ಮುನಿರಾಜ ರೆಂಜಾಳ ಅವರಿಗೆ “ಶ್ರೇಯೋಭದ್ರ” ಪ್ರಶಸ್ತಿ

0
1424

ಮೂಡುಬಿದಿರೆ:ಸಾಲಿಗ್ರಾಮದ ಮಿತ್ರ ಮಂಡಲಿ,ಬೆಂಗಳೂರು ಇದರ 18ನೇ ವಾರ್ಷಿಕೋತ್ಸವ ಪ್ರಯುಕ್ತ ನೀಡಲಿರುವ “ಶ್ರೇಯೋಭದ್ರ” ಪ್ರಶಸ್ತಿಗೆ ಮುನಿರಾಜ ರೆಂಜಾಳ ಆಯ್ಕೆಯಾಗಿದ್ದಾರೆ. ಜೂನ್‌ 23ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುನಿರಾಜ ರೆಂಜಾಳ ಮೂಡುಬಿದಿರೆ ಜೈನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು. ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಲ್ಲದೆ, ಉತ್ತಮ ವಾಗ್ಮಿಗಳಾಗಿ ಚಿರಪರಿಚಿತರು.

ಮುನಿರಾಜ ರೆಂಜಾಳ ಪರಿಚಯ: 

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ನಿವಾಸಿಯಾದ ಇವರು ನಲ್ಲೂರು ಗ್ರಾಮದಲ್ಲಿ ದಿನಾಂಕ:09-05-1961ರಲ್ಲಿ ಜನಿಸಿದರು. ತಂದೆಯ ಹೆಸರು:ಶ್ರೀ ನಾಭಿರಾಜ ಕಾಡ.ತಾಯಿ ಹೆಸರು:ಶ್ರೀಮತಿ ಗುಣವತಿ.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣವನ್ನು ಎನ್.ಆರ್ ಪುರದಲ್ಲಿ,ಬಿ.ಎ ಪದವಿಯನ್ನು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ,ಬಿಎಡ್ ಪದವಿಯನ್ನು ಉಡುಪಿಯಲ್ಲಿ, ಸ್ನಾತಕೋತ್ತರ (ಕನ್ನಡ ಎಂ.ಎ.) ಪದವಿಯನ್ನು ಕನಾ೯ಟಕ ವಿ. ವಿ.ಧಾರವಾಡದಲ್ಲಿ ಪೂರೈಸಿದರು.

ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಎನ್ಆರ್ ಪುರದಲ್ಲಿ ಪ್ರಾರಂಭಿಸಿ,ಕಾರ್ಕಳ ಬಳಿಕ ಮೂಡಬಿದರೆ ಜೈನ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Advertisement

ಈ ಮಧ್ಯೆ ಶ್ರೀಮತಿ ಮಲ್ಲಿಕಾ ಕುಮಾರಿ (ಪ್ರಾಥಮಿಕ ಶಾಲಾ ಶಿಕ್ಷಕಿ) ಅವರನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿದರು.ಈ ದಂಪತಿಗಳಿಗೆ ಚಿ.ಅನುಪ ಮತ್ತು ಸ್ವರೂಪ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಭಾಷಣ, ಲೌಕಿಕ ಮತ್ತು ಆಧ್ಯಾತ್ಮಿಕ ಲೇಖನ, ಕಥೆ, ಕವನ, ಹರಟೆ ಕಾರ್ಯಕ್ರಮ, ಪ್ರಬಂಧ ಬರವಣಿಗೆ, ಕಾರ್ಯಕ್ರಮ ನಿರ್ವಹಣೆ, ಪ್ರವಚನ, ಯಕ್ಷಗಾನ ವೇಷ ಮತ್ತು ತಾಳಮದ್ದಳೆ ಅರ್ಥಗಾರಿಕೆ,ನಾಟಕ ಅಭಿನಯ ಮತ್ತು ನಿರ್ದೇಶನ ಹೀಗೆ ನಾನಾ ಕ್ಷೇತ್ರಗಳಲ್ಲಿ ಸದಭಿರುಚಿಯನ್ನು ಹೊಂದಿ ಕನ್ನಡ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಹೆಸರುವಾಸಿಯಾದ ದ್ರುವತಾರೆ.
⭕ವಿದ್ಯಾರ್ಥಿ ಜೀವನದಲ್ಲಿ ರಾಜ್ಯಮಟ್ಟ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಅವರು ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಹೀಗೆ ಹತ್ತು ಹಲವು ಚಿನ್ನದ ಪದಕಗಳ, ಪ್ರಥಮ ಸ್ಥಾನಗಳ ಬೇಟೆಯಾಡಿದ ಅಪ್ಪಟ ಗ್ರಾಮೀಣ ಪ್ರದೇಶದ ಪ್ರತಿಭೆ.

ಮಂಗಳೂರು ಆಕಾಶವಾಣಿಯಿಂದ ನಿರಂತರವಾಗಿ ಭಾಷಣ, ಚರ್ಚೆ ಪ್ರಸಾರವಾಗುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡ ನಾಡಿನ ಹೆಸರಾಂತ ದಿನ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿ ಜನಪ್ರಿಯವಾಗುತ್ತಿವೆ.

ಯುವಕ ಮಂಡಲ ಹಲವಾರು ಸಂಘ- ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ ಶ್ರೀಯುತರು ಅವುಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸ್ನೇಹಜೀವಿ.

ಶ್ರೀ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕದ ವೀಕ್ಷಕ ವಿವರಣೆಗಾರರಾಗಿ, ರಸಪ್ರಶ್ನೆಗಳ ಸಂಪನ್ಮೂಲ ವ್ಯಕ್ತಿಯಾಗಿ, ಕಾವ್ಯವಾಚನ ಪ್ರವಾಚಕರಾಗಿ, ಸಂಘಟಕರಾಗಿ, ಅಖಿಲ ಕರ್ನಾಟಕ ಜೈನ ಶಿಕ್ಷಕರ ವೇದಿಕೆಯ ಅಧ್ಯಕ್ಷರಾಗಿ ಹೀಗೆ ನೂರಾರು ಸಂಸ್ಥೆಗಳ ಸದಸ್ಯರಾಗಿ ತಮ್ಮ ಸೇವೆಯ ಮೂಲಕ ಜನಜನಿತರಾಗಿದ್ದಾರೆ.

 ಕೃತಿಗಳು 
೧) ಸ್ವತಂತ್ರ ಕೃತಿಗಳು:1)ಕೆ ಪಿ ಜಿನರಾಜ ಹೆಗ್ಗಡೆ(ಜೀವನ ಚರಿತ್ರೆ),
2) ಮಾರ್ನಾಡು ವರ್ಧಮಾನ ಹೆಗ್ಗಡೆ (ಜೀವನ ಚರಿತ್ರೆ) 3)ನಾವ್ಯಾರು ಜೈನರೇ?
4)ಅರಿವೇ ಗುರು 5)ಮುನಿ ಪರಂಪರೆ ಮತ್ತು ಚಾತುರ್ಮಾಸ 6) ಧರ್ಮದ ದಶಲಕ್ಷಣಗಳು 7) ಸಾಗರ ತೀರದ ಸ್ವರ್ಗ- ಕೇರಳ. 8)ಸಿಂಗಾರ ಕವಿಹಂಸರಾಜೆ ರತ್ನಾಕರವರ್ಣಿ( ತುಳು ಭಾಷೆ)
೨)ಸಂಪಾದಿತ ಕೃತಿಗಳು: ಧರ್ಮಶ್ರೀ, ಚೈತನ್ಯ ಕಟ್ ಮಂಡಿಗೆ, ಬೇಲಾಡಿ ಚಿನ್ನ, ನಮನ, ಜೈನ ಧರ್ಮ ಪ್ರವೇಶ ಭಾಗ 1ರಿಂದ 4ರವರೆಗೆ, ಸತ- ಪಥ, ಗುರು ನಮನ, ತುಲಾಭಾರ, ಚಂದ್ರಬಿಂಬ, ಸುವರ್ಣ ಸಿರಿ, ಧರ್ಮದೀಪ್ತಿ, ಚಂದ್ರಮ-ಹೀಗೆ ಅನೇಕ ಶಾಸ್ತ್ರದಾನ ಕೃತಿಗಳ ಸಂಪಾದಕರಾಗಿದ್ದಾರೆ.
೩)ಸಹ ಸಂಪಾದಿತ ಕೃತಿಗಳು: ಅಮೃತಶ್ರೀ,ಮಹಾವೀರ, ಅಮೃತವಾಹಿನಿ,ಶತನಮನ ಹೀಗೆ ಸ್ಮರಣ ಸಂಚಿಕೆಗಳನ್ನು ಇದಲ್ಲದೆ ನೂರಾರು ಬಿಡಿ ಲೇಖನಗಳು ಬರೆದಿದ್ದಾರೆ.
 ಪ್ರವಚನಕಾರ: ಮಹಾಕವಿ ರತ್ನಾಕರ ವರ್ಣಿಯ ಭರತೇಶವೈಭವ, ಅಪರಾಜಿತ ಶತಕ ಕೃತಿಗಳ ವಾಚನವನ್ನು ನಾಡಿನ ಪ್ರಮುಖ 50ಕ್ಕೂ ಹೆಚ್ಚು ನಗರಗಳಲ್ಲಿ ರಸದೌತನ ನೀಡಿದ ದಾಖಲೆ ಇವರ ಹೆಸರಿಗಿದೆ. ಅಷ್ಟೇ ಅಲ್ಲ ಸಹೃದಯರ ಮನಸ್ಸನ್ನು ಸೂರೆಗೊಂಡ ಏಕೈಕ ವ್ಯಕ್ತಿ ಎಂದರೆ ತಪ್ಪಾಗಲಾರದು.
ಅದರಂತೆ ಜನ್ನನ ಯಶೋಧರ ಚರಿತೆ, ಪಂಪನ ಆದಿಪುರಾಣ, ರನ್ನನ ಗದಾಯುದ್ಧ,ಚಾಮರಸನ ಪ್ರಭುಲಿಂಗಲೀಲೆ, ಕನಕದಾಸರ ನಳಚರಿತೆ, ಕುಮಾರವ್ಯಾಸನ ಗದುಗಿನ ಭಾರತ, ಲಕ್ಷ್ಮೀಶನ ಜೈಮಿನಿ ಭಾರತ, ಮುದ್ದಣನ ಶ್ರೀರಾಮಾಶ್ವಮೇದಂ ಹೀಗೆ 25ಕ್ಕೂ ಹೆಚ್ಚು ಪ್ರಾಚೀನ ಕೃತಿಗಳ ಕುರಿತು ಪ್ರವಚನ ನೀಡಿದ ಕೀತಿ೯ ಇವರ ಪಾಲಾಗಿದೆ.
ಧಾರ್ಮಿಕ ಮಾರ್ಗದರ್ಶಕರಾದ ಇವರು ಚಾವಡಿ ಚರ್ಚೆಯ ಪಿತಾಮಹರು.
ಪ್ರಶಸ್ತಿಗಳು
ಮಹಾತ್ಮ ಮತ್ತು ಮಹಾವೀರ ಏಕತಾ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ಸಾಧಕ ಪ್ರಶಸ್ತಿ, ಚಕ್ರರತ್ನ ಪ್ರಿಯ ಬಿರುದು, National builder award, ಜನಮೈತ್ರಿ ಪ್ರಶಸ್ತಿ, ಸಾಧನ ಶೀಲ ಶಿಕ್ಷಕ ಪ್ರಶಸ್ತಿ, ರೋಟರಿ ಟೀಚರ್ ಇನ್ಸ್ಪಿರೇಶನ್ ಅವರ್ಡ್,ಶ್ರೇಷ್ಠ ಶಿಕ್ಷಕ ಸಮ್ಮಾನ, ಪ್ರವಚನ ರತ್ನ. ವಿವಿಧ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

 

LEAVE A REPLY

Please enter your comment!
Please enter your name here