ಮುಪ್ಪು-ತಪ್ಪು

0
450

 
ನಾಕಂಡಂತೆ ಅಂಕಣ: ದಿವ್ಯಾ ರಾವ್
ವಾರ್ತಾ ಪತ್ರಿಕೆಯೊಂದರಲ್ಲಿ ಒಂದೇ ದಿನ ಪ್ರಕಟವಾದ ಎರಡು ವರದಿಗಳು ಹೃದಯ ಹಿಂಡುವಷ್ಟು ದಾರುಣವಾಗಿದ್ದವು. ಉಪ್ಪಿನಂಗಡಿ ಸಮೀಪ ವೃದ್ಧೆಯೊಬ್ಬರು ದೈಹಿಕ ದುಃಸ್ಥಿತಿಯಿಂದಾಗಿ ಮನೆಯೊಳಗೇ ಜೀವಚ್ಛವವಾಗಿ ಪಡುತ್ತಿರುವ ಪಾಡು. ಹೇಳುವವರು ಕೇಳುವವರಿಲ್ಲದೇ ಎದ್ದು ಓಡಾಡಲೂ ಆಗದ ಇವರು ಒಂಟಿಯಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ನಡೆದಾಡಲೂ ಶಕ್ಯರಾಗಿರದ ಈಕೆ ಶೌಚಕ್ಕೂ ಹೊರ ಹೋಗದ ಸ್ಥಿತಿಯಲ್ಲಿ ನರಳುತ್ತಿದ್ದಾರೆ. ಅಕ್ಕ-ಪಕ್ಕದವರು ತಂದು-ಕೊಡುವ ತುಸು ಆಹಾರ, ಸರ್ಕಾರದಿಂದ ಬರುವ ಐನೂರು ರೂಪಾಯಿಗಳೇ ಆಧಾರ. ಬಂಧು-ಬಳಗ ಬೆಂಗಳೂರಿನಲ್ಲಿದ್ದರೂ ಇವರ ಪಾಲಿಗೆ ಮಾತ್ರ ಯಾರೂ ಇಲ್ಲ.
 
 
 
ಇನ್ನೊಬ್ಬ ಹಣ್ಣು ಮುದುಕಿಯೊಬ್ಬರು ನೇತ್ರಾವತಿ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದು ಪೊಲೀಸರ ರಕ್ಷಣೆಯಲ್ಲಿ ಬದುಕುಳಿದಿದ್ದಾರೆ. ಎಷ್ಟು ಕೇಳಿದರೂ ಹೆಸರು ವಿಳಾಸ ಹೇಳದ ಈ ವೃದ್ಧೆ ಇಳಿವಯಸ್ಸಿನಲ್ಲಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆಂದರೆ ಅವರ ಸ್ಥಿತಿ ಚಿಂತಾಜನಕವಾಗಿರಬಹುದಲ್ಲವೇ.?
 
 
 
ಎಷ್ಟೊಂದು ಅಮಾನವೀಯವಾಗಿದೆ ಜೀವನ ಕೆಲವರ ಪಾಲಿಗೆ. ವಯಸ್ಸಿದ್ದಾಗ, ಕೈಕಾಲುಗಳಲ್ಲಿ ಶಕ್ತಿ ಇದ್ದಾಗ ಯಾವ ಕಷ್ಟಕ್ಕೂ ಜಗ್ಗದೆ ಬದುಕನ್ನೆದುರಿಸಿ ಬಂದ ಇಂತಹ ಮುದಿ ಜೀವಗಳಿಗೆ ಜೀವನದ ಸಂಧ್ಯಾ ಕಾಲ ಏಕೆ ಇಷ್ಟು ಘೋರ? ಜೀವನದುದ್ದಕ್ಕೂ ಮನೆ, ಸಂಸಾರ ಮಕ್ಕಳು ಎಂದು ಜೀವ ತೇಯ್ದ ಇಂತಹ ಅನೇಕ ತಂದೆ ತಾಯಿಗಳು ಇಂದು ಯಾರಿಗೂ ಬೇಡವಾಗಿದ್ದಾರೆ. ವಯಸ್ಸಾದ ಪೋಷಕರು ಹೊರೆಯೇ ಮಕ್ಕಳಿಗೆ, ಮನದಲ್ಲಿ ಮನೆಯಲ್ಲಿ ಕಿಂಚಿತ್ತು ಜಾಗ ಕೊಡಲಾಗದಷ್ಟು ಬಡವರೇ ಮಕ್ಕಳು?
 
 
 
ಮನುಷ್ಯನೇಕೆ ಕಲ್ಲು ಹೃದಯಿಯಾಗುತ್ತಿದ್ದಾನೆ? ಸಂಬಂಧಗಳ ಮೌಲ್ಯವೇಕೆ ಕುಸಿಯುತ್ತಿದೆ? ನಮ್ಮಲ್ಲೇಕೆ ಇಷ್ಟೊಂದು ಸ್ವಾರ್ಥ? ಈ ಪ್ರಶ್ನೆಗಳ ಮೇಲೆ ಅನೇಕ ಚರ್ಚೆಗಳು, ಅವಲೋಕನಗಳೇ ನಡೆದು ಹೋಗಿದೆ. ಆದರೆ ಉತ್ತರಗಳ ಸರಮಾಲೆ ಉದ್ದವಾಗುತ್ತಲೇ ಇದೆ. ಪರಿಹಾರ ಮರೀಚಿಕೆಯಿನ್ನು. ಜಾಗತೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ಭಾವನಾ ರಹಿತ ದುಡ್ಡು ಮಾಡುವ ಯಂತ್ರವಾಗಿ ಬಿಟ್ಟಿದ್ದಾನೆ. ಈ ಯಾಂತ್ರಿಕ ಬದುಕಿನ ಹಾದಿಯಲ್ಲಿ ನಾವು ಭಾವನಾತ್ಮಕ, ಸುಂದರ ಬದುಕಿನಿಂದ ಬಹುದೂರ ನಡೆದುಬಿಟ್ಟಿದ್ದೇವೆ. ನಮ್ಮೆಲ್ಲರ ಓಟ ಒಂದೇ ದಿಕ್ಕಿಗೆ ಅದು ನಮ್ಮ ಗುರಿಯತ್ತ. ಗುರಿ ಯಾವುದು? ‘ಯಶಸ್ಸು’ ಅಂದರೆ ‘ಸಕ್ಸಸ್’ ನಮ್ಮವರು, ನಮ್ಮತನ ಎಲ್ಲವನ್ನೂ ಹಿಂದೆ ಬಿಟ್ಟು ಯಶಸ್ಸಿನ ಹಿಂದೆ ನಮ್ಮ ನಾಂಗಾಲೋಟ. ಎಲ್ಲಿದೆ ಈ ಯಶಸ್ಸು? ಹೇಗಿರುತ್ತದೆ ಯಶಸ್ವೀ ಜೀವನ? ಉತ್ತರ ಹಾಗೂ ಉತ್ತರಿಸುವವರು ಅತೀ ವಿರಳ.
 
‘ಸಕ್ಸಸ್’ ಎಂಬ ಪದ ನೆನಪಿಸುವುದು ಅಮೇರಿಕ ನಾಟಕಕಾರ ಸುಪ್ರಸಿದ್ಧ ಆರ್ಥರ್ ಮಿಲ್ಲರ್ ನ ‘ಡೆತ್ ಆಫ್ ದಿ ಸೇಲ್ಸ್ ಮ್ಯಾನ್’ ಎಂಬ ನಾಟಕ. ಅಮೇರಿಕನ್ ಡ್ರೀಮ್ ವಿಷಯಾಧಾರಿತ ಈ ನಾಟಕ ಯಶಸ್ಸಿನ ಬೆನ್ನೇರಿ ಬಿಡುವ ಸಾಮಾನ್ಯ ಮನುಷ್ಯನ ದುರಂತಮಯ ಕತೆಯನ್ನು ಬಿಚ್ಚಿಡುತ್ತದೆ. ಪೋಷಕರು ತಮ್ಮ ಮಕ್ಕಳ ಯಶಸ್ಸಿನ ಬಗ್ಗೆ ಕಂಡ ಕನಸ್ಸೇ ಪ್ರತಿಕೂಲವಾಗುವ ವಾಸ್ತವಿಕ ಚಿತ್ರಣವೇ ಈ ನಾಟಕ.
 
ಸಾಮಾನ್ಯವಾಗಿ ‘ಯಶಸ್ಸು’ ಎಂಬ ಮರೀಚಿಕೆಯನ್ನು ಕೈವಶ ಮಾಡಿಕೊಳ್ಳ ಹೊರಟವರು ಒಂದಲ್ಲ ಒಂದು ರೀತಿ ಕುರುಡರಾಗಿರುತ್ತಾರೆ. ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ಯಂತ್ರಗಳಂತೆ ದುಡಿಯುವುದು, ಇದರಿಂದ ಹೆಚ್ಚಿನ ಆದಾಯ, ಹೆಚ್ಚಿನ ಆದಾಯದಿಂದ ಶ್ರೀಮಂತಿಕೆ, ಶ್ರೀಮಂತಿಕೆಯಿಂದ ಐಷಾರಾಮ ಜೀವನ ಇದೇ ಯಶಸ್ಸಿನ ಸೂತ್ರ ಎಂಬ ನಂಬಿಕೆ. ಒಂದೊಂದಾಗೇ ಇವುಗಳನ್ನ ತೆಕ್ಕೆಗೆ ಹಾಕಿ ಕೊಳ್ಳುವ ಭರದಲ್ಲಿ ಮನುಷ್ಯನಿಗೆ ತಾನೇನು ಕಳೆದುಕೊಳ್ಳುತ್ತಿದ್ದೇನೆಂಬ ಪರಿವೆಯೇ ಇಲ್ಲ. ತನ್ನ ಜವಾಬ್ದಾರಿಗಳ ಬಗ್ಗೆ ಗಮನವಿಲ್ಲ.
 
 
 
ಈ ಯಶಸ್ಸೆಂಬ ಮಾಯಾ ಜಿಂಕೆಯ ಬೇಟೆ ಶುರುವಾಗುವುದು ನಮ್ಮ ಬಾಲ್ಯದಿಂದಲೇ. ತಂದೆ-ತಾಯಿ ತಮ್ಮ ಮಗು ತಮಗಿಂತ ಉತ್ತಮವಾಗಿ ಬದುಕಿ ಬಾಳಲಿ ಎಂದು ಕನಸು ಕಾಣುವುದು ಸಹಜ. ಅದಕ್ಕಾಗಿ ಮಗು ಗರ್ಭದಲ್ಲಿರುವಾಗಿನಿಂದಲೇ ತಯಾರಿ ನಡೆಸಿರುತ್ತದೆ. ವಿದ್ಯಾಭ್ಯಾಸ ಯಶಸ್ಸಿನ ಏಕೈಕ ಮಾರ್ಗ ಎಂದು ಅತೀ ಪ್ರತಿಷ್ಠಿತ ಶಾಲೆಗೆ ಸೇರಿಸಿ ತಮ್ಮ ಮಗುವಿನ ಯಶಸ್ಸಿನ ಹಾದಿಯಲ್ಲಿ ಕೈ ಹಿಡಿದು ಮೊದಲ ಹೆಜ್ಜೆ ಇಡಿಸುತ್ತಾರೆ. ಮನೆಯಲ್ಲಿದ್ದರೆ ಮುದ್ದು ಹೆಚ್ಚಾಗಿ ಚೆನ್ನಾಗಿ ಓದುವುದಿಲ್ಲ ಎಂದು ಇರುವ ಒಂದು ಮಗುವನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸುವುದು ಆಧುನಿಕ ಜೀವನದ ಒಂದು ದುರಂತ. ಏಕೆಂದರೆ ನಮ್ಮ ಯಶಸ್ಸನ್ನು ಅಳೆಯುವ ಮಾಪನ ಪರೀಕ್ಷೆಯಲ್ಲಿ ಪಡೆದ ಅಂಕಗಳು ಎನ್ನುವುದು ಇನ್ನೊಂದು ವಿಪರ್ಯಾಸ. ಪೋಷಕರ ಬಿಸಿಯಪ್ಪುಗೆಯಲಿ ಭದ್ರವಾಗಿ ಬೆಳೆದು ಭಾವನಾತ್ಮಕ ಬಾಂಧವ್ಯಗಳ ಮೌಲ್ಯ ಅರಿಯ ಬೇಕಾಗಿದ್ದ ಮುಗ್ಧ ಮಗು ಖೈದಿಯಂತೆ, ಸ್ವಿಚ್ ಒತ್ತಿದರೆ ಬಾಯಿಪಾಠ ಹೇಳುವ ಬೊಂಬೆಯಂತೆ ಬೋರ್ಡಿಂಗ್ ಸ್ಕೂಲಿನ ನಿಯಮಗಳಿಗನುಗುಣವಾಗಿ ಬೆಳೆಯತೊಡಗುತ್ತದೆ. ರಜೆಯಲ್ಲೂ ಕೋಚಿಂಗ್ ಕ್ಲಾಸುಗಳು ಎಂದು ರಜೆಯನ್ನು 8 ದಿನಗಳಿಗೆ ಮೊಟಕುಗೊಳಿಸುವ ಸ್ಟ್ರಿಕ್ಟ್ ಶಾಲೆಗಳು, ಭಾನುವಾರ ಮಾತ್ರ ಪೋಷಕರೊಡನೆ ಫೋನಿನಲ್ಲಿ ಮಾತು, ತಿಂಗಳಿಗೊಮ್ಮೆ ನಿಗದಿತ ದಿನಗಳಲ್ಲಿ ಬಂದು ಮಗುವಿನ ಬೇಕು-ಬೇಡಗಳನ್ನು ಗಮನಿಸಿ ಒಂದರ್ಧ ದಿನ ಇದ್ದು ಹೋಗುವ ಪೋಷಕರು. ಒಟ್ಟಾರೆ ತಾಯಿಯಪ್ಪುಗೆಯ ರಕ್ಷಾ ಕವಚ, ತಂದೆಯ ಅಭಯ ಹಸ್ತ ಎರಡನ್ನೂ ಕಳೆದುಕೊಂಡ ಮಗುವಿನದ್ದು ಅಮೀರ್ ಖಾನ್ ನಿರ್ದೇಶನದ ‘ತಾರೇ ಜಮೀನ್ ಪರ್’ನ ಇಶಾನ್ ಅವಸ್ಥೆಯದ್ದೇ ಅವಸ್ಥೆ. ಭಯ, ಅನಾಥ ಪ್ರಜ್ಞೆ, ಅಸಹಾಯಕತೆಯನೆಲ್ಲಾ ನಿಧಾನವಾಗಿ ಮೆಟ್ಟಿ ನಿಂತ ಮಗು ಯಶಸ್ಸಿನ ಹಾದಿಯಲ್ಲಿ ಒಂಟಿಯಾಗಿ ಹೆಜ್ಜೆ ಇಡಲು ಕಲಿತೇ ಬಿಡುತ್ತದೆ.
 
 
 
ಹೀಗೆ ಬೆಳೆಯುತ್ತಾ ಮಗುವಿಗೆ ತನ್ನ ಮನೆ, ಅಲ್ಲಿನ ಪರಿಸರ, ತಂದೆ-ತಾಯಿ,ಅವರ ಕಷ್ಟಕಾರ್ಪಣ್ಯ ಕುಟುಂಬದಲ್ಲಿ ಹುಟ್ಟು-ಸಾವು ಯಾವುದರ ಪರಿಚಯವಿಲ್ಲವಾಗುತ್ತದೆ. ಏಕೆಂದರೆ ತಂದೆ ತಾಯಿ ಅಥವಾ ಒಡಹುಟ್ಟಿದವರ್ಯಾರಾದರೂ ಸತ್ತರೆ ಮಾತ್ರ ನಾಲ್ಕು ದಿನ ರಜೆಕೊಟ್ಟು ಮನೆಗೆ ಕಳಿಸುವ ಮೌಲ್ಯಾಧಾರಿತ(?!) ಶಿಕ್ಷಣ ಕೊಡುತ್ತಿರುವ ವಿದ್ಯಾ ಸಂಸ್ಥೆಗಳು. ಹೀಗೆ ಬೆಳೆದು ಕಾಲೇಜು ಮೆಟ್ಟಿಲು ಹತ್ತಿದ ಮಕ್ಕಳಿಗೆ ಮನೆ, ಪೋಷಕರು, ಸಂಬಂಧಿಕರೇ ಅನಪೇಕ್ಷಿತರಾಗುವುದು ವಿಚಿತ್ರವೇನಲ್ಲಿ. ಮೊಬೈಲ್ , ಲ್ಯಾಪ್ ಟಾಪ್, ಟ್ಯಾಬ್ಲೆಟ್ ಗಳೇ ಇವರ ಕುಟುಂಬ ಸದಸ್ಯರು. ಕಾಲೇಜಿನಲ್ಲೂ ಮತ್ತದೇ ಅಂಕಗಳ ಭರಾಟೆ. ರ್ಯಾಂಕುಗಳ ಬೇಟೆ ಲಕ್ಷಗಟ್ಟಲೆ ಫೆಸು ಡೊನೇಷನ್ನು. ಹಣ ಹೇಗೆ ಬಂದಿತು? ಪೋಷಕರ ಬೆವರಿನ ಅರಿವಿಲ್ಲ ಇವರಿಗೆ. ಮುಂದೆ ಕೆಲವರ್ಷ ಬಿಡುವಿಲ್ಲದ ಓಟ ಗುರಿ- ಕ್ಯಾಂಪಸ್ ಇಂಟರ್ ವ್ಯೂ. ಅದಕ್ಕೆ ಮತ್ತೆ ಕೋಚಿಂಗ್, ಮತ್ತೆ ಲಕ್ಷ ಲಕ್ಷ ಹಣ. ಹಣದ ಮೂಲದ ಬಗ್ಗೆ ಇವರ ನಿರ್ಲಕ್ಷ, ಕ್ಯಾಂಪಸ್ ನಲ್ಲಿ ಒಳ್ಳೆ ಕಂಪನಿಯೊಂದರಲ್ಲಿ ಆಯ್ಕೆಯಾದಾಗ ಏನೋ ಸಾಧಿಸಿದ ಹೆಮ್ಮೆ. ಕೈಗೆ ನಿಲುಕುವ ದೂರದಲ್ಲಿ ದೂರದಲ್ಲಿ ಯಶಸ್ಸೆಂಬ ಮಾಯಾ ಜಿಂಕೆ. ದೂರದ ಬೆಂಗಳೂರು, ಬೊಂಬಾಯಿಯಂತಹ ನಗರಗಳಲ್ಲಿ ಪೊಸ್ಟಿಂಗ್ ಆಗಿ ಅಪಾಯಂಟ್ ಮೆಂಟ್ ಆರ್ಡರ್ ಕೈಗೆ ಸಿಕ್ಕಾಗ ರಿಪೋರ್ಟ್ ಮಾಡಿಕೊಳ್ಳಲು ಉಳಿದಿರುವುದು ಕೆಲವೇ ದಿನಗಳು. ಆಗ ನೆನಪಾಗುವುದು ‘ತಂದೆ-ತಾಯಿಯ ಆಶೀರ್ವಾದ.
 
 
 
ಊರಿಗೆ ಹೋಗಿ ತಂದೆ-ತಾಯಿಯರ ಆಶೀರ್ವಾದ ಪಡೆದು ಅವರ ಒತ್ತಾಯಕ್ಕೆ ಅಜ್ಜ-ಅಜ್ಜಿ, ಸಂಬಂಧಿಕರು, ಮನೆದೇವ್ರು ಅಂತೆಲ್ಲಾ ಎರಡು ದಿನ ಸುತ್ತಾಡಿ, ಮೊದಲ ತಿಂಗಳ ಸಂಬಳ ಕೈಗೆ ಸಿಗುವವರೆಗಿನ ಖರ್ಚಿಗೆಂದು ತಂದೆ ಕೊಟ್ಟ ನೋಟುಗಳನ್ನು ಜೇಬಿಗೆ ತುರುಕಿ ಬೈ…ಬೈ.. ಹೇಳಿ ಬೆನ್ನು ತಿರುಗಿಸಿ ಹೊರಟಾಗ ತಂದೆ-ತಾಯಿಯರ ಕಣ್ಣಂಚಲ್ಲಿ ನೀರು. ಇದು ಅವರೇ ಕಂಡ ಕನಸು. ಇನ್ನೇನಿದ್ದರೂ ಮೊಬೈಲಿನಲ್ಲಿ ಸಂಪರ್ಕ. ದುಡಿವ ಮಕ್ಕಳು ವೀಕೆಂಡ್ ಗಳಲ್ಲಿ ಫ್ರೆಂಡ್ಸ್ ಜೊತೆ ರೆಸಾರ್ಟ್, ಪಾರ್ಟಿ ಎಂದು ಸುತ್ತಿದಾಗ ಒಮ್ಮೆಯಾದರೂ ಮನೆಗೆ ಬಂದು ಹೋಗಬಾರದೇ? ಎಂಬ ಅಳಲು. ಹೇಳಿಕೊಳ್ಳಲಾಗುವುದಿಲ್ಲ. ಅವರಿಗೆ ಗೊತ್ತು ಮಕ್ಕಳಿಗೆ ಮನೆ-ಇವರು ಬೋರು ಎಂದು. ಹಗಲು-ರಾತ್ರಿ ಎನ್ನದೆ ದುಡಿತದ ನಡುವೆ ತಂದೆತಾಯಿರೊಡನೆ ಒಂದೈದು ನಿಮಿಷದ ಮಾತುಕತೆ ಪೋಷಕರ ಕಾಳಜಿ-ಅಕ್ಕರೆ ಅವರಿಗೆ ಕಿರಿಕಿರಿ. ಅರಿವಿಲ್ಲದೆ ಯಶಸ್ಸು’ ಎಂಬ ಮಾಯಾಜಿಂಕೆ ಮಾಯ.
 
 
 
ದೂರದಲ್ಲೇಲ್ಲೋ ಕಾಣಿಸಿಕೊಂಡಾಗ ಮತ್ತೆ ಶುರು ಓಟ. ಹೆಚ್ಚಿನ ಆದಾಯ, ಬೈಕು, ಕಾರು, ಗುರಿಯೆಡೆಗೆ ಸಾಗುವ ಮಜಲುಗಳು. ಒಂಟಿ ಓಟ ಬೋರು-ಭಾರವಾದಾಗ, ತಂದೆ-ತಾಯಿ ಒತ್ತಾಯಕ್ಕೆ ಮಣಿದೋ ಮದುವೆ ಎಂಬ ನಿರ್ಧಾರ. ಸಂಸಾರ ರಥದ ಗಾಲಿಗಳು ಗಂಡ-ಹೆಂಡತಿ. ಗುರಿ ಒಂದೇ ದುಡ್ಡು, ಯಶಸ್ಸು. ಮನೆ-ಮಕ್ಕಳು , ಸಂಸಾರದ ನಡುವೆ ಪೋಷಕರು ಪರಧಿಯಿಂದ ಹೊರಕ್ಕೆ. ಅಷ್ಟರಲ್ಲೇ ಫಾರಿನ್ ಟ್ರೈನಿಂಗ್ . ಮೊದಲು ತಾನು ನಂತರ ಸಂಗಾತಿ, ಮಕ್ಕಳೂ. ಈಗ ಬರುತ್ತೇವೆ, ಆಗ ಬರುತ್ತೇವೆ ಎನ್ನುತ್ತಲೇ ಅಲ್ಲೆ ಸೆಟಲ್. ಅಲ್ಲಿ ಮತ್ತೆ ಯಶಸ್ಸಿನ ಜೊತೆ ಜೂಜಾಟ ಶುರು. ತಂದೆ-ತಾಯಿಗೆ ಏರ್ ಪೋರ್ಟ್ ಗೆ ಬಂದು ಬೀಳ್ಕೊಡುವ ಭಾಗ್ಯವೂ ಇಲ್ಲ. ದೇಹ-ಮನಸ್ಸೂ ಎರಡಕ್ಕೂ ಚೈತನ್ಯವುಳಿದಿಲ್ಲ. ಫೋನಿನಲ್ಲೇ ಬೈ…ಬೈ… ಇಳಿ ವಯಸ್ಸಿನಲ್ಲಿ ಇವರು ಅನಾಥರು ಮಕ್ಕಳ ಯಶಸ್ಸಿನ ಬಗ್ಗೆ ತಮ್ಮ ಕನಸು-ಯೋಜನೆಯೇ ತಪ್ಪಾಯಿತೇ ಎಂಬ ಕೊರಗು. ಮಕ್ಕಳಿಲ್ಲದವರಿಗೆ ‘ಇದ್ದಿದ್ದರೇ ಎಂಬ ಆಸೆ ಇದ್ದವರಿಗೆ ಇದ್ದರೂ ಅಷ್ಟೇ’ ಎಂಬ ನಿರಾಶೆ.
 
 
 
ಬಹಳಷ್ಟು ಮನೆಗಳ ಕತೆ ಇದಾಗಿದೆ. ಹಣ-ಯಶಸ್ಸು ಮನುಷ್ಯನನ್ನು ಹಿಪ್ನಾಟೈಸ್ ಮಾಡಿಬಿಟ್ಟಿದೆ. ಯಶಸ್ಸು ಎಂದರೆ ಹಣ, ಕಾರು, ಬಂಗಲೆ ವಿಲಾಸ ಜೀವನ ಎಂದು ಅಪಾರ್ಥ ಮಾಡಿಕೊಂಡ ಮಂದಿ ಕುರಿಮಂದೆಗಳಂತೆ ಸಾಗುತ್ತಿದ್ದಾರೆ. ಭಾರತದ ಅತ್ಯಂತ ಯಶಸ್ವೀ ಮಹಿಳೆಯರಲ್ಲೊಬ್ಬರು ಎಂದು ಗುರುತಿಸಿಕೊಳ್ಳುವ ಸುಧಾ ಮೂರ್ತಿಯವರು ಹೇಳುತ್ತಾರೆ. ‘ಯಶಸ್ಸು ಎಂದರೆ ಹಣ ಅಲ್ಲ. ಭಾವನಾತ್ಮಕ ಬದಕು’ ಎಂದು.
 
 
 
ಮದುವೆಯಾಗುವ ಹೆಣ್ಣು ಮಕ್ಕಳು ‘ಮನೇಲಿ ಕಸಗಳಿದ್ದಾವ? ಹಾಗಾದ್ರೆ ಆ ಹುಡುಗ ಬೇಡ ಎನ್ನುತ್ತಾರೆ. ಕಸ ಅಂದರೆ ಹುಡುಗನ ತಂದೆ-ತಾಯಿ ಎಂತಹ ಸಂಸ್ಕಾರ? ಎಲ್ಲಿಂದ ಸಂಸಾರ?
ಪ್ರತೀ ನಿತ್ಯ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ವೃದ್ಧ ತಂದೆ-ತಾಯಿಯ ಕೈ ಬಿಡಬೇಡಿ, ನಿಮ್ಮ ಕೈ ಹಿಡಿದು ನಡೆಸಿದ ಅವರಿಗೆ ಕೊನೆ ಕಾಲದಲ್ಲಿ ಆಧಾರವಾಗಿ, ಜೀವನದ ಸಂಜೆಯಲ್ಲಿರುವ ಪೋಷಕರನ್ನು ಬದುಕಿರುವಾಗಲೇ ಕತ್ತಲೆಗೆ ತಳ್ಳಬೇಡಿ, ಒಂದು ಫೋನ್ ಕರೆ ಸಾಕು ಪೋಷಕರ ಮುಖದಲ್ಲಿ ನಗು ಮೂಡಲು. ಇಂತಹ ಎಷ್ಟೋ ಸಂದೇಶಗಳನ್ನು ಓದುತ್ತಿರುತ್ತೇವೆ. ಲೈಕ್ ಮಾಡಿ, ಶೇರು ಮಾಡುವುದೇ ನಮ್ಮ ಆದ್ಯ ಕರ್ತವ್ಯವೆಂದು ಕೊಂಡಿದ್ದೇವೆ. ಆದರೆ ಯಾವುದೋ ಒಂದು ಹಳ್ಳಿ ಮೂಲೆಯಲ್ಲಿ ಮುದಿ ಜೀವ ತಮಗಾಗಿ ದಾರಿಕಾಯುತ್ತಿದೆ ಎಂದು ನೆನಸಿ ಕೊಳ್ಳುವುದಿಲ್ಲ.
 
 
 
ವಿಶ್ವ ಕಂಡ ಮಹಾನ್ ನಾಟಕಕಾರ ಶೇಕ್ಸ್ ಪಿಯರ್ ತಮ್ಮ ನಾಟಕ ‘ಆ್ಯಸ್ ಯು ಲೈಕ್ ಇಟ್’ ನ ಒಂದು ಪದ್ಯದಲ್ಲಿ ಬಹಳ ಅರ್ಥ ಪೂರ್ಣವಾಗಿ ಮನುಷ್ಯನ ಜೀವನ ಚಕ್ರದ ಏಳು ಹಂತಗಳನ್ನು ವಿವರಿಸಿದ್ದಾರೆ. ಮೊದಲನೆ ಹಂತ ಶೈಶವಾವಸ್ಥೆ, ಕೊನೆಯದು ಮುಪ್ಪು. ಮುಪ್ಪು ಮನುಷ್ಯನ ಬದುಕಿನಲ್ಲಿ ಶೈಶವಾವಸ್ಥೆಯ ಮರುಕಳಿಕೆ, ಶೈಶವಾವಸ್ಥೆಯಲ್ಲಿ ಹಲ್ಲು ಇಲ್ಲ, ನಡೆಯಲು ಬಾರದೆ, ಮಾತನಾಡಲು ಬಾರದೆ, ಮುಗ್ಧವಾಗಿರುವ ಮಗು ಎಂದರೆ ಎಲ್ಲರಿಗೂ ಮುದ್ದು. ಅದೇ ಹಂತ ಮರುಕಳಿಸಿ ಹಲ್ಲುಬಿದ್ದು ನಡೆಯಲು ಆಗದೆ, ಮಾತನಾಡುವ ಚೈತನ್ಯ ಕಳೆದುಕೊಂಡ ಮುದುಕರೂ ಮಾತ್ರ ಯಾರಿಗೂ ಬೇಡ. ಎಂಥಹ ನಿರ್ದಯೆ.
 
 
 
ಬಸ್ ಸ್ಟ್ಯಾಂಡು, ರೈಲ್ವೇ ಸ್ಟೇಶನ್ನು, ದೇವಸ್ಥಾನ, ಪಾರ್ಕುಗಳ ಬಳಿ ಭಿಕ್ಷೆ ಬೇಡಿ ದಿನ ದೂಡುತ್ತಿದ್ದಾರೆ ಇಂತಹ ಎಷ್ಟೋ ತಂದೆ-ತಾಯಿಗಳು ಬಂಧು-ಬಳಗ, ಎಲ್ಲಾ ಇದ್ದರೂ ಅನಾಥರಂತೆ ಬೀದಿ ಶವವಾಗುತ್ತಿದ್ದಾರೆ ಎಷ್ಟೋ ಅಸಹಾಯಕ ಮುದಿ ಜೀವಗಳು ಸ್ವಂತ ಮಕ್ಕಳಿಗೇ ಬೇಡವಾದ ವೃದ್ಧ ಪೋಷಕರ ಜವಾಬ್ದಾರಿ ಯಾವ ಬಂಧುಗಳಿಗೇತಕ್ಕೆ ಎಂದು ಕಣ್ಣಿದ್ದೂ ಕುರುಡರಾಗಿದ್ದಾರೆ ಬಹಳ ಮಂದಿ.
 
 
 
ವೃದ್ಧರ ಮಾತು, ಹಟ ಸ್ವಭಾವ ನಮಗೆ ಕಿರಿಕಿರಿ ಎನಿಸಬಹುದು. ಆದರೆ ನಮ್ಮನ್ನ ಅವರು ಸಹಿಸಿಲ್ಲವೇ ಇಷ್ಟು ವರ್ಷ ಕೊನೇ ಕಾಲದಲ್ಲಿ ಅವರಿಗೆ ಒಂದು ತುತ್ತು ಅನ್ನ ಹಾಕದಷ್ಟು ಬಡವರೇ ಮಕ್ಕಳು? ವೃದ್ಧರನ್ನು ಬೀದಿ ಪಾಲು ಮಾಡುವುದರ ಬದಲು ಯಾವುದಾದರೂ ವೃದ್ಧಾಶ್ರಮಕ್ಕಾದರೂ ಸೇರಿಸುವಷ್ಟೂ ಶಕ್ಯರಲ್ಲರೇ ಕರುಳ ಕುಡಿಗಳು? ಭಾರತದ ಅತ್ಯಂತ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಇಂತಹ, ಯಾರಿಗೂ ಬೇಡವಾದ ವೃದ್ಧರಿಗೆ ಪುಣೆಯಲ್ಲೊಂದು ಅನಾಥಾಶ್ರಮ ಸ್ಥಾಪಿಸಿ ಘನತೆ ಮೆರೆದಿದ್ದಾರೆ. ಅವರೆಷ್ಟೇ ಶತಕಗಳನ್ನು ಸಿಡಿಸಿರಬಹುದು.ಯಶಸ್ವೀ ಆಟಗಾರನಾಗಿರಬಹುದು. ಆದರೆ ಬದುಕಿನಲ್ಲಿ ಅವರ ಈ ನಿರ್ಧಾರ ಅವರ ಮನುಷ್ಯತ್ವದ ಯಶಸ್ಸಾಗಿದೆ.
 
ಯಾವ ತಂದೆ-ತಾಯಿಯರು ಏನೇ ಕನಸು ಕಂಡರೂ ಅದು ತಮ್ಮ ಮಕ್ಕಳ ಒಳಿತಿಗಾಗಿ. ನಾವು ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದರೆ ತಿಳಿಯುತ್ತದೆ ಅವರ ಬೆವರು, ಕಣ್ಣೀರು. ಇಂದಿನ ಮಕ್ಕಳೇ ನಾಳಿನ ಪೋಷಕರು. ನಮ್ಮ ಮಕ್ಕಳು ಬೆಳೆದು ನಿಂತು ನಮ್ಮನ್ನು ನಿರ್ಲಕ್ಷಿಸಿದಾಗ ಬಹುಶಃ ನಮ್ಮಿಂದಾದ ತಪ್ಪಿನ ಅರಿವಾಗುವುದು.
ಎ. ಆರ್ ಮಣಿಕಾಂತ್ ರವರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಎಂಬ ಪುಸ್ತಕದಲ್ಲಿರುವ ಒಂದು ಕತೆಯನ್ನು ಇಲ್ಲಿ ನೆನಪಿಸಿಕೊಳ್ಳಲೇ ಬೇಕು. ಬಡ ವಿಧವೆಯೊಬ್ಬಳು ಇರುವೊಬ್ಬ ಮಗನನ್ನ ಚೆನ್ನಾಗಿ ಸಾಕಿ ಬೆಳಸಲು ಅವರಿವರ ಮನೆಯಲ್ಲಿ ಕೂಲಿನಾಲಿ ಮಾಡಿ ಒದ್ದಾಡುತ್ತಾಳೆ. ಆದರೆ ಮಗನಿಗೆ ತಾಯಿಯೆಂದರೆ ನಿಕೃಷ್ಟ. ಒಂದು ಕಣ್ಣು ಇಲ್ಲದ ಆಕೆಯ ಕುರೂಪ, ಹರಿದ ಸೀರೆ, ಕೆದರಿದ ಕೂದಲು ಅವನಿಗೆ ಅಸಹ್ಯ.
 
 
ರಕ್ತ ಸುರಿಸಿ ಅವಳು ದುಡಿದ ಹಣದಲ್ಲಿ ಓದಿ ದೊಡ್ಡ ಆಫೀಸರಾಗಿ ಸಿಟಿ ಸೇರಿದ ಮಗನಿಗೆ ಆ ಮುದಿ ತಾಯಿಯ ನೆನಪೇ ಇಲ್ಲ. ಹಳ್ಳಿಯಿಂದ ಹುಡುಕಿ ಮನೆ ಬಾಗಿಲಿಗೆ ಬಂದ ತಾಯಿಯನ್ನು ಒಳಗೂ ಸೇರಿಸದೆ ನಾಯಿಯಂತೆ ಓಡಿಸಿದ ಯಶಸ್ಸಿನ ಶಿಖರವೇರಿ ಮೆರೆಯುತ್ತಿದ್ದ ಮಗ. ಆದರೆ ಮುಂದೆ ಒಂದು ದಿನ ತಿಳಿಯುತು. ಚಿಕ್ಕವನಿದ್ದಾಗ ಅಪಘಾತವೊಂದರಲ್ಲಿ ಕಣ್ಣೊಂದನ್ನ ಕಳೆದುಕೊಂಡಿದ್ದ ಅವನಿಗೆ ಅವನ ಹೆತ್ತ ಆ ಮಹಾತಾಯಿ ತನ್ನ ಕಣ್ಣನ್ನ ದಾನ ಮಾಡಿ ಬಾಳು ಬೆಳಗಿದ್ದಳೆಂದು. ಯಶಸ್ಸಿನ ಶಿಖರವೇರಿ ಬೀಗುತ್ತಿದ್ದವನಿಗೆ ಭೂಮಿ ಕುಸಿದಂತಾಯಿತು. ತನ್ನ ಪಾಪದ ಅರಿವಾಗಿ ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಲು ತಾಯಿಯೇ ಇರಲಿಲ್ಲ. ಶಾಶ್ವತವಾಗಿ ಇವನ ಕಣ್ಣಿಗೂ ಬೀಳದಂತೆ ಪಯಣಿಸಿ ಬಿಟ್ಟಿದ್ದಳು. ದುಡ್ಡು, ಕಾರು, ಬಂಗಲೆ ಇವನ ಪಾಪ ತೊಳೆಯ ಬಲ್ಲವೆ? ತಪ್ಪಿಗೆ ಪ್ರಾಯಾಶ್ಚಿತ್ತವುಂಟೇ?
 
 
 
ಇಂತಹ ತಪ್ಪಾಗುವುದು ಬೇಡ. ವೃದ್ಧರನ್ನು ಗೌರವ, ಆದರದಿಂದ ನೋಡಿಕೊಳ್ಳೋಣ. ವೃದ್ಧ ತಂದೆ ತಾಯಿಯರು ಮಕ್ಕಳಿಂದ ಬಯಸುವುದು ಪ್ರೀತಿ-ಮಮತೆಯೇ ಹೊರತು ಐಶ್ವರ್ಯ ಸಂಪತ್ತಲ್ಲ. ನಮ್ಮ ಮನೆ-ಮನದಲ್ಲಿ ಜಾಗ ಕೊಟ್ಟು, ಕೊನೆಕಾಲದಲ್ಲಿ ಪೋಷಕರನ್ನ ಆದರಿಸಿದರೆ ನಮ್ಮ ಬದುಕು ಸಾರ್ಥಕ. ನಮಗೆ ನಮ್ಮ ಪೋಷಕರ ಮೇಲಿನ ವಾತ್ಸಲ್ಯ ಕಂಡು ನಮ್ಮ ಮಕ್ಕಳು ನಮ್ಮನ್ನು ವೃದ್ಧಾಪ್ಯದಲ್ಲಿ ಹೊರದೂಡದಿರಲಿ ಎಂಬ ಒಂದು ಆಶೆ. ನಮ್ಮ ತಪ್ಪು ನಮ್ಮ ಮಕ್ಕಳಿಗೇಂದೂ ಪಾಠವಾಗದಿರಲಿ.

LEAVE A REPLY

Please enter your comment!
Please enter your name here