ಮಾನವೀಯತೆ ಮೂಡಿಸುವ ಹೊಣೆ ನಿಭಾಯಿಸಲು ಸಲಹೆ

0
296

ಉಜಿರೆ ಪ್ರತಿನಿಧಿ ವರದಿ
ಮಾನವೀಯತೆಯ ಪ್ರಜ್ಞೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ನಿಭಾಯಿಸಬೇಕಾದ ಅನಿವಾರ್ಯತೆ ಇದೆ ಎಂದು ಎನ್ಎಸ್ಎಸ್ ಗೀತೆ ರಚನೆಕಾರ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರೊ.ಡಾ.ಎಮ್.ಬಿ.ದಿಲ್ಶಾದ್ ಅಭಿಪ್ರಾಯಪಟ್ಟರು.
 
ಎಸ್.ಡಿ.ಎಂ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಮಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಐದು ದಿನಗಳ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವದಲ್ಲಿ ಭಾನುವಾರ ಅವರು ವಿಶೇಷ ಉಪನ್ಯಾಸ ನೀಡಿದರು.
 
 
ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು. ಮಾನವೀಯತೆಯ ಮೌಲ್ಯಗಳನ್ನು ಅಳಡವಡಿಸಿಕೊಳ್ಳಬೇಕು. ಸಮಾಜದ ಸಮಸ್ಯೆಗಳನ್ನು ಅರಿತು ದುರ್ಬಲರ ಸೇವಗೈಯ್ಯುವ ಮನೋಭಾವ ಬೆಳೆಸಿಕೊಳ್ಳಬೇಕು. ಜನರೊಂದಿಗೆ ಬೆರೆಯುವ ಸ್ವಭಾವ ರೂಢಿಸಿಕೊಂಡು ಸಾಮಾಜಿಕ ಹಿತವನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.
 
 
ಬದಲಾವಣೆ ಎನ್ನುವುದು ವ್ಯಕ್ತಿಗತ ನೆಲೆಯಲ್ಲಿಯೇ ಆರಂಭವಾಗಬೇಕು. ಎನ್ಎಸ್ಎಸ್ ಕಾರ್ಯಚಟುವಟಿಕೆಗಳೊಂದಿಗೆ ಗುರುತಿಸಿಕೊಂಡು ಸಾಮಾಜಿಕ ಬದಲಾವಣೆಗೆ ಕೊಡುಗೆಗಳನ್ನು ನೀಡುವ ಉತ್ಸಾಹದೊಂದಿಗೆ ಮುನ್ನಡೆಯಬೇಕು ಎಂದು ಹೇಳಿದರು.
 
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ.ಎಮ್ ವಸತಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎನ್ ಕೃಷ್ಣಮೂರ್ತಿ ಮಾತಾನಾಡಿ ವಿವಿಧ ಕ್ಷೇತ್ರಗಳ ಅಗತ್ಯಕ್ಕೆ ತಕ್ಕಂತೆ ಉದ್ಯೋಗಾವಕಾಶಗಳನ್ನು ಪಡೆಯುವ ಸಾಮಥ್ರ್ಯವನ್ನು ವಿದ್ಯಾರ್ಥೀ ಜೀವನದ ವಿವಿಧ ಹಂತಗಳಲ್ಲಿಯೇ ಗಳಿಸಿಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಪ್ರೊ.ಭಾನುಪ್ರಕಾಶ್, ಪ್ರೊ.ಶಕುಂತಲ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ವಯಂಸೇವಕಿ ಸುಷ್ಮಾ ಅತಿಥಿಗಳನ್ನು ಪರಿಚಯಿಸಿದರು. ಸ್ವಯಂಸೇವಕಿ ಕಾವ್ಯಶ್ರೀ ನಿರೂಪಿಸಿದರು.

LEAVE A REPLY

Please enter your comment!
Please enter your name here