ಮಾಧ್ಯಮಗಳು ಮೌಢ್ಯದ ಬೀಜವನ್ನು ಬಿತ್ತಬಾರದು: ಸಿಎಂ

0
309

 
ವರದಿ: ಲೇಖಾ
ಜುಲೈ 1 ರ ಕನ್ನಡ ಪತ್ರಿಕಾ ದಿನಾಚರಣೆಯಂದೇ ರಾಜ್ಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
 
 
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿಧಾನಸೌಧದದಲ್ಲಿ ಆಯೋಜಿಸಿದ್ದ 2014 ಹಾಗೂ 2015 ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ, ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
 
 
 
ಮಾಧ್ಯಮಗಳಿಂದಾಗಿಯೇ ಎಷ್ಟೋ ಸರ್ಕಾರಗಳು ಉರುಳಿ ಹೋಗಿವೆ. ಎಷ್ಟೋ ಹೊಸ ಸರ್ಕಾರಗಳು ಅಸ್ಥಿತ್ವಕ್ಕೆ ಬಂದಿವೆ. ಇದಕ್ಕೆ ಮಾಧ್ಯಮಗಳು ರೂಪಿಸಿದ ಜನಾಭಿಪ್ರಾಯ ಕಾರಣ ಎನ್ನುವುದು ನಿಜ. ಚುನಾವಣೆಯ ಬಳಿಕ ಆಡಳಿತಾರೂಢ ಪಕ್ಷಕ್ಕೆ ಜನಮನವನ್ನು ಅರಿಯಲು ಇರುವ ಬಹುಮುಖ್ಯ ಸಾಧನ ಮಾಧ್ಯಮ. ಆದರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಮೌಢ್ಯಾಚರಣೆಗಳನ್ನು ಪೋಷಿಸುತ್ತಿವೆ. ಕೌಟುಂಬಿಕ ಸಮಸ್ಯೆಗಳನ್ನು ಬೀದಿಗೆ ಎಳೆದು ತರುತ್ತಿವೆ. ಮಾಧ್ಯಮಗಳಲ್ಲಿ ಆಧಾರ-ರಹಿತ ಹಾಗೂ ಮೌಲ್ಯ-ರಹಿತ ಸುದ್ದಿಗಳು ಬಿತ್ತರಗೊಳ್ಳುತ್ತಿವೆ. ಇದು ಸಮಾಜದ ಹಿತದೃಷ್ಠಿಯಿಂದ ಮಾತ್ರವಲ್ಲ, ವಿಶೇಷವಾಗಿ ಪತ್ರಿಕೋದ್ಯಮದ ಹಿತದೃಷ್ಠಿಯಿಂದಲೂ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.
 
 
 
ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನನಗೆ ಅಪಾರ ನಂಬಿಕೆ ಇದೆ. ಮಾಧ್ಯಮಗಳಲ್ಲಿ ನನ್ನ ಪರವಾಗಿ ಅಥವಾ ನನ್ನ ವಿರುದ್ಧವಾಗಿ ಲೇಖನಗಳು ಪ್ರಕಟಗೊಂಡಾಗಲೂ ನಾನು ಎಂದೂ ಪ್ರತಿಕ್ರಿಯಿಸಿಲ್ಲ. ಮಾಧ್ಯಮಗಳಲ್ಲಿ ನನ್ನ ಪರವಾಗಿ ಸುದ್ದಿಗಳು ಪ್ರಸಾರವಾದಾಗ ನಾನು ಮೆಚ್ಚುಗೆ ವ್ಯಕ್ತಪಡಿಸಿಲ್ಲ. ನನ್ನ ವಿರುದ್ಧವಾಗಿ ಸುದ್ದಿಗಳು ಬಿತ್ತರಗೊಂಡಾಗಲೂ ನಾನು ದೂರವಾಣಿ ಕರೆ ಮಾಡಿ ಏಕೆ ಹೀಗೆ ? ಎಂದು ಪ್ರಶ್ನಿಸಿಲ್ಲ. ಮಾಧ್ಯಮದ ವೃತ್ತಿ ಇಂದು ಉದ್ಯಮವಾಗಿದೆ. ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಜವಾಬ್ದಾರಿ ಕಡಿಮೆಯಾಗುತ್ತಿದೆ ಎಂದೆನಿಸುತ್ತಿದೆ. ಇದು ಬಹಳ ಅಪಾಯಕಾರಿಯಾದ ಬೆಳವಣಿಗೆ ಎಂದರು.
 
 
 
ನಾನು ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ. ಬಹುತೇಕ ಪತ್ರಕರ್ತರಿಗೆ ಕೂಡಾ ನನ್ನ ಬಗ್ಗೆ ಗೊತ್ತು. ರಾಹುಕಾಲ ಹಾಗೂ ಗುಳಿಕಕಾಲದ ಬಗ್ಗೆ ನನಗೆ ನಂಬಿಕೆ ಇಲ್ಲ. ಚುನಾವಣಾ ಸಂದರ್ಭದಲ್ಲಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿ ಗೆದ್ದವನು. ಮಾಧ್ಯಮಗಳು ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಬೇಕು. ಮೌಢ್ಯದ ಬೀಜವನ್ನು ಬಿತ್ತಬಾರದು ಎಂದರು.
 
 
 
ಮಾಧ್ಯಮಗಳಲ್ಲಿನ ಭಾಷಾ ಬಳಕೆಯಲ್ಲೂ ಬಹಳಷ್ಟು ಕುಸಿತ ಕಂಡಿದೆ. ಒಂದು ಕಾಲದಲ್ಲಿ ಪತ್ರಿಕೆಗಳನ್ನು ಓದಿ ಭಾಷೆ ಕಲಿಯಬೇಕು ಎಂದು ಶಿಕ್ಷಕರು ಸಲಹೆ ಮಾಡುತ್ತಿದ್ದರು. ಆದರೆ ಇಂದು ಟಿ ವಿ ಗಳಲ್ಲಿ ಬಳಸಲಾಗುವ ಭಾಷೆಯನ್ನು ನೋಡಿದರೆ ಸಹಜವಾಗಿಯೇ ಅಂತಹ ಭಾಷೆ ನಾವು ಆಡಬಾರದು ಎಂದು ನಮಗೆ ನಾವೇ ಬುದ್ದಿ ಹೇಳಿಕೊಡುವ ಹಾಗಾಗಿದೆ. ಇವೆಲ್ಲವೂ ಮಾಧ್ಯಮಗಳಲ್ಲಿ ಚರ್ಚೆಯಾಗಬೇಕು. ಮಾಧ್ಯಮಗಳು ಉತ್ತಮಕ್ಕೆ ಸಮಾಜಕ್ಕೆ ಪೂರಕ ವೇದಿಕೆಯಾಗಬೇಕು ಎಂದು ಹೇಳಿದರು.
 
 
 
2014 ಹಾಗೂ 2015 ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಮತ್ತು ಸನತ್ ಕುಮಾರ್ ಬೆಳಗಲಿ, 2014 ಹಾಗೂ 2015 ನೇ ಸಾಲಿನ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ರಾಯಚೂರಿನ ಸುದ್ದಿಮೂಲ ಪತ್ರಿಕೆಯ ಬಸವರಾಜಸ್ವಾಮಿ ಮತ್ತು ಬೆಂಗಳೂರಿನ ಈ ಸಂಜೆ ಪತ್ರಿಕೆಯ ಟಿ. ವೆಂಕಟೇಶ್, 2014 ಹಾಗೂ 2015 ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಯುವ ಪ್ರತಿಭೆಗಳಾದ ಜಿ. ಎನ್. ಮೋಹನ್ ಮತ್ತು ಶೇಷಮೂರ್ತಿ ಅವಧಾನಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಗಾಣದಾಳು ಶ್ರೀಕಂಠ ಮತ್ತು ಡಾ ಎನ್. ಜಗದೀಶ ಕೊಪ್ಪ ಅವರಿಗೆ ಮುಖ್ಯಮಂತ್ರಿ ಪ್ರದಾನ ಮಾಡಿದರು.

LEAVE A REPLY

Please enter your comment!
Please enter your name here