ಮಾವಿನ ಹಣ್ಣಿನಲ್ಲಿ ಹುಳ ಆಗದಂತೆ ಈಗಲೇ ತಡೆಯಿರಿ

0
968

 
ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಮಾವಿನ ಮರದಲ್ಲಿ ಲಿಂಬೆ ಗಾತ್ರದ ಮಿಡಿಗಳಾಗಿವೆ. ಈಗ ಅದಕ್ಕೆ ಹಣ್ಣು ನೊಣವನ್ನು(Mango fruit fly)ಆಕರ್ಷಿಸುವ ಟ್ರಾಪು ಹಾಕಿದರೆ ಬೆಳೆದಾಗ ಆ ಮಾವಿನ ಹಣ್ಣಿನಲ್ಲಿ ಹುಳ ಇರಲಾರದು.
 
mango fruiet4
 
ಮಾವಿನ ಹಣ್ಣಿನಲ್ಲಿ ಹುಳವಾಗುವುದು ಅತೀ ದೊಡ್ಡ ಸಮಸ್ಯೆ. ಒಂದು ಜಾತಿಯ ನೊಣ ಮಾವು ಕಾಯಿ ಹಂತದಲ್ಲಿದ್ದಾಗ ಅದರ ಸಿಪ್ಪೆಯ ಮೇಲೆ ಚುಚ್ಚಿ ಮೊಟ್ಟೆ ಇಡುತ್ತದೆ. ಹಣ್ಣು ಪಕ್ವವಾಗುವಾಗ ಹಣ್ಣಿನೊಳಗೆಲ್ಲಾ ಹುಳವಿರುತ್ತದೆ. ಮಾವು ಬೆಳೆಯಲಾಗುವ ಎಲ್ಲಾ ಕಡೆ ಹಣ್ಣು ನೊಣ ಇದೆ. ಹಣ್ಣು ಇರುವಲ್ಲೆಲ್ಲಾ ಹಣ್ಣು ನೊಣ ಇದೆ ಎನ್ನಬಹುದು. ಮಾವು, ಪೇರಲೆ ಮೂಸಂಬಿ, ಕಿತ್ತಳೆ, ಕರಬೂಜ ತರಕಾರಿ ಎಲ್ಲಾ ನಮೂನೆಯ ಹಣ್ಣಿನ ಬೆಳೆಗಳಿಗೂ ಹಣ್ಣು ನೊಣ ಅತೀ ದೊಡ್ಡ ಶತ್ರು. ಮಾರಾಟ, ದಾಸ್ತಾನಿನು, ರಫ್ತು ಪ್ರತೀಯೋಂದರಲ್ಲೂ ಮಾವಿಗೆ ಕೆಟ್ಟ ಹೆಸರು ತಂದ ಕೀಟ ಹಣ್ಣು ನೊಣ.
 
 
mango fruiet5
 
ಈ ನೋಣಗಳು ಜೇನು ನೊಣವನ್ನು ಹೋಲುವಂತವುಗಳಾಗಿದ್ದು, ಸಾಮಾನ್ಯವಾಗಿ ತುಳಸಿ ಗಿಡವು ಹೂವು ಬಿಡುವಾಗ ಅದರ ಪುಷ್ಪದ ಸುತ್ತ ಹಾರಾಡುತ್ತಿರುವುದನ್ನು ಗಮನಿಸಬಹುದು. ತುಳಸಿ ಗಿಡದ ಸುವಾಸನೆ ಅದನ್ನು ಅತಿಯಾಗಿ ಆಕರ್ಷಿಸುತ್ತದೆ. ಇವುಗಳ ಹತೋಟಿಗೆ ಕೀಟನಾಶಕದ ಬಳಕೆಗಿಂತಲೂ ಮೋಹಕ ಬಲೆಗಳ ಬಳಕೆ ಪರಿಣಾಮಕಾರಿಯಾಗಿದೆ.
 
mango fruiet3
 
ಮಾವಿನ ಕಾಯಿ ಸುಮಾರಾಗಿ ನಿಂಬೆ ಹಣ್ಣಿನ ಗಾತ್ರಕ್ಕೆ ಬೆಳೆಯುವ ಸಮಯದಲ್ಲಿ ಹಣ್ಣು ನೊಣವು ಕಾಯಿಗಳ ಮೇಲೆ ಕುಳಿತು ತನ್ನ ಶರೀರದ ಭಾಗದ ಕೊಂಡಿಯ ಮೂಲಕ ಚುಚ್ಚಿ ಮೊಟ್ಟೆ ಇಡುತ್ತದೆ. ಮೊಟ್ಟೆಗಳು ಅದರೊಳಗೆ ಬೆಳೆಯುತ್ತಾ ಸುಮಾರು 50- 60 ದಿನಗಳಲ್ಲಿ ಹುಳುಗಳಾಗುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಮಾವಿನ ಕಾಯಿಯ ಸಿಪ್ಪೆಯ ಮೇಲ್ಮೈಯಲ್ಲಿ ಸಣ್ಣ ಚುಚ್ಚಿದ ಗಾಯ ಕಪ್ಪಗೆ ಕಾಣಿಸುತ್ತದೆ. ಮಾವಿನ ಕಾಯಿಯು ಬೆಳೆಯಲಾರಂಭಿಸಿದ ತರುವಾಯ ಮರದ ಕಾಯಿಗಳ ಮೇಲ್ಮೈಯಲ್ಲಿ ಮನೆ ನೊಣದ ತರಹದ ಕೀಟವೊಂದು ಹಾರಾಡುತ್ತಿರುವುದು, ಕಾಯಿಗಳ ಮೇಲೆ ಕುಳಿತಿರುವುದನ್ನು ಗಮನಿಸಬಹುದು. ಹಣ್ಣಾಗುವ ಮುನ್ನ ಮತ್ತು ಹಣ್ಣಾದ ಮೇಲೆ ಹುಳ ಭಾಧಿತವಾದುದು ಉದುರಿ ಬಿದ್ದರೆ ಅದರಲ್ಲಿದ್ದ ಹಣ್ಣಿನ ಹುಳುಗಳು ಹೊರಬಂದು ಮಣ್ಣಿಗೆ ಸೇರಿ ಕೋಶಾವಸ್ಥೆಯನ್ನು ತಲುಪುತ್ತದೆ. ಕೆಲವೇ ದಿನಗಳಲ್ಲಿ ಕೋಶಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದ ನೊಣಗಳು ಮತ್ತೆ ಮೊಟ್ಟೆ ಇಟ್ಟು ಅಲ್ಲಿ ಸಂತಾನಾಭಿವೃದ್ಧಿಗೊಳ್ಳುತ್ತವೆ. ಹುಳ ಚಿಕ್ಕದಾದರೂ ಅದು ನೆಲಕ್ಕೆ ಬಿದ್ದಾಗ ಎರಡೂ ಮಗ್ಗುಲನ್ನೂ ನೆಲಕ್ಕೆ ಒತ್ತಿ ಸುಮಾರು 1 ಮೀ ಜಿಗಿಯುತ್ತದೆ. ಮಾರುಟ್ಟೆಯಲ್ಲಿ ಖರೀದಿ ದರಕ್ಕಿಂತ ನಾಲ್ಕು ಐದು ಪಟ್ಟು ಮಾರಾಟ ಬೆಲೆ ಇದ್ದರೆ ಅದಕ್ಕೆ ಕಾರಣ ಹುಳಭಾದೆಯಿಂದಾಗುವ ನಷ್ಟ ಭರ್ತಿ. ಕೆಲವೊಂದು ಹಣ್ಣಿನ ಖರೀದಿದಾರರು ಅಪಕ್ವ ಹಣ್ಣುಗಳನ್ನು ಕೊಯಿಲು ಮಾಡಿ ಕೃತಕವಾಗಿ ಹಣ್ಣು ಮಾಡಿ ಮಾರಾಟ ಮಾಡುವುದು ಹುಳದ ಭಾದೆಯಿಂದ ಪಾರಾಗುವುದಕ್ಕೆ. ಇಂಥಃ ಹಣ್ಣಿನಲ್ಲಿ ಹಣ್ಣು ನೊಣದ ಮೊಟ್ಟೆ ಇರುತ್ತದೆ. ಆದರೆ ಅದು ನಮಗೆ ಕಾಣಿಸದು.
 
mango fruiet2
 
ಹಣ್ಣು ನೊಣದ ಬಾಧೆಯಿಲ್ಲದ ಮಾವಿನ ತಳಿ ಕಾಡು ಮಾವು ಮಾತ್ರ. ಕಾಡುಮಾವಿನ ತಳಿಗಳಲ್ಲಿರುವ ಸುವಾಸಿತ (ಸೊನೆ) ದ್ರವವು pep, ದಪ್ಪ ಸಿಪ್ಪೆ ಹಣ್ಣುನೊಣಗಳನ್ನು ಆಕರ್ಷಿಸುವುದಿಲ್ಲ. ವಾಣಿಜ್ಯ ಬೇಸಾಯಕ್ಕಾಗಿ ಆಯ್ಕೆ ಮಾಡುವ ಕಸಿ ಮಾವುಗಳಿಗೆಲ್ಲಾ ಹಣ್ಣು ನೊಣದ ಬಾಧೆ ಇದೆ.
 
mango fruiet6
 
ಇದರ ನಿವಾರಣೆಗೆ ಲಿಂಗಾಕರ್ಷಕ ಬಲೆ ಎಂಬ ಸುರಕ್ಷಿತ ಪರಿಹಾರ ಇದೆ. ಇದರಿಂದ ಹಣ್ಣು ತಿನ್ನುವವನಿಗೆ ಯವುದೇ ಅಪಾಯ ಇಲ್ಲ. ಮೋಹಕ ಬಲೆಗಳೆಂದು ಕರೆಯಲ್ಪಡುವ ಈ ಸಾಧನದ ಮೂಲಕ ಹಣ್ಣು ನೊಣಗಳನ್ನು ಗಣನೀಯ ಪ್ರಮಾಣದಲ್ಲಿ ನಾಶಮಾಡಬಹುದು. ಮೋಹಕ ಬಲೆಯೆಂಬುದು(ಲಿಂಗಾಕರ್ಷಕ ಬಲೆ) ಗಂಡು ಹಣ್ಣು ನೊಣಗಳನ್ನು ತನ್ನತ್ತ ಆಕರ್ಷಿಸುವ ಸುವಾಸನೆಯನ್ನು ಬೀರುತ್ತದೆ. ಹೆಣ್ಣು ನೊಣವನ್ನು ಅರಸಿ ಬರುವ ಗಂಡು ನೊಣವು ಮೋಹಕ ಬಲೆಯೊಳಗೆ ಇರಿಸಲಾದ ಸುವಾಸನೆ ಬೀರುವ ಮರದ ತುಂಡಿನ ಸುತ್ತ ತಿರುಗುತ್ತಾ ಕೊನೆಗೆ ತಲೆ ತಿರುಗಿ ಕೆಳಕ್ಕೆ ಬೀಳುತ್ತದೆ. ಕೆಳ ಭಾಗದಲ್ಲಿ ನೀರನ್ನು ಹಾಕಿಟ್ಟರೆ ತಲೆಸುತ್ತಿಬಿದ್ದ ಹುಳುಗಳು ಅಲ್ಲೇ ಸಾಯುತ್ತವೆ. ಇಂತಹ ಮೋಹಕ ಬಲೆಗಳು ಮಾರುಕಟ್ಟೆಯಲ್ಲಿಯೂ ದೊರೆಯುತ್ತದೆ. ಬೆಂಗಳೂರಿನಲ್ಲಿರುವ ಭಾರತೀಯ ತೊಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಸಹ ಲಭ್ಯವಿದೆ.
 
 
mango fruiet1
 
 
ಮೋಹಕ ಬಲೆಗಳನ್ನು ಒಂದು ಎಕ್ರೆಗೆ 2 ರಿಂದ 10 ಸಂಖ್ಯೆಯಲ್ಲಿ ಕಟ್ಟಬೇಕು. ನೀರಿನ ಪ್ಲಾಸ್ಟಿಕ್ ಬಾಟಲಿಯನ್ನು (ಚಿತ್ರದಲ್ಲಿ ತೋರಿದಂತೆ) ಎರಡೂ ಕಡೆ ತೆರೆದು ಬಾಟಲಿಯ ಮುಚ್ಚಳಕ್ಕೆ ಹಗ್ಗದಿಂದ ಸುರಿದು ಬಾಟಲಿಯ ಒಳಭಾಗದೊಳಗೆ ನೇತಾಡಿಸಬೇಕು. ಕೆಲವು ತಯಾರಿಕೆಗಳಲ್ಲಿ ನೇತಾಡಿಸುವ ಕಂಟೈನರ್ ಸಹ ದೊರೆಯುತ್ತದೆ. ಕಟ್ಟುವಾಗ ಭೂಮಿಯಿಂದ 3 ರಿಂದ 6 ಅಡಿ ಎತ್ತರದಲ್ಲಿ, ಗಾಳಿಗೆ ಅಲುಗಾಡದಂತೆ ಹಾಗೂ ನೇರವಾಗಿ ಬಿಸಿಲು ಬೀಳದ ಕಡೆ ಎಲೆಗಳ ಮರೆಯಲ್ಲಿ ಕಟ್ಟಬೇಕು. ಮೋಹಕ ಬಲೆಗಳನ್ನು ಹಣ್ಣುಗಳೆಲ್ಲಾ ಮುಗಿಯುವ ವರೆಗೂ ಉಳಿಸಬೇಕು. ಒಂದು ಹಣ್ಣು ನೊಣಕ್ಕೆ ಆಹಾರವಾಗಿ ಕೊಳೆತು ಕೆಳಕ್ಕೆ ಬಿದ್ದರೂ ಸಹ ಅದು ಮುಂದಿನ ವರ್ಷಕ್ಕೆ ನೆಲದಲ್ಲಿ ಸುಪ್ತಾವಸ್ಥೆಯಲ್ಲಿ ಇರುತ್ತದೆ. ಪ್ರತೀ ವಾರ ನೊಣಗಳ ಬೀಳುವಿಕೆಯನ್ನು ಗಮನಿಸುತ್ತಿರಬೇಕು. ದಿನಕ್ಕೆ ಒಂದು ಬಲೆಯಲ್ಲಿ ಐದಕ್ಕಿಂತ ಹೆಚ್ಚು ನೊಣಗಳು ಬಿದ್ದಲ್ಲಿ ಬಲೆಯ ಸಂಖ್ಯೆಯನ್ನು ಹೆಚ್ಚಿಸಬೇಕು. ಕನಿಷ್ಟ ವಾರಕ್ಕೊಮ್ಮೆಯಾದರೂ ಬಲೆಯ ಸಂಗ್ರಾಹಕದಲ್ಲಿ ಬಿದ್ದ ನೊಣಗಳನ್ನು ತೆಗೆದು ಸ್ವಚ್ಚಗೊಳಿಸುತ್ತಿರಬೇಕು. ಪಾತ್ರೆಯೊಳಗೆ ನೀರು ಸೇರಿಕೊಂಡರೆ ಅದನ್ನು ತೆಗೆಯಬೇಕು.
 
mango fruiet
ಮಾರುಕಟ್ಟೆಯಿಂದ ಅಥವಾ ತಮ್ಮದೇ ತೋಟದ ಹಣ್ಣು ತಿನ್ನ ಬಯಸುವವರು, ಹಣ್ಣಿನ ತೊಗಟೆಯ ಭಾಗದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇರುವಂತದ್ದನ್ನು ಸೂಕ್ಷ್ಮವಾಗಿ ಗಮನಿಸಿ, ಆರಿಸಿದರೆ ಅದರಲ್ಲಿ ಹುಳಗಳಿರುವ ಸಾಧ್ಯತೆ ಕಡಿಮೆ. ಸ್ವಂತ ಮರದ ಮಾವಿನ ಕಾಯಿಗಳಾದರೆ ಅದು ವಿರಳವಾಗಿದ್ದು ಕೈಗೆಟಕುವಂತಿದ್ದರೆ ಅದಕ್ಕೆ ಕಾಗದದ ಲಕೋಟೆಯನ್ನು ಮುಚ್ಚಿದರೆ ಅದರಲ್ಲಿ ಹಣ್ಣು ನೊಣ ಮೊಟ್ಟೆ ಇಡಲಾರದೆ ಆ ಕಾಯಿ ಸುರಕ್ಷಿತವಾಗಿರುತ್ತದೆ.
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here