ಮೂಲ ಸ್ಥಾನಕ್ಕೇಕಿಲ್ಲ 'ಕಲ್ಯಾಣದ ಭಾಗ್ಯ'?

0
424

 
-ವೇಣೂರಿನ ಗೊಮ್ಮಟನಂತೆ ಅದರ ಮೂಲ ಸ್ಥಾನಕ್ಕೇಕಿಲ್ಲ ‘ಕಲ್ಯಾಣದ ಭಾಗ್ಯ’?
ಮಾನುಷ ಅತಿಮಾನುಷ ಸಂಗತಿಗಳು ಒಗ್ಗೂಡುವ ವಿಶಿಷ್ಟ ಪರಂಪರೆಯ ತುಳುನಾಡು ಅನನ್ಯ ಪ್ರಾದೇಶಿಕ ಪ್ರಪಂಚವೊಂದನ್ನೇ ಸೃಷ್ಟಿಸಿದೆ. ನಾಗಾರಾಧನೆ, ಭೂತಾರಾಧನೆಗಳ ಮುಖೇನ ಪರಶುರಾಮ ಸೃಷ್ಟಿಯ ನಾಡನ್ನು ಬೆಳಗಿಸಿದೆ. ಇಲ್ಲಿ ದೇವರಷ್ಟೇ ದೈವಗಳಿಗೂ ಪೂಜ್ಯಭಾವವಿದೆ. ಮಾಯಕದ ಕಥೆಗಳು ಪ್ರತೀ ಗ್ರಾಮಕ್ಕೂ ಚಿರಪರಿಚಿತ ಜನಪದ ಸತ್ಯ. ಇಲ್ಲಿ ಹೇಳಹೊರಟಿರುವುದು ಶೋಷಣೆಯನ್ನು ಎದುರಿಸಿದರೂ ಬದುಕಿನ ಮೌಲ್ಯಗಳನ್ನು ಪೊರೆದ, ಇಂದಿಗೂ ಸತ್ಯ ಧರ್ಮಗಳ ಮೂಲಕ ಸಮಾಜವನ್ನು ಕಾಪಾಡುತ್ತಿರುವ, ಕಾರ್ಕಳ ಮತ್ತು ವೇಣೂರಿನ ಗೊಮ್ಮಟಗಳನ್ನು ಕೆತ್ತಿ ಕ್ರಮೇಣ ಮಾಯಕವಾಗಿ ಕಲ್ಯಾಣಿಯೆಂಬ ಕೆತ್ತಿದ ಸ್ಥಳದಲ್ಲಿಯೇ ದೈವಗಳಾಗಿ ನೆಲೆನಿಂತ ಕಲ್ಕುಡ ಕೊಡಮಣಿತ್ತಾಯ ದೈವಗಳ ಕಥನವಿದು.
 
 
venuru gommata1
 
 
ವೇಣೂರು ಎಂದಾಕ್ಷಣ ಮೊದಲು ನೆನಪಾಗುವುದು ಅಷ್ಟ ದಿಕ್ಕುಗಳನ್ನೇ ಅಂಬರವನ್ನಾಗಿಸಿಕೊಂಡಿರುವ ಬೃಹತ್ ವೈರಾಗ್ಯ ಮೂರ್ತಿ. ಆದರೆ ಇಂದಿಗೂ ಅನಾಮಿಕವಾಗಿ ತೆರೆಮರೆಯಲ್ಲಿಯೇ ಉಳಿದಿರುವ; ವೈಭವಯುತವಾಗಿ ನಡೆಸುವ ಮಸ್ತಕಾಭಿಷೇಕಕ್ಕೆ ತುಂಬು ಮನಸ್ಸಿನಿಂದ ಸಹಕರಿಸುವ ಹಾಗೂ ‘ಅರ್ಥ’ಪೂರ್ಣವಾಗಿ ಪಾಲ್ಗೊಳ್ಳುವ ಗಣ್ಯರಿಂದಲೂ ಹೀಗೆ ಎಲ್ಲ ರೀತಿಯಿಂದಲೂ ನಿರ್ಲಕ್ಷಕ್ಕೆ ಗುರಿಯಾಗಿರುವುದು ಗೊಮ್ಮಟನನ್ನು ಕೆತ್ತಿದ ಮೂಲಸ್ಥಳ ಪೆರ್ಮುಡ ಗ್ರಾಮದ ಶ್ರೀ ಕ್ಷೇತ್ರ ಕಲ್ಯಾಣಿ. ಅದೊಂದು ಕಾಲದಲ್ಲಿ ಕಾರ್ಕಳದ ಅರಸರಿಂದ ನೊಂದು ಬಂದಿದ್ದ ಶಿಲ್ಪಿ ವೀರ ಕಲ್ಕುಡನಿಗೆ ಆಶ್ರಯ ನೀಡುವುದೇ ನಿಜವಾದ ಧರ್ಮವೆಂದು ನಂಬಿ, ಕಾರ್ಕಳದ ಭೈರರಸರ ಕೋಪಕ್ಕೆ ತುತ್ತಾಗಿ ಯುದ್ಧವನ್ನು ಎದುರಿಸಿಯೂ, ನಾರಾವಿ ಸೀಮೆಯನ್ನು ಕಳೆದುಕೊಂಡರೂ, ಅಂದುಕೊಂಡಂತೆ ಸುಂದರ ಗೊಮ್ಮಟನನ್ನು ಕೆತ್ತಿಸಿ ಪ್ರತಿಷ್ಟಾಪಿಸಿದ್ದರು. ಕಲ್ಕುಡ, ಕೊಡಮಣಿತ್ತಾಯರಿಗೆ ಕೆಲಸಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿದ್ದರು ಎಂಬುದಕ್ಕೆ ಪುರಾವೆಗಳು ಸಿಗುತ್ತವೆ. ಆದರೆ ಅದೇ ವಂಶಕ್ಕೆ ಸೇರಿದ ಇಂದಿನ ಗೌರವಾನ್ವಿತ ಅಜಿಲ ಅರಸರು ಕ್ಷೇತ್ರವನ್ನು ಬೆಳಗಿಸಲು ತೋರಿಸಬಹುದಾದ ಇಚ್ಛಾಶಕ್ತಿಯನ್ನೂ ತೋರುತ್ತಿಲ್ಲ. ಗೌರವ ಸ್ಥಾನಗಳಿಗೆ ಸೀಮಿತವಾಗದೆ ಅವರದ್ದೇ ಮನೆತನದ ಇತಿಹಾಸ, ಸಾಧನೆ ಕಾಪಾಡಲು ಮತ್ತು ಊರಿನ ಪ್ರಜೆಗಳ ಒಳಿತಿಗೆ ಅವರು ಮಹತ್ತರವಾದದ್ದು ಮಾಡಬೇಕಿದೆ. ಇದು ರಾಜಾವಳಿಯ ಟೀಕೆಯಲ್ಲ. ಊರಿನವರು ಪ್ರತೀ ಬಾರಿಯೂ ಮಾಡುವ ಏಕನಿಷ್ಟಾ ವಿನಂತಿ.
 
venuru gommata2
 
 
ಸಮರ್ಥ ಬಾಹುಬಲಿಯಾದರೂ ಸರ್ವಸ್ವವನ್ನೂ ತೊರೆದು ಪ್ರಶಾಂತ ಭಾವದಿಂದ ನಿಂತಿರುವ ರೀತಿಯೇ ವಿಶ್ವಕ್ಕೆ ಅಹಿಂಸೆ, ಶಾಂತಿಯನ್ನು ಸಾರುವ ದಿಗ್ದರ್ಶನ. ಗೊಮ್ಮಟ ಬೆಟ್ಟದ ಮೇಲೆ ಗಗನ ಚುಂಬಿಸುವಂತೆ ಆದರೆ ಅ‍‍ಷ್ಟೇ ವಿನಮ್ರ ಪ್ರಜ್ಞೆಯನ್ನು ಸೂಸುತ್ತಿರುವ, ಆತ್ಮದಲ್ಲಿ ಚೈತನ್ಯ ತುಂಬಿ ಆನು ಎಂಬ ಅಹಂ ನಿರಸನಗೊಳಿಸುವ, ಜಡ ಕಲ್ಲಿನೊಳಗೂ ಜೀವ ತುಂಬಿರುವ ಶಂಭೂ ಕಲ್ಕುಡನ ಅಪ್ರತಿಮ ಕೆತ್ತನೆಯೇ ನಿಜಕ್ಕೂ ಅದ್ಭುತ. ರಾಚನಿಕವಾಗಿಯೂ, ಮೂರ್ತಿಯ ಸಮಚಿತ್ತ, ಸಮಭಾವದ ಸಮತಟ್ಟಾದ ಕೆತ್ತನೆ, ಮುಖದ ಪ್ರತೀ ಅಂಗವೂ ಶಾಂತ ರಸವನ್ನು ಉಕ್ಕಿಸಿಯೂ ದೇಹದ ಭಾಗಗಳು ಮಲ್ಲಯುದ್ಧದ ಜಟ್ಟಿಯಂತೆ ಅಜಾನುಬಾಹುವಾಗಿ ರೂಪುಗೊಂಡಿದ್ದರೂ ಎಲ್ಲೂ ಕಲಾಭಾಸವಾಗಿಲ್ಲ. ಇದೇ ಕಾರಣದಿಂದ ವೇಣೂರಿನ ಗೊಮ್ಮಟ ಕರ್ನಾಟಕದಲ್ಲಿರುವ ಇತರ ಮೂರು ಗೊಮ್ಮಟ ಮೂರ್ತಿಗಳಿಗಿಂತಲೂ ಅನನ್ಯ ಮತ್ತು ಅಮೋಘ. ಇದರ ರಚನೆಯ ಹಿನ್ನೆಲೆಯೂ ನಿಗೂಢತೆ ಮತ್ತು ಕೌತುಕತೆಯಿಂದ ಕೂಡಿರುವ ಬೃಹತ್ ಕಥಾನಕ.
 
venuru gommata3
 
 
ನಿರ್ಮಾಣದ ಹಿನ್ನೆಲೆ:
ವೇಣೂರಿನ ಗೊಮ್ಮಟನ ಕೆತ್ತನೆಯ ಬಗ್ಗೆ ಕೆಲವು ದಾಖಲೆಗಳು ದೊರೆಯುತ್ತವೆ. ಕರ್ನಲ್ ಮೆಕೆಂಜಿ ಸಂಗ್ರಹಿಸಿದ್ದ ವೇಣೂರಿನ ಅಜಿಲರ ಕೈಫಿಯತ್ತು, ಕಾರ್ಕಳದ ಭೈರರಸರ ಕೈಫಿಯತ್ತು ಮತ್ತು ಆ ದಾಖಲೆಗಳಿಗೆ ಪೂರಕವಾಗಿರುವ ತುಳು ಪಾಡ್ದನ. ಪ್ರಾದೇಶಿಕ ಅಧ್ಯಯನ, ಸ್ಥಳಪುರಾಣ, ಇತಿಹಾಸದ ದೃಷ್ಟಿಯಿಂದ ಮೊದಲೆರಡು ದಾಖಲೆಗಳು ಮುಖ್ಯವಾದರೆ, ಮೂರನೆಯದ್ದು ಭೂತಕಟ್ಟುವುದಕ್ಕಿರುವ ಜಾನಪದ ಸಾಹಿತ್ಯ. ಆದರೆ ಈ ಎರಡೂ ಪ್ರಕಾರಗಳಲ್ಲಿ ದೊರೆಯುವ ಮಾಹಿತಿಗೆ ಸಾಮ್ಯತೆಯಿದೆ. ಪ್ರಾಗೈತಿಹಾಸಿಕ ಕಥೆಯ ಪ್ರಕಾರ ಇಂದಿಗೆ ೮೦೦ ವರ್ಷಗಳ ಹಿಂದೆ ಕಾರ್ಕಳದ ಭೈರರಸ ಪಾಂಡ್ಯಪ್ಪ ಒಡೆಯ ತನ್ನ ಹೆಸರನ್ನು ಚಿರಸ್ಥಾಯಿಯಾಗಿಸಲು ಹಾಗೂ ಸ್ವಾಮತದ ಉದ್ಧಾರಕ್ಕಾಗಿ ಕಾರ್ಕಳ ಅರಮನೆಯ ಪೂರ್ವದಿಕ್ಕಿನ ಕರಿಕಲ್ಲು ಬೆಟ್ಟದ ಮೇಲೆ ಗೊಮ್ಮಟ ಪ್ರತಿಮೆಯ ಪ್ರತಿಸ್ಥಾಪನೆಗೆ ಕ್ರಮಗೊಳ್ಳುತ್ತಾನೆ. ಪಾಡ್ದನಗಳಲ್ಲಿ ಶಂಭೂ ಕಲ್ಕುಡ ಎಂಬ ಹೆಸರಿನ ಶಿಲ್ಪಿ ಅಥವಾ ಕಾರ್ಕಳದ ಕೈಫಿಯತ್ತಿನಲ್ಲಿ ದಾಖಲಿಸಿರುವಂತೆ ಚಿಕ್ಕಣ್ಣಾಚಾರಿಯ(ಈತ ಪ್ರಾಯಶಃ ಶ್ರವಣ ಬೆಳಗೊಳದ ಗೊಮ್ಮಟನನ್ನು ಕೆತ್ತಿದ ಜಕ್ಕಣ್ಣಾಚಾರಿಯ ವಂಶಜನಿರಬಹುದೆಂದು ಊಹಿಸಲಾಗಿದೆ) ಮೂಲಕ ಗೊಮ್ಮಟ ಮೂರ್ತಿಯನ್ನು ಕೆತ್ತಿಸುತ್ತಾನೆ.
venuru gommata4
 
ಮೂರ್ತಿಯ ರೂಪ, ನಿಷ್ಕಳಂಕತೆಗೆ ಮೋಹಗೊಂಡು, ಇಂತಹ ಅತ್ಯುತ್ತಮವಾದ ವಿಗ್ರಹವನ್ನು ಮತ್ತೆಂದೂ, ಮತ್ತ್ಯಾರೂ ಕೆತ್ತಿಸಬಾರದೆಂಬ ದುರುದ್ದೇಶದಿಂದ ವಿಗ್ರಹವನ್ನು ಅತೀ ಕಾಳಜಿ, ಆಸಕ್ತಿ ಮತ್ತು ನಾಜೂಕಿನಿಂದ ಕೆತ್ತಿದ್ದ ವೀರ ಶಂಭೂ ಕಲ್ಕುಡನ ಬಲಗೈಯನ್ನು ಹಾಗೂ ಕಾಲನ್ನು ಕತ್ತರಿಸುತ್ತಾನೆ. ಈ ನೋವಿನೊಂದಿಗೆ ಕಾರ್ಕಳವನ್ನು ತೊರೆದು ಹೊರಟ ಕಲ್ಕುಡ ಸಹೋದರಿ ಕೊಡಮಣಿತ್ತಾಯಳ ಆಶ್ರಯಕ್ಕಾಗಿ ವೇಣೂರು ಪ್ರಾಂತ್ಯವನ್ನು ಆಳುತ್ತಿದ್ದ ತಿಮ್ಮ ಅಜಿಲರ ಬಳಿಗೆ ಬರುತ್ತಾನೆ. ವರ್ತಮಾನವನ್ನು ಅರಿತ ರಾಜ ಕಲ್ಕುಡನಿಗೆ ಆಶ್ರಯ ನೀಡಿ ಕಾರ್ಕಳದಂತೆಯೇ ವೇಣೂರಿಗೂ ಒಂದು ಗೊಮ್ಮಟ ಕೆತ್ತಬಹುದೇ ಎಂದು ಕೇಳುತ್ತಾರೆ. ಇದನ್ನು ಸವಾಲು ಮತ್ತು ಅವಕಾಶವನ್ನಾಗಿ ಸ್ವೀಕರಿಸಿದ ಕಲ್ಕುಡ ಪೆರ್ಮುಡ ಪಾದೆಯ(ಬೃಹತ್ ಕಲ್ಲುಬಂಡೆ)ಬಳಿ ತನ್ನ ಕೆತ್ತನೆಯ ಕಾರ್ಯವನ್ನು ಪ್ರಾರಂಭಿಸುತ್ತಾನೆ.
 
 
 
ಸುಮಾರು ತಿಂಗಳುಗಳ ಕಾಲ ತಪಸ್ಸಿನಂತೆ ಕಷ್ಟಪಟ್ಟು ಆದರೆ ಅಷ್ಟೇ ಇ‍‍ಷ್ಟಪಟ್ಟು ಒಂದೇ ಕೈಯಲ್ಲಿ ಅವಿರತವಾಗಿ ಕಾರ್ಕಳದ ಗೊಮ್ಮಟನಿಗಿಂತಲೂ ಸುಂದರವಾದ ಮತ್ತು ಅದಕ್ಕಿಂತಲೂ ಎತ್ತರವಾದ ಗೊಮ್ಮಟನನ್ನು ಕೆತ್ತುತ್ತಾನೆ. ವಿಗ್ರಹವನ್ನು ಪ್ರತಿಷ್ಟಾಪಿಸುವ ಕಾಲ ಸನ್ನಿಹಿತವಾಗತೊಡಗಿದ ಸಂದರ್ಭದಲ್ಲಿ ಬಹುಶಃ ಗೂಢಚಾರರಿಂದ ವಿಷಯ ತಿಳಿದ(ದಾಖಲೆಗಳಲ್ಲಿ ಗೊಮ್ಮಟನನ್ನು ಕೆತ್ತುವ ಸದ್ದನ್ನು ಕೇಳಿಸಿಕೊಂಡು ಎಂದಿದೆ.) ಕಾರ್ಕಳದ ಭೈರರಸ ಪಾಂಡ್ಯಪ್ಪ ಒಡೆಯ ತಿಮ್ಮ ಅಜಿಲರ ಮೇಲೆ ಯುದ್ಧ ಸಾರುತ್ತಾನೆ. ಯುದ್ಧದ ಸಂದರ್ಭದಲ್ಲಿ ಮೂರ್ತಿಗೆ ಯಾವುದೇ ಹಾನಿಯಾಗಬಾರದೆಂದು ಕಲ್ಕುಡ ಬೃಹತ್ ಪ್ರತಿಮೆಯನ್ನು ಹೆಗಲ ಮೇಲೆ ಹೊತ್ತುಕೊಂಡು ನರ್ತಿಕಲ್ಲು ದದ್ದರ ಎಂಬಲ್ಲಿ ನದಿಯ ಮರಳಿನಲ್ಲಿ ಯಾರಿಗೂ ಕಾಣದಂತೆ ಹೂತಿಟ್ಟಿದ್ದನಂತೆ. ಯುದ್ಧ ಸುದೀರ್ಘವಾಗಿ ನಡೆದು ಕೊನೆಗೆ ಸಂಧಾನದಲ್ಲಿ ಕೊನೆಗೊಳ್ಳುತ್ತದೆ. ಒಪ್ಪಂದದ ಪ್ರಕಾರ ಗೊಮ್ಮಟನನ್ನು ಉಳಿಸಿಕೊಳ್ಳಲು ನಾರಾವಿ ಸೀಮೆಯನ್ನು ಕಾರ್ಕಳಕ್ಕೆ ನೀಡಲಾಗುತ್ತದೆ.
 
 
 
ಹೀಗೆ ಭವ್ಯ ಗೊಮ್ಮಟ ವಿಗ್ರಹವನ್ನು ಪ್ರತಿಷ್ಟಾಪಿಸಲಾಗುತ್ತದೆ. ಅದೇ ಆಕರ್ಷಣೆಯ ಕೇಂದ್ರ. ಅದರೆ ಈತನ್ಮಧ್ಯೆ ಮಾಯಕವಾಗಿ, ಕೆತ್ತಿದ ಸ್ಥಳದಲ್ಲಿಯೇ ಭೂತಗಳಾಗುವ ಕಲ್ಕುಡ ಕೊಡಮಣಿತ್ತಾಯರು ತಮ್ಮ ಕಾರಣಿಕದಿಂದ ಸತ್ಯ ಧರ್ಮ ಶಾಂತಿಯನ್ನು ಪೊರೆಯುತ್ತಾ ಊರನ್ನು ಅಂದಿನಿಂದ ಇಂದಿನವರೆಗೂ ಬೆಳಗುತ್ತಿದ್ದಾರೆ. ಆದರೆ ದೈವಗಳಾದ ಭೂತಗಳ ಹಾಗೂ ಭೂತಸ್ಥಾನದ ಸ್ಥಿತಿ ಮಾತ್ರ ಶೋಚನೀಯವಾಗುತ್ತಾ ಸಾಗುತ್ತಿತ್ತು. ಕಾಡಿನ ನಡುವೆ ಸುತ್ತ ಹರಿವ ಪಲ್ಗುಣಿ ನದಿಯಿಂದ ಉಪಖಂಡದಂತಿರುವ ಕಲ್ಯಾಣಿಗೆ ಸುಮಾರು ೮೫ ವರ್ಷಗಳ ಹಿಂದೆ ದಿವಂಗತ ಫಂಡಿಜೆ ಗಣಪತಿ ಹೆಬ್ಬಾರರು ಕಾಯಕಲ್ಪವನ್ನು ತೊಟ್ಟು ಇಲ್ಲಿ ನಿಂತೇ ಹೋಗಿದ್ದ ವಾರ್ಷಿಕ ನೇಮೋತ್ಸವವನ್ನು ದೊಂದಿಯ ಬೆಳಕಿನಲ್ಲಿ ಸುಮಾರು ೧೫ ರೂಪಾಯಿಗಳ ವೆಚ್ಚದಲ್ಲಿ ಪ್ರಾರಂಭಿಸುತ್ತಾರೆ. ಅದನ್ನೇ ಅವರ ಪುತ್ರ ಫಂಡಿಜೆ ಲಕ್ಷ್ಮಣ ಹೆಬ್ಬಾರರು ಕಳೆದ ೬೫ ವರ್ಷಗಳಿಂದಲೂ ಅತ್ಯಂತ ಕ್ರಿಯಾಶೀಲತೆಯಿಂದ, ಭಕ್ತಿ-ಭಾವಗಳಿಂದ ಯಾವುದೇ ಕುಂದು ಕೊರತೆಯಾಗದಂತೆ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬಂದಿದ್ದಾರೆ. ಸಣ್ಣ ಬಾಲಕನಾಗಿದ್ದಾಗಿನಿಂದಲೂ ಪ್ರತೀ ವರ್ಷ ಮಾರ್ಚ್ ೧೯ಕ್ಕೆ ಸರಿಯಾಗಿ ರೂಢಿಯಿಂದ ಬಂದ ಕರ್ತವ್ಯದಂತೆ ಗ್ರಾಮಸ್ಥರ ಸಹಕಾರದಿಂದ ವಾರ್ಷಿಕ ನೇಮೋತ್ಸವವನ್ನು ಚೊಕ್ಕವಾಗಿ ಮುನ್ನಡೆಸುತ್ತಿದ್ದಾರೆ. ಅವರ ಈ ಸುದೀರ್ಘ ಅನುಭವದಲ್ಲಿ ದೊಂದಿಯಿಂದ ಪ್ರಾರಂಭಗೊಂಡು ನಂತರ ಗ್ಯಾಸ್ ಲೈಟ್ ಬೆಳಕಿನಲ್ಲಿ ಮುಂದುವರೆದ ಈ ಯಾತ್ರೆಯಲ್ಲಿ ಕಲ್ಯಾಣಿಯ ಆಲಯಕ್ಕೆ ವಿದ್ಯುತ್ತಿನ ದೀಪಗಳು ಬಂದದ್ದೇ ಸುಮಾರು ೧೫ ವರ್ಷಗಳ ಹಿಂದೆ. ಇಲ್ಲಿಗೆ ಗ್ರಾಮ್ ಸಡಕ್ ಯೋಜನೆಯಡಿಯಲ್ಲಿ ೫ ವರ್ಷಗಳ ಹಿಂದೆ ರಸ್ತೆಯೊಂದು ಆಗದಿದ್ದರೆ ಹೊರಗಿನವರು ಕಲ್ಯಾಣಿಯನ್ನು ತಲುಪುವುದೇ ಬಹು ಕಷ್ಟದ ಸಂಗತಿಯಾಗಿತ್ತು. ದೈವಸ್ಥಾನದ ಬೆಳವಣಿಗೆಯಲ್ಲಿ ವರ್ಷದಿಂದ ವರ್ಷಕ್ಕೆ ಸತತವಾಗಿ ಪ್ರಗತಿಯನ್ನೇ ಕಂಡಿರುವ ಹೆಬ್ಬಾರರು ೨೫ ರೂಪಾಯಿಯ ಖರ್ಚಿನಲ್ಲಿ ಭೂತ ಕೋಲವನ್ನು ನಡೆಸಿದ್ದ ಕಾಲವನ್ನು ಹದವಾಗಿ ವಿವರಿಸುತ್ತಾರೆ. ಹೀಗೆ ಸದಾ ಚಟುವಟಿಕೆಯಲ್ಲಿದ್ದುಕೊಂಡು ದೈವಸ್ಥಾನದ ಬೆಳವಣಿಗೆಗೆ ಪೂರಕವಾಗಿ ನಿಂತವರಲ್ಲಿ ದೂರದೃಷ್ಟಿ, ಸೇವಾ ಮನೋಭಾವ, ಆತ್ಮವಿಶ್ವಾಸದ ಪ್ರತೀಕದಂತೆ ಕಾಣುತ್ತಾರೆ. ಒಟ್ಟಾಗಿದ್ದರೆ ಏನೂ ಮಾಡಬಹುದು ಎಂದು ನಂಬಿರುವ ಹೆಬ್ಬಾರರಿಗೆ ಎಲ್ಲವನ್ನೂ ದೈವವೇ ಮಾಡಿಸಿದ್ದು ಎಂಬ ನಿರ್ಲಿಪ್ತತೆಯಿದೆ, ಪೆರ್ಮುಡ ಗ್ರಾಮಸ್ಥರ ಸಹಕಾರಕ್ಕೆ ಕೃತಜ್ಞತಾ ಭಾವವಿದೆ.
 
ಸ್ಥಳದಲ್ಲಿ ದೊರೆಯುವ ದಾಖಲೆಗಳು:
ಏಕಶಿಲಾ ಬಿಂಬವನ್ನು ಕೆತ್ತಿದ್ದಕ್ಕೆ ಸಾಕ್ಷಿಯಾಗಿ ಆ ಬಂಡೆಯಲ್ಲಿ ಕಾಣುವ ಗುಂಡಿಯ ಭಾಗ ಗೊಮ್ಮಟನೇ ಹಿಂತಿರುಗಿ ನೋಡುತ್ತಿರುವಂತಿದೆ. ಗೊಮ್ಮಟನನ್ನು ಬೃಹತ್ ಬಂಡೆಗೆ ಚಾಣ್ಯವಿಟ್ಟು ಕೆತ್ತಲಾಗಿದೆ. ಇದಕ್ಕೆ ಅಲ್ಲಿ ಇಂದಿಗೂ ಲಭ್ಯವಿರುವ ಕುರುಹು ಉಳಿಯಿಂದ ಕಲ್ಲನ್ನು ತುಂಡರಿಸಿದ ಗುರುತು, ಉಳಿ ಕಾಯಿಸಿ ಬಿಸಿ ಮಾಡಿ ಉಳಿದ ಕಬ್ಭಿಣದ ಚೂರಿನ ಪಳೆಯುಳಿಕೆಗಳೇ ಸಾಕ್ಷಿ. ಇಂದಿನ ಆಧುನಿಕ ಯಂತ್ರಗಳೂ ಕತ್ತರಿಸಲು ಸಾಧ್ಯವಾಗದ ಬೃಹತ್ ಗಾತ್ರದ ಬಂಡೆಗಳ ಕೆತ್ತನೆ, ಕಲಾತ್ಮಕವಾಗಿರುವ ಒಂದೇ ಅಳತೆಯ ಅನೇಕ ಬಂಡೆಗಳ ರಾಶಿಯಿಲ್ಲಿದೆ. ಶಿಲ್ಪಿಗಳು ಆಹಾರ ತಯಾರಿಸಲು ಮಾಡಿಕೊಂಡಿದ್ದ ಒಲೆಯ ಕುರುಹು, ರುಬ್ಬಲು ಮಾಡಿದ್ದ ಬೃಹತ್ ಕಡೆಗಲ್ಲಿನಂತಹ ರಚನೆಯನ್ನು ಈಗಲೂ ಕಾಣಬಹುದು. ಅಂದಿನ ಕಾಲದಲ್ಲಿ ನೀರಿಗಾಗಿ ಮಾಡಿದ್ದ ಸುಮಾರು ೬ ಅಡಿ ಆಳದ ಕಲ್ಯಾಣಿ/ಕೆರೆ ಇಂದಿನ ಕಾಲದ ಬಿರು ಬೇಸಗೆಯಲ್ಲಿಯೂ ತುಂಬಿರುತ್ತದೆ. ಅಷ್ಟೇ ಅಲ್ಲ ತಗ್ಗು ಪ್ರದೇಶದಲ್ಲಿದ್ದರೂ ಸುಮಾರು ೨೦೦ ಮೀಟರ್ ದೂರದಲ್ಲಿ ತುಸು ಎತ್ತರದಲ್ಲಿರುವ ದೇವಸ್ಥಾನದ ತೊಟ್ಟಿಗೆ ಸರಾಗವಾಗಿ ನೀರು ಹರಿದು ಬರುತ್ತಿದೆ. ಹೀಗೆ ಹುಡುಕುತ್ತಾ ಹೋದರೆ ಇನ್ನಷ್ಟು ಮಾಹಿತಿಗಳು ಖಂಡಿತವಾಗಿಯೂ ದೊರೆಯಬಹುದು. ಇತಿಹಾಸಜ್ಞರು, ಅಧ್ಯಯನಕಾರರು ಅಧ್ಯಯನ ನಡೆಸಬೇಕಿದೆ.
 
 
೧೨ ವರ್ಷಗಳಿಗೊಮ್ಮೆ ಅತ್ಯಂತ ವಿಜೃಂಭಣೆಯಿಂದ ಬಾಹುಬಲಿಯ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆ ಹೊತ್ತಿನಲ್ಲಿ ವೇಣೂರಿಗೆ ದೊರಕುವ ಪ್ರಾಶಸ್ತ್ಯ, ಅಭಿವೃದ್ಧಿ, ಧನ ಸಹಾಯದಲ್ಲಿ ಕಿಂಚಿತ್ತಾದರೂ ಗೊಮ್ಮಟನನ್ನು ಕೆತ್ತಿದ ಮೂಲ ಸ್ಥಳಕ್ಕೆ, ಗೊಮ್ಮಟನನ್ನು ಕೆತ್ತಿ ದೈವಗಳಾದ ಕಲ್ಕುಡ, ಕೊಡಮಣಿತ್ತಾಯಗಳ ದೈವಸ್ಥಾನಕ್ಕೆ ಸಿಕ್ಕಿದ್ದಿದ್ದರೂ ಕಲ್ಯಾಣಿ ಕ್ಷೇತ್ರದ ಏಳಿಗೆ, ಬೆಳವಣಿಗೆಗೆ ಮಹತ್ತರ ಕೊಡುಗೆ ದೊರೆತಂತಾಗುತ್ತಿತ್ತು. ಈಗಲೂ ತಡವಾಗಿಲ್ಲ. ಸ್ಥಾಪನೆಗೊಂಡ ೮೦೦ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇ ೧೦ ಹಾಗೂ ೧೧ರಂದು ಪುನರ್ ಪ್ರತಿ‍ಷ್ಟಾ ಕಲಶಾಭಿ‍ಷೇಕೋತ್ಸವ ನಡೆಯುತ್ತಿರುವ ಈ ಹೊತ್ತಿನಲ್ಲಾದರೂ, ಇದನ್ನು ಓದುತ್ತಿರುವವರಾದರೂ ಈ ಮಹತ್ ಕಾರ್ಯದಲ್ಲಿ ಕೈಜೋಡಿಸಬೇಕಿದೆ. ಪುರಾತತ್ವ ಇಲಾಖೆಯವರು, ಕರ್ನಾಟಕ ಇತಿಹಾಸ ಅಕಾಡೆಮಿ, ಜಿಲ್ಲಾಡಳಿತ ಮತ್ತು ಇತಿಹಾಸಕಾರರು ಇತ್ತ ಚಿತ್ತೈಸಬೇಕಿದೆ. ಇಲ್ಲಿರುವ ಪ್ರಾಚೀನ ಪಳೆಯುಳಿಕೆ, ಐತಿಹಾಸಿಕ ದಾಖಲೆಗಳ ಅಧ್ಯಯನದ ಜೊತೆಗೆ ಅವುಗಳ ರಕ್ಷಣೆಯ ಅನಿವಾರ್ಯತೆಯೂ ಇದೆ. ತಕ್ಷಣಕ್ಕೆ ಪೆರ್ಮುಡ ಗ್ರಾಮಸ್ಥರ ಇಚ್ಛಾಶಕ್ತಿಗೆ ಇಂಬುಕೊಡುವುದಕ್ಕೆ, ಲಕ್ಷ್ಮಣ ಹೆಬ್ಬಾರರು ಯಾವುದೇ ಕೊರತೆಯಾಗದಂತೆ ನಡೆಸಿಕೊಂಡು ಬಂದಿರುವ ಅವಿರತ ಪ್ರಯತ್ನಕ್ಕೆ ಆರ್ಥಿಕ ನೆರವಿನ ಅಗತ್ಯ ಖಂಡಿತಾ ಇದೆ. ವೇಣೂರಿನ ಗೊಮ್ಮಟನನ್ನು ವೀಕ್ಷಿಸಲು ಆಗಮಿಸುವ ಭಕ್ತರು, ಪ್ರವಾಸಿಗರೂ ವೇಣೂರಿನಿಂದ ಕೇವಲ ೬ ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೂ ಬರುವಂತಾಗಬೇಕು. ಅವರಿಗೂ ಆ ಬೃಹತ್ ಗೊಮ್ಮಟ ಕೆತ್ತಿದ ಸ್ಥಳದ ಅನಾವರಣವಾಗಬೇಕು. ಅಂಥ ಬೃಹತ್ ಪ್ರತಿಮೆಯನ್ನು ಆಧುನಿಕ ಕಾಲದ ಯಾವುದೇ ಯಂತ್ರಗಳ ಸಹಾಯವಿಲ್ಲದೆ ಅತ್ಯಮೋಘವಾಗಿ ಕೆತ್ತಿದ್ದ ಆದರೆ ತೆರೆಮರೆಯಲ್ಲಿಯೇ ಉಳಿದಿರುವ ಕಲ್ಕುಡ ಕೊಡಮಣಿತ್ತಾಯ ದೈವಗಳ ಪರಿಚಯ ಎಲ್ಲರಿಗೂ ಆಗಬೇಕು. ಅದೇ ರೀತಿ ಜೀರ್ಣಾವಸ್ಥೆಯಲ್ಲಿರುವ ದೈವಸ್ಥಾನಕ್ಕೆ ಭಕ್ತರಿಂದ ಅಗತ್ಯ ಆರ್ಥಿಕ ನೆರವೂ ಒದಗಬೇಕಿದೆ.
-ಶ್ರೇಯಾಂಕ ಎಸ್ ರಾನಡೆ.

LEAVE A REPLY

Please enter your comment!
Please enter your name here