ಮುಖ್ಯಮಂತ್ರಿಗಳೊಂದಿಗೆ ಮಾತುಕತೆ

0
273

ವರದಿ: ಲೇಖಾ
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪತ್ರಕರ್ತರ ಮಾತುಕತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
 
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಹಿರಿಯ ಪತ್ರಕರ್ತರರಾದ ಸನತ್ ಕುಮಾರ್ ಬೆಳಗಲಿ, ಎಲ್. ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
 
ಪ್ರಗತಿಪರ ಚಿಂತನೆವುಳ್ಳ ಪತ್ರಕರ್ತರ ಸಂಖ್ಯೆ ಹೆಚ್ಚಬೇಕು: ಸಿಎಂ ಸಿದ್ದರಾಮಯ್ಯ….
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇರಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
 
 
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ 12 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿಲಾಗಿದೆ. ಪ್ರತಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 600 ಕೋಟಿ ರೂ. ವೆಚ್ಚವಾಗಲಿದೆ, ಕಾಲೇಜು ಮತ್ತು ಐದು ನೂರು ಹಾಸಿಗೆಯ ಆಸ್ಪತ್ರೆ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಪ್ರತಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ವೆಚ್ಚ ತಗಲುಲಿದೆ ಎಂದು ತಿಳಿಸಿದರು.
 
 
ರಾಜ್ಯದಲ್ಲಿನ ಶೋಷಿತರ, ದುರ್ಬಲ ವರ್ಗದವರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನರನ್ನು ಮುಖ್ಯವಾಹಿನಿಗೆ ತರುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
 
 
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಕರ್ನಾಟಕ ಮುನ್ನಡೆ – ಮುಖ್ಯಮಂತ್ರಿಗಳೊಂದಿಗೆ ಪತ್ರಕರ್ತರ ಮಾತುಕತೆ” ಕಾರ್ಯಕ್ರಮದ ಉದ್ಫಾಟನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಜನಪರ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಸರ್ಕಾರದ ಯೋಜನೆಗಳ ಯಶಸ್ಸು ಅಥವಾ ಲೋಪದೋಷಗ¼ನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಮೂಲಕ ಯೋಜನೆಗಳ ಯಶಸ್ಸಿಗೆ ಮಾಧ್ಯಮಗಳು ಸಹ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
 
 
ವೈಚಾರಿಕ ಹಾಗೂ ಪ್ರಗತಿಪರ ಚಿಂತನೆವುಳ್ಳ ಪತ್ರಕರ್ತರ ಸಂಖ್ಯೆ ಹೆಚ್ಚಬೇಕು ಎಂದು ಕರೆ ನೀಡಿದ ಅವರು, ಧ್ವನಿ ಇಲ್ಲದಂತಹ, ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಶಕ್ತಿ ಇಲ್ಲದಂತಹ ಶೋಷಿತ ವರ್ಗದವರ ಸಮಸ್ಯೆಗಳನ್ನು ಮಾಧ್ಯಮಗಳು ಎತ್ತಿ ಹಿಡಿಯಬೇಕು ಎಂದರು.
 
 
ತುತ್ತು ಅನ್ನಕ್ಕಾಗಿ ಅಲೆದಾಡುವ ಪರಿಸ್ಥಿತಿ ಬರಬಾರದು ಎಂದು ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ರಾಜ್ಯವನ್ನು ಕಾಡಿದ ಹಿಂದೆಂದೂ ಕಾಣದಂತಹ ಭೀಕರ ಬರಗಾಲದ ಸಂದರ್ಭದಲ್ಲೂ ಸಹ ಬಡವರ್ಗದವರಿಗೆ ಅನ್ನಭಾಗ್ಯ ಯೋಜನೆಯಿಂದ ಬರಗಾಲದ ಬಿಸಿ ತಟ್ಟಲಿಲ್ಲ. ಈ ಯೋಜನೆಯಡಿ 1.8 ಕೋಟಿ ಕುಟುಂಬಗಳು ಫಲಾನುಭವಿಗಳಾಗಿವೆ ಎಂದರು.
 
 
ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸುಗಮವಾಗಿ ವರ್ಷಕ್ಕೆ ಪ್ರತಿ ವಿದ್ಯಾರ್ಥಿಗೆ ರೂ.15 ಸಾವಿರದಂತೆ ವಿದ್ಯಾರ್ಥಿವೇತನವನ್ನು 87,000 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ನೀಡಲಾಗಿದೆ, ರೈತರಿಗೆ ಕೃಷಿಭಾಗ್ಯ ಯೋಜನೆ, ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಕ್ಷೀರಭಾಗ್ಯ ಯೋಜನೆ, ಶಾಲಾ ಮಕ್ಕಳಿಗೆ ಶೂ ಭಾಗ್ಯ ಸೇರಿದಂತೆ ಮನಸ್ವಿನಿ, ಮೈತ್ರಿ ಮುಂತಾದ ಯೋಜನೆಗಳನ್ನು ಬಡವರ್ಗದ ಜನತೆಯ ಕಲ್ಯಾಣಕ್ಕಾಗಿ ಜಾರಿಗೆ ತಂದು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
 
 
ಯೋಜನಾ ಕಾರ್ಯಕ್ರಮಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡಲಾಗುತ್ತಿದ್ದು ಶೇ 17.15 ಪರಿಶಿಷ್ಟ ಜಾತಿ, ಶೇ 6.95 ಪರಿಶಿಷ್ಟ ವರ್ಗಕ್ಕೆ ಒಟ್ಟು ಶೇ 24.1 ಈ ವರ್ಗಕ್ಕೆ ಅನುದಾನ ಮೀಸಲಿಟ್ಟಿದ್ದು, ಕಳೆದ ಮೂರು ವರ್ಷಗಳಲ್ಲಿ 60,000 ಕೋಟಿ ರೂ. ಅನುದಾನವನ್ನು ಎಸ್‍ಸಿಪಿ/ಟಿಎಸ್‍ಪಿ ಯೋಜನೆಗೆ ಖರ್ಚು ಮಾಡಲಾಗಿದೆ. ಇನ್ನು ಎರಡು ವರ್ಷಗಳಲ್ಲಿ ಈ ವರ್ಗದವರಿಗೆ ಒಂದು ಲಕ್ಷ ಕೋಟಿ ರೂ. ಅನುದಾನ ಖರ್ಚು ಮಾಡಲಾಗುವುದು. ಅಂತೆಯೇ ಅಭಿವೃದ್ದಿ ಕಾಮಗಾರಿಗಳಲ್ಲಿ ರೂ. 50 ಲಕ್ಷದವರೆಗೆ ಎಸ್‍ಸಿಪಿ/ಟಿಎಸ್‍ಪಿ ಯೋಜನೆಗಳಿಗೆ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದರು.
 
 
ಹಳ್ಳಿಗಾಡಿನ ಬಡ ರೈತರ, ಅಲ್ಪಸಂಖ್ಯಾತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದಲ್ಲಿ 2003 ರಿಂದ 2013 ರವರೆಗೆ ಎಲ್ಲಾ ಸರ್ಕಾರದ ಆಡಳಿತ ಅವಧಿಯಲ್ಲೂ 122 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದ ಅವರು, ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರ ಅಲ್ಲ ಎಂದರು.

LEAVE A REPLY

Please enter your comment!
Please enter your name here