ಮುಖವಾಡವ ಕಳಚಿ ಮುಖಾಮುಖಿಯಾದಾಗ…

0
1414

 
ಅರಿತುಕೋ ಬದುಕ ವೈಖರಿ ಅಂಕಣ: ಸಂಚನಾ ಎಂ. ಎಸ್.
ಈ ಮಾಯಾ ಪ್ರಪಂಚದಲ್ಲಿ ಮುಖವಾಡಗಳಿಗಿರುವ ಮೌಲ್ಯವನ್ನು ಯಾವ ಮಾಪನದಲ್ಲಿ ಅಳೆಯುವುದೋ ತಿಳಿಯದಾಗಿದೆ. ನೈಜತೆಗಾದರೆ “ನೋ” ಎಂದು ಕೃತಕತೆಗಾದರೆ “ಸೈ” ಎಂದು ಖುಷಿಪಡುತ್ತಿರುವ ಕಾಲವಿದು. ಹೆಚ್ಚಿನ ಪ್ರಾಣಿಗಳಿಗೆ ದೊರೆಯದ ನಿಜಗುಣವ ಮರೆಮಾಚಿ ನಿತ್ಯವೂ ನಟಿಸುವ ಅದ್ಭುತ ಕಲೆ ನಮಗೆ ಸಿದ್ದಿಸಿದೆ ಎಂದು ನಗಬೇಕೋ ಅಥವ ಅಳಬೇಕೋ? ಎಂಬ ಗೊಂದಲ. ಪರಿಚಯಸ್ತರೊಬ್ಬರು ನಮಗೆ ಎದುರಾದ ತಕ್ಷಣ ನಮ್ಮ ನಡುವೆ
ನಡೆಯುವ ಸಂಭಾಷಣೆಯ ಆ ಪ್ರಥಮ ಪದಗಳು ನಮಸ್ಕಾರ, ನಮಸ್ತೆ, ಹಾಯ್, ಹಲೋಗಳು ಮತ್ತು ಈ ಪದಗಳಿಗಿಂತ ಮೊದಲಾಗಿ ಮೂಡುವ ನಸುನಗುವು ಎಷ್ಟು ನಿಜವೆಂದು ಹೇಳಿ ನೋಡುವ? ಪ್ರತಿಯೊಬ್ಬರೂ ಈ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವ ಪ್ರಯತ್ನ ಮಾಡಬೇಕು. ನಾಣ್ಯದಂತೆ ಎರಡು ಮುಖವಿರುವ ಬದುಕು ನಮ್ಮದು . ದುರುಳನೊಬ್ಬ ದೇವರ ಮುಖವಾಡ ಹಾಕಬಲ್ಲ, ಪಾಪಿಯೊಬ್ಬ ಪುಣ್ಯಾತ್ಮನ ಮುಖವಾಡ ಹಾಕಬಲ್ಲ, ನೊಂದವನೊಬ್ಬ ನಗುವಿನ ಮುಖವಾಡ ಹಾಕಬಲ್ಲ, ಒರಟನೊಬ್ಬ ಒಲುಮೆಯ ಮುಖವಾಡ ಹಾಕಬಲ್ಲ. ಹೀಗೆ ನಮಗೆ ಯಾವ ಸಂದರ್ಭದಲ್ಲಿ ಯಾವ ಮುಖವಾಡದ ಅವಶ್ಯಕತೆ ಇದೆಯೋ ಅದನ್ನೆತ್ತಿ ಧರಿಸುವುದೊಂದು ಯಾವ ದೊಡ್ಡ ಕೆಲಸ ಅಲ್ವಾ?
 
 
 
ಎಳೆಯ ಮಕ್ಕಳನ್ನು ಎಲ್ಲರೂ ಬಹುವಾಗಿ ಪ್ರೀತಿಸಲು ಕಾರಣ ಅವರ ಮುಖವಾಡ ರಹಿತ ಬದುಕು, ಮಗುವಿನ ನಿರ್ಮಲ ಮನಸ್ಸಿಗೆ ಮುಖವಾಡದ ಹಂಗಿಲ್ಲ. ಆದರೆ ದೊಡ್ಡವರಾಗುತ್ತಾ ಹೋದಂತೆ ಅರೆ ನಿಮಿಷವು ಮುಖವಾಡವಿಲ್ಲದೆ ನಾವು ಇರಲಾರೆವು, ಮಾತ್ರವಲ್ಲ ನಾವು ಬೆಳೆದಂತೆ ನಮ್ಮ ಮುಖವಾಡವೂ ಬೆಳೆಯುತ್ತಲೇ ಸಾಗುತ್ತದೆ.
 
 
ಅನೇಕ ಸಂದರ್ಭಗಳಲ್ಲಿ ನಾವು ಇನ್ನೊಬ್ಬರಿಂದ ಪಡೆಯುವ ಬಹುಪಾಲು ಗೌರವ, ಮರ್ಯಾದೆ, ಪ್ರೀತಿ-ವಿಶ್ವಾಸಗಳು ನಮ್ಮ ಮುಖವಾಡದ ಬಲದಿಂದಲೇ ಒಲಿದಿರುತ್ತವೆ ಎಂಬುದ ಒಪ್ಪಲೇ ಬೇಕು. ಸಮಾಜ ನೀಡುವ ಕಠಿಣ ತೀರ್ಮಾನಗಳು ಮನಸ್ಸಿನ ಮೇಲೆ ಘಾಸಿ ಮಾಡದಂತೆ ತಡೆಯುವಲ್ಲಿ ಸಭ್ಯತೆಯ ಮುಖವಾಡ ಸಹಕಾರಿಯಾಗಬಲ್ಲದು. ಮನಸ್ಸಲ್ಲಿ ಮೊದಲೇ ಅವಿತಿರುವ ನೋವು-ಸಂಕಟಗಳು ಹೊರಬಾರದಂತೆ ಮಾಡುವಲ್ಲಿ ನಗುವಿನ ಮುಖವಾಡದ ಪಾತ್ರ ಪ್ರಮುಖವಾದದ್ದು. ಸಮಾಜದಲ್ಲಿ ಗೌರವಯುತ ಸ್ಥಾನ-ಮಾನವ ಗಳಿಸುವುದಾದರೆ ಶಿಸ್ತಿನ ಮುಖವಾಡ ಸಾಕು. ಸ್ನೇಹ-ಪ್ರೀತಿಯ ಪಡೆಯುವ ಹಂಬಲವಿದ್ದರೆ ಆಯಾಯ ಮುಖವಾಡಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ವಿಧ-ವಿಧದ ಜನರ ಜೊತೆ ವಿಧ-ವಿಧದ ಮುಖವಾಡಗಳನ್ನೇ ತೊಟ್ಟು ವ್ಯವಹರಿಸುವ ಜಾಣ್ಮೆ ನಮಗಿದೆ. ಊಸರವಳ್ಳಿ ಕ್ಷಣಕ್ಕೊಂದು ಬಣ್ಣ ಬದಲಾಯಿಸುವಂತೆ, ನಾವು ನಿಮಿಷಕ್ಕೊಂದು ಮುಖವಾಡ ಬದಲಿಸಬಲ್ಲೆವು, ಇದೇ ನಮಗೂ ಆ ಜೀವಿಗು ಇರುವ ವಿಚಿತ್ರ ಹೋಲಿಕೆ.
 
 
 
ಮುಖವಾಡ ಧರಿಸಿ ಮೆರೆದಾಡುವಾಗ ಧೈರ್ಯದಿಂದಿರುವ ನಾವು, ಅದನ್ನು ಕಳಚಿ ಬಯಲಾಗುವ ಸಂದರ್ಭವೇನಾದರೂ ಬಂದರೆ ಭಯ ಭೀತರಾಗುತ್ತೇವೆ. ಕಾರಣ ಬಣ್ಣಬಳಿದು ಭವ್ಯವಾಗಿ ಕಾಣುವಂತೆ ಮಾಡಿದ ಭಯಂಕರ ವ್ಯಕ್ತಿತ್ವವೊಂದನ್ನು ಬೆತ್ತಲಾಗಿಸುವುದು ಸುಲಭದ ಮಾತಲ್ಲ. ದೀರ್ಘಸಮಯ ಮುಖವಾಡದಿ ಮುಖವ ಮುಚ್ಚಿಕೊಂಡಾಗಲಂತೂ ಜನರ ಕಣ್ಣಿಗೆ ಮುಖವಾಡವೇ ನಾನೆಂದು ಮಣ್ಣೆರೆಚುವುದರ ಜೊತೆ ಆ ಸುಳ್ಳನ್ನು ಸ್ವತಃ ನಾವೇ ನಿಜವೆಂದು ನಂಬಲು ಪ್ರಾರಂಭಿಸುತ್ತೇವೆ. ಮೋಸದ ಮುಖವಾಡವು ಮರೆಯಾಗುವ ಸಮಯದಲ್ಲಿ ಅದರ ಹಿಂದಿರುವ ನಿಜ ಮುಖಕ್ಕೆ ಹಾನಿಯಾಗದೆ ಇರುವುದಿಲ್ಲ.
 
 
ನಾವು ಬಹುಕಾಲದಿಂದ ಬಲ್ಲ ವ್ಯಕ್ತಿತ್ವದಲ್ಲಿ ಕೊಂಚ ಬದಲಾವಣೆ ಕಂಡಾಗ ಆತ ಬದಲಾಗಿದ್ದಾನೆ ಎಂದು ಭಾವಿಬಿಡುತ್ತೇವೆ ತಾನೇ? ಆದರೆ ನಾವಂದು ಕೊಂಡಂತೆ ಆಗಿರಬೇಕೆಂದೇನು ಇಲ್ಲ. ಒಮ್ಮೊಮ್ಮೆ ಆ ವ್ಯಕ್ತಿತ್ವವು ಹೊದ್ದಿದ್ದ ಮುಖವಾಡವು ಬದಲಾಗಿರಬಹುದು ಅಥವ ಮಣ್ಣಿಗುರುಳಿರಲೂ ಬಹುದು ಅಥವ ನಾವು ತೊಟ್ಟ ಮುಖವಾಡವೇ ಹೊಸದಾಗಿರಬಹುದು. ಈ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಮುಖವಾಡದಿಂದಾಗುವ ಲಾಭ-ನಷ್ಟಗಳನ್ನು ತಕ್ಕಡಿಯಲ್ಲಾಕಿ ತೂಗಿದರೆ ಲಾಭಕ್ಕಿಂತ, ನಷ್ಟದ ತೂಕವೇ ಅಧಿಕವೆನಿಸದಿರದು. ಕಾರಣ ಬಗೆಬಗೆಯ ಮುಖವಾಡ ತೊಟ್ಟು ಬಹುಜನರೊಡನೆ ಬೆರೆತಾಗ ಅವರಿಂದ ಬಹುಬಗೆಯ ವಿಷಯಗಳನ್ನು ಕಲಿಯಬಹುದು, ಆ ಸಂದರ್ಭಗಳೆಲ್ಲಾ ಖುಷಿಯನ್ನೂ ತರಬಹುದು. ಆದರೆ ಒಮ್ಮೆ ಅದರಿಂದ ಹೊರಬಂದು ಏಕಾಂಗಿಯಾಗಿ ನಿಂತು ನಿಜವಾಗಿ ನಾನ್ಯಾರೆಂದು, ನಾ ಹೇಗೆಂದು ನಮಗೆ ನಾವೇ ಪ್ರಶ್ನಿಸಿದರೆ, ಅದಕ್ಕೊಂದು ಸಮರ್ಪಕ ಉತ್ತರ ದೊರೆಯದಿದ್ದರೆ ದ್ವಂದ್ವವು ಶುರುವಾಗುತ್ತದೆ. ಇದೊಂದು ದೊಡ್ಡ ನಷ್ಟವಲ್ಲದೆ ಮತ್ತೇನು?
 
 
ಸಾಮಾನ್ಯವಾಗಿ ನಮಗೆಲ್ಲ ಕೆಲವೊಂದು ಪರಿಸ್ಥಿತಿಯಲ್ಲಿ ಮತ್ತು ಕೆಲವರ ಉಪಸ್ಥಿತಿಯಲ್ಲಿ ಮುಖವಾಡದ ಅವಶ್ಯಕತೆಯೇ ಬರುವುದಿಲ್ಲ. ನಿಜಾರ್ಥದಲ್ಲಿ ಅದೊಂದು ಸಂತೋಷದಾಯಕ ಸಂದರ್ಭ. ಸಮಾಜದಲ್ಲಿ ಶೇಕಡ ನೂರರಲ್ಲಿ ತೊಂಬತ್ತೊಂಬತ್ತು ಭಾಗದಷ್ಟು ಮಂದಿ ಮುಖವಾಡದ ಮೊರೆ ಹೋಗುತ್ತಾರೆ, ಇನ್ನುಳಿದ ಒಂದು ಭಾಗದಷ್ಟು ಜನ ಮಾತ್ರ ಮುಖವಾಡದ ಸಹವಾಸದಿಂದ ಮಾರು ದೂರ ನಿಂತಿರುತ್ತಾರೆ. ತನ್ನ ಪರಿಶುದ್ಧ-ನಿಷ್ಕಲ್ಮಶ ಮನವನ್ನು ನೆಚ್ಚಿ ಬದುಕುವ ಮಹಾನ್ ಚೇತನಕ್ಕೆ ಮುಖವಾಡವು ಎಂದೂ ಮುಖ್ಯವಾಗಲಾರದು. ನಾವೆಲ್ಲರೂ ನಮ್ಮ ನಡೆ-ನುಡಿಗಳಲ್ಲಿ ಪ್ರಾಮಾಣಿಕತೆಗೆ ಪ್ರಾಧಾನ್ಯತೆ ನೀಡಿದರೆ ನಮ್ಮ ವ್ಯಕ್ತಿತ್ವವು ಪಾರದರ್ಶಕವಾಗಿ ತೋರುವಲ್ಲಿ ಎರಡು ಮಾತಿಲ್ಲ. ಒಮ್ಮೆ ನಾವು ಮುಖವಾಡವ ಕಳಚಿ ಮತ್ತೊಬ್ಬರೆದುರು ಮುಖಾಮುಖಿಯಾದಾಗ ಒಂದು ಮುಗ್ದ ಮಂದಹಾಸವು ನಮ್ಮ ಮೊಗದಲ್ಲಿ ಮೂಡಿದ್ದೇ ಹೌದಾದರೆ ಆ ಮುಖವಾಡದ ಕತೆ ಮುಗಿಯಿತೆಂದೇ ಅರ್ಥ.
ಸಂಚನಾ ಎಂ ಎಸ್
[email protected]
 
 
 

LEAVE A REPLY

Please enter your comment!
Please enter your name here