ಮಾವಿನ ಆಧುನಿಕ ಬೇಸಾಯ ತಾಂತ್ರಿಕತೆ

0
529

 
ಚಿಗುರು ಅಂಕಣ: ರಾಧಾಕೃಷ್ಣ
ಸಾಂಪ್ರದಾಯಿಕ ಮಾವು ಬೆಳೆಸುವ ಅಂತರಕ್ಕಿಂತ ತುಂಬಾ ಕಡಿಮೆ ಅಂತರದಲ್ಲಿ ನಾಟಿ ಮಾಡಿ, ಬೇಗ ಮತ್ತು ಅಧಿಕ ಫಸಲು ಪಡೆಯುವ ತಾಂತ್ರಿಕತೆಯನ್ನು ಜೈನ್ ಇರಿಗೇಷನ್ ಸಂಸ್ಥೆ ಅಭಿವೃದ್ದಿಪಡಿಸಿದ್ದು, ಇದನ್ನು ರೈತರ ಹೊಲದಲ್ಲಿ ಅಳವಡಿಸಲಾಗಿದೆ. ತಮಿಳುನಾಡಿನ ಕೊಯಂಬತ್ತೂರು ಸಮೀಪದ ಉದುಮಲ್ ಪೇಟ್ ಎಂಬಲ್ಲಿ ಹಾಗೂ ಆಂಧ್ರದ ಚಿತ್ತೂರಿನಲ್ಲಿ ಈ ಅಲ್ಟ್ರಾ ಹೈಡೆನ್ಸಿಟಿ ಪ್ಲಾಂಟಿಂಗ್ ತಾಂತ್ರಿಕತೆಯ 400 ಹೆಕ್ಟೇರಿಗೂ ಅಧಿಕ ವಿಸ್ತೀರ್ಣದ ಮಾವಿನ ತೋಟದಲ್ಲಿ ಈಗ ಫಸಲು ಬರುತ್ತಿದೆ.
 
mango _farming
ಮಹಾರಾಷ್ಟ್ರದ ಜಲಗಾಂನಲ್ಲಿರುವ ನೀರಾವರಿ ಕ್ಷೇತ್ರದ ದಿಗ್ಗಜ, ಜೈನ್ ಇರ್ರಿಗೇಶನ್ ಸಂಸ್ಥೆ ಕೇವಲ ನೀರಾವರಿ ಸಾಧನ ಸಲಕರಣೆಗಳನ್ನು ಮಾತ್ರವೇ ಉತ್ಪಾದಿಸಿ ಮಾರಾಟ ಮಾಡುವ ವ್ಯವಹಾರವನ್ನು ಇಟ್ಟುಕೊಂಡಿಲ್ಲ. ಬದಲಿಗೆ ಕೃಷಿ -ತೋಟಗಾರಿಕಾ ಕ್ಷೇತ್ರದಲ್ಲಿ ಆಧುನಿಕ ಸಂಶೋಧನೆಗಳನ್ನು ಮಾಡುತ್ತಾ, ರೈತಾಪಿವರ್ಗಕ್ಕೆ ಸಾಂಪ್ರದಾಯಿಕ ಬೇಸಾಯ ಕ್ರಮಕ್ಕಿಂತ ಉತ್ತಮ ಆದಾಯ ದೊರಕಿಸಿಕೊಡುವಲ್ಲಿ ಎರಡು ದಶಕಗಳಿಂದಲೂ ಶ್ರಮಿಸುತ್ತಾ ಬಂದಿದೆ. ಮೊತ್ತ ಮೊದಲ ಬಾರಿಗೆ ಕೋಸ್ಟರಿಕಾ ದೇಶದಿಂದ ಗ್ರಾಂಡ್ ನೇನ್ ತಳಿಯ ಬಾಳೆಯ ಮೂಲವನ್ನು ತಂದು ಅದನ್ನು ಅಂಗಾಂಶ ಕಸಿಯ ಮೂಲಕ ಅಭಿವೃದ್ದಿಪಡಿಸಿದ್ದು, ನಂತರ ಅದು ದೇಶದಾದ್ಯಂತ ಬಾಳೆ ಬೆಳೆಯಲ್ಲಿ ಕ್ರಾಂತಿ ಮಾಡಿದ್ದು ನಮಗೆಲ್ಲಾ ಗೊತ್ತಿದೆ. ಬರೇ ತಳಿ ತಂದುದು ಮಾತ್ರವಲ್ಲ. ಈ ತಳಿಯನ್ನು ಬೇರೆ ಬೇರೆ ಅಂತರಗಳಲ್ಲಿ ಬೆಳೆಸಿ ನೋಡಿ ಬಾಳೆ ಬೆಳೆಸುವವರಿಗೆ ಅಧಿಕ ಸಾಂದ್ರ ಬೇಸಾಯ ತಾಂತ್ರಿಕತೆಯನ್ನು ಪರಿಚಯಿಸಿದವರೂ ಇವರೇ.
 
 
 
ಬಾಳೆ ಹಣ್ಣನ್ನು ವಿದೇಶಕ್ಕೆ ರಪ್ತು ಮಾಡಿದ ಕೀರ್ತಿಯೂ ಇವರದ್ದು. ಇಂದು ಇದೇ ಗ್ರಾಂಡ್ ನೇನ್ ((Grand nane )ಬಾಳೆ ತಳಿ ಭಾರತ ಬಿಟ್ಟು ಕೀನ್ಯಾ ದೇಶಕ್ಕೂ ಸಹ ಜೈನ್ ಸಂಸ್ಥೆಯ ಮೂಲಕ ತಲುಪಿದೆ. ಬಾಳೆ, ಮಾವು, ಪೇರಳೆ, ಪಪ್ಪಾಯ, ಈರುಳ್ಳಿ ಮುಂತಾದ ಬೇರೆ ಬೇರೆ ಬೆಳೆಗಳಲ್ಲಿ ಇವರು ಅಧಿಕ ಬೆಳೆ ಉತ್ಪಾದನೆಯ ತಾಂತ್ರಿಕತೆಯನ್ನು ಅಭಿವೃದ್ದಿಪಡಿಸಿ ರೈತರಿಗೆ ಅನುಕೂಲಮಾಡಿಕೊಟ್ಟಿದ್ದಾರೆ. ಇದಷ್ಟೇ ಅಲ್ಲ, ಸಂಸ್ಥೆಯು ರೈತರು ಬೆಳೆಸಿದ ಉತ್ಪನ್ನಕ್ಕೆ ಉತ್ತಮ ಬೆಲೆ ದೊರೆಯಬೇಕು, ನೇರ ಮಾರುಕಟ್ಟೆ ಒಂದೇ ಅಲ್ಲದೆ, ಸಂಸ್ಕರಣೆ ಕ್ಷೇತ್ರದ ಅನುಕೂಲತೆಯೂ ರೈತರಿಗೆ ದೊರೆಯಬೇಕು ಎಂಬ ದೂರದೃಷ್ಟಿಯಿಂದ ಹಣ್ಣು – ತರಕಾರಿ ಸಂಸ್ಕರಣೆ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಪ್ರಥಮತಹ ಪಪೇನ್ ಉತ್ಪಾದನೆ ಮತ್ತು ಅದರ ಮೌಲ್ಯವರ್ಧನೆ, ನೀರುಳ್ಳಿ ನಿರ್ಜಲೀಕರಣ, ಮಾವು, ದಾಳಿಂಬೆ, ಟೊಮಾಟೋ, ಪೇರಳೆ ಮುಂತಾದ ಹಣ್ಣುಗಳ ರಸ ತೆಗೆಯುವ ಉದ್ದಿಮೆಗಳನ್ನು ಅಲ್ಲಲ್ಲಿ ಸ್ಥಾಪಿಸಿ ಆ ಮೂಲಕ ರೈತರು ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆ ಬೆಂಬಲವನ್ನೂ ನೀಡುತ್ತಾ ಬಂದವರು. ಫಾರ್ಮ್ ಫ್ರೆಶ್ (Farm fresh) ಎಂಬ ಹೆಸರಿನಲ್ಲಿ ಈ ಸಂಸ್ಥೆಯ ಉತ್ಪನ್ನಗಳು ಇಂದಿಗೂ ಗರಿಷ್ಟ ಪ್ರಮಾಣದಲ್ಲಿ ರಪ್ತು ಆಗುತ್ತಿದೆ.
 
 
 
 
ಇದೆಲ್ಲವೂ ಒಂದು ಕಾರ್ಪೊರೇಟ್ ಸಂಸ್ಥೆ ಸ್ಥಳೀಯ ರೈತರನ್ನೆಲ್ಲಾ ಒಟ್ಟು ಗೂಡಿಸಿ, ಅವರಿಗೆ ತಂತ್ರಜ್ಞಾನದ ಮಾಹಿತಿ ಒದಗಿಸಿಕೊಟ್ಟು, ಬೆಳೆ ಉತ್ಪಾದಿಸಿ, ಅದನ್ನು ಉತ್ತಮ ದರದಲ್ಲಿ ಕೊಂಡು ನಡೆಸುತ್ತಿರುವ ವ್ಯವಹಾರ. ಸಂಸ್ಥೆಯ ಮೂಲ ಧ್ಯೇಯ ಮೊದಲು ರೈತರ ಏಳಿಗೆ ನಂತರ ಕಂಪೆನಿಯ ಏಳಿಗೆ. ಈ ಧ್ಯೇಯದಲ್ಲಿ ಮುಂದುವರಿದ ಹೆಜ್ಜೆ, ಅಧಿಕ ಸಾಂದ್ರ ಮಾವಿನ ಬೇಸಾಯ. ಮಾವಿನ ಹಣ್ಣಿಗೆ ಜಾಗತಿಕವಾಗಿ ಮನ್ನಣೆ ಇದೆ. ತಾಜಾ ಹಣ್ಣಾಗಿ ಎಲ್ಲಾ ದೇಶಗಳಿಗೂ ಇದು ರಪ್ತು ಆಗದೇ ಇರಬಹುದು,ಆದರೆ ಅದರ ಮೌಲ್ಯ ವರ್ಧಿತ ಉತ್ಪನ್ನಗಳು ಪ್ರಪಂಚದ ಎಲ್ಲಾ ದೇಶಗಳಿಗೂ ತಲುಪುತ್ತವೆ. ಪ್ರಪಂಚದಲ್ಲಿ ಭಾರತ ಮಾವು ಬೆಳೆಸುವ ಅಗ್ರ ಪಂಕ್ತಿಯ ದೇಶವಾಗಿದ್ದು , ಇಲ್ಲಿ ಬೆಳೆಸಲ್ಪಡುವ ಮಾವಿನ ಹಣ್ಣಿನಿಂದ ದೇಶ- ಹೊರದೇಶಗಳ ಬೇರೆ ಬೇರೆ ಕಂಪೆನಿಗಳು ಇಲ್ಲಿನ ಮಾವು ಬೆಳೆಯುವ ಪ್ರದೇಶಗಳಲ್ಲಿ ತಮ್ಮ ಸಂಸ್ಕರಣಾ ಘಟಕಗಳನ್ನು ಹೊಂದಿವೆ.
 
 
ಆಂಧ್ರ ಪ್ರದೇಶ , ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕಗಳು ನಮ್ಮ ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಾವು ಬೆಳೆಸುವ ರಾಜ್ಯಗಳು. ಆಂಧ್ರ ಪ್ರದೇಶದ ತಿರುಪತಿಯ ಸಮೀಪದ ಚಿತ್ತೂರು ಜಿಲ್ಲೆ(Chittur) ಜಗತ್ತೇ ಗುರುತಿಸಿದ ಮಾವು ಬೆಳೆಯುವ ಪ್ರದೇಶ. ಇಲ್ಲಿನ ಮಾವಿನ ಬೆಳೆ, ಹಣ್ಣು ಲಭ್ಯತೆಯನ್ನು ಗುರುತಿಸಿ ಇಲ್ಲಿ 60 ಕ್ಕೂ ಹೆಚ್ಚು ಮಾವಿನ ಹಣ್ಣು ಸಂಸ್ಕರಣಾ ಘಟಕಗಳು ಕೆಲಸಮಾಡುತ್ತವೆ. ಇದರಲ್ಲಿ ಸುಮಾರು 8 ಅತೀ ದೊಡ್ಡ ಪ್ರಮಾಣದ ಘಟಕಗಳಾಗಿವೆ. ನಾವು ತಾಜಾ ಮಾವಿನ ಹಣ್ಣಿನ ರಸವೆಂದು ಕುಡಿಯುವ ಬಹುತೇಕ ತಯಾರಿಕಾ ಕಂಪೆನಿಗಳೂ ಇಲ್ಲಿ ರಸ ತೆಗೆಯುವ ಫ್ಯಾಕ್ಟರಿಗಳನ್ನು ಹೊಂದಿವೆ. ಇಲ್ಲಿ ಮಾವಿನ ಬೆಳೆ ಉತ್ತಮವಾಗಿ ಬಂದಷ್ಟು ಬೇರೆಲ್ಲೂ ಬರಲಾರದೇನೋ? ವಾರ್ಷಿಕ 400 ಮಿಲಿ. ಮೀ. ಮಳೆಯಾಗುವ ಈ ಪ್ರದೇಶದ ಮಾವು ರಸ ತೆಗೆಯಲು ಉತ್ಕೃಷ್ಟ.
ಈ ಊರಿನಲ್ಲೇ ಈಗ ಜೈನ್ ಸಂಸ್ಥೆ ಮತ್ತು ಕೊಕ್ಕೋ ಕೋಲಾ ಇಂಡಿಯಾ ಲಿಮಿಟೆಡ್ ಇವರು ಜಂಟಿಯಾಗಿ ಅಧಿಕ ಸಾಂದ್ರ ಮಾವು ಬೇಸಾಯಕ್ಕೆ ರೈತರ ಮನವನ್ನು ಒಲಿಸುತ್ತಿದ್ದಾರೆ.
 
 
 
ಉನ್ನತಿ (UNNATI) ಎಂಬ ಹೆಸರಿನ ಈ ಕಾರ್ಯಕ್ರಮದಂತೆ ಜೈನ್ ಸಂಸ್ಥೆಯಲ್ಲಿ ನಡೆಸಲಾದ ವೈಜ್ಞಾನಿಕ ಸಂಶೋಧನಾ ಮಾಹಿತಿ ಹಾಗೂ ಬೆಳೆ ತಂತ್ರಜ್ಞಾನ ರೈತರಿಗೆ ದೊರೆಯುತ್ತದೆ. ಇದಕ್ಕಾಗಿಯೇ ಜೈನ್ ಸಂಸ್ಥೆ ತಜ್ಞರ ತಂಡವನ್ನು ಹೊಂದಿದೆ. ಇದು ಸಂಪ್ರದಾಯಿಕವಾಗಿ ಎಕ್ರೆಯೊಂದರಲ್ಲಿ ಪಡೆಯುತ್ತಿದ್ದ ಇಳುವರಿಗಿಂತ ಮೂರು ಪಟ್ಟು ಅಧಿಕ ಇಳುವರಿ ಪಡೆಯುವ ತಂತ್ರಜ್ಞಾನ. ಇಲ್ಲಿ ರೈತರು ಬೆಳೆದ ಉತ್ಪನ್ನವನ್ನು ಜೈನ್ ಸಂಸ್ಥೆಯು ಕೊಳ್ಳುತ್ತದೆ. ಮಾರುಕಟ್ಟೆ ದರ ಅಥವಾ ನಿರ್ಧರಿತ ಗರಿಷ್ಟ ಬೆಲೆಯನ್ನು ರೈತರಿಗೆ ನೀಡುತ್ತದೆ. ಬೆಳೆ ಬೆಳೆಯುವ ರೈತನ ಉತ್ಪನ್ನಕ್ಕೆ ಮಾರುಕಟ್ಟೆ ವಿಚಾರದಲ್ಲಿ ಯಾವುದೇ ತೊಂದರೆಗಳಾಗಬಾರದು ಎಂಬುದೇ ಈ ಕಾರ್ಯಕ್ರಮದ ಉದ್ದೇಶ. ಹೆಸರೇ ಹೇಳುವಂತೆ ಇದು ರೈತನ ಉನ್ನತಿಯೊಂದಿಗೆ ಬೆಳೆಯುವ ಕಾರ್ಯಕ್ರಮ.
 
 
ಮುಂದಿನ ಕೆಲವು ವರ್ಷಗಳೊಳಗೆ ಪ್ರಪಂಚದಾದ್ಯಂತ ಕೃತಕ ಪಾನೀಯಗಳ ಬಳಕೆ ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಕೃತಕ ರಾಸಾಯನಿಕ ಬೆರೆಸಲ್ಪಟ್ಟ ಪಾನೀಯಗಳ ಬದಲಿಗೆ ನೈಸರ್ಗಿಕ ಹಣ್ಣಿನ ರಸ ಸೇರಿಸಲ್ಪಟ್ಟ ಪಾನೀಯಗಳು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲಿವೆ. ನಮ್ಮ ದೇಶದಲ್ಲೇ ಈಗ ತಯಾರಿಸಿ ಮಾರಲ್ಪಡುವ ಕೃತಕ ಲಘು ಪಾನೀಯಗಳಿಗೆ 5-10 % ನೈಸರ್ಗಿಕ ಹಣ್ಣಿನ ರಸ ಸೇರಿಸಬೇಕೆಂದು ಏನಾದರೂ ನಿಬಂಧನೆಗಳಾದರೆ, ಆಗ ನಮ್ಮಲ್ಲಿ ಉತ್ಪಾದಿಸಲಾಗುವ ಹಣ್ಣು ಹಂಪಲುಗಳು ಸಾಕಾಗಲಾರದು. ಇದು ಪ್ರತೀಯೊಂದು ಲಘು ಪಾನೀಯ ತಯಾರಿಕಾ ಸಂಸ್ಥೆಗೂ ಗೊತ್ತಿರುವ ವಿಚಾರ. ಈ ದಿಶೆಯಲ್ಲಿ ಅವರು ಈಗಾಗಲೇ ಮುಂದಾಲೋಚನೆಯನ್ನು ಮಾಡಿದ್ದೂ ಆಗಿದೆ.
 
ಲಘು ಪಾನೀಯ ತಯಾರಿಕಾ ಕ್ಷೇತ್ರದ ಮುಂಚೂಣಿ ಸಂಸ್ಥೆಯಾದ ಕೊಕ್ಕೋ ಕೋಲಾ ಇಂಡಿಯಾ ಲಿ. ಸಂಸ್ಥೆಯೂ ಈ ದಿಶೆಯಲ್ಲಿ ಚಿಂತನೆ ನಡೆಸಿ, ಮುಂದೆ ಎದುರಾಗಬಹುದಾದ ತೊಂದರೆಗೆ ಈಗಲೇ ಸಿದ್ಧತೆಯಲ್ಲಿದ್ದಾರೆ. ಆ ಸಿದ್ಧತೆಯೇ ರೈತರ ಜೊತೆಗೆ ಸೇರಿಕೊಂಡು ಹಣ್ಣಿನ ಬೆಳೆಗಳನ್ನು ಬೆಳೆಸುವುದು ಮತ್ತು ಅದನ್ನು ನೇರವಾಗಿ ಕೊಳ್ಳುವುದು. ಈ ಕಾರ್ಯಕ್ರಮವನ್ನು ಕೋಲಾ ಕಂಪೆನಿಯು ಜೈನ್ ಸಂಸ್ಥೆಯ ವೈಜ್ಞಾನಿಕ ಸಂಶೋಧನೆಯನ್ನು ಬಳಸಿ ಜೊತೆ ಸೇರಿ ಮಾಡುತ್ತಿದೆ. ಜೈನ್ ಸಂಸ್ಥೆಯು ಈ ಅಧಿಕ ಸಾಂದ್ರ ಮಾವು ಬೇಸಾಯ ತಾಂತ್ರಿಕತೆಯನ್ನು ಬಹಳ ಹಿಂದೆಯೇ ಅಭಿವೃದ್ದಿ ಪಡಿಸಿತ್ತು. ಇದನ್ನು ಜಲಗಾಂನ ತಮ್ಮ ಸಂಶೋಧನೆ ಮತ್ತು ಪ್ರಾತ್ಯಕ್ಷಿಕಾ ಫಾರಂ ನಲ್ಲಿ ಮೊದಲಾಗಿ ಮಾಡಿ ನಂತರ ಕೊಯಂಬತ್ತೂರಿನ ಉದುಮಲ್ ಪೇಟ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡಿದೆ. ಇಲ್ಲಿ ಬೆಳೆಸಲಾದ ಅಧಿಕ ಸಾಂದ್ರ ಮಾವಿನ ತೋಟಗಳಿಗೆ ಈಗ 9 ವರ್ಷ ಆಗಿದೆ.
 
 
ಆಂಧ್ರ ಪ್ರದೇಶದ ಚಿತ್ತೂರು ಪೂರ್ತಿಯಾಗಿ ಮಾವಿನ ಬೆಳೆಯ ಊರು. ಇಲ್ಲಿ ಸುಮಾರು 63000 ಹೆಕ್ಟೇರುಗಳಷ್ಟು ಮಾವಿನ ಬೆಳೆ ಪ್ರದೇಶ ಇದೆ. ಇಲ್ಲಿ ರೈತರು ನೂರಾರು ವರ್ಷಗಳಿಂದಲೂ ಮಾವು ಬೆಳೆಸುತ್ತಾರೆ. ಅತ್ಯಧಿಕ ಪ್ರಮಾಣದಲ್ಲಿ ಬೆಳೆಸಲ್ಪಡುವ ತಳಿ ತೋತಾಪುರಿ. ಮಾವಿನ ಬೆಳೆಯಿಂದಾಗಿ ಈ ಪ್ರದೇಶವು, ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಸಾಂಪ್ರದಾಯಿಕವಾಗಿ ಇಲ್ಲಿನ ರೈತರು 7-8 ಮೀ ಅಂತರದಲ್ಲಿ ಸಸಿಗಳನ್ನು ನೆಟ್ಟು ಎಕ್ರೆಗೆ 70-80 ಸಸಿ ಹಿಡಿಸುತ್ತಾರೆ. ಇಲ್ಲಿನ ರೈತರ ಬೇಸಾಯ ಕ್ರಮವೂ ಸಹ ಸಾಂಪ್ರದಾಯಿಕವಾದದ್ದೇ. ಆದ ಕಾರಣ ಇಲ್ಲಿ ಎಕ್ರೆಗೆ ಸರಾಸರಿ 2-3 ಟನ್ ಇಳುವರಿ ಮಾತ್ರ. ಇದು ತೀರಾ ಕಡಿಮೆ ವರಮಾನದ ಆದಾಯವಾಗಿದ್ದು, ಅದನ್ನು ಎರಡು ಮೂರು ಪಾಲು ಹೆಚ್ಚಿಸಲು ಅಧಿಕ ಸಾಂದ್ರ ಬೇಸಾಯ ತಾಂತ್ರಿಕತೆ ಸಹಕಾರಿಯಾಗಿದೆ. ಚಿತ್ತೂರಿನ ತವನಂಪಲ್ಲಿ, ಐರಾಲ, ಬಂಗಾರ್ ವಾಲ್ಯಂ, ಗಂಗಾಧರ ನೆಲ್ಲೂರು, ಪೆನುಮಾರ್, ಸೋಮಲ, ಪುತ್ತೂರು, ತಾಮಲ್ ಚೆಲುವು, ವೈ ವಿ ಪಾಲ್ಯಂ ಮುಂತಾದ ತಾಲೂಕು (ಮಂಡಲ)ಗಳಲ್ಲಿ ಉನ್ನತಿ ಹೆಸರಿನ ಈ ಯೋಜನೆಯಂತೆ ಸುಮಾರು 75 ಕ್ಕೂ ಹೆಚ್ಚಿನ ರೈತರು, 400 ಎಕ್ರೆಗೂ ಅಧಿಕ ಪ್ರಮಾಣದಲ್ಲಿ ಮಾವು ಬೆಳೆಸುತ್ತಿದ್ದು, ಹೆಚ್ಚಿನವರು 7-8 ವರ್ಷದ ಸಸಿಯಿಂದ ಪಡೆಯುತ್ತಿರುವ ಇಳುವರಿಯನ್ನು ಮೂರನೇ ವರ್ಷಕ್ಕೇ ಪಡೆಯುತ್ತಿದ್ದಾರೆ.
 
 
 
 
ಈ ತಾಂತ್ರಿಕತೆ ಭವಿಷ್ಯದ ಕೃಷಿಯನ್ನು ಗಮನದಲ್ಲಿಟ್ಟು ರೂಪಿಸಲಾಗಿದೆ. ಮುಂದೆ ಮರ ಹತ್ತುವವರನ್ನು ನಾವು ಅಪೇಕ್ಷಿಸಲು ಸಾಧ್ಯವಿಲ್ಲ. ಎತ್ತರದ ಮರಗಳಿಗೆ ಸಿಂಪರಣೆ-ನಿರ್ವಹಣೆ ಮುಂತಾದವುಗಳನ್ನು ಮಾಡುವುದೂ ಸಹ ದುಸ್ತರವಾದೀತು. ಅಂಥಃ ಸಮಯದಲ್ಲಿ ನೆಲದಲ್ಲೇ ನಿಂತುಕೊಂಡು ಕೈಯಿಂದಲೇ ಮಾವಿನ ಕಾಯಿಗಳನ್ನು ಕೊಯಿದು, ನೆಲದಲ್ಲೇ ನಿಂತು ಸಿಂಪರಣೆ- ನಿರ್ವಹಣೆ ಮಾಡಲು ಈ ತಾಂತ್ರಿಕತೆ ಅನುಕೂಲವಾಗಿದೆ. ಬರೇ ಆಂದ್ರ ಮಾತ್ರ ಅಲ್ಲ. ಕರ್ನಾಟಕದ ಚಾಮರಾಜ ನಗರ, ಮಂಡ್ಯ, ಚಿಕ್ಕಬಳ್ಲಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲೂ ಈ ಯೋಜನೆಯಂತೆ ನೂರಾರು ಜನ ಮಾವು ಬೆಳೆಸಲು ಮುಂದಾಗಿದ್ದು, ಇಲ್ಲೆಲ್ಲಾ ಈಗ 1 ವರ್ಷದ ಸಸಿ ಬೆಳೆಯುತ್ತಿದೆ.
ರಾಧಾಕೃಷ್ಣ ಹೊಳ್ಳ
response@vaarte.com

LEAVE A REPLY

Please enter your comment!
Please enter your name here