, ನಗರದ ವಿದ್ಯುತ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಿಪಿಐ(ಎಂ) ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here