ಮಾನವ ಜನ್ಮದಲ್ಲಿ ತಾಯಿ ಶ್ರೇಷ್ಠ, ಜೀವಿಗಳಲ್ಲಿ ಗೋವು ಶ್ರೇಷ್ಠ : ರಾಘವೇಶ್ವರ ಶ್ರೀ

0
243

 
ಬೆಂಗಳೂರು ಪ್ರತಿನಿಧಿ ವರದಿ
 
ಮಾತು ಬಾರದ ಗೋಮಾತೆ ಪರಮ ಕಾರುಣ್ಯೆ. ತನ್ನ ಕರುಳ ಕುಡಿಯ ಕೊಂದವನನ್ನು ರಕ್ಷಿಸುವ ಶತ್ರುವತ್ಸಲೆ. ಮಾನವ ಜನ್ಮದಲ್ಲಿ ತಾಯಿ ಶ್ರೇಷ್ಠ, ಜೀವಿಗಳಲ್ಲಿ ಗೋವು ಶ್ರೇಷ್ಠ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವ್ಯಾಖ್ಯಾನಿಸಿದರು.
 
mata chaturma142
ಅವರು ರವಿವಾರ ಶ್ರೀಗಳ ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ಏರ್ಪಡಿಸಿದ ಗೋ ಕಥೆಯಲ್ಲಿ ಗೋ ಸಂದೇಶ ನೀಡಿದರು.
ಆಳುವವರು ಗೋಹತ್ಯೆಯನ್ನು ನಿಷೇಧಿಸಬೇಕು. ಜತೆಗೆ ಮದ್ಯನಿಷೇಧವೂ ಆಗಬೇಕು. ಮದ್ಯಪಾನದಿಂದ ಅಪರಾಧ, ಕೊಲೆ, ಸುಲಿಗೆ, ಗೋಹತ್ಯೆಗಳು ನಡೆಯುತ್ತವೆ. ಪ್ರಜೆಗಳು ಕುಡಿದು ಹಾಳಾಗಲಿ, ನಮ್ಮ ಕುರ್ಚಿ ಗಟ್ಟಿಯಾಗಲಿ ಎಂಬ ಮನೋಭಾವ ದೇಶವನ್ನು ಅಧೋಗತಿಗಿಳಿಸುತ್ತದೆ. ಹಿಂದಿನ ಕಾಲದಲ್ಲಿ ಅರಸರು ಬೊಕ್ಕಸವನ್ನು ಜೀವನಕ್ಕಾಗಿ ಬಳಸಬಹುದು ಎಂಬ ನಿಯಮವಿತ್ತು, ಇಂದು ಆಳುವವರಿಗೆ ವೇತನವನ್ನು ನೀಡಲಾಗುತ್ತದೆ. ಆದರೂ ಅಕ್ರಮವಾಗಿ ಬೊಕ್ಕಸ ಬರಿದಾಗುತ್ತದೆ ಎಂದು ಶ್ರೀಗಳು ವಿವರಿಸಿದರು.
mata chaturma14
ಇಂದೋರ್ ಆಢಾಬಜಾರ್‌ನಲ್ಲಿ ರಾಣಿ ಅಹಲ್ಯಾಬಾಯಿ ನ್ಯಾಯ ನೈಷ್ಠುರ್ಯದ ಆಡಳಿತದ ಬಗ್ಗೆ ಗೋಕಥೆಯನ್ನು ಪ್ರಸ್ತುತಪಡಿಸಿದ ಶ್ರೀಗಳು ಆಕೆ ಧರ್ಮದ ಸಂವಿಧಾನದ ಮೂಲಕ ರಾಜ್ಯಭಾರ ಮಾಡಿದ್ದಳು. ತಾನು ತನ್ನವರು ತಾಯ್ತನಕ್ಕಿಂತಲೂ ನ್ಯಾಯ ದೊಡ್ಡದು ಎಂದು ಸಾರಿದವಳು. ಗೋವಿನ ಕರುವಿನ ಸಾವಿಗೆ ಕಾರಣವಾದ ಮಗನ ತಪ್ಪಿಗೆ ದಂಡನೆಗೆ ಸಿದ್ಧವಾದವಳು. ಆಳುವವರಲ್ಲಿ ನ್ಯಾಯ, ಧರ್ಮವಿದ್ದಾಗ ರಾಜ್ಯ, ದೇಶದಲ್ಲಿ ಶಾಂತಿ ನೆಲೆಯಾಗುತ್ತದೆ ಎಂದು ನಂಬಿದವಳು. ಅರ್ಥಾನರ್ಥಗಳ ಬಗ್ಗೆ ಯೋಚಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂಬ ನಿರ್ಧಾರ ತಾಳಿದವಳು. ಶ್ರೀರಾಮನ ಆದರ್ಶವನ್ನು ಅಳವಡಿಸಿಕೊಂಡವಳು. ಆಕೆ ಮಾಲವ ಸಾಮ್ರಾಜ್ಯವನ್ನು ಆಳುತ್ತಿದ್ದರೂ ಇಡೀ ಭಾರತ ದೇಶದ ವ್ಯಾಪ್ತಿಯಲ್ಲಿ ಸಮೃದ್ಧಿಯನ್ನು ಬಯಸಿದ್ದಳು. ಆಕೆ ತನ್ನ ಕಾಲದಲ್ಲಿ ದೇಶದಾದ್ಯಂತ ಅಸಂಖ್ಯ ದೇಗುಲಗಳನ್ನು, ಆರಾಧನಾ ಕೇಂದ್ರಗಳನ್ನು, ಗೋಶಾಲೆಗಳನ್ನು ನಿರ್ಮಿಸಿದ್ದಳು. ಆ.13ರಂದು ಅಹಲ್ಯಾಬಾಯಿ ಮುಕ್ತಿ ಹೊಂದಿದ ದಿನ. ಆಕೆ ಮತ್ತೆ ಹುಟ್ಟಿ ಬರಲಿ, ಆ ಆದರ್ಶ ಇಂದಿನ ಮಹಿಳೆಯರಲ್ಲಿ ಆವಿರ್ಭಾವವಾಗಲಿ ಎಂಬ ಕಾರಣಕ್ಕೆ ಆ.14ರಂದು ಆ ಆದರ್ಶದ ಗೋಕಥೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಅಹಲ್ಯಾಬಾಯಿಯ ನ್ಯಾಯದ ಸೂತ್ರ ಭುವಿಯವೆಗೂ ಇಳಿದಿತ್ತು. ಆಕೆಯ ನ್ಯಾಯ ನೈಷ್ಠುರ್ಯ ಮತ್ತು ಗೋವಿನ ಪರಮ ಕಾರುಣ್ಯದ ಮಧ್ಯೆ ಸ್ಪರ್ಧೆಯೇ ನಡೆದ ಅನುಭವವಾಗುತ್ತದೆ. ಗೋವು ತನ್ನ ಕರುಳ ಕುಡಿಯನ್ನು ಕೊಂದ ಅಹಲ್ಯಾಬಾಯಿಯ ಕುಡಿಯ ವಿರುದ್ಧ ನ್ಯಾಯ ಬಯಸಿದ್ದಳು. ಅಹಲ್ಯಾಬಾಯಿ ನ್ಯಾಯಪಾಲನೆಗಾಗಿ ತನ್ನ ಕರುಳ ಕುಡಿಯನ್ನು ಕೊಲ್ಲುವುದಕ್ಕೆ ಮುಂದಾಗಿದ್ದಳು. ಆದರೆ ಗೋವು ಅದನ್ನು ತಡೆದು ತಾಯ್ತನಕ್ಕೆ ಗೌರವ ನೀಡಿ ವಿಶ್ವಜನನಿಯೆನಿಸಿದಳು ಎಂದು ಶ್ರೀಗಳು ವಿಶ್ಲೇಷಿಸಿದರು.
ಬದುಕುವ ಹಕ್ಕು ಯಾರಿಗೆ ಎಷ್ಟು ? ಯಾರ ಬದುಕು ಪರರ ಸಾವು ನೋವಿಗೆ ಕಾರಣವಾಗುತ್ತದೆಯೋ ಅವರಿಗೆ ಬದುಕುವ ಹಕ್ಕಿಲ್ಲ, ಯಾರ ಬದುಕಿನಿಂದ ಸಾವಿರ ಕೋಟಿ ಬದುಕುಗಳ ನಲಿವುಗಳಿಗೆ ಕಾರಣವಾಗುತ್ತದೆಯೋ ಅವರಿಗೆ ಬದುಕುವ ಹಕ್ಕಿದೆ. ಒಟ್ಟಿನಲ್ಲಿ ಇದು ಬದುಕುವ ಹಕ್ಕಿನ ಆಧರಿಸಿದ ಕಥೆ. ನೇರ, ಸತ್ಯ, ನ್ಯಾಯ, ಜ್ಞಾನ, ತಾಯಿ ಹೃದಯವನ್ನಾಧರಿಸಿದ ಕಥೆ. ಕಾನೂನು ಪಾಲನೆಯಿಂದ ಆಳುವವರು ಗೌರವ ಉಳಿಸಿಕೊಂಡಿರುವ ಕಥೆ. ಇದು ಇಂದೋರ್‌ನಲ್ಲಿ ಜನತೆ ಹೇಳುವ, ಸತ್ಯ ಘಟನೆಯನ್ನು ಆಧರಿಸಿದ ಮತ್ತು ಇಂದಿಗೂ ದಾಖಲೆಯನ್ನು ಉಳಿಸಿಕೊಂಡಿರುವ ಕಥೆ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭ ಉತ್ತರಪ್ರದೇಶದ ಲಖಿಂಪುರ್ ಶ್ರೀ ಸದ್ಗುರು ಸೇವಾಶ್ರಮದ ಸಂತ ಅಸಂಗ ಸಾಹೇಬ ಮಹಾರಾಜ್ ಅವರು ಉಪಸ್ಥಿತರಿದ್ದು ಗೋವಿನ ಮೂರ್ತಿಗೆ ಪುಷ್ಪಾರ್ಚನೆಗೈದರು.
ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಈ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ಅಶೋಕ ಸಿದ್ಧನಕೈ ಹಾಗೂ ಗೋಪಿನಾಥ ಸಾಗರ ಅವರು ಮನಮೋಹಕವಾಗಿ ಚಿತ್ರಿಸಿದರು. ಡಾ| ಗಜಾನನ ಶರ್ಮ ಅವರ ಸಾಹಿತ್ಯ ಸಹಕಾರ, ಗಾಯನದಲ್ಲಿ ಚಂದ್ರಶೇಖರ ಕೆದಿಲಾಯ, ಶ್ರೀಪಾದ ಭಟ್, ಶಂಕರಿ ಮೂರ್ತಿ ಬಾಳಿಲ, ಟಿ.ವಿ. ಗಿರಿ, ಸತ್ಯಜಿತ್ ಜೈನ್ ಕೊಲ್ಕೋತಾ, ದೀಪಿಕಾ ಭಟ್, ಶ್ರದ್ಧಾ, ದುರ್ಗಾಗಣೇಶ್ ಹಾಗೂ ಸಂಗೀತ ವಾದ್ಯಗಳಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಗಣೇಶ್ ಕೆ.ಎಸ್., ಗಣೇಶ್ ಗುಂಡ್ಕಲ್ ಮೊದಲಾದವರು ಭಾಗವಹಿಸಿದ್ದರು. ಅನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ಮೂಡಿಬಂದ ರೂಪಕ ಜನರ ಮನತಟ್ಟಿತು. ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಇದಕ್ಕೂ ಮೊದಲು ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಅಂದಿಗಷ್ಟು-ಇಂದಿಗಿಷ್ಟು ಪುಸ್ತಕವನ್ನು ಪೂಜ್ಯ ಶ್ರೀಗಳು ಹಾಗೂ ಸಾಧನಾಪಂಚಕ ದೃಶ್ಯಮುದ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ಗೋಕಥಾ ಪ್ರಾಯೋಜಕರಾದ ಅಶೋಕೆ ಬಳಗದ ಪರವಾಗಿ ಡಾ| ಗಿರಿಧರ ಕಜೆ, ಆ.ಪು. ನಾರಾಯಣಪ್ಪ, ಬಿಹಾರದ ಮನೋಜ್ ಕುಮಾರ್ ಖಾಪ್ರಿ, ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಶ್ರೀ ಸೂಕ್ತ ಜಪ, ಶ್ರೀ ಸೂಕ್ತ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ ನಡೆಯಿತು.

LEAVE A REPLY

Please enter your comment!
Please enter your name here